ನುರಿತ ಮಾನವ ಸಂಪನ್ಮೂಲಕ್ಕಾಗಿ ಮಾನದಂಡ

7

ನುರಿತ ಮಾನವ ಸಂಪನ್ಮೂಲಕ್ಕಾಗಿ ಮಾನದಂಡ

Published:
Updated:
ನುರಿತ ಮಾನವ ಸಂಪನ್ಮೂಲಕ್ಕಾಗಿ ಮಾನದಂಡ

ನವದೆಹಲಿ: ರಾಜ್ಯದಲ್ಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಅಗತ್ಯಕ್ಕೆ ಅನುಗುಣವಾಗಿ, ನುರಿತ ಮಾನವ ಸಂಪನ್ಮೂಲ ಹೊಂದುವ ಉದ್ದೇಶದಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ (ಪಿ.ಜಿ) ಕೋರ್ಸ್‌ಗೆ ಕನ್ನಡೇತರ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾನದಂಡ ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಎದುರು ಸಮರ್ಥನೆ ನೀಡಿದೆ.

ವೈದ್ಯಕೀಯ ಪಿ.ಜಿ. ಕೋರ್ಸ್‌ ಪ್ರವೇಶಕ್ಕಾಗಿ ಕರ್ನಾಟಕದ ಹಾಗೂ ರಾಜ್ಯದಲ್ಲಿ 10 ವರ್ಷ ಶಿಕ್ಷಣ ಪಡೆದಿರುವ ಅರ್ಹತೆಯ ಆಧಾರದಲ್ಲಿ ಸರ್ಕಾರಿ ಸೀಟುಗಳನ್ನು ಮೀಸಲಿರಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಡಾ.ಕೃತಿ ಲಿಖಿನಾ ಸೇರಿದಂತೆ 39 ಕನ್ನಡೇತರ ವಿದ್ಯಾರ್ಥಿಗಳು ಸಲ್ಲಿಸಿರುವ ಮೇಲ್ಮನವಿ ಕುರಿತು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಈ ಹೇಳಿಕೆಯನ್ನು ಸಲ್ಲಿಸಿದೆ.

ರಾಜ್ಯದಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗಾಗಿ ಸರ್ಕಾರ ಸಾಕಷ್ಟು ಪ್ರಮಾಣದ ಬಂಡವಾಳ ಹೂಡಿದ್ದು, ಕೇಂದ್ರ ಸರ್ಕಾರದ ಹಣಕಾಸಿನ ನೆರವು ಪಡೆದಿಲ್ಲ. ವಿವಿಧ ಜಿಲ್ಲೆಗಳಲ್ಲಿ ಇನ್ನೂ 14 ವೈದ್ಯಕೀಯ ಕಾಲೇಜು ಹಾಗೂ 8 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸುವ ಉದ್ದೇಶ ಇದ್ದು, ಇವುಗಳನ್ನು ನಡೆಸಲು ಸಾಕಷ್ಟು ಪ್ರಮಾಣದ ತಜ್ಞ ವೈದ್ಯರು ಹಾಗೂ ವೈದ್ಯಕೀಯ ಉಪನ್ಯಾಸಕರ ಅಗತ್ಯವಿದೆ ಎಂದು ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಅಂದಾಜು ₹ 2,000 ಕೋಟಿ ವ್ಯಯಿಸುತ್ತಿದ್ದು, ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಯಾವುದೇ ರೀತಿಯ ನೆರವನ್ನು ನೀಡುತ್ತಿಲ್ಲ. ಅಲ್ಲದೆ, ಈ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಮಾನವ ಸಂಪನ್ಮೂಲ ರಾಜ್ಯದಿಂದಲೇ ಲಭ್ಯವಾಗಲಿದೆ ಎಂದೂ ವಿವರಿಸಲಾಗಿದೆ.

ಈ ಕಾರಣಗಳಿಂದಾಗಿ ರಾಜ್ಯದಲ್ಲಿಯೇ ಸೇವೆ ಸಲ್ಲಿಸುವ ಅಭ್ಯರ್ಥಿಗಳ ಪ್ರವೇಶಕ್ಕೇ ಆದ್ಯತೆ ನೀಡುವ ಅಗತ್ಯವಿದ್ದು, ರಾಜ್ಯ ಸರ್ಕಾರಕ್ಕೆ ಮಾನದಂಡ ರೂಪಿಸುವ ಸಂಪೂರ್ಣ ಹಕ್ಕು ಇದೆ. ಮಧ್ಯಪ್ರದೇಶ , ಕೇರಳ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲೂ ಇದೇ ಮಾದರಿಯ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಮೆರಿಟ್‌ ಆಧಾರದಲ್ಲಿ ಸಹಾಯಧನದ ಸೌಲಭ್ಯದ ಸೀಟು ಪಡೆಯುವ ರಾಜ್ಯದ ವಿದ್ಯಾರ್ಥಿಗಳಿಗೂ, ಸ್ಥಳೀಯ ಜನರ ಸೇವೆಗೆ ಸಿದ್ಧರಿರಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿರುವ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಅಗತ್ಯ ತಜ್ಞರನ್ನು ಹೊಂದುವುದಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ. ದೇಶದ ಇತರೆ ಭಾಗದ ವಿದ್ಯಾರ್ಥಿಗಳು ಕರ್ನಾಟಕದಲ್ಲಿನ ವೈದ್ಯಕೀಯ ಅಥವಾ ದಂತ ವೈದ್ಯಕೀಯ ಕಾಲೇಜುಗಳಿಂದ ಪದವಿ ಪಡೆದಿದ್ದರ ಆಧಾರದ ಮೇಲೆ ಯಾವುದೇ ಕಾನೂನು ಅರ್ಹತೆ ಹೊಂದಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರಿ ಸೀಟುಗಳನ್ನು ಹೊರತುಪಡಿಸಿಯೂ ಬಾಕಿ ಇರುವ 2,301 ಸೀಟುಗಳನ್ನು ಕರ್ನಾಟಕ ಮೂಲದವರಲ್ಲದ ಅಭ್ಯರ್ಥಿಗಳು ಪಡೆಯಬಹುದಾಗಿದೆ. ರಾಜ್ಯದ 11,615 ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ 3,435 ಹುದ್ದೆಗಳ ಪೈಕಿ 1,312 ಹುದ್ದೆಗಳು ಖಾಲಿ ಇವೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ 2,700 ತಜ್ಞರ ಹುದ್ದೆಗಳ ಪೈಕಿ 517 ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಇರುವ ಒಟ್ಟು 39 ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ 16 ಸಂಸ್ಥೆಗಳಿದ್ದು, ಒಟ್ಟು 970 ಹಿರಿಯ ವೈದ್ಯರ ಹುದ್ದೆಗಳಲ್ಲಿ 524 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry