ಕ್ರಿಕೆಟ್‌ ಘನತೆಗೆ ಬಳಿದ ಮಸಿ ಕಠಿಣ ಕ್ರಮ ಕೈಗೊಳ್ಳಿ

7

ಕ್ರಿಕೆಟ್‌ ಘನತೆಗೆ ಬಳಿದ ಮಸಿ ಕಠಿಣ ಕ್ರಮ ಕೈಗೊಳ್ಳಿ

Published:
Updated:
ಕ್ರಿಕೆಟ್‌ ಘನತೆಗೆ ಬಳಿದ ಮಸಿ ಕಠಿಣ ಕ್ರಮ ಕೈಗೊಳ್ಳಿ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಉಪನಾಯಕ ಡೇವಿಡ್‌ ವಾರ್ನರ್‌, ಕ್ರಿಕೆಟ್‌ನ ಘನತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ತಂಡದ ಆಟಗಾರ ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಅವರಿಗೆ ಚೆಂಡನ್ನು ವಿರೂಪಗೊಳಿಸಲು ಕುಮ್ಮಕ್ಕು ನೀಡಿದ ಅವರ ಈ ಕೃತ್ಯ ಅಕ್ಷಮ್ಯ. ಪ್ಯಾಂಟಿನ ಒಳಗೆ ಬಚ್ಚಿಟ್ಟಿದ್ದ ಸ್ಯಾಂಡ್‌ಪೇಪರ್‌ ಬಳಸಿ  ಚೆಂಡನ್ನು  ಬ್ಯಾಂಕ್ರಾಫ್ಟ್‌ ವಿರೂಪಗೊಳಿಸಿದ್ದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಬಹುಶಃ 2000 ಇಸವಿಯ ಆರಂಭದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಹಗರಣ ಬಯಲಿಗೆ ಬಂದ ಬಳಿಕ ನಡೆದ ಅಷ್ಟೇ ಗಂಭೀರ ಸ್ವರೂಪದ ಅಪರಾಧ ಇದು.  ಆಟಗಾರರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಚೆಂಡನ್ನು ವಿರೂಪಗೊಳಿಸುವುದು ಹಿಂದೆಯೂ ನಡೆದಿದೆ.

ಮೈಕ್‌ ಆರ್ಥರ್‌ಟನ್‌, ಸಚಿನ್‌ ತೆಂಡೂಲ್ಕರ್‌, ರಾಹುಲ್‌ ಡ್ರಾವಿಡ್‌, ಪಫ್‌ ಡು ಫ್ಲೆಸಿಸ್‌ ಮುಂತಾದ ಅತಿರಥರೇ ಇಂತಹ ಪ್ರಕರಣಗಳಲ್ಲಿ ಹಿಂದೆ ದಂಡ ಕಟ್ಟಿದ್ದುಂಟು. ಆದರೆ ಇಲ್ಲಿ ಸ್ವತಃ ನಾಯಕ ಮತ್ತು ಉಪನಾಯಕರೇ ಒತ್ತಾಸೆ ನೀಡಿ ಚೆಂಡನ್ನು ವಿರೂಪಗೊಳಿಸಲು ಕುಮ್ಮಕ್ಕು ನೀಡಿರುವುದು ಬಹುದೊಡ್ಡ ತಪ್ಪು. ಇಡೀ ತಂಡವೇ ಈ ಅಕ್ರಮದಲ್ಲಿ ಶಾಮೀಲಾಗಿದೆ ಎನ್ನುವ ಅರ್ಥ ಬರುವಂತಿದೆ ಈ ಘಟನೆ. ಸ್ಟೀವ್‌ ಸ್ಮಿತ್ ಕಳೆದ ಮೂರು ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದಾರೆ. ವಾರ್ನರ್‌ ಕೂಡಾ ಬಹುತೇಕ ಅಷ್ಟೇ ಸಮಯದಿಂದ ಉಪನಾಯಕರಾಗಿದ್ದಾರೆ. ಕ್ರಿಕೆಟ್‌ನ ನಿಯಮಗಳು ಇವರಿಗೆ ಗೊತ್ತಿಲ್ಲದ್ದೇನಲ್ಲ. ಅದಕ್ಕಿಂತ ಮುಖ್ಯವಾಗಿ ಕ್ರಿಕೆಟ್‌ ಆಟದಲ್ಲಿ ಹೀಗೆ ವಂಚಿಸುವುದು ಕ್ರೀಡಾಸ್ಫೂರ್ತಿಗೆ ಎಷ್ಟು ದೊಡ್ಡ ಹಾನಿ ಉಂಟುಮಾಡಬಲ್ಲುದು ಎನ್ನುವುದೂ ಅವರಿಗೆ ತಿಳಿದಿದೆ. ಇವರ ಈ ನಡವಳಿಕೆ ಕ್ರಿಕೆಟ್‌ ಮಾತ್ರವಲ್ಲ, ಕ್ರೀಡಾಲೋಕದ ಘನತೆಗೇ ಕೇಡುಂಟು ಮಾಡುವಂತಹದ್ದು.

ಸ್ವತಃ ಆಸ್ಟ್ರೇಲಿಯಾದ ಪ್ರಧಾನಿಯೇ ಈ ಇಬ್ಬರ ಕುಕೃತ್ಯವನ್ನು ಸ್ಪಷ್ಟ ಮಾತುಗಳಲ್ಲಿ ಕಟುವಾಗಿ ಖಂಡಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯು ನಾಯಕ ಮತ್ತು ಉಪನಾಯಕ ಹುದ್ದೆಯಿಂದ ಇಬ್ಬರನ್ನೂ ತಕ್ಷಣ ಕಿತ್ತುಹಾಕಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಸ್ಮಿತ್‌ಗೆ ಪಂದ್ಯ ಶುಲ್ಕದ ಶೇ 100ರಷ್ಟು ದಂಡ ವಿಧಿಸಿದೆ. ಜತೆಗೆ ಒಂದು ಟೆಸ್ಟ್‌ ಪಂದ್ಯವನ್ನು ಆಡದಂತೆ ಅಮಾನತು ಮಾಡಿದೆ. ಬ್ಯಾಂಕ್ರಾಫ್ಟ್‌ಗೆ ಪಂದ್ಯ ಶುಲ್ಕದ ಶೇ 75ರಷ್ಟು ದಂಡ ವಿಧಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಕುಕೃತ್ಯ ಆಸ್ಟ್ರೇಲಿಯಾ ತಂಡಕ್ಕೆ ಉಂಟು ಮಾಡಿರುವ ಹಾನಿಯನ್ನು ಈ ದಂಡ ತುಂಬಿಕೊಡಲಾಗದು. ಆಸ್ಟ್ರೇಲಿಯಾದ ಕ್ರಿಕೆಟ್‌ ಮಂಡಳಿ ಈ ವಿಷಯವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕು. ಸ್ಮಿತ್‌ ಮತ್ತು ವಾರ್ನರ್‌ ಇಬ್ಬರನ್ನೂ ತಂಡದಿಂದ ಒಂದು ವರ್ಷದ ಮಟ್ಟಿಗಾದರೂ ಕೈಬಿಡಬೇಕು. ಈ ಇಬ್ಬರೂ ಆಟಗಾರರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುತ್ತಿದ್ದು, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಇಬ್ಬರನ್ನೂ ಐಪಿಎಲ್‌ನಲ್ಲಿ ಈ ಸಲ ಆಡದಂತೆ ನಿಷೇಧಿಸಬೇಕು. ಇಂತಹ ಶಿಕ್ಷೆ  ಮಾತ್ರ ಮುಂದಿನ ದಿನಗಳಲ್ಲಿ ಇತರ ಕ್ರಿಕೆಟಿಗರು ಚೆಂಡು ವಿರೂಪಗೊಳಿಸುವ ದುಸ್ಸಾಹಸಕ್ಕೆ ಕೈಹಾಕದಂತೆ ತಡೆಯಬಹುದು. ಎಲ್ಲ ಕ್ರಿಕೆಟಿಗರೂ ಹೆಚ್ಚು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಆಟವಾಡಲು ಈ ಕಠಿಣ ಕ್ರಮ ಕಾರಣವಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry