ಸೋಮವಾರ, ಜೂನ್ 21, 2021
27 °C

ಬಟ್ಟೆ ಧರಿಸದಿದ್ದರೆ ಮಾನ ಹೋಗೋದು!

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

‘ಬಟ್ಟೆ ಧರಿಸದಿದ್ದರೆ ಮಾನ ಹೋಗುತ್ತೆ! ನಾವು ಬಟ್ಟೆ ಧರಿಸಿದ್ದೇವೆ...’ ಇದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರ ಹೇಳಿಕೆ.

ಸ್ಥಳೀಯ ಸಂಸ್ಥೆ ಆಡಳಿತ ಮತ್ತು ನಾಗರಿಕ ಸೇವೆಗೆ ಸಂಬಂಧಿಸಿದಂತೆ, ದೇಶದ ಪ್ರಮುಖ 23 ನಗರಗಳಲ್ಲಿ ಬೆಂಗಳೂರು ‘ಅತ್ಯಂತ ಕಳಪೆ ನಗರ’ವೆಂದು ಜನಾಗ್ರಹ ಸಂಸ್ಥೆಯು ಸಮೀಕ್ಷಾ ವರದಿ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸಚಿವರನ್ನು ಪ್ರಶ್ನಿಸಿದಾಗ, ‘ಸಮೀಕ್ಷೆ ಮಾಡಿರುವವರು ನಮ್ಮನ್ನು ಸಂಪರ್ಕಿಸಿಯೇ ಇಲ್ಲ. ತಪ್ಪು ಅಂಕಿ ಅಂಶ ತೋರಿಸಿ, ಬಿಬಿಎಂಪಿಯ ಹಲವು ಸೇವೆಗಳಿಗೆ ಶೂನ್ಯ ಅಂಕ ಕೊಟ್ಟಿದ್ದಾರೆ. ವಾಸ್ತವ ಫಲಿತಾಂಶ ನೀಡಲು ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

‘ಬೆಂಗಳೂರಿನ ಮಾನ ಹೋದ ಮೇಲೆ ಇನ್ನೊಂದು ವರದಿ ಕೊಟ್ಟರೆ ಜನರು ನಂಬ್ತಾರಾ’ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ, ‘ಅಯ್ಯೊ ಮಾನ ಹೇಗೆ ಹೋಗುತ್ತೆ. ನಾವು ಬಟ್ಟೆ ಹಾಕಿದ್ದೀವಿ' ಎಂದ ಸಚಿವರು, ‘ತಪ್ಪು ಮಾಹಿತಿ ಕೊಟ್ಟಿರುವಾಗ, ಮಾಹಿತಿಯನ್ನು ಸರಿಪಡಿಸಿ ಇನ್ನೊಂದು ವರದಿ ಕೊಡಿ ಎನ್ನುವುದರಲ್ಲಿ ತಪ್ಪೇನಿದೆ’ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

‘ನಗರದ ಟೆಂಡರ್‌ ಶ್ಯೂರ್‌ ಮಾದರಿ ರಸ್ತೆಗಳು, ಚರ್ಚ್ ಸ್ಟ್ರೀಟ್‌ ರಸ್ತೆ ಅಭಿವೃದ್ಧಿ, ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಬೆಂಗಳೂರು ಟೈಮ್ಸ್‌ ಸ್ಕ್ವೇರ್‌’ನಂತಹ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ‘ಜನಾಗ್ರಹ’ ಸಂಸ್ಥೆಯೇ ಪ್ರಮುಖ ಸಲಹೆಗಾರ. ಹೀಗಿರುವಾಗ ಆ ಸಂಸ್ಥೆ ಬೆಂಗಳೂರಿನ ಬಗ್ಗೆಯೇ ತಪ್ಪು ವರದಿ ನೀಡಲು ಹೇಗೆ ಸಾಧ್ಯ’ ಎಂದು ಪತ್ರಕರ್ತರು ಪುನಃ ಸಚಿವರ ಕಾಲೆಳೆದರು.

ಈ ಅನಿರೀಕ್ಷಿತ ಪ್ರಶ್ನೆಯನ್ನು ನುಂಗುಲೂ ಆಗದೆ, ಉಗುಳಲೂ ಆಗದೆ ಸಚಿವರು, ‘ಜನಾಗ್ರಹ ಸಂಸ್ಥೆ ಮತ್ತು ಅದರ ಮುಖ್ಯಸ್ಥರ ಮೇಲೆ ನಮಗೆ ವಿಶ್ವಾಸವಿದೆ. ನೀವು ಎಲ್ಲಿಂದ ಎಲ್ಲೆಲ್ಲಿಗೋ ತಳುಕು ಹಾಕಬೇಡಿ. ನಮ್ಮ ರಾಜ್ಯ ಮತ್ತು ಬೆಂಗಳೂರಿನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಹೊಂದಿರುವವರು ಜನಾಗ್ರಹ ಸಂಸ್ಥೆಯೊಳಗೆ ಸೇರಿ ಈ ಕೆಲಸ ಮಾಡಿರಬಹುದು’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

ಅವರ ಮಾತಿನ ಬಾಣ ರಾಜ್ಯಸಭಾ ಸದಸ್ಯರೊಬ್ಬರ ಕಡೆ ಗುರಿ ಇಟ್ಟಿದ್ದನ್ನು ಮಾಧ್ಯಮದವರು ಗಮನಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.