9,500 ಎನ್‌ಬಿಎಫ್‌ಸಿಗಳಿಂದ ದೂರವಿರಿ

7
ನಿಯಮ ಪಾಲಿಸದ ಸಂಸ್ಥೆಗಳು: ಜನರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

9,500 ಎನ್‌ಬಿಎಫ್‌ಸಿಗಳಿಂದ ದೂರವಿರಿ

Published:
Updated:

ನವದೆಹಲಿ: ದೇಶದ 9,491 ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ‘ಗರಿಷ್ಠ ಅಪಾಯ ಸಾಧ್ಯತೆಯ ಹಣಕಾಸು ಸಂಸ್ಥೆಗಳು’ ಎಂದು ಹಣಕಾಸು ಗುಪ್ತಚರ ಘಟಕ (ಎಫ್‌ಐಯು) ಗುರುತಿಸಿದೆ. ಈ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಸಂಸ್ಥೆಗಳು ಹಣ ಅಕ್ರಮ ವರ್ಗಾವಣೆ ನಿಯಮಗಳನ್ನು ಪಾಲಿಸಿಲ್ಲ ಎಂದು ಎಫ್‌ಐಯು ಹೇಳಿದೆ. ಅರ್ಥ ವ್ಯವಸ್ಥೆಯಲ್ಲಿನ ಅಪರಾಧಗಳನ್ನು ತಡೆಯುವುದು ಮತ್ತು ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುವುದು ಎಫ್‌ಐಯುನ ಮುಖ್ಯ ಕೆಲಸ. ಇದು ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುತ್ತದೆ.

ಎಲ್ಲ ಎನ್‌ಬಿಎಫ್‌ಸಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಮ್ಮೆಲ್ಲ ಕಾರ್ಯಾಚರಣೆ ಮತ್ತು ಹಣಕಾಸು ವಹಿವಾಟುಗಳ ವರದಿಯನ್ನು ಎಫ್‌ಐಯುಗೆ ನೀಡಬೇಕು. ಸಹಕಾರ ಸಂಘಗಳೂ ಈ ವ್ಯಾಪ್ತಿಗೆ ಬರುತ್ತವೆ.

ಈ ಎಲ್ಲ ಸಂಸ್ಥೆಗಳು ಕೊಟ್ಟ ವರದಿಯನ್ನು ಎಫ್‌ಐಯು ‍ವಿಶ್ಲೇಷಣೆ ಮಾಡಿದೆ. ಇವುಗಳ ಪೈಕಿ 9,491 ಸಂಸ್ಥೆಗಳು ಹಣ ಅಕ್ರಮ ವರ್ಗಾವಣೆ ತಡೆ ನಿಯಮಗಳನ್ನು ಪಾಲಿಸಿಲ್ಲ. ಅನುಮಾನಾಸ್ಪದ ವಹಿವಾಟುಗಳನ್ನು ತಡೆಯಲು ಮತ್ತು ಅದರ ಬಗ್ಗೆ ವರದಿ ನೀಡಲು ಅಧಿಕಾರಿಯೊಬ್ಬರನ್ನು ನೇಮಿಸುವ ನಿಯಮವನ್ನು ಈ ಸಂಸ್ಥೆಗಳು ಅನುಸರಿಸಿಲ್ಲ. ₹10 ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿನ ಬಗ್ಗೆಯೂ ಈ ಅಧಿಕಾರಿ ಎಫ್‌ಐಯುಗೆ ವರದಿ ನೀಡಬೇಕು.

2016ರಲ್ಲಿ ನೋಟು ರದ್ದತಿ ಮಾಡಿದ ಬಳಿಕ ಎನ್‌ಬಿಎಫ್‌ಸಿಗಳ ಮೇಲೆ ಎಫ್‌ಐಯು ಕಣ್ಣಿಟ್ಟಿತ್ತು. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಗರಿಷ್ಠ ನಷ್ಟ ಸಾಧ್ಯತೆಯ ಸಂಸ್ಥೆಗಳ ಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ.

**

ಪಟ್ಟಿಯಲ್ಲಿರುವ ಕೆಲವು ಸಂಸ್ಥೆಗಳು

* ಅದಾನಿ ಕ್ಯಾಪಿಟಲ್‌ ಪ್ರೈ.ಲಿ.

* ಬಜಾಜ್‌ ಗ್ಲೋಬಲ್‌ ಲಿ.

‌* ಬಿರ್ಲಾ ಫ್ಯಾಮಿಲಿ ಇನ್‌ವೆಸ್‌ಮೆಂಟ್ಸ್‌ ಪ್ರೈ.ಲಿ.‌

*ಬಿರ್ಲಾ ಫೈನಾನ್ಷಿಯಲ್‌ ಕಾರ್ಪೊರೇಷನ್‌ ಲಿ.

* ಬಿರ್ಲಾ ಹೋಲ್ಡಿಂಗ್ಸ್‌ ಲಿ.

* ಟಾಟಾ ಕ್ಯಾಪಿಟಲ್‌ ಲಿ.

* ಟಾಟಾ ಇಂಡಸ್ಟ್ರೀಸ್‌ ಲಿ.

*

ಉದ್ದೇಶ ಏನು

ಈ ಎನ್‌ಬಿಎಫ್‌ಸಿಗಳು ಕಾನೂನು ಪಾಲಿಸುತ್ತಿಲ್ಲ ಎಂಬುದನ್ನು ಜನರಿಗೆ ತಿಳಿಸುವ ಮೊದಲ ಹೆಜ್ಜೆಯಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಸಂಸ್ಥೆಗಳ ಜತೆಗೆ ಜನರು ಯಾವುದೇ ವಹಿವಾಟು ನಡೆಸಬಾರದು ಎಂಬ ಎಚ್ಚರಿಕೆ ನೀಡುವುದು ಇದರ ಉದ್ದೇಶ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

*

ಎನ್‌ಬಿಎಫ್‌ಸಿ ಎಂದರೇನು

ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು (ಎನ್‌ಬಿಎಫ್‌ಸಿ) ಕಂಪನಿ ಕಾಯ್ದೆ ಅಡಿ ನೋಂದಣಿ ಮಾಡಲಾಗುತ್ತದೆ. ಇವುಗಳು ಸಾಲ ಮತ್ತು ಮುಂಗಡ ನೀಡುತ್ತವೆ, ಷೇರು, ಬಾಂಡ್‌ ಖರೀದಿ ಮಾಡುತ್ತವೆ. ಈ ಸಂಸ್ಥೆಗಳು ಬ್ಯಾಂಕ್‌ನ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತವೆ. ಆದರೆ ಇವುಗಳು ಠೇವಣಿ ಪಡೆಯುವಂತಿಲ್ಲ, ಚೆಕ್‌ ಸೌಲಭ್ಯ ನೀಡುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry