ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓ ಈ ಜಡೆಗೆಲ್ಲಿ ಕಡೆ...

Last Updated 22 ಫೆಬ್ರುವರಿ 2018, 14:03 IST
ಅಕ್ಷರ ಗಾತ್ರ

ನೇರವಾಗಿ ವಿಷ್ಯಕ್ಕೆ ಬಂದ್ರೆ, ಲೋಕದಲ್ಲಿ ಗಂಡು ಯಾರು, ಹೆಣ್ಣು ಯಾರು ಅಂತ ಗೊತ್ತಾಗೋದಕ್ಕೆ ಜಡೆಯನ್ನು ಬೆಳೆಸ್ತಾರೆ ಅಂತ ಕೇಳ್ಕೋತ್ತಾ ಬಂದವಳು ನಾನು. ಆದ್ರೆ ಇದನ್ನೇ ಕಣ್ಣುಮುಚ್ಚಿ ನಂಬಿ ಅನೇಕ ಬಾರಿ ಬೇಸ್ತು ಬಿದ್ದಿದ್ದೇನೆ. ಯಾಕೆಂದ್ರೆ ಕಿವಿ ಓಲೆ, ಕಡಗಗಳು, ನಾನಾತರದ ಹೇರ್ ಬ್ಯಾಂಡುಗಳು, ನುಣುಪು ಗಲ್ಲ ಜೊತೆಗೆ ಜಡೆ ಹೆಣೆಯುವಷ್ಟು ಉದ್ದದ ಕೂದಲನ್ನು ಬಿಟ್ಟ ಗಂಡುಗಳನ್ನು ಕಂಡು ನಿಮಗೂ ಗಲಿಬಿಲಿ ಆಗಿರಬಹುದು.

ಗಂಡಸರನ್ನೂ ಕೂದಲು ಬೆಳೆಸುವಂತೆ ಪ್ರೇರೇಪಿಸುವ ಈ ಜಡೆಯ ಸೆಳೆತವೇ ಅಂಥದ್ದು ಬಿಡಿ. ನೀಳಕೂದಲು ಇಲ್ಲದಿದ್ದರೆ ‘ನಾಗರಕುಚ್ಚಿನ ನಿಡು ಜಡೆಯವಳೆ’ ಎಂದು ಕೆಎಸ್‍ನವರು, ‘ಹರನ ಜಡೆಯಿಂದ ಇಳಿದು ಬಾ’ ಎಂದು ಬೇಂದ್ರೆಯವರು ಅಷ್ಟೇ ಏಕೆ ಜಿಎಸ್‍ಎಸ್ ಅವರು ‘ಓ ಓ ಈ ಜಡೆಗೆಲ್ಲಿ ಕಡೆ’ ಎನ್ನುತ್ತಾ ಜಡೆಯ ಬಗ್ಗೆ ಕವನಗಳನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ಜಡೆ ಇಲ್ಲದಿದ್ದರೆ ನೀಳವೇಣಿ, ನಾಗವೇಣಿ, ತ್ರಿವೇಣಿ ಎಂಬ ಹೆಸರುಗಳನ್ನೂ ಟಂಕಿಸಲು ಆಗುತ್ತಿರಲಿಲ್ಲ. ಗಿಡ್ಡ ಕೂದಲಿನವಳನ್ನು ಕಂಡು ‘ಬಾಬ್‍ಕಟ್ಟಿನವಳೇ’, ‘ಮೋಟು ಜಡೆಯವಳೇ’, ‘ಚೋಟು ಜಡೆಯವಳೇ’ ಎಂದು ಕಾವ್ಯಾತ್ಮಕವಾಗಿ ವರ್ಣಿಸಲು ಖಂಡಿತ ಮನಸು ಬರುತ್ತಿರಲಿಲ್ಲ.

ಪುಟ್ಟಕೂದಲಿನ ಪುಟ್ಟ ಒಡತಿಗೆ ಚೌರಿ ಸಿಕ್ಕಿಸಿ ಮೊಗ್ಗಿನ ಜಡೆ ಹಾಕಿದರೆ ಅವಳ ಸಂಭ್ರಮಕ್ಕೆ ಎಲ್ಲೆಯುಂಟೇ? ವಧು ಪರೀಕ್ಷೆಗೆ ಹೋದಾಗ ಹೆಣ್ಣಿನಲ್ಲಿ ಅಡುಗೆ, ಸಂಗೀತದಂತಹ ಪ್ರಾವೀಣ್ಯತೆ ಇರುವಂತೆ ಉದ್ದಕೂದಲೂ ಇರುವುದು ಹುಡುಗಿಯನ್ನು ಒಪ್ಪಿಕೊಳ್ಳಲು ಮುಖ್ಯ ಮಾನದಂಡ ಎನಿಸಿತ್ತು. ಇಂದಿಗೂ ಮದುವೆಗಳಿಗೂ ಮೊಗ್ಗಿನಜಡೆಗೂ ಸಂಬಂಧವಿದೆ.

ಟಿ.ವಿ.ಯಲ್ಲಿ ಬರುವ ಹಲವು ಬಗೆಯ ಜಾಹೀರಾತುಗಳು, ‘ನೀವು ಕೂದಲನ್ನು ಉದ್ದಬಿಡಿ, ನಾವು ಅದರ ನಿಗಾ ಮಾಡುತ್ತೇವೆ’ ಎಂಬ ಭರವಸೆ ಮೂಡಿಸುವಂತೆ ಇರುತ್ತವೆ. ‘ನಮ್ಮ ಶ್ಯಾಂಪೂ ಬಳಸಿದರೆ ನಿಮ್ಮ ತಲೆಗೂದಲು ಹೊಳೆಯುತ್ತದೆ. ಉದ್ಯೋಗಾವಕಾಶ ನಿಮ್ಮದಾಗುತ್ತದೆ’, ‘ನಮ್ಮ ಶ್ಯಾಂಪೂ ಬಳಸಿದರೆ ಗುಂಡಿನ ಸರ ಮುರಿಯುವ ಬಲ ನಿಮ್ಮ ಕೂದಲಿಗೆ’ ಎಂದು ನಾನಾ ಥರದ, ಬಣ್ಣದ, ಸೊಪ್ಪಿನ, ತರಕಾರಿಯ, ಹೂವುಗಳ, ಬೀಜಗಳ, ಬೇರಿನ (ಬಿಟ್ಟಿದ್ದು ಯಾವುದು?) ಶ್ಯಾಂಪೂಗಳು ನಿಮ್ಮೆದುರು ಪ್ರತ್ಯಕ್ಷವಾಗಿ ಕಂಗೆಡಿಸಿಬಿಡುತ್ತವೆ.

ಉದ್ದ ಕೂದಲಿನಿಂದ ತಾಪತ್ರಯವೂ ಉಂಟು. ಊಟ ಮಾಡುವಾಗ ಮೊಸರಲ್ಲಿ ಕಲ್ಲು ಎಂಬಂತೆ ಒಮ್ಮೊಮ್ಮೆ ಕೂದಲು ಸಿಗುವುದೂ ಉಂಟು. ಸಿಕ್ಕರೆ ಸುಮ್ಮನೆ ಬಟ್ಟಲಿನಿಂದ ಹೊರಗಿಟ್ಟು ಊಟ ಮುಂದುವರಿಸುವುದು ತಾನೇ? ಅದು ಬಿಟ್ಟು ‘ಇದು ಉದ್ದದ್ದು- ಅಮ್ಮನದ್ದು, ಇದು ಬೆಳ್ಳಿಕೂದಲು- ಅಜ್ಜಿಯದು, ಇದು ಚಿನ್ನದೆಳೆ-ತಂಗಿಯದ್ದು’ ಎಂದು ಆಸ್ತಿ ಪಾಲು ಮಾಡುವವರಂತೆ ಊಟ ಬಿಟ್ಟು ಸಣ್ಣಮಕ್ಕಳು ವಾಕ್ಯಾರ್ಥಕ್ಕೆ ನಿಂತು ಬಿಡುತ್ತಾರೆ.

ಮೊನ್ನೆ ಇದೇ ಕಾರಣಕ್ಕೆ ನನ್ನ ಗಂಡ ಸಿಟ್ಟಾಗಿದ್ದ. ‘ಇವತ್ತಷ್ಟೇ ಶ್ಯಾಂಪೂ ಹಾಕಿ ಸ್ನಾನ ಮಾಡಿದ್ದೇನೆ. ಕೂದಲು ಕ್ಲೀನಾಗಿದೆ, ನೆಮ್ಮದಿಯಾಗಿ ಊಟ ಮಾಡಿ’ ಎಂದು ಹೇಳಿದ್ದೆ. ಅದು ಅವರ ಸಿಟ್ಟನ್ನು ತಣಿಸಿತೋ, ಏರಿಸಿತೋ ಗೊತ್ತಾಗಲಿಲ್ಲ.

ನಮಗ್ಯಾವತ್ತೂ ಇಲ್ಲದುದರ ಬಗ್ಗೆಯೇ ಒಲವು. ಶಾಲೆಗೆ ಹೋಗುವಾಗ ಹೇನಿನ ನೆವ ಹೇಳಿ ಅಮ್ಮ ಕೂದಲು ಹೆಗಲಿಗಿಂತ ಕೆಳಗಿಳಿಯುತ್ತಿದ್ದಂತೆ ನನಗಿಷ್ಟವಿಲ್ಲದಿದ್ದರೂ ಕತ್ತರಿಯಾಡಿಸುತ್ತಿದ್ದಳು. ಆದರೆ ಈಗ ಸ್ವಲ್ಪ ಫ್ಯಾಷನ್ ಆಗಿ ತೋರಲು, ಇದ್ದುದಕ್ಕಿಂತ ಯಂಗ್ ಆಗಿ ಕಾಣಲು ಗಿಡ್ಡ ಕೂದಲು ಇರಬೇಕು ಅನ್ನಿಸುತ್ತದೆ.

ಆದರೆ ‘ಕೂತರೆ ನೆಲಕ್ಕೆ ಹಾಸುವ ಕೂದಲನ್ನು ಕತ್ತರಿಸಲು ಮನಸ್ಸು ಹೇಗೆ ಬಂತು’ ಎಂದು ಇದೇ ಅಮ್ಮ ಕೆಂಗಣ್ಣಾಗುತ್ತಾಳೆಂದು ಅಂಜಿ ಈ ಜಡೆಪುರಾಣದಂತೆಯೇ ಕೂದಲು ಬೆಳೆದಷ್ಟು ಬೆಳೆಯಲಿ ಎಂದು ಉದ್ದ ಬೆಳೆಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT