ರಾಜ್ಯದ ಅಭಿವೃದ್ಧಿ ಯೋಜನೆಗಳ ಲೆಕ್ಕ ನೀಡಿದ ಸಚಿವ ಎಂ.ಆರ್. ಸೀತಾರಾಂ

ಸೋಮವಾರ, ಮಾರ್ಚ್ 25, 2019
31 °C

ರಾಜ್ಯದ ಅಭಿವೃದ್ಧಿ ಯೋಜನೆಗಳ ಲೆಕ್ಕ ನೀಡಿದ ಸಚಿವ ಎಂ.ಆರ್. ಸೀತಾರಾಂ

Published:
Updated:
ರಾಜ್ಯದ ಅಭಿವೃದ್ಧಿ ಯೋಜನೆಗಳ ಲೆಕ್ಕ ನೀಡಿದ ಸಚಿವ ಎಂ.ಆರ್. ಸೀತಾರಾಂ

ಬೆಂಗಳೂರು: ರಾಜ್ಯಕ್ಕೆ ಅನುದಾನ ಕೊಟ್ಟರೂ ಅಭಿವೃದ್ಧಿಯಾಗಿಲ್ಲ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜಿಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಆರ್‌. ಸೀತಾರಾಂ, ರಾಜ್ಯದ ಯೋಜನಾ ಇಲಾಖೆಯಲ್ಲಿ  2017 -18ರ ಸಾಲಿನಲ್ಲಿ  ₹77 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

‘ಜವಾಹರ್‌ಲಾಲ್ ನೆಹರು ತಾರಾಲಯಕ್ಕೆ ₹12 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತಂತ್ರಜ್ಞಾನ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳ ಸ್ಥಾಪನೆ, ವೈಜ್ಞಾನಿಕ ಸಂಸ್ಥೆಗಳಿಗೆ ಸಹಾಯಾನುದಾನ, ದಾರ್ಶನಿಕ ಸಮೂಹ, ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳಿಗೆ ಅನುದಾನ ವಿನಿಯೋಗ ಮಾಡಲಾಗಿದೆ’ ಎಂದರು.

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಡಿಜಿಟಲ್ ಹೈಬ್ರಿಡ್ ಪ್ರೊಜೆಕ್ಷನ್‌ ವ್ಯವಸ್ಥೆಗಾಗಿ ₹37 ಕೋಟಿ ವ್ಯಯಿಸಲಾಗಿದೆ. ರಾಜ್ಯದ ವಸತಿನಿಲಯಗಳ ಸಮಸ್ಯೆಗಳ ಬಗ್ಗೆ ಯೋಜನಾ ಇಲಾಖೆ ಸಮೀಕ್ಷೆ ನಡೆಸಿದೆ. ರಾಜ್ಯದ ಹಲವೆಡೆ ಪ್ಲಾನಿಟೋರಿಯಂಗಳ ನಿರ್ಮಾಣ, ಖಗೋಳ ವಿಜ್ಞಾನ ಕೇಂದ್ರ ನಿರ್ಮಾಣ ಮಾಡಲಾಗಿದೆ. ಮಕ್ಕಳ ವೈಜ್ಞಾನಿಕ ವಿಕಾಸಕ್ಕೆ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

* ₹10 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಜವಾಹರ್ ತಾರಾಲಯ ಆಧುನೀಕರಣ.

* ₹22 ಕೋಟಿ ವೆಚ್ಚದಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ.

* ವಿಜಯಪುರ, ಗದಗ, ಮಡಿಕೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ 3ಡಿ ಡಿಜಿಟಲ್ ತಾರಾಲಯ ಸ್ಥಾಪನೆ.

* ಆರು ಜಿಲ್ಲೆಗಳಲ್ಲಿ 5 ಸಂಚಾರಿ ತಾರಾಲಯ ನಿರ್ಮಾಣ.

‘ಇವಿಎಂ’ ಬಗ್ಗೆ ನಂಬಿಕೆಯಿಲ್ಲ

‘ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಕುರಿತು ನಮ್ಮ ಸಚಿವರು ಚುನಾವಣಾ ಆಯೋಗಕ್ಕೂ ಪತ್ರಬರೆದಿದ್ದರು. ವೈಯಕ್ತಿಕವಾಗಿ ನನಗೆ ಇವಿಎಂ ಬಗ್ಗೆ ನಂಬಿಕೆಯಿಲ್ಲ’ ಎಂದರು.

ನಾವು ಟಿಕೆಟ್ ಆಕಾಂಕ್ಷಿಗಳಲ್ಲ

‘ನನ್ನನ್ನು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎಂದು ಹೇಳಲಾಗಿತ್ತು‌. ಆದರೆ ಟಿಕೆಟ್‌ಗಾಗಿ ನಾನು ಹಾಗೂ ನನ್ನ ಮಗ ಅರ್ಜಿ ಹಾಕಿಲ್ಲ’ ಎಂದು ಅವರು ಹೇಳಿದರು.

‘ಪಕ್ಷದ ಮುಖಂಡರು ವಿಧಾನಪರಿಷತ್ ಸಭಾನಾಯಕರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಬಲಿಜ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನಾನು ಹಾಗೂ ನನ್ನ ಮಗ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry