ಕಷ್ಟದ ಹಾದಿಯಲ್ಲಿ ಸಿಕ್ಕ ಯಶಸ್ಸು

7

ಕಷ್ಟದ ಹಾದಿಯಲ್ಲಿ ಸಿಕ್ಕ ಯಶಸ್ಸು

Published:
Updated:
ಕಷ್ಟದ ಹಾದಿಯಲ್ಲಿ ಸಿಕ್ಕ ಯಶಸ್ಸು

ಹುಟ್ಟೂರು ಬೆಂಗಳೂರು. ಬೆಳೆದಿದ್ದು ಮಂಗಳೂರು. ವೃತ್ತಿಯಾಗಿ ಆಯ್ದುಕೊಂಡಿದ್ದು ವಸ್ತ್ರವಿನ್ಯಾಸ ಕ್ಷೇತ್ರ.

ಓದಿನಲ್ಲಿ ಮುಂದಿದ್ದ ರಶ್ಮಿ ವೈದ್ಯೆಯಾಗಬೇಕು ಎನ್ನುವುದು ಅಪ್ಪ ಅಮ್ಮನ ಕನಸು. ಹೀಗಾಗಿ ಅನಿವಾರ್ಯವಾಗಿ ಪಿಯುಸಿಯಲ್ಲಿ ವಿಜ್ಞಾನ ಆಯ್ದುಕೊಂಡರು. ಅಲ್ಲಿ ತೇರ್ಗಡೆ ಆಗಲು ಹರಸಾಹಸ ಮಾಡಿದರು. ಚಿಕ್ಕಂದಿನಿಂದಲೂ ಅವರಿಗೆ ಕಲಾಸಕ್ತಿ ಇತ್ತು. ಚಿತ್ರ ಬಿಡಿಸುವುದು, ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಎಂದರೆ ಅವರಿಗೆ ಎಲ್ಲಿಲ್ಲದ ಒಲವು. ಚಿತ್ರಕಲೆ ಮತ್ತು ಫ್ಯಾಷನ್‌ ಡಿಸೈನಿಂಗ್ ಅವರ ಆಯ್ಕೆಯಾಯಿತು. ಮನೆಯಲ್ಲಿ ಕೊನೆಗೂ ಫ್ಯಾಷನ್‌ ಡಿಸೈನಿಂಗ್‌ ಓದಲು ಒಪ್ಪಿಗೆ ಸಿಕ್ಕಿತು. ಕಾರ್ಕಳದ ನಿಟ್ಟೆ ಸಂಸ್ಥೆಯಲ್ಲಿ ಓದಿದಿರು. ವಿದ್ಯಾಭ್ಯಾಸ ಮುಗಿಸಿ ಪ್ಯಾರಿಸ್‌ನ ಲೆ ಗಿಲಾರ್ಡ್‌ ಫ್ಯಾಕ್ಟರಿಯಲ್ಲಿ ಮೂರು ವರ್ಷ ಇಂಟರ್ನ್‌ಶಿಪ್‌ ಮಾಡಿದರು.

ವಿದೇಶಿ ಫ್ಯಾಷನ್‌ ಕಂಪೆನಿಯಲ್ಲಿ ಕೆಲಸ ಮಾಡಿ ತುಂಬು ವಿಶ್ವಾಸದೊಂದಿಗೆ ಬೆಂಗಳೂರಿಗೆ ಬಂದಿಳಿದರು. 2001ರ ಸಮಯವದು. ಆದರೆ ಬೆಂಗಳೂರಿನಲ್ಲಿ ಫ್ಯಾಷನ್ ಕ್ಷೇತ್ರ ಆಗತಾನೆ ಕಣ್ಣು ಬಿಡುತ್ತಿದ್ದ ಕೂಸು. ಅವಕಾಶಕ್ಕಾಗಿ ಹರಸಾಹಸ ಪಟ್ಟ ಅವರಿಗೆ ನ್ಯಾಚುರಲ್‌ ಟೆಕ್ಸ್‌ಟೈಲ್‌ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿನ ಕೆಲಸ ಕೆಲವೇ ದಿನದಲ್ಲಿ ರಶ್ಮಿ ಅವರಿಗೆ ಕಷ್ಟದ ಹಾದಿಯಾಯಿತು. ಕಲಿಕೆಗೆ ಇದು ಸುಕಾಲ ಎಂದು ಭಾವಿಸಿ ಹಲವು ಜನಪ್ರಿಯ ಕಂಪನಿಗಳಲ್ಲಿ 13 ವರ್ಷ ಕೆಲಸ ಮಾಡಿ ಈ ಕ್ಷೇತ್ರದ ಬಗೆಗೆ ಮಾಹಿತಿ ಸಂಗ್ರಹಿಸಿಕೊಂಡರು.

ಬೇರೆಯವರ ಕೈಕೆಳಗೆ ದುಡಿದಿದ್ದು ಸಾಕು, ಇನ್ನುಮುಂದೆ ತನ್ನದೇ ಆದ ಒಂದು ಬೋಟಿಕ್‌ ಪ್ರಾರಂಭಿಸಬೇಕು ಎಂದು ನಿರ್ಧರಿಸಿ 2013ರಲ್ಲಿ ವಿಜಯನಗರದಲ್ಲಿ ಅರುಲಾ ಬ್ರ್ಯಾಂಡ್‌ ಆರಂಭಿಸಿದರು. ಇನ್ನುಮುಂದೆ ಮನದ ವಿನ್ಯಾಸಗಳಿಗೆ ಜೀವ ತುಂಬಬಹುದು, ವಿನ್ಯಾಸದ ಜಾಣ್ಮೆ ಕಂಡು ಬೇಡಿಕೆ ಹೆಚ್ಚುತ್ತದೆ ಎಂದು ಆಶಿಸಿದ್ದ ರಶ್ಮಿ ಅವರಿಗೆ ಮತ್ತಷ್ಟು ಸವಾಲುಗಳು ಎದುರಾದವು. ಹಗಲು ರಾತ್ರಿ ಎನ್ನದೆ ದುಡಿದರೂ ವ್ಯಾಪಾರದಲ್ಲಿ ಅಭಿವೃದ್ಧಿಯ ಸೂಚನೆ ಕಾಣಲಿಲ್ಲ.

ಕಷ್ಟದ ಸನ್ನಿವೇಶಗಳಲ್ಲಿ ರಶ್ಮಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ಅವರ ಆತ್ಮವಿಶ್ವಾಸ ಹಾಗೂ ಪತಿ ಅನೂಪ್‌ರಾವ್‌. ‘ಸ್ವಾತಿಮುತ್ತು’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಅಮೂಲ್ಯಾ ಎನ್ನುವ ನಟಿಗೆ ಗಾಘ್ರಾ ಚೋಲಿಯೊಂದನ್ನು ವಿನ್ಯಾಸ ಮಾಡಿಕೊಟ್ಟಿದ್ದರು. ಆ ವಿನ್ಯಾಸ ಅನೇಕರಿಗೆ ಇಷ್ಟವಾಯಿತು. ದಿವ್ಯಾ ಎನ್ನುವವರು ‘ಕಲರ್ಸ್‌’ ಸಂಸ್ಥೆಗೆ ಪರಿಚಯಿಸಿಕೊಟ್ಟರು. ಅದಾಗಲೇ ಅಗ್ನಿಸಾಕ್ಷಿಯಲ್ಲಿ ಈಗಿನ ಚಂದ್ರಿಕಾ ಪಾತ್ರ ಮಾಡುವ ಪ್ರಿಯಾಂಕಾ ಅವರಿಗೆ ಸೀರೆ ರವಿಕೆ ವಿನ್ಯಾಸವನ್ನು ಮಾಡುತ್ತಿದ್ದರು. ಕಲರ್ಸ್‌ನಿಂದಲೂ ಅವಕಾಶಗಳ ಬಾಗಿಲು ತೆರೆಯಿತು.

ಡಾನ್ಸಿಂಗ್‌ ಸ್ಟಾರ್‌ನಲ್ಲಿ ಶ್ರದ್ಧಾ ಅವರಿಗೆ ವಸ್ತ್ರವಿನ್ಯಾಸ ಮಾಡಿದರು ರಶ್ಮಿ. 2017ರಲ್ಲಿ ಅನುಬಂಧ ಅವಾರ್ಡ್‌ನಲ್ಲಿಯೂ ಅವರದ್ದೇ ಕೈಚಳಕವಿದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಬಸವನಗುಡಿಯಲ್ಲಿ ನಡೆದ ‘ಯಶಸ್‌ ವಿನಾಯಕ’ ಕಾರ್ಯಕ್ರಮ ನಡೆಯಿತು. 15 ಸೆಲೆಬ್ರಿಟಿಗಳಿಗೆ ವಸ್ತ್ರವಿನ್ಯಾಸ ಮಾಡಿದರು. ಅಕುಲ್‌ ಬಾಲಾಜಿ, ವಿಜಯ್‌ ರಾಘವೇಂದ್ರ, ಪ್ರಿಯಾಮಣಿ ಮುಂತಾದವರಿಗೆ ಮಾಡಿದರು. ಅಲ್ಲಿಂದ ರಶ್ಮಿ ಅವರಿಗೆ ಬಿಗ್‌ಬಾಸ್‌ಗೆ ವಸ್ತ್ರವಿನ್ಯಾಸ ಮಾಡುವ ಅವಕಾಶವೂ ಒಲಿಯಿತು. ಸತ್ಯ ಹರಿಶ್ಚಂದ್ರ, ಎಂಎಲ್‌ಎ ಚಿತ್ರಗಳಿಗೂ ರಶ್ಮಿ ವಸ್ತ್ರ ವಿನ್ಯಾಸ ಮಾಡಿಕೊಟ್ಟಿದ್ದಾರೆ.

ವೃತ್ತಿ ಬದುಕಿನ ಗ್ರಾಫ್‌ ಏರಿಸಿಕೊಳ್ಳುತ್ತಲೇ ಸಾಗಿದ ರಶ್ಮಿ ಪುರುಷರು, ಮಹಿಳೆಯರು ಹಾಗೂ ಮಕ್ಕಳ ದಿರಿಸುಗಳನ್ನು ವಿನ್ಯಾಸ ಮಾಡುವುದರಲ್ಲಿ ಸಿದ್ಧಹಸ್ತರು ಎಂಬುದು ವಿಶೇಷ. ಕ್ರಿಯಾಶೀಲತೆಯ‌ನ್ನು ನೆಚ್ಚಿಕೊಂಡೇ ಕೆಲಸ ಮಾಡುವ ಅವರು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ವಸ್ತ್ರವಿನ್ಯಾಸ ಮಾಡುತ್ತಾರೆ. ಪಾಶ್ಚಾತ್ಯ ಶೈಲಿಯಲ್ಲಿ ಫ್ರಾಕ್‌ ಹಾಗೂ ಟ್ರೌಸರ್‌ ಮಾಡುವುದು ಮಾತ್ರ ಅವರಿಗೆ ಇಷ್ಟದ ಕೆಲಸ.

ಶಿಫಾನ್‌, ಜಾರ್ಜೆಟ್‌, ಕ್ರೇಪ್‌ ಬಟ್ಟೆಯ ಮೇಲೆ ಹೆಚ್ಚು ವಿನ್ಯಾಸ ಕೌಶಲ ಮೆರೆಯುವ ಅವರಿಗೆ ಕಪ್ಪು ಹಾಗೂ ಬಿಳಿ ಬಣ್ಣ ಹೆಚ್ಚು ಇಷ್ಟ. ‘ನಾನು ವಿನ್ಯಾಸ ಮಾಡಿದ ಎಲ್ಲಾ ದಿರಿಸುಗಳೂ ನನಗೆ ಖುಷಿಯನ್ನೇ ನೀಡಿವೆ. ಆದರೆ ದಿರಿಸಿನ ವಿನ್ಯಾಸ, ಫಿಟ್ಟಿಂಗ್‌ ಸರಿಯಾದರೆ ಮಾತ್ರ ತೃಪ್ತಭಾವ ಮೊಳೆಯುತ್ತದೆ’ ಎನ್ನುತ್ತಾರೆ ರಶ್ಮಿ. ಮದುವೆ ದಿರಿಸುಗಳನ್ನು ವಿನ್ಯಾಸ ಮಾಡುವುದು ಎಂದರೆ ರಶ್ಮಿ ಅವರಿಗೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಗಾಘ್ರಾ, ಗೌನ್‌, ಬ್ಲೌಸ್‌ ವಿನ್ಯಾಸ ಅವರಿಗೆ ಅಚ್ಚುಮೆಚ್ಚು.

ರಶ್ಮಿ ಕಿವಿಮಾತು

ಯಾವ ಕ್ಷೇತ್ರವನ್ನೂ ಸುಖಾಸುಮ್ಮನೆ ಆಯ್ದುಕೊಳ್ಳಬೇಡಿ. ಇತ್ತೀಚೆಗೆ ಯಾವ ವಿಷಯ ಆಯ್ದುಕೊಳ್ಳಬೇಕು ಎನ್ನುವ ಬಗೆಗೆ ಆಪ್ತಸಮಾಲೋಚನೆ ನಡೆಸುವವರೂ ಇದ್ದಾರೆ. ಅನೇಕರು ಯಶಸ್ವಿ ಕಥಾನಕಗಳನ್ನು ಕೇಳಿ ಯಾವುದೇ ಪೂರ್ವ ತಯಾರಿ, ಮಾಹಿತಿ ಇಲ್ಲದೆ ಮನಸಿಗೆ ಬಂದ ವಿಷಯವನ್ನು ಆಯ್ದುಕೊಂಡು ಬಿಡುತ್ತಾರೆ. ಕೊನೆಗೊಂದು ದಿನ ಈ ಕ್ಷೇತ್ರ ನನಗಲ್ಲ ಅನಿಸಿ ಅಲ್ಲಿಂದ ವಿಮುಖರಾಗುತ್ತಾರೆ, ಹಾಗಾಗಬಾರದು. ಕ್ರಿಯಾಶೀಲತೆ ಇರುವವರು ಮಾತ್ರ ಫ್ಯಾಷನ್‌ ಕ್ಷೇತ್ರವನ್ನು ಆಯ್ದುಕೊಳ್ಳಿ. ಅಲ್ಲದೆ ಈ ಕ್ಷೇತ್ರದ ಬಗೆಗೆ ಅಪಾರವಾದ ಆಸಕ್ತಿ, ಅಭಿರುಚಿ ಇದ್ದರಷ್ಟೇ ಆಯ್ದುಕೊಳ್ಳಿ. ನನ್ನಿಂದಾಗದು ಎಂದು ಯಾವುದನ್ನೂ ಕೈಚೆಲ್ಲಬೇಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry