ತಾರೆಯರ ಯುಗಾದಿ

7

ತಾರೆಯರ ಯುಗಾದಿ

Published:
Updated:
ತಾರೆಯರ ಯುಗಾದಿ

ಖಾದ್ಯ ಸವಿಯುವ ಖುಷಿ

ಹಬ್ಬದ ದಿನ ಬಿಡುವು ತೆಗೆದುಕೊಂಡಿರುತ್ತೇನೆ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ತಯಾರಾದ ನಂತರ ಬೇವು, ಬೆಲ್ಲ ತಿನ್ನುವ ಮೂಲಕ ಹಬ್ಬದ ಸಂಭ್ರಮ ಪ್ರಾರಂಭವಾಗುತ್ತದೆ. ಬದುಕಿನ ಸಂದೇಶ ಸಾರುವ ಹಬ್ಬವಿದು. ಮನೆಯಲ್ಲಿ ಬಂಧುಗಳು ಇರುತ್ತಾರೆ. ಹಬ್ಬದೂಟ ತಿನ್ನುವುದೇ ಖುಷಿ. ಸಾಮಾನ್ಯವಾಗಿ ಪ್ರತಿದಿನ ಆಧುನಿಕ ಉಡುಪನ್ನೇ ಹಾಕಿಕೊಳ್ಳುತ್ತೇನೆ. ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪು ತೊಡುತ್ತೇನೆ. ಕಹಿ-ಸಿಹಿ ಸೇರುವ ಹಬ್ಬ ಇದು. ಸುಖ-ದುಃಖ ಬದುಕಿನಲ್ಲಿ ಸಾಮಾನ್ಯ. ಸಂತೋಷವನ್ನು ಹೆಚ್ಚಾಗಿ ಅನುಭವಿಸಿ, ಕಷ್ಟವನ್ನು ದೂರ ಇಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

–ಭಾವನಾ ರಾವ್

**

ಬೇವು, ಬೆಲ್ಲ ಹಂಚುವ ಸಂಭ್ರಮ

ಯುಗಾದಿಯ ದಿನ ಬೇವು- ಬೆಲ್ಲ ತಿಂದು ಸಂಭ್ರಮ ಪಡುವುದೇ ಒಂದು ಖುಷಿ. ಇಲ್ಲಿಯ ತನಕ ಒಂದು ವರ್ಷವೂ ಯುಗಾದಿ ಹಬ್ಬವನ್ನು ತಪ್ಪಿಸಿಕೊಂಡಿಲ್ಲ. ಮನೆಯವರ ಜತೆ ಸೇರಿ ಹಬ್ಬವನ್ನು ಆಚರಿಸುವುದೇ ಖುಷಿ. ನನ್ನ ಊರು ಹಾಸನ. ಅಲ್ಲಿಯೇ ಹಬ್ಬವನ್ನು ಆಚರಿಸುತ್ತೇವೆ. ಬೆಳಿಗ್ಗೆ ಎದ್ದು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತೇನೆ. ನಾನು, ಅಮ್ಮ ಒಟ್ಟಿಗೆ ಪೂಜೆ ಮಾಡುತ್ತೇವೆ. ನಂತರ ಅಮ್ಮ ಬಗೆಬಗೆ ಅಡುಗೆ ಮಾಡುತ್ತಾರೆ. ನನಗೆ ಚಂಪಾಕಲಿ, ರಸಗುಲ್ಲ ಇಷ್ಟ. ಇದನ್ನು ಅಂಗಡಿಯಿಂದ ತರುತ್ತಾರೆ. ಬೇರೆ ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳುವುದು ಕಡಿಮೆ. ಆದರೆ ಯುಗಾದಿಗೆ ಹೊಸ ಬಟ್ಟೆ ಖರೀದಿ ಕಡ್ಡಾಯ. ಸಂಜೆ ಸಂಬಂಧಿಗಳ ಮನೆಗೆ ಬೇವು, ಬೆಲ್ಲ ಕೊಡಲು ಹೋಗುತ್ತೇವೆ.

–ತೇಜಸ್ವಿನಿ

**

ಎಲ್ಲರೂ ಸೇರಿ ಮಾಡುವ ಹಬ್ಬ

ಒಂದು ವಾರದ ಮುಂಚಿನಿಂದಲೂ ಮನೆಯಲ್ಲಿ ಹಬ್ಬದ ಸಂಭ್ರಮ ಇರುತ್ತದೆ. ಹೊಸ ಬಟ್ಟೆ ಕೊಳ್ಳುವುದು, ಯಾವೆಲ್ಲ ಅಡುಗೆ ಮಾಡಬೇಕು ಎಂಬ ತಯಾರಿ ನಡೆಸುತ್ತೇವೆ. ಹಬ್ಬದ ದಿನ ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮಾಡಿ, ಮನೆಯ ಮುಂದೆ ದೊಡ್ಡ ರಂಗೋಲಿ ಹಾಕುತ್ತೇನೆ. ಇದೊಂದು ರೀತಿಯಲ್ಲಿ ಅಲಂಕಾರದ ಹಬ್ಬ. ಮನೆಯ ಅಲಂಕಾರದ ಜೊತೆಗೆ ನಾನು ಚೆನ್ನಾಗಿ ತಯಾರಾಗುತ್ತೇನೆ. ನನಗೆ ಪಾಯಸ ಇಷ್ಟ. ಅಮ್ಮ ಪೇಡ, ಪಾಯಸ ಮಾಡುತ್ತಾರೆ. ಕಹಿ- ಸಿಹಿ ಸೇರುವ ಹಬ್ಬ ಇದು.  ಬೇವು ಎಂದರೆ ನಾವು ಪಡುವ ಕಷ್ಟ. ಅದರಿಂದ ಸಿಗುವ ಪ್ರತಿಫಲ ಬೆಲ್ಲದಂತೆ.

–ಸುಕೃತಾ ವಾಗ್ಳೆ

**

ಊರಿಗೆ ಹೋಗದ ಬೇಸರ

ಯುಗಾದಿ ನಮಗೆ ಹೊಸವರ್ಷ. ಇಲ್ಲಿಯ ತನಕ ಒಂದು ವರ್ಷವೂ ಯುಗಾದಿ ಹಬ್ಬವನ್ನು ತಪ್ಪಿಸಿಕೊಂಡಿಲ್ಲ. ಮನೆಯವರ ಜತೆ ಸೇರಿ ಹಬ್ಬವನ್ನು ಆಚರಿಸುವುದೇ ಸಂಭ್ರಮ. ಬೇವು-ಬೆಲ್ಲ ಸಿದ್ಧ ಮಾಡಿ ಅದನ್ನು ತಾವು ತಿಂದು, ಅಕ್ಕಪಕ್ಕದವರೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ. ಆದರೆ ಈ ಬಾರಿ ಶೂಟಿಂಗ್‌ನಲ್ಲಿ ಬ್ಯುಸಿಯಿರುವುದರಿಂದ ಊರಿಗೆ ಹೋಗಲು ಆಗುತ್ತಿಲ್ಲ. ಮನೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.

–ಐಶ್ವರ್ಯಾ ಸಾಲಿಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry