ಶಿಕ್ಷಕರು, ಪೋಷಕರ ಖಾಸಗಿತನದ ಬಯಲು: ಆತಂಕ

7
ಶಿಕ್ಷಣ ಇಲಾಖೆ –‘ಸ್ಕೂಲ್‌ಜಿಲಿಂಕ್‌ ಪ್ರೈವೇಟ್‌ ಲಿಮಿಟೆಡ್‌’ ಕಂಪನಿ ಜತೆಗೆ ಒಪ್ಪಂದ

ಶಿಕ್ಷಕರು, ಪೋಷಕರ ಖಾಸಗಿತನದ ಬಯಲು: ಆತಂಕ

Published:
Updated:

ಬೆಂಗಳೂರು: ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲೀಕರಿಸುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ‘ಸ್ಕೂಲ್‌ಜಿಲಿಂಕ್‌ ಪ್ರೈವೆಟ್‌ ಲಿಮಿಟೆಡ್‌’ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಆತಂಕ ಎದುರಾಗಿದೆ.

ಈ ಕಂಪನಿಯು ವೈಯಕ್ತಿಕ ಮಾಹಿತಿಯ ದತ್ತಾಂಶವನ್ನು ಇತರರಿಗೆ ಹಂಚಿದರೆ ಖಾಸಗಿತನದ ಉಲ್ಲಂಘನೆ ಯಾಗುತ್ತದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸದಸ್ಯರು ಮತ್ತು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಮತ್ತು ಅನುದಾನಿತ ಶಾಲೆಗಳ 2.5 ಲಕ್ಷ ಶಿಕ್ಷಕರ ದತ್ತಾಂಶವನ್ನು ಈ ಖಾಸಗಿ ಕಂಪನಿ ಜತೆಗೆ ಇಲಾಖೆ ಈಗಾಗಲೇ ಹಂಚಿಕೊಂಡಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶಾಲೆಗಳಲ್ಲಿ ತುರ್ತಾಗಿ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಜತೆಗೆ ಅಗತ್ಯ ಶಿಕ್ಷಕರ ನೇಮಕಾತಿ ಆಗಬೇಕು. ಈ ಕೆಲಸಗಳಿಗೆ ಆದ್ಯತೆ ನೀಡಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು, ಡಿಜಿಟಲೀಕರಣ, ಜ್ಞಾನದ ಹಂಚಿಕೆ ಹೆಸರಿನಲ್ಲಿ ಖಾಸಗಿತನದ ಉಲ್ಲಂಘನೆಗೆ ಮುಂದಾಗಿದ್ದಾರೆ’ ಎಂಬುದು ಶಿಕ್ಷಣ ತಜ್ಞ ಶ್ರೀಪಾದ ಭಟ್‌ ಆರೋಪ.

‘ ದತ್ತಾಂಶವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ. ಇಲಾಖೆಯು ಈಗಾಗಲೇ ಕೆಲ ದತ್ತಾಂಶವನ್ನು ಖಾಸಗಿ ಕಂಪನಿ ಜತೆ ಹಂಚಿಕೊಂಡಿದೆ ಎಂದು ಗೊತ್ತಾಗಿದೆ. ಇದು ದುರುಪಯೋಗ ಆಗುತ್ತಿರುವ ಕುರಿತು ಕೆಲ ಪೋಷಕರು ಮಾಹಿತಿ ನೀಡಿದ್ದಾರೆ. ರಾತ್ರಿ ವೇಳೆಯಲ್ಲಿ ಪೋಷಕರಿಗೆ ‘ಮಾರ್ಕೆಟಿಂಗ್‌ ಕಾಲ್‌’ಗಳು ಬರುತ್ತಿವೆ. ಇದು ಹೀಗೆ ಮುಂದುವರೆದರೆ ಅನಿವಾರ್ಯವಾಗಿ ಕಾನೂನಾತ್ಮಕ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಪ್ರತಿಕ್ರಿಯಿಸಿದರು.

‘ಕಾನೂನು ಇಲಾಖೆಯ ಸಮ್ಮತಿ ಪಡೆದೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಐಟಿ ಕಾಯ್ದೆ ಅನ್ವಯ ಖಾಸಗಿ ಮತ್ತು ಗೋಪ್ಯ ವಿಚಾರಗಳು ಸುರಕ್ಷಿತವಾಗಿಯೇ ಇರುತ್ತವೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರದ ಉದ್ದೇಶ ಏನು?

* ರಾಜ್ಯದ ಎಲ್ಲ ಭಾಗದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಶಾಲಾ ಆಡಳಿತ ಮಂಡಳಿಯನ್ನು ಒಂದೇ ವೇದಿಕೆಯಡಿ ತರುವ ಉದ್ದೇಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೊಂದಿದೆ. ಅದಕ್ಕಾಗಿ ‘ಸ್ಕೂಲ್‌ಜಿಲಿಂಕ್‌ ಪ್ರೈವೆಟ್‌ ಲಿಮಿಟೆಡ್‌’ ಕಂಪನಿಯ ‘ಆ್ಯಪ್‌’ ಅನ್ನು ವೇದಿಕೆಯಾಗಿ ಬಳಸಿಕೊಳ್ಳಲು ಒಡಂಬಡಿಕೆಯಾಗಿದೆ.

* ಶಾಲೆ, ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಶಿಕ್ಷಕ–ಶಿಕ್ಷಕ, ಶಿಕ್ಷಕ–ಪೋಷಕ, ಶಿಕ್ಷಕ– ವಿದ್ಯಾರ್ಥಿ, ಶಾಲೆ– ಶಿಕ್ಷಕ, ಶಾಲೆ–ವಿದ್ಯಾರ್ಥಿ, ಶಾಲೆ–ಪೋಷಕರ ಜತೆ ಸಂಪರ್ಕ ಕಲ್ಪಿಸಲು ಇದು ಅನುವು ಮಾಡಿಕೊಡುತ್ತದೆ. ಅದರ ಜತೆಗೆ ಶಿಕ್ಷಣ ತಜ್ಞರು, ವಿಷಯ ಪರಿಣತರ ಜತೆಗೂ ಸಂಪರ್ಕ ಕಲ್ಪಿಸಿ ಜ್ಞಾನದ ಹಂಚಿಕೆಗೆ ಈ ವೇದಿಕೆ ಬಳಕೆಯಾಗಬೇಕು.

* ಕಲಿಕಾ ವಿಧಾನದಲ್ಲಿ ವಿವಿಧ ಶಿಕ್ಷಕರು, ಶಾಲೆಗಳು ಮಾಡುವ ಹೊಸ ಪ್ರಯೋಗಗಳು ಇತರ ಶಿಕ್ಷಕರು, ಶಾಲೆಗಳಿಗೆ ಈ ‘ಆ್ಯಪ್‌’ ಮೂಲಕ ಲಭ್ಯವಾಗುವಂತಾಗಲಿ. ಶೈಕ್ಷಣಿಕ ಸಂವಾದಕ್ಕೆ ಶಿಕ್ಷಕರು, ವಿಷಯ ತಜ್ಞರು, ಶಾಲಾ ಆಡಳಿತ ಮಂಡಳಿಗಳು ಈ ವೇದಿಕೆಯನ್ನು ಬಳಸಿಕೊಳ್ಳುವಂತಾಗಬೇಕು.

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಆತಂಕಗಳೇನು?

* ಶಿಕ್ಷಣ ಇಲಾಖೆ ನೀಡಿದ ಎಲ್ಲರ ವೈಯಕ್ತಿಕ ಮಾಹಿತಿಯ ದತ್ತಾಂಶವೂ ಖಾಸಗಿಯವರ ಬಳಿ ಹೇಗೆ ತಾನೆ ಸುರಕ್ಷಿತವಾಗಿರಲು ಸಾಧ್ಯ.ಅದು ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ.

* ಈ ಆ್ಯಪ್‌ನಿಂದ ಮಾಹಿತಿ ಪಡೆದು ಒಂದು ಶಾಲೆಯ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಮತ್ತೊಂದು ಶಾಲೆಯವರು ವಿವಿಧ ಆಮಿಷಗಳನ್ನೊಡ್ಡಿ ಸೆಳೆದುಕೊಳ್ಳಬಹುದು. ಇದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಬಹುದು. ಶಿಕ್ಷಕರ ಕೊರತೆಯೂ ಎದುರಾಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೂ ಕುತ್ತು ಬರಬಹುದು. 

* ಲಾಭದ ಉದ್ದೇಶವಿಲ್ಲದೆ ಯಾವುದೇ ಖಾಸಗಿ ಕಂಪನಿ ಕೆಲಸ ಮಾಡುತ್ತದೆಯೇ? ವೈಯಕ್ತಿಕ ಮಾಹಿತಿಯನ್ನು ಸಮೀಕ್ಷೆ ಸೇರಿದಂತೆ ವಿವಿಧ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಬೇರೆ ಕಂಪನಿಗಳೊಂದಿಗೆ ದತ್ತಾಂಶವನ್ನು ಹಂಚಿಕೊಳ್ಳಬಹುದು.

***

ಖಾಸಗಿತನಕ್ಕೆ ಧಕ್ಕೆ ತರುವ ಈ ಒಡಂಬಡಿಕೆಯನ್ನು ಕೂಡಲೇ ರದ್ದು ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ತಿಗೆ ಮನವಿ ಸಲ್ಲಿಸಿದ್ದೇವೆ

–ಡಿ. ಶಶಿಕುಮಾರ್‌, ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry