ಹೆಸರು ಕೇಳಿಯೇ ಪಿಕ್‌ನಿಕ್‌ ಹೋದೆವು!

7

ಹೆಸರು ಕೇಳಿಯೇ ಪಿಕ್‌ನಿಕ್‌ ಹೋದೆವು!

Published:
Updated:
ಹೆಸರು ಕೇಳಿಯೇ ಪಿಕ್‌ನಿಕ್‌ ಹೋದೆವು!

ಸಿಂಥೇರಿ ರಾಕ್ ಹೆಸರು ಕೇಳಿದರೆ ಸಾಕು ನೋಡುವ ಕುತೂಹಲ ಎಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ನಾವು ಕಾಲೇಜಿನ ಶೈಕ್ಷಣಿಕ ಪ್ರವಾಸಕ್ಕೆಂದು ಸಿಂಥೇರಿ ರಾಕ್‌ ನೋಡಲು ಹೋಗಿದ್ದೆವು.

ಸಿಂಥೇರಿ ರಾಕ್ ದಾಂಡೇಲಿ ವನ್ಯಧಾಮದ ದಟ್ಟ ಅರಣ್ಯ ಪ್ರದೇಶದಲ್ಲಿರುವ ಒಂದು ಬಂಡೆ.  ದಾಂಡೇಲಿಯಿಂದ ಗುಂದಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ಈ ಬಂಡೆಯು ಕಾನೇರಿ ನದಿಯ ತಟದಲ್ಲಿದೆ. ಸುಮಾರು 300 ಅಡಿ ಎತ್ತರವಿದ್ದು ಕಡಿದಾಗಿದೆ.

ಇದು ಕೇವಲ ಪ್ರವಾಸಿ ತಾಣ ಮಾತ್ರವಲ್ಲ ಶಿಲಾ ಅಧ್ಯಯನಕ್ಕೂ ಹೇಳಿ ಮಾಡಿಸಿದ ಜಾಗ. ಸಿಂಥೇರಿ ಎನ್ನುವುದು ಒಂದು ಬಗೆಯ ಶಿಲೆಯ ಹೆಸರು. ಬೃಹತ್ ಏಕಶಿಲೆ ಇದಾಗಿರುವುದರಿಂದ ಈ ಪ್ರದೇಶಕ್ಕೆ ಸಿಂಥೇರಿ ರಾಕ್ ಎನ್ನುವ ಹೆಸರು ಬಂದಿದೆ. ಕಾಳಿ ನದಿಯ ಉಪನದಿಯಾಗಿರುವ ಕಾನೇರಿ ಇಲ್ಲಿ ರಭಸವಾಗಿ ಹರಿಯುತ್ತದೆ. ಬಹಳಷ್ಟು ಶಿಲೆಯ ಜಾಗಗಳು ಪೊಳ್ಳಾಗಿವೆ. ಅಪಾಯಕಾರಿ ಜಾಗವೂ ಹೌದು.

ಸಿಂಥೇರಿಗೆ ತಲುಪಿದಾಗ ಹೇಳಿಕೊಳ್ಳಲಾಗದಷ್ಟು ಖುಷಿಯಾಯಿತು. ಸುತ್ತಲೂ ದಟ್ಟಅರಣ್ಯ, ಮೈ ಜುಂ ಎನ್ನುವ ಸಂದರ್ಭ. 250 ಮೆಟ್ಟಿಲುಗಳನ್ನು ಕಷ್ಟಪಟ್ಟು ಒಂದೊಂದಾಗಿ ಇಳಿಯುತ್ತಾ ಹೋದಂತೆ ಎದೆಬಡಿತ ಜೋರಾಯ್ತು. ನಂತರ ಕೈ-ಕಾಲುಗಳಲ್ಲಿ ನಡುಕ ಉಂಟಾಯಿತು. ಹಾಗೇ ಮುಂದೆ ಹೋದೆವು.

ಮೆಟ್ಟಿಲು ಇಳಿಯುವಾಗ ವಿವಿಧ ಮಾದರಿಯ ಶಿಲಾಪ್ರಬೇಧಗಳ ಪರಿಚಯ ಫಲಕ, ಮಾಹಿತಿ ಮತ್ತು ಶಿಲಾ ಮಾದರಿ ಗಮನ ಸೆಳೆಯಿತು. ಶಿಥಿಲೀಕರಣಕ್ಕೆ ಸಾಕಷ್ಟು ಪ್ರತಿರೋಧ ಒಡ್ಡಿ ಸೃಷ್ಟಿಯಾಗಿ ನಿಂತಿರುವ ಈ ಬಂಡೆಗಳು ಅಭೇದ್ಯವಾಗಿವೆ. ಗ್ರಾನೈಟ್, ಬೆಸಾಲ್ಟ್‌ನಂಥ ಅಗ್ನಿಶಿಲೆಗಳು, ಮರಳು, ಸುಣ್ಣ ಸೇರಿದಂತೆ ವಿವಿಧ ಜಲಶಿಲೆಗಳಿಂದ ಇಂಥ ಕಡಿದಾದ ಬಂಡೆಗಳು ರೂಪುಗೊಂಡಿವೆ.

ಸಿಂಥೇರಿ ಬಂಡೆಗೆ ಅಂಟಿಕೊಂಡು ಸಾಕಷ್ಟು ಜೇನುಗೂಡುಗಳಿದ್ದವು. ಇಲ್ಲಿನ ಹೆಬ್ಬಂಡೆಗೆ ಜೇನುಗೂಡು ಕಟ್ಟಿರುವುದನ್ನು ಹತ್ತಿರದಿಂದ ನೋಡುವುದೇ ಒಂದು ರೋಮಾಂಚನಕಾರಿ ದೃಶ್ಯ. ಜೇನುಹುಳುಗಳು ಪ್ರವಾಸಿಗರ ಸುತ್ತಲೂ ಸುತ್ತುತ್ತವೆ. ನಮ್ಮ ತಂಡದ ಯಾರಿಗೂ ಕಚ್ಚಲಿಲ್ಲ. ಅವುಗಳಿಗೆ ತೊಂದರೆ ಕೊಟ್ಟರೆ ನಿಮಗೆ ಫಜೀತಿ ತಪ್ಪಿದ್ದಲ್ಲ. ಪ್ರಕೃತಿಯನ್ನು ಸವಿದ ಬಳಿಕ ಪುನಃ 250 ಮೆಟ್ಟಿಲು ಹತ್ತುವುದು ಆಯಾಸದ ಸಂಗತಿ. ಇದಕ್ಕಾಗಿ ಮೆಟ್ಟಿಲುಗಳ ಪಕ್ಕ ಮೇಲೆರಲು ಸಮತಟ್ಟಾದ ಏರು ಹಾದಿ ಇದೆ. ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಂಡು ಮೇಲೆರಬಹುದು.

***

ಭೇಟಿಯ ವೇಳೆ ಬೆಳ್ಳಗ್ಗೆ 10 ರಿಂದ ಸಂಜೆ 5

* ಹುಬ್ಬಳ್ಳಿಯಿಂದ - ಧಾರವಾಡ - ಹಳಿಯಾಳ - ದಾಂಡೇಲಿ ಮಾರ್ಗವಾಗಿ 120 ಕಿ.ಮೀ ಕ್ರಮಿಸಬೇಕು.

* ದಾಂಡೇಲಿಯಿಂದ ಶ್ರೀ ಕ್ಷೇತ್ರ ಉಳಿವಿಗೆ ಹೋಗುವ ಮಾರ್ಗದಲ್ಲಿ 30 ಕಿ .ಮೀ ಸಾಗಿದರೆ ಎಡಭಾಗಕ್ಕೆ ಸಿಂಥೇರಿ ರಾಕ್‌ ಸ್ವಾಗತ ಕಮಾನು ಪ್ರವೇಶ ದ್ವಾರ ಕಾಣಿಸುತ್ತದೆ.

* ಅಲ್ಲಿಯೇ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ನಲ್ಲಿ ಪ್ರವೇಶ ಶುಲ್ಕ ಪಾವತಿಸಿ ಟಿಕೆಟ್ ಪಡೆದುಕೊಂಡು 2 ಕಿ.ಮೀ ದೂರ ಸಾಗಿದರೆ ಸಿಂಥೇರಿ ರಾಕ್‌ ದರ್ಶನವಾಗುತ್ತದೆ.

* ಇಲ್ಲಿಗೆ ಭೇಟಿ ನೀಡುವ ವೇಳೆ ಸಾಕಷ್ಟು ಕುಡಿಯುವ ನೀರು , ತಿಂಡಿಯನ್ನು ಜೊತೆಗೆ ತೆಗೆದುಕೊಂಡು ಹೋದರೆ ಉತ್ತಮ.

* ಸ್ವಂತ ವಾಹನದಲ್ಲಿ ತೆರಳುವುದು ಒಳ್ಳೆಯದು.

ಚಿತ್ರ ಬರಹ: ಸೌಮ್ಯ ಗುಡ್ಡಿಮಠ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry