ಶುಕ್ರವಾರ, ಡಿಸೆಂಬರ್ 6, 2019
26 °C

ಸಮಾವೇಶ ಕೇಂದ್ರ ವಿಶ್ವಕ್ಕೆ ಮಾದರಿ: ದೇಶಪಾಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾವೇಶ ಕೇಂದ್ರ ವಿಶ್ವಕ್ಕೆ ಮಾದರಿ: ದೇಶಪಾಂಡೆ

ದೇವನಹಳ್ಳಿ: ಬೆಂಗಳೂರು ಸಿಗ್ನೇಚರ್‌ ಬಿಸಿನೆಸ್‌ ಪಾರ್ಕ್‌ ಮತ್ತು ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ ಕೆಲವೇ ವರ್ಷದಲ್ಲಿ ವಿಶ್ವಕ್ಕೆ ಮಾದರಿಯಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದ ಭುವನಹಳ್ಳಿ ಗ್ರಾಮದ ಬಳಿ ಗುರುವಾರ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್‌ ಬಿಸಿನೆಸ್‌ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

1990ರಲ್ಲಿ ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಕೇವಲ 5ಸಾವಿರ ಉದ್ಯೋಗಿಗಳಿದ್ದರು. ವಿವಿಧ ಕಂಪನಿಗಳಲ್ಲಿ ಪ್ರಸ್ತುತ 14 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರ ಬಂಡವಾಳಗಾರರನ್ನು ಆಕರ್ಷಿಸಲು ಭೂಮಿ, ಮೂಲ ಸೌಲಭ್ಯ ಕಲ್ಪಿಸಿದ ಪರಿಣಾಮ ‌ಉದ್ಯೋಗ ಸಂಖ್ಯೆ ‌ಹೆಚ್ಚಾಗಿದೆ ಎಂದರು.

ವಿಮಾನ ನಿಲ್ದಾಣ ಪಕ್ಕದಲ್ಲೇ ಸಿಗ್ನೇಚರ್‌ ಬಿಸಿನೆಸ್‌ ಪಾರ್ಕ್‌ಗೆ 407 ಎಕರೆ ಭೂಮಿ ಮೀಸಲಿಡಲಾಗಿದೆ. ಅದೇ ಜಾಗದಲ್ಲಿ 35ಎಕರೆ ವಿಸ್ತೀರ್ಣದ ಬೆಂಗಳೂರು ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಸಂಸದ ವೀರಪ್ಪಮೊಯಿಲಿ ಮಾತನಾಡಿ, ಇಲ್ಲಿನ ವಿಮಾನ ನಿಲ್ದಾಣ ದೇಶದಲ್ಲಿ ಮೂರನೇ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. 2ನೇ ಟರ್ಮಿನಲ್‌ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.

ವಿಮಾನ ನಿಲ್ದಾಣ ಪಕ್ಕದಲ್ಲೇ ಬಿಸಿನೆಸ್‌ ಪಾರ್ಕ್‌ ಮತ್ತು ಸಮಾವೇಶ ಕೇಂದ್ರ ನಿರ್ಮಾಣವಾಗುತ್ತಿರುವುದು ರಾಜ್ಯಕ್ಕೆ ಹೆಮ್ಮೆಯಾದರೂ ಅಂತರರಾಷ್ಟ್ರೀಯ ಹಣಕಾಸು ವಹಿವಾಟು ಕೇಂದ್ರವನ್ನಾಗಿಸಲು ಸಚಿವರು ಸಂಕಲ್ಪ ಮಾಡಬೇಕು ಎಂದು ಒತ್ತಾಯಿಸಿದರು.

ಕೈಗಾರಿಕಾ ಕ್ಷೇತ್ರ ಪ್ರಗತಿಯತ್ತ ಸಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ವಿದೇಶಿ ಮೂಲದ ಕಂಪನಿಯೊಂದು ತಾಲ್ಲೂಕಿನಲ್ಲಿ ಹಾರ್ಡ್‌ವೇರ್‌ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದೆ ಎಂದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ವಿಮಾನ ನಿಲ್ದಾಣ ವಶಪಡಿಸಿಕೊಂಡ ರೈತರ 5600 ಎಕರೆ ಭೂಮಿಯಲ್ಲಿ ಕೆಲ ರೈತರಿಗೆ ಇನ್ನೂ ಪರಿಹಾರ ಸಿಗದೆ ಅಲೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಎಸ್‌ಐಐಡಿಸಿ ಅಧ್ಯಕ್ಷ ಸಿ.ಎಂ. ಧನಂಜಯ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್‌, ಉಪಾಧ್ಯಕ್ಷೆ ಅನಂತಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಮಂಜುನಾಥ್‌, ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಉಷಾ ರಾಣಿ ಗೋಪಾಲ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಮುರಳಿ, ಉಪಾಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮುನಿಶ್ಯಾಮಪ್ಪ, ಜಿಲ್ಲಾಧಿಕಾರಿ ಎಸ್‌.ಪಾಲಯ್ಯ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾದಿಕಾರಿ ದಯಾನಂದ್‌, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಜಯರಾಮ್‌, ಬಯ್ಯಪಾ ಸದಸ್ಯ ಎನ್.ಟಿ.ನಾಗೇಶ್‌, ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಆಶಾರಾಣಿ ಇದ್ದರು.

ಸಮಾವೇಶ ಕೇಂದ್ರದ ವಿಶೇಷತೆ

ಸಮಾವೇಶ ಕೇಂದ್ರದಲ್ಲಿ 6 ರಿಂದ 8 ಸಾವಿರ ಆಸನಗಳ ವ್ಯವಸ್ಥೆಯ ಸಭಾಂಗಣ ನಿರ್ಮಾಣ ಮಾಡಲಾಗುವುದು. 9 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಹವಾ ನಿಯಂತ್ರಣ ವ್ಯವಸ್ಥೆಯುಳ್ಳ ಸಭಾಂಗಣ ಸ್ಥಾಪನೆಯಾಗಲಿದೆ. ಅಲ್ಲದೆ, ಪಂಚತಾರಾ ಹೋಟಲ್‌ ಸೌಲಭ್ಯ ಹಾಗೂ ಕಾರು ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಈ ಸಭಾಂಗಣದಲ್ಲಿ ಎಲ್ಲಾ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಸಚಿವ ದೇಶಪಾಂಡೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)