ಪ್ರಾಣಿಗಳ ಸಂರಕ್ಷಣಾ ಕೇಂದ್ರಕ್ಕೆ ಸ್ಥಳ ನೀಡಿ

7
ಕೇರ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನಿಖಿತಾ ಒತ್ತಾಯ

ಪ್ರಾಣಿಗಳ ಸಂರಕ್ಷಣಾ ಕೇಂದ್ರಕ್ಕೆ ಸ್ಥಳ ನೀಡಿ

Published:
Updated:
ಪ್ರಾಣಿಗಳ ಸಂರಕ್ಷಣಾ ಕೇಂದ್ರಕ್ಕೆ ಸ್ಥಳ ನೀಡಿ

ಬಳ್ಳಾರಿ: ‘ನಗರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀ ಸೇವಾನಿಕೇತನ ಆವರಣದಲ್ಲಿ ನಾಯಿಗಳನ್ನು ಸಂರಕ್ಷಣೆಗಾಗಿ ತಾತ್ಕಾಲಿಕ ಸ್ಥಳವನ್ನು ನೀಡಲಾಗಿತ್ತು. ಆದರೆ, ಇಲಾಖೆಯು ಏಳು ದಿನದೊಳಗೆ ಸ್ಥಳವನ್ನು ತೆರವುಗೊಳಿಸಲು ನೋಟಿಸ್ ನೀಡಿದೆ. ಇದರಿಂದ ನಾಯಿಗಳನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುದು ತಿಳಿಯುತ್ತಿಲ್ಲ’ ಎಂದು ಸಂರಕ್ಷಣೆ ಮತ್ತು ಪಾರುಗಾಣಿಕಾ (ಕೇರ್) ಸಂಸ್ಥೆಯ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನಿಖಿತಾ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸ್ಥೆಯ ಆವರಣದಲ್ಲಿ ಕೊಪ್ಪಳ ಮತ್ತು ಬಳ್ಳಾರಿಯ ಸುಮಾರು 50 ನಾಯಿಗಳನ್ನು ಸಂರಕ್ಷಣೆ ಮಾಡಲಾಗಿದೆ. ಅವುಗಳಿಗೆ ಪ್ರತಿದಿನ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ. ಈಗ ಇಲಾಖೆಯು ಧಿಡೀರನೆ ನೋಟಿಸ್ ನೀಡಿದೆ. ಇನ್ನೂ ನಾಲ್ಕು ದಿನದೊಳಗೆ ತೆರವುಗೊಳಿಸುವ ಅನಿವಾರ್ಯತೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ ಪ್ರಾಣಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಅಲ್ಲದೇ, ಶಸ್ತ್ರ ಚಿಕಿತ್ಸೆ ವೇಳೆ ಮೂರ್ಛೆ ಹೋಗಲು ನೀಡುವ ಅನಸ್ತೇಷಿಯಾ ಔಷಧಿ ಕೂಡ ಇಲ್ಲ. ಸಂತಾನಹರಣ ಚಿಕಿತ್ಸೆಗಾಗಿ ಸಂಸ್ಥೆ ಕಡೆಯಿಂದ ಹಣವನ್ನು ಭರಿಸಲಾಗುತ್ತಿದೆ. ನಗರದಲ್ಲಿ ತಜ್ಞ ವೈದ್ಯರನ್ನು ಮೋಕಾ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿದೆ. ಈಗ ನಗರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವವರೇ ಇಲ್ಲದಂತಾಗಿದೆ’ ಎಂದು ಹೇಳಿದರು.

‘ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇದೆಲ್ಲಾ ಸಹಿಸಿಕೊಂಡು ಪ್ರಾಣಿಗಳನ್ನು ಸಂರಕ್ಷಣೆ ಮಾಡುತ್ತಿದ್ದೇವೆ. ಆಸ್ಪತ್ರೆಯಲ್ಲಿ ಪ್ರಾಣಿಗಳಿಗೆ ನೀಡುವ ವ್ಯಾಕ್ಸಿನ್‌ಗಳ ಕೊರತೆ ಇದೆ. ವಾಕ್ಸಿನ್‌ ನೀಡುವುದರಿಂದ ಪ್ರಾಣಿಗಳಿಗೆ ಬರುವಂತಹ ರೋಗಗಳನ್ನು ತಡೆಗಟ್ಟಬಹುದು. ಅಲ್ಲದೆ, ಪ್ರಾಣಿಗಳು ಮನುಷ್ಯರಿಗೆ ಕಚ್ಚುವುದರಿಂದ ಯಾವುದೇ ರೋಗ ಬರದಂತೆ ತಡೆಯಬಹುದು. ನಮ್ಮ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ವಿ. ರಾಮಪ್ರಸಾದ್ ಮನೋಹರ ಅವರು ಭೇಟಿ ನೀಡಿದ್ದರು. ಇಲ್ಲಿನ ಸ್ವಚ್ಛತೆ ಕಂಡು ಸಂತಸ ವ್ಯಕ್ತಪಡಿಸಿದ್ದರು’ ಎಂದು ನಿಖಿತಾ ಅವರ ಹೇಳಿದರು.

ಸಂಸ್ಥೆಯ ಡಾ. ಬಿಂದು ಹಾಗೂ ರಾಜೇಶ್ ಇದ್ದರು.

**

‘ಅನಧಿಕೃತ ಹೇಗೆ?’

‘ಸ್ತ್ರೀ ಸೇವಾನಿಕೇತನ ಆವರಣದಲ್ಲಿ ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಪ್ರಾಣಿಗಳ ಸಂರಕ್ಷಣಾ ಕೇಂದ್ರವನ್ನು ತೆರೆಯಲಾಗಿದೆ. ಆದರೆ, ಇಲಾಖೆಯು ಅನಧಿಕೃತ ಒತ್ತುವರಿ ಕಾರಣ ನೀಡಿ ನೋಟಿಸ್ ಜಾರಿಗೊಳಿಸಿದೆ. ಗಾಯಗೊಂಡ ಹಾಗೂ ಅನಾರೋಗ್ಯಪೀಡಿತ ನಾಯಿಗಳ ಸಂರಕ್ಷಣೆಯನ್ನು ಕೇಂದ್ರದಲ್ಲಿ ಮಾಡಲಾಗುತ್ತದೆ. ಇದು ಹೇಗೆ ಅನಧಿಕೃತ ಆಗಲು ಸಾಧ್ಯ?’ ಎಂದು ಸಂರಕ್ಷಣೆ ಮತ್ತು ಪಾರುಗಾಣಿಕಾ (ಕೇರ್) ಸಂಸ್ಥೆಯ ಅಧ್ಯಕ್ಷೆ ನಿಖಿತಾ ಪ್ರಶ್ನಿಸಿದರು.

**

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿಗಳ ಸಂರಕ್ಷಣಾ ಕೇಂದ್ರ ಸ್ಥಾಪಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಆ ಆದೇಶವನ್ನು ಯಾರೂ ಕೂಡ ಪಾಲಿಸುತ್ತಿಲ್ಲ. ಸ್ಥಳ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ

ನಿಖಿತಾ, ಅಧ್ಯಕ್ಷೆ, ಸಂರಕ್ಷಣೆ ಮತ್ತು ಪಾರುಗಾಣಿಕಾ (ಕೇರ್) ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry