ಐಪಿಎಲ್: ಡೇರ್‌ಡೆವಿಲ್ಸ್‌ಗೆ ಗಂಭೀರ್ ನಾಯಕ

ನವದೆಹಲಿ: ಭಾರತದ ಅನುಭವಿ ಆಟಗಾರ ಗೌತಮ್ ಗಂಭೀರ್, 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಡೇರ್‌ಡೆವಿಲ್ಸ್ ಫ್ರಾಂಚೈಸ್ ಬುಧವಾರ ಈ ವಿಷಯ ತಿಳಿಸಿದೆ.
ಆರಂಭದ ಕೆಲ ಆವೃತ್ತಿಗಳಲ್ಲಿ ಡೆಲ್ಲಿ ತಂಡದಲ್ಲಿ ಆಡಿದ್ದ ಗಂಭೀರ್ ಆ ನಂತರ ಕೋಲ್ಕತ್ತ ನೈಟ್‌ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಈ ಬಾರಿಯ ಹರಾಜಿನಲ್ಲಿ ಅವರನ್ನು ಡೆಲ್ಲಿ ತಂಡ ₹2.8 ಕೋಟಿ ನೀಡಿ ಖರೀದಿಸಿತ್ತು.
‘ಮತ್ತೊಮ್ಮೆ ಡೆಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದಕ್ಕೆ ಅತೀವ ಖುಷಿಯಾಗಿದೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ. ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಅವರ ಮಾರ್ಗದರ್ಶನ ತಂಡಕ್ಕಿದೆ. ಈ ಬಾರಿ ನಾವು ಪ್ರಶಸ್ತಿ ಗೆಲ್ಲಲು ಶ್ರಮಿಸುತ್ತೇವೆ’ ಎಂದು ಗಂಭೀರ್ ಹೇಳಿದ್ದಾರೆ.
‘ಗೌತಮ್ ತಾವೊಬ್ಬ ಸಮರ್ಥ ನಾಯಕ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ಅವರು ಕೋಲ್ಕತ್ತ ನೈಟ್‌ರೈಡರ್ಸ್‌ಗೆ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಅವರ ನೇತೃತ್ವದಲ್ಲಿ ನಮ್ಮ ತಂಡ ಗುಣಮಟ್ಟದ ಆಟ ಆಡಲಿದೆ’ ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ನುಡಿದಿದ್ದಾರೆ.
ಐಪಿಎಲ್‌ನಲ್ಲಿ 148 ಪಂದ್ಯಗಳನ್ನು ಆಡಿರುವ ಗಂಭೀರ್ 4,132ರನ್ ಬಾರಿಸಿದ್ದಾರೆ. ಅವರು ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.