ಲಿಂಗಾಯತ ಪ್ರತ್ಯೇಕ ಧರ್ಮ ರಾಜಕೀಯ ಕಾರ್ಯತಂತ್ರ

7

ಲಿಂಗಾಯತ ಪ್ರತ್ಯೇಕ ಧರ್ಮ ರಾಜಕೀಯ ಕಾರ್ಯತಂತ್ರ

Published:
Updated:
ಲಿಂಗಾಯತ ಪ್ರತ್ಯೇಕ ಧರ್ಮ ರಾಜಕೀಯ ಕಾರ್ಯತಂತ್ರ

ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ಸಮಿತಿ ಮಾಡಿರುವ ಶಿಫಾರಸನ್ನು ರಾಜ್ಯ ಸಚಿವ ಸಂಪುಟ ಒಪ್ಪಿಕೊಂಡು, ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಿದೆ. ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನದ ಕೂಗು ಇಂದು ನಿನ್ನೆಯದಲ್ಲ. ಏಳು ದಶಕಗಳಿಂದಲೂ ಕೇಳಿಬರುತ್ತಿದೆ. ಈಗ ಚೆಂಡು ದೆಹಲಿ ಅಂಗಳಕ್ಕೆ ಹೋಗಲಿದೆ.

ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಆದರೆ, ಹಿಂದುತ್ವದ ಕಾರ್ಯಸೂಚಿ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಲಿಂಗಾಯತರು– ವೀರಶೈವರು ಹಿಂದೂ ಧರ್ಮದಿಂದ ಹೊರಹೋಗಿ, ಪ್ರತ್ಯೇಕ ಧರ್ಮ ಸ್ಥಾಪಿಸಿಕೊಳ್ಳುವುದನ್ನು ಒಪ್ಪಿಕೊಳ್ಳುವುದೇ ಎಂಬುದು ಕುತೂಹಲದ ಸಂಗತಿ. ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲಿ ರಾಜ್ಯ ಬಿಜೆಪಿ ಇದುವರೆಗೂ ತಟಸ್ಥ ನಿಲುವು ತಳೆದಿದೆ.

ಪ್ರತ್ಯೇಕ ಧರ್ಮದ ಬೇಡಿಕೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಇದೊಂದು ಧರ್ಮದ ವಿಷಯವಾಗಿ ಕಂಡರೂ, ಸೂಕ್ಷ್ಮವಾಗಿ ಗಮನಿಸಿದರೆ ಇದರ ಹಿಂದೆ ರಾಜಕೀಯ ಉದ್ದೇಶವಿರುವುದು ನಿಚ್ಚಳವಾಗುತ್ತದೆ. ಹೀಗಾಗಿ, ರಾಜ್ಯ ಮತ್ತು ಕೇಂದ್ರದ ನಡುವಣ ಸಂಘರ್ಷಕ್ಕೆ ಲಿಂಗಾಯತ ಧರ್ಮ ವಿಷಯ ಹೊಸ ಅಸ್ತ್ರವಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಲಿಂಗಾಯತರು ಹಾಗೂ ವೀರಶೈವರು, ಅದರಲ್ಲೂ ಉತ್ತರ ಕರ್ನಾಟಕದಲ್ಲಿರುವ ಈ ಸಮುದಾಯಗಳ ಜನರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿಗರು. ‘ರಾಜ್ಯ ಸರ್ಕಾರ ತರಾತುರಿ ತೀರ್ಮಾನ ಕೈಗೊಳ್ಳುವ ಮೂಲಕ ಸಮುದಾಯವನ್ನು ವಿಭಜನೆ ಮಾಡುತ್ತಿದೆ’ ಎಂದು ಅದು ಆರೋಪಿಸಿದೆ.

ಸಚಿವರಾದ ಎಂ.ಬಿ. ಪಾಟೀಲ, ಶರಣಪ್ರಕಾಶ ಪಾಟೀಲ, ವಿನಯ ಕುಲಕರ್ಣಿ ಹಾಗೂ ಬಸವರಾಜ ರಾಯರಡ್ಡಿ ಅವರು ಪ್ರತ್ಯೇಕ ಧರ್ಮ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದರಿಂದ ಸಂಪುಟದ ನಿರ್ಧಾರ ರಾಜಕೀಯಪ್ರೇರಿತ ಎಂಬ ಅನುಮಾನ ಬರುವುದು ಸಹಜ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೆ ‘ಅಹಿಂದ’ ನಾಯಕರಾಗಿ ಗುರುತಿಸಿಕೊಂಡಿದ್ದರು. ಅವರೂ ತಮ್ಮ ಹಣೆಪಟ್ಟಿ ಕಳಚಿಕೊಂಡು ನೆಲೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಇಂಥ ಹೊತ್ತಿನಲ್ಲಿ ಲಿಂಗಾಯತ ಧರ್ಮದ ವಿಷಯ ‘ಕೈ’ಗೆ ಸಿಕ್ಕಿದೆ. ಇದು ಈ ಸಲದ ಚುನಾವಣೆಯಲ್ಲಿ ಯಾವ ತಿರುವು ಪಡೆಯುವುದೋ ಎಂದು ಈಗಲೇ ಊಹಿಸುವುದು ಕಷ್ಟ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದರಿಂದ ಲಿಂಗಾಯತರ ಮತಗಳು ಬಿಜೆಪಿ–ಕೆಜೆಪಿ ನಡುವೆ  ಹಂಚಿಕೆಯಾಗಿದ್ದವು. ಅದರಿಂದ ಕಾಂಗ್ರೆಸ್‌ಗೆ ಲಾಭವಾಗಿತ್ತು.

ಈಗ ಅಂತಹ ಸ್ಥಿತಿ ಇಲ್ಲ. ಆ ಎರಡೂ ಪಕ್ಷಗಳು ಒಗ್ಗೂಡಿವೆ. ಯಡಿಯೂರಪ್ಪ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿರುವುದರಿಂದ ಆ ಭಾಗದ ಬಹಳಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಬಹುದೆಂದು ಅಂದಾಜಿಸಲಾಗಿದೆ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದ ತಕ್ಷಣ ಸಮುದಾಯದ ಆಚಾರ–ವಿಚಾರಗಳು ಬದಲಾಗುವವೇ? ಮೇಲು– ಕೀಳು ಎಂಬ ಭೇದಭಾವ ನಿವಾರಣೆಯಾಗುವುದೇ? ರೂಢಿಗತ ಕಟ್ಟುಪಾಡುಗಳಿಂದ ಹೊರಬಂದು ಬಸವ ತತ್ವಗಳನ್ನು ನಿಜಾರ್ಥದಲ್ಲಿ ಅನುಸರಿಸುವರೇ ಎಂಬುದನ್ನು ಕಾಲವೇ ನಿರ್ಧರಿಸಬೇಕು.

ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ರಾಜಕೀಯ ಕಾರ್ಯತಂತ್ರವಲ್ಲದೆ ಬೇರೇನೂ ಅಲ್ಲ. ಈ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನ ಸಿಗುವುದರಿಂದ ದೊರೆಯುವ ಪ್ರಯೋಜನ ಏನು ಎಂಬುದರ ಬಗ್ಗೆ ಗೊಂದಲ ಇದ್ದೇ ಇದೆ. ಹೆಚ್ಚೆಂದರೆ, ಇದರಿಂದ ಈ ಸಮುದಾಯದ ಶಿಕ್ಷಣ ಸಂಸ್ಥೆಗಳಿಗೆ ಲಾಭವಾಗಬಹುದು. ಆದರೆ ಇದಕ್ಕೆ ಕಾಲವಿನ್ನೂ ದೂರವಿದೆ. ಶಾಸನ ತಿದ್ದುಪಡಿ ಸೇರಿದಂತೆ ಹಲವು ಕಾನೂನು ಪ್ರಕ್ರಿಯೆ ಹಾದು ಬರಬೇಕಾದ ಸವಾಲು ಸಹ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry