ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಗೌರವಗಳೊಂದಿಗೆ ಸುಶೀಲ್‌ಕುಮಾರ ಅಂತ್ಯ ಸಂಸ್ಕಾರ

Last Updated 3 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೀದರ್‌: ತೆಲಂಗಾಣ-ಛತ್ತೀಸ್‌ಗಡ ಗಡಿಯಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲರ ಗುಂಡಿಗೆ ಬಲಿಯಾದ ತೆಲಂಗಾಣ ನಕ್ಸಲ್‌ ನಿಗ್ರಹ ಪಡೆಯ ಗ್ರೇಹೌಂಡ್ಸ್‌ನ ಕಮಾಂಡೊ ಬೀದರ್‌ನ ಸುಶೀಲ್‌ಕುಮಾರ ಅಂತ್ಯಕ್ರಿಯೆ ನಗರದಲ್ಲಿ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಗ್ರೇಸ್‌ ಕಾಲೊನಿಯಲ್ಲಿರುವ ನಿವಾಸದಿಂದ ಪಾರ್ಥೀವ ಶರೀರದ ಮೆರವಣಿಗೆಯನ್ನು ಆರಂಭಿಸಿ ಮೆಥೊಡಿಸ್ಟ್‌ ಚರ್ಚ್‌ ಮುಂಭಾಗದ ಮೈದಾನಕ್ಕೆ ತರಲಾಯಿತು. ಯುವಕರು ‘ಸುಶೀಲ್‌ಕುಮಾರ ಅಮರ್ ರಹೇ’ ಎಂದು ಘೋಷಣೆಗಳನ್ನು ಕೂಗಿದರು.

ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜ್, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಶೇಖರ ರೆಡ್ಡಿ ಅವರು ಪಾರ್ಥಿವ ಶರೀರದ ಮುಂದೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು.

ಬೀದರ್‌ ಜಿಲ್ಲಾ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸುಶೀಲ್‌ಕುಮಾರ ಅವರಿಗೆ ಗೌರವ ಸಲ್ಲಿಸಿದರು. ತೆಲಂಗಾಣ ನಕ್ಸಲ್‌ ನಿಗ್ರಹ ಪಡೆಯ ಅಧಿಕಾರಿಗಳು ಸಹ ಗೌರವ ಸಮರ್ಪಿಸಿದರು.

ಮಂಗಲಪೇಟ್‌ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೆಥೊಡಿಸ್ಟ್‌ ಚರ್ಚ್‌ ಜಿಲ್ಲಾ ಮೇಲ್ವಿಚಾರಕ ಜೈಪಾಲ್‌ ಅವರು ಅಂತ್ಯ ಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟರು.

₹ 60 ಲಕ್ಷ ಪರಿಹಾರ ಘೋಷಣೆ

ಸುಶೀಲ್‌ಕುಮಾರ ಅವರ ಕುಟುಂಬಕ್ಕೆ ತೆಲಂಗಾಣ ಸರ್ಕಾರ ₹ 60 ಲಕ್ಷ ಪರಿಹಾರ ಘೋಷಿಸಿದೆ.

ಅಲ್ಲಿನ ಡಿಜಿಪಿ ಮಹೇಂದ್ರ ರೆಡ್ಡಿ ಹಾಗೂ ಗುಪ್ತದಳ ವಿಭಾಗದ ಐಜಿ ನವಿನ್‌ಚಂದ್ರ ಶನಿವಾರ ಬೆಳಿಗ್ಗೆ ಹೆಲಿಕಾಪ್ಟರ್‌ ಮೂಲಕ ಬೀದರ್‌ಗೆ ಬಂದು ಸುಶೀಲ್‌ಕುಮಾರ ಪತ್ನಿ ಸುಷ್ಮಾ, ತಂದೆ ವಿಜಯ ಬೋಪನಪಳ್ಳಿ ಹಾಗೂ ತಾಯಿ ಶಾರದಾ ಅವರಿಗೆ ಸಾಂತ್ವನ ಹೇಳಿದರು.

‘ಸುಶೀಲ್‌ಕುಮಾರ ಅವರ ಉಳಿದ ಸೇವಾ ಅವಧಿಯ ವೇತನ, ಸುಷ್ಮಾ ಅವರಿಗೆ ಸರ್ಕಾರಿ ನೌಕರಿ ಹಾಗೂ ತೆಲಂಗಾಣ ಸರ್ಕಾರದಿಂದ ₹ 60 ಲಕ್ಷ ಪರಿಹಾರ ಕೊಡಲಾಗುವುದು’ ಎಂದು ಡಿಜಿಪಿ ಮಹೇಂದ್ರ ರೆಡ್ಡಿ ಭರವಸೆ ನೀಡಿದರು. ನಂತರ ಸುಶೀಲ್‌ಕುಮಾರ ಅವರ ಅಂತ್ಯ ಸಂಸ್ಕಾರಕ್ಕಾಗಿ ₹ 3 ಲಕ್ಷ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT