ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವೇ ಹೊಡೆದದ್ದು’; ತಪ್ಪೊಪ್ಪಿಕೊಂಡ ನಲಪಾಡ್

ವಿದ್ವತ್ ಮೇಲೆ ಹಲ್ಲೆ ಪ್ರಕರಣ:
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು:‌ ‘ಊಟ ಮಾಡುತ್ತಿದ್ದ ವೇಳೆ ವಿದ್ವತ್‌ನ ಕಾಲು ತಾಕಿದ್ದರಿಂದ ಜಗಳವಾಗಿ ನಾವೇ ಆತನ ಮೇಲೆ ಹಲ್ಲೆ ಮಾಡಿದೆವು’ ಎಂದು ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ತಪ್ಪೊಪ್ಪಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತಾ, ‘ಕಾಲು ತಾಕಿಸಿದ ವಿದ್ವತ್‌, ಕ್ಷಮೆ ಕೋರಲು ನಿರಾಕರಿಸಿದ. ಈ ಕಾರಣಕ್ಕೆ ಗಲಾಟೆ ಶುರುವಾಯಿತು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ’ ಎಂದರು.

‘ಹಲ್ಲೆಯಿಂದ ಕುಸಿದು ಬಿದ್ದ ವಿದ್ವತ್ ಅವರನ್ನು ಸ್ಥಳದಲ್ಲಿದ್ದವರು ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಪಿಗಳು ಅಲ್ಲಿಗೂ ಹೋಗಿ ಧಮ್ಕಿ ಹಾಕಿದ್ದರು. ಆ ದೃಶ್ಯಗಳು ಆಸ್ಪತ್ರೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.’

‘ನಲಪಾಡ್ ಹಾಗೂ ವಿದ್ವತ್ ಮಧ್ಯೆ ಹಿಂದೆ ಯಾವುದೇ ವೈಷಮ್ಯ ಇರಲಿಲ್ಲ. ಪಾನಮತ್ತರಾಗಿ ದಾಂದಲೆ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳ‍ಪಡಿಸಿದ್ದು, ಒಂದೆರಡು ದಿನಗಳಲ್ಲಿ ವರದಿ ಬರಲಿದೆ. ನಲಪಾಡ್ ವಿರುದ್ಧ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಾಗಿರುವ ಕಾರಣ ಅವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ.’

‘ಗಲಾಟೆ ನಡೆದ ದಿನವೇ ಆರೋಪಿಗಳ ವಿರುದ್ಧ ಸಂಬಂಧಪಟ್ಟ ಕಲಂಗಳಡಿ ಎಫ್‌ಐಆರ್ ದಾಖಲಿಸಿದ್ದೆವು. ತನಿಖೆ ನಂತರ ಕಂಡುಬಂದ ಸೂಕ್ಷ್ಮ ವಿಚಾರಗಳ ಆಧಾರದ ಮೇಲೆ ಕೊಲೆ ಯತ್ನ (307) ಆರೋಪವನ್ನೂ ಎಫ್‌ಐಆರ್‌ನಲ್ಲಿ ಸೇರಿಸಿದ್ದೇವೆ’ ಎಂದು ಡಿಸಿಪಿ ಹೇಳಿದರು.

‘ಗಲಾಟೆ ನಡೆಯುತ್ತಿರುವ ಬಗ್ಗೆ ಕೆಫೆ ಸಿಬ್ಬಂದಿ ಇನ್‌ಸ್ಪೆಕ್ಟರ್ ವಿಜಯ್ ಹಡಗಲಿ ಅವರಿಗೆ ಕರೆ ಮಾಡಿದ್ದರು ಎನ್ನಲಾಗುತ್ತಿದೆ. ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಹಾಗೂ ಆರೋಪಿಗಳನ್ನು ಬಂಧಿಸಲು ವಿಫಲರಾದ ಕಾರಣಕ್ಕೆ ವಿಜಯ್ ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆ ನಡೆಸಲಾಗುತ್ತದೆ’ ಎಂದು ಹೇಳಿದರು.

ತಾನಾಗಿಯೇ ಬಿದ್ದ ಎಂದಿದ್ದರು: ಆರಂಭದಲ್ಲಿ ಕಬ್ಬನ್‌ಪಾರ್ಕ್ ಪೊಲೀಸರು ವಿಚಾರಣೆಗೆ ನಡೆಸಿದ್ದಾಗ, ‘ನಾವೆಲ್ಲ ಊಟಕ್ಕೆ ಹೋಗಿದ್ದೆವು. ನಮ್ಮ ಪಕ್ಕದ ಟೇಬಲ್‌ನಲ್ಲೇ ವಿದ್ವತ್ ಕಾಲು ಚಾಚಿಕೊಂಡು ಕುಳಿತಿದ್ದ. ಆತ ತಮಗೆ ಕಾಲು ತಾಕಿಸಿದ್ದರಿಂದ ಪ್ರಶ್ನೆ ಮಾಡಿದೆವು. ಅದಕ್ಕೆ ಆತ, ‘ನಾನು ಯಾರು ಗೊತ್ತ? ನಮ್ಮಪ್ಪ ಯಾರು ಗೊತ್ತ? ನನ್ನನ್ನು ಪ್ರಶ್ನೆ ಮಾಡಲು ನೀನು ಯಾರು ಎಂದ. ಆತನೇ ಗಲಾಟೆ ಶುರು ಮಾಡಿ, ಸ್ನೇಹಿತ ಅರುಣ್ ಬಾಬುವಿನ ಕೆನ್ನೆಗೆ ಬಾರಿಸಿದ. ಹೆಚ್ಚು ಕುಡಿದಿದ್ದರಿಂದ ನಿಯಂತ್ರಣ ತಪ್ಪಿ ಆತನೇ ನೆಲಕ್ಕೆ ಬಿದ್ದ’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದರು.

ಇದೀಗ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳ‍ಪಡಿಸಿದಾಗ ತಮ್ಮದೇ ತಪ್ಪಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಿಯರ್ ಬಾಟಲಿಯಿಂದ ಮೂಗಿಗೆ ಹೊಡೆದಿದ್ದಾಗಿಯೂ ಹೇಳಿದ್ದಾರೆ.

‘ಈ ಪ್ರಕರಣದಲ್ಲಿ ಗಾಯಾಳು ವಿದ್ವತ್‌ ಹೇಳಿಕೆ ಮಹತ್ವದ್ದಾಗಿದೆ. ಆದರೆ, ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಚೇತರಿಸಿಕೊಂಡ ಬಳಿಕ ವೈದ್ಯರ ಅನುಮತಿ ಪಡೆದು ಮಾಹಿತಿ ‌ಪಡೆಯುತ್ತೇವೆ’ ಎಂದು ಡಿಸಿಪಿ ಹೇಳಿದ್ದಾರೆ.

ಲಾಕಪ್‌ನಲ್ಲೇ ನಲಪಾಡ್ ವಿಚಾರಣೆ

ಮೊಹಮ್ಮದ್ ನಲಪಾಡ್ ಹಾಗೂ ಆತನ ಆರು ಮಂದಿ ಸಹಚರರನ್ನು, ಠಾಣೆಯ ಲಾಕಪ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.  ‘ಲಾಕಪ್‌ನಲ್ಲಿ ಕುಳಿತಿದ್ದರೂ ಶಾಸಕರ ಪುತ್ರನಿಗೆ ದರ್ಪ, ಅಹಂ ಸ್ವಲ್ಪವೂ ಕಡಿಮೆಯಾಗಿಲ್ಲ. ಪೊಲೀಸರ ಜತೆ ಎಂದಿನ ದಾಟಿಯಲ್ಲೇ ಮಾತನಾಡುತ್ತಿದ್ದಾನೆ. ಆತನಲ್ಲಿ ಪಶ್ಚಾತಾಪದ ಭಾವನೆ ಸ್ವಲ್ಪವೂ ಕಾಣುತ್ತಿಲ್ಲ’ ಎಂದು ಠಾಣೆಯ ಸಿಬ್ಬಂದಿ ತಿಳಿಸಿದರು.

ಮನೆಯಿಂದ ಊಟ ತಂದ ಗುರು ರಾಘವೇಂದ್ರ

ಸ್ನೇಹಿತ ವಿದ್ವತ್ ಹಾಗೂ ಆಸ್ಪತ್ರೆಯಲ್ಲಿರುವ ಆತನ ಸಂಬಂಧಿಕರಿಗೆ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅವರ ಮಗ ಗುರು ರಾಘವೇಂದ್ರ ರಾಜ್‌ಕುಮಾರ್ ಮನೆಯಿಂದ ಊಟ ತಂದು ಕೊಟ್ಟರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನಾನು ಹಾಗೂ ವಿದ್ವತ್‌ ಮೂರನೇ ತರಗತಿಯಿಂದ ಸಹಪಾಠಿಗಳು. ಆತ ನನ್ನ ಆತ್ಮೀಯ ಗೆಳೆಯ. ಆತನ ಆರೋಗ್ಯ ವಿಚಾರಿಸಲು ಬಂದಿದ್ದೇನೆ’ ಎಂದರು.

‘ಘಟನೆ ನಡೆದ ಸ್ಥಳದಲ್ಲಿ ನಾನು ಇರಲಿಲ್ಲ. ವಿಷಯ ತಿಳಿದು ಅಂದು ರಾತ್ರಿಯೇ ಆಸ್ಪತ್ರೆಗೆ ಬಂದಿದ್ದೆ. ಆಗ ನಲಪಾಡ್ ಹಾಗೂ ಆತನ ಸಹಚರರು ಅಲ್ಲಿಗೆ ಬಂದು ಗಲಾಟೆ ಮಾಡುತ್ತಿದ್ದರು. ವೈಯಕ್ತಿಕವಾಗಿ ನಲಪಾಡ್, ನನಗೆ ಪರಿಚಯಸ್ಥರಲ್ಲ. ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು’ ಎಂದು ಹೇಳಿದರು.

ನಟ ಪುನೀತ್ ರಾಜ್‌ಕುಮಾರ್, ‘ವಿದ್ವತ್‌ನನ್ನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಯಾರೂ ಜಗಳವಾಡಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದರು.

ಶಾಸಕ ಆರ್‌.ಅಶೋಕ್, ‘ನಲಪಾಡ್‌ ಹಲ್ಲೆ ಪ್ರಕರಣ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್‌ ಮುಖಂಡ ನಾರಾಯಣ ಸ್ವಾಮಿ ಎಂಬಾತ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್‌ ಮುಖಂಡರಿಂದ ಪುಂಡಾಟಿಕೆ ದಿನೇ ದಿನೇ ಹೆಚ್ಚುತ್ತಿದೆ. ಅಂಥವರ ಪರ ಸರ್ಕಾರ ನಿಂತಿದೆ’ ಎಂದು ದೂರಿದರು.

‘ಹ್ಯಾರಿಸ್ ಮಗನಿಗೆ ಪಂಚತಾರಾ ಹೋಟೆಲ್‌ನಿಂದ ಊಟ ತರಿಸಿ ಕೊಡಲಾಗುತ್ತಿದೆ. ಬಹುತೇಕ ಪೊಲೀಸ್ ಕಚೇರಿಗಳು ಇಂದು ಕಾಂಗ್ರೆಸ್ ಕಚೇರಿಗಳಾಗುತ್ತಿವೆ. ಜನ ಸಾಮಾನ್ಯರು ಹೋಟೆಲ್‌ಗಳಿಗೆ ಹೋಗಲು ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯವನ್ನು ರಕ್ಷಿಸುವಂತೆ ಕೋರಿ ಕೇಂದ್ರದ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡುತ್ತೇವೆ’ ಎಂದು ಹೇಳಿದರು.

ಮಾಹೀರ್ ಬಂಧನ: ಕಬ್ಬನ್ ಪಾರ್ಕ್‌ ಠಾಣೆ ಬಳಿ ಮಾಧ್ಯಮಗಳ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ್ದ ಅಶೋಕನಗರದ ಮಾಹೀರ್ (27) ಎಂಬುವರನ್ನು ಬಂಧಿಸಲಾಗಿದೆ.

‘ಸೋಮವಾರ ಮಧ್ಯಾಹ್ನ ಕೆಲ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿ, ಅವರ ಕ್ಯಾಮೆರಾಗಳನ್ನು ಜಖಂಗೊಳಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಹಲ್ಲೆ ಮಾಡಿದ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಒದಗಿಸಲಾಗಿತ್ತು. ಹೀಗಾಗಿ, ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಚಂದ್ರಗುಪ್ತಾ ತಿಳಿಸಿದರು.

‘ವಿದ್ವತ್ ಮೂಳೆ ಮುರಿದಿವೆ: ‘ವಿದ್ವತ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಎದೆಗೂಡಿನ 9 ಮೂಳೆಗಳು, ಮೂಗು ಹಾಗೂ ಬೆನ್ನು ಮೂಳೆಗಳು ಮುರಿದಿವೆ. ಶಸ್ತ್ರಚಿಕಿತ್ಸೆ ಮಾಡಿ ಅವುಗಳನ್ನು ಜೋಡಣೆ ಮಾಡಬೇಕಿದೆ. ಕಣ್ಣುಗಳಿಗೂ ಬಲವಾದ ಪೆಟ್ಟು ಬಿದ್ದಿದೆ’ ಎಂದು ಮಲ್ಯ ಆಸ್ಪತ್ರೆ ವೈದ್ಯ ಡಾ.ಆನಂದ್ ಹೇಳಿದರು.

‘ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ ಮೂರು ತಿಂಗಳು ಬೇಕು’ ಎಂದರು.

ಆರೋಪಿಗಳು ಪೂರ್ವಾಪರ

ಮೊಹಮದ್ ನಲಪಾಡ್: ಅಶೋಕನಗರ ಸಮೀಪದ ಮೆಗ್ರಾತ್ ರಸ್ತೆ ನಿವಾಸಿಯಾದ ಈತ, ನಲಪಾಡ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ

ಅರುಣ್ ಬಾಬು: ಆಸ್ಟಿನ್ ಟೌನ್ ನಿವಾಸಿ. ಡಿಪ್ಲೊಮಾ ಪದವೀಧರ. ಜ್ಯೂಸ್ ಮಳಿಗೆಯಲ್ಲಿ ಕೆಲಸ ಮಾಡುತ್ತಾನೆ.

ಮಂಜುನಾಥ್: ಬನ್ನೇರುಘಟ್ಟದ ನೇಕಾರರ ಕಾಲೊನಿ ನಿವಾಸಿ. ನಲಪಾಡ್ ಕಾರು ಚಾಲಕ. ಬೌನ್ಸರ್.

ಮೊಹಮ್ಮದ್ ಅಶ್ರಫ್: ಆಸ್ಟಿನ್ ಟೌನ್ ನಿವಾಸಿ. ಬಿಕಾಂ ಪದವೀಧರ. ನಿರುದ್ಯೋಗಿ.

ಬಾಲಕೃಷ್ಣ : ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿ. ಕಾರು ಚಾಲಕ.

ಅಭಿಷೇಕ್: ರಿಚ್ಮಂಡ್‌ಟೌನ್‌ ನಿವಾಸಿ. ಬಿಬಿಎ ಪದವೀಧರ. ಉದ್ದಿಮೆದಾರ.

ನಫೀ ಮೊಹಮ್ಮದ್ ನಾಸೀರ್:  ರಿಚ್ಮಂಡ್‌ಟೌನ್‌ ನಿವಾಸಿ. ಬಿಬಿಎಂ ಪದವೀಧರ. ನಲಪಾಡ್ ಹಿಂಬಾಲಕ. ತಂದೆ ಪಿಡಬ್ಲ್ಯುಡಿ ಗುತ್ತಿಗೆದಾರ.

ಇನ್ನೊಬ್ಬ ಆರೋಪಿ ಕೃಷ್ಣ ತಲೆಮರೆಸಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT