ಸೋಮವಾರ, ಮೇ 25, 2020
27 °C

ಭಾರತ–ದಕ್ಷಿಣ ಆಫ್ರಿಕಾ ನಡುವಣ 3ನೇ ಟ್ವೆಂಟಿ–20 ಪಂದ್ಯ: ಉಭಯ ತಂಡಗಳಿಗೆ ‘ಫೈನಲ್‌’ ಹೋರಾಟ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತ–ದಕ್ಷಿಣ ಆಫ್ರಿಕಾ ನಡುವಣ 3ನೇ ಟ್ವೆಂಟಿ–20 ಪಂದ್ಯ: ಉಭಯ ತಂಡಗಳಿಗೆ ‘ಫೈನಲ್‌’ ಹೋರಾಟ

ಕೇಪ್‌ಟೌನ್‌ (ಪಿಟಿಐ): ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಮೊದಲ ಎರಡು ಪಂದ್ಯಗಳ ಪೈಕಿ ತಲಾ ಒಂದರಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಂಡಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಪಾಲಿಗೆ ಶನಿವಾರ ನಡೆಯುವ ಮೂರನೇ ಪಂದ್ಯ ‘ಫೈನಲ್‌’ ಹೋರಾಟವಾಗಿದೆ.

ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ 28ರನ್‌ ಗಳಿಂದ ಗೆದ್ದಿತ್ತು. ಆದರೆ ಸೆಂಚೂರಿಯನ್‌ನಲ್ಲಿ ನಡೆದಿದ್ದ ಎರಡನೇ ಹಣಾಹಣಿಯಲ್ಲಿ ಹರಿಣಗಳ ನಾಡಿನ ತಂಡ ತಿರುಗೇಟು ನೀಡಿತ್ತು.

ನ್ಯೂಲ್ಯಾಂಡ್ಸ್‌ ಅಂಗಳದಲ್ಲಿ ಭಾರತ ತಂಡ ಆಡುತ್ತಿರುವ ಮೊದಲ ಟ್ವೆಂಟಿ–20 ಪಂದ್ಯ ಇದಾಗಿದೆ. ದಕ್ಷಿಣ ಆಫ್ರಿಕಾ ಈ ಮೈದಾನದಲ್ಲಿ 8 ಪಂದ್ಯಗಳನ್ನು ಆಡಿದ್ದು, ಐದರಲ್ಲಿ ಸೋತಿದೆ.

ಭಾರತ ತಂಡ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿತ್ತು. ಆದರೆ ಬೌಲರ್‌ಗಳು ದುಬಾರಿಯಾಗಿದ್ದರು. ಹೀಗಾಗಿ ಸೋಲು ಎದುರಾಗಿತ್ತು.

ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಹಿಂದಿನ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಲು ವಿಫಲರಾಗಿದ್ದರು. ಧವನ್‌ 14 ಎಸೆತಗಳಲ್ಲಿ 24ರನ್‌ ಗಳಿಸಿ ಔಟಾದರೆ, ರೋಹಿತ್‌ ರನ್‌ ಖಾತೆ ತೆರೆಯಲು ವಿಫಲರಾಗಿದ್ದರು. ನಾಯಕ ಕೊಹ್ಲಿ ಕೂಡ ಮಂಕಾಗಿದ್ದರು. ಇವರು ನಿರ್ಣಾಯಕ ಎನಿಸಿರುವ ಶನಿವಾರದ ಹೋರಾಟದಲ್ಲಿ ಅಬ್ಬರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಒಂದು ವರ್ಷದ ನಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿರುವ ಸುರೇಶ್‌ ರೈನಾ ಅಮೋಘ ಲಯದಲ್ಲಿ ಆಡುತ್ತಿದ್ದಾರೆ. ಅವರು ಎರಡು ಪಂದ್ಯಗಳಿಂದ 48ರನ್‌ ಗಳಿಸಿದ್ದಾರೆ.

ಮನೀಷ್‌ ಪಾಂಡೆ ಮತ್ತು ಮಹೇಂದ್ರ ಸಿಂಗ್‌ ದೋನಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ತಂಭಗಳಾಗಿದ್ದಾರೆ. ಎರಡನೇ ಪಂದ್ಯದಲ್ಲಿ ಇವರು ಮುರಿಯದ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 98ರನ್‌ ಬಾರಿಸಿದ್ದರು. 28 ಎಸೆತಗಳನ್ನು ಆಡಿದ್ದ ದೋನಿ, 52ರನ್‌ ಗಳಿಸಿದ್ದರೆ, ಮನೀಷ್‌ 48 ಎಸೆತಗಳಲ್ಲಿ 79ರನ್‌ ಬಾರಿಸಿ ಅಜೇಯರಾಗಿದ್ದರು.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ಭುವನೇಶ್ವರ್‌ ಕುಮಾರ್‌ ಅವರೂ ತಂಡಕ್ಕೆ ರನ್‌ ಕಾಣಿಕೆ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿನ ಪಂದ್ಯದಲ್ಲಿ ತಂಡ ಬೌಲಿಂಗ್‌ನಲ್ಲಿ ಎಡವಿತ್ತು. ಭುವನೇಶ್ವರ್‌ ಕುಮಾರ್‌ ಹೆಚ್ಚು ರನ್‌ ನೀಡಿರಲಿಲ್ಲ. ಆದರೆ ಶಾರ್ದೂಲ್‌ ಠಾಕೂರ್‌ ಮತ್ತು ಜಯದೇವ್‌ ಉನದ್ಕತ್‌ ಹೆಚ್ಚು ದಂಡನೆಗೆ ಒಳಗಾಗಿದ್ದರು.

ಏಕದಿನ ಸರಣಿಯಲ್ಲಿ ಮೋಡಿ ಮಾಡಿದ್ದ ಮಣಿಕಟ್ಟಿನ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಕೂಡ ದುಬಾರಿಯಾಗಿದ್ದರು. 4 ಓವರ್‌ ಬೌಲ್‌ ಮಾಡಿದ್ದ ಅವರು 64 ರನ್‌ ಕೊಟ್ಟಿದ್ದರು. ಈ ಪಂದ್ಯದಲ್ಲಿ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದ್ದಾರೆ.

ಹಿಂದಿನ ಪಂದ್ಯದಲ್ಲಿ ಗೆದ್ದಿರುವ ಡುಮಿನಿ ಪಡೆ ವಿಶ್ವಾಸದ ಗಣಿಯಾಗಿದೆ. ರೀಜಾ ಹೆನ್ರಿಕ್ಸ್‌, ಜಾನ್‌ ಜಾನ್‌ ಸ್ಮಟ್ಸ್‌ ಆರಂಭದಿಂದಲೇ ಅಬ್ಬರಿಸಿ ಭಾರತದ ಬೌಲರ್‌ಗಳ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಲು ಕಾಯುತ್ತಿದ್ದಾರೆ.  ಡುಮಿನಿ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹೆನ್ರಿಕ್‌ ಕ್ಲಾಸೆನ್‌ ಬ್ಯಾಟಿಂಗ್‌ನಲ್ಲಿ ತಂಡದ ಬಲ ಎನಿಸಿದ್ದಾರೆ. ಇವರು ಹಿಂದಿನ ಪಂದ್ಯದಲ್ಲಿ ಕ್ರಮವಾಗಿ ಔಟಾಗದೆ 64 ಮತ್ತು 69ರನ್‌ ಗಳಿಸಿದ್ದರು. ಬೌಲಿಂಗ್‌ನಲ್ಲೂ ತಂಡ ಶ್ರೇಷ್ಠ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದೆ.

ತಂಡಗಳು ಇಂತಿವೆ

ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ಸುರೇಶ್‌ ರೈನಾ, ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬೂಮ್ರಾ, ಜಯದೇವ್‌ ಉನದ್ಕತ್‌ ಮತ್ತು ಶಾರ್ದೂಲ್‌ ಠಾಕೂರ್‌.

ದಕ್ಷಿಣ ಆಫ್ರಿಕಾ: ಜೆ.ಪಿ.ಡುಮಿನಿ (ನಾಯಕ), ಫರ್ಹಾನ್‌ ಬೆಹಾರ್ಡೀನ್‌, ಜೂನಿಯರ್‌ ಡಾಲಾ, ರೀಜಾ ಹೆನ್ರಿಕ್ಸ್‌, ಕ್ರಿಸ್ಟಿಯನ್‌ ಜಾಂಕರ್‌, ಹೆನ್ರಿಕ್‌ ಕ್ಲಾಸೆನ್‌ (ವಿಕೆಟ್‌ ಕೀಪರ್‌), ಡೇವಿಡ್‌ ಮಿಲ್ಲರ್‌, ಕ್ರಿಸ್‌ ಮೊರಿಸ್‌, ಡೇನ್‌ ಪ್ಯಾಟರ್ಸನ್, ಆ್ಯರನ್‌ ಫಂಗಿಸೊ, ಆ್ಯಂಡಿಲಿ ಪಿಶುವಾಯೊ, ತಬ್ರೈಜ್‌ ಶಂಸಿ ಮತ್ತು ಜಾನ್‌ ಜಾನ್‌ ಸ್ಮಟ್ಸ್‌.

ಆರಂಭ: ರಾತ್ರಿ 9.30ಕ್ಕೆ. ನೇರ ಪ್ರಸಾರ: ಸೋನಿ ಟೆನ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.