ಗುರುವಾರ , ಏಪ್ರಿಲ್ 9, 2020
19 °C

ಮೂರ್ತಿಭಂಜನೆಯ ಮತ್ತೊಂದು ರೂಪ

ಚೇತನಾ ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

ಮೂರ್ತಿಭಂಜನೆಯ ಮತ್ತೊಂದು ರೂಪ

ಈ ವರ್ಷದ ಮಾರ್ಚ್ ತಿಂಗಳು ಇಂಡಿಯಾದ ಪಾಲಿಗೆ ಮೂರ್ತಿಭಂಜನೆಯ ತಿಂಗಳು. ತ್ರಿಪುರಾದ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಲೆನಿನ್ ಪ್ರತಿಮೆಯನ್ನು ಉರುಳಿಸಿದ್ದು ಈ ಸಾಲಿನಲ್ಲಿ ಮೊದಲನೆಯದು. ನಂತರ ಸಾಲುಸಾಲಾಗಿ ಪೆರಿಯಾರ್, ಅಂಬೇಡ್ಕರ್, ಗಾಂಧೀಜಿ, ಸಾವಿತ್ರಿ ಬಾಯಿ ಫುಲೆ, ಶ್ಯಾಮ್ ಪ್ರಸಾದ್ ಮುಖರ್ಜಿ ಮೊದಲಾದವರ ಪ್ರತಿಮೆಗಳನ್ನೂ ಭಗ್ನಗೊಳಿಸಲಾಯ್ತು. ಈ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಗಂಭೀರ ಚರ್ಚೆಗಳು ನಡೆದವು. ಚಿಂತಕ– ಎಡಪಂಥೀಯ ವರ್ಗದಿಂದ ತೀವ್ರ ಖಂಡನೆಯೂ ಹೊಮ್ಮಿತು.

ಹಾಗೆ ನೋಡಿದರೆ ಇಂಡಿಯಾದಲ್ಲಿ ಮೂರ್ತಿಭಂಜನೆ ಅಥವಾ ಅವಮಾನಗೊಳಿಸುವುದು ಹೊಸ ವಿದ್ಯಮಾನವೇನಲ್ಲ. ಈ ದೇಶದಲ್ಲಿ ಇಲ್ಲಿಯವರೆಗೆ ಅಂಬೇಡ್ಕರ್ ಪ್ರತಿಮೆ ಭಗ್ನಗೊಂಡಷ್ಟು, ಅವಮಾನಕ್ಕೊಳಪಟ್ಟಷ್ಟು ಯಾವುದೂ ಒಳಪಟ್ಟಿಲ್ಲ. ಈ ಯಾದಿಯಲ್ಲಿ ಎರಡನೆಯದಾಗಿ ನಿಲ್ಲುವವರು ಗಾಂಧೀಜಿ. ಆದರೆ, ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗಳ ಭಂಗದ ಬಗ್ಗೆ ಈವರೆಗೆ ಪ್ರತಿರೋಧ ಹೊಮ್ಮಿದ್ದು ಬಹಳ ಕಡಿಮೆ. ವ್ಯಾಪಕತೆಯ ದೃಷ್ಟಿಯಿಂದ ನೋಡಿದರೆ, ಇಲ್ಲವೇ ಇಲ್ಲ ಎಂದೂ ಹೇಳಬಹುದು. ಲೆನಿನ್ ಪ್ರತಿಮೆಯನ್ನು ಉರುಳಿಸಿದ ಕಾರಣದಿಂದಲಾದರೂ ಮೂರ್ತಿಭಂಜಕತನದ ಕುರಿತು ಚರ್ಚೆ ಆರಂಭಗೊಂಡಿರುವುದು ಸ್ವಾಗತಾರ್ಹ.

ಇವೆಲ್ಲ ಕಣ್ಣಿಗೆ ಕಾಣುವಂತೆ ಪ್ರತಿಮೆಗಳನ್ನು ಒಡೆಯುವುದರ ಮಾತಾಯಿತು. ಇದರ ಅಬ್ಬರದಲ್ಲಿ, ಪ್ರತಿಮೆಗಳ ಅಂತಃಸತ್ವವನ್ನೇ ಭಂಜಿಸಿ, ಅವುಗಳಲ್ಲಿ ತಮ್ಮ ವಿಚಾರಗಳನ್ನು ತುಂಬುತ್ತಿರುವ ಕುರಿತು ಯಾವ ಪ್ರತಿಕ್ರಿಯೆ ಹೊಮ್ಮಬೇಕಿತ್ತೋ ಅದು ಆಗುತ್ತಿಲ್ಲ. ಈ ನಿಟ್ಟಿನಲ್ಲಿ, ಬಲ ಮತ್ತು ಎಡಪಂಥೀಯರಲ್ಲಿ ಯಾರು ಸರಿ, ಯಾರು ತಪ್ಪು ಎಂದು ಗೆರೆ ಕೊರೆದು ಹೇಳುವುದಕ್ಕಿಂತ ಯಾರು ಏನು ಮಾಡುತ್ತಿದ್ದಾರೆ, ಹೇಗೆ ಮಾಡುತ್ತಿದ್ದಾರೆ ಎಂಬುದನ್ನೊಮ್ಮೆ ನೋಡೋಣ.

ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಬಲಪಂಥ, ಮುಂದಿನ ದಿನಗಳಲ್ಲಿ ಗಾಂಧೀಜಿಯ ಸ್ವದೇಶಿ ಚಿಂತನೆಗಳನ್ನು ಬುಟ್ಟಿಗೆ ಹಾಕಿಕೊಂಡಿತು. ತಾನು ಅನುಸರಿಸದೆ ಹೋದರೂ ಚರಕವನ್ನು ಮುಂದಿಟ್ಟುಕೊಂಡು ಸ್ವದೇಶಿ ಅಭಿಯಾನಗಳನ್ನು ನಡೆಸುತ್ತಾ ಗಾಂಧಿ ತತ್ತ್ವಗಳನ್ನು ಹೈಜಾಕ್ ಮಾಡಿತು. ಪರ್ಯಾಯ ಸೇನೆಯನ್ನು ಕಟ್ಟಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಭಾಷ್ ಚಂದ್ರ ಬೋಸರನ್ನೂ ‘ಕೊನೆಗಾಲದಲ್ಲಿ ಸನ್ಯಾಸಿಯಾಗಿದ್ದರು’ ಎಂದು ಹೇಳುತ್ತಾ, ನೆಹರೂ ಪಿತೂರಿಯ ಕಥೆ ಹೆಣೆದು ಬಗಲಿಗೆ ನೇತುಹಾಕಿಕೊಂಡಿತು. ಮನುವಾದದ ತಾರತಮ್ಯಕ್ಕೆ ಒಳಗಾಗಿದ್ದ ಗುಡ್ಡಗಾಡಿನ ವೀರ, ಮಹಾರಾಜ ಶಿವಾಜಿಯನ್ನು ಸಾವರ್ಕರ್ ಅದಾಗಲೇ ‘ಹಿಂದೂ ಹೃದಯ ಸಾಮ್ರಾಟ’ನನ್ನಾಗಿ ಮಾಡಿ ಕೂರಿಸಿದ್ದರು. ಸ್ವಾತಂತ್ರ್ಯಾನಂತರ ಸಾರಾಸಗಟಾಗಿ ಚಂದ್ರಶೇಖರ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್, ಖುದಿರಾಮ್ ಬೋಸ್ ಮೊದಲಾದ ಕ್ರಾಂತಿಕಾರಿಗಳ ಚಿತ್ರ, ಕಥೆಗಳೆಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಹಿತ್ಯ ಸಂಪುಟದಲ್ಲಿ ಸೇರಿದವು. ಸ್ವಾಮಿ ವಿವೇಕಾನಂದರ ಕಂದು ನಿಲುವಂಗಿಗೆ ಕೇಸರಿ ಬಣ್ಣ ಬಳಿದು ದಶಕಗಳೇ ಉರುಳಿದವು. ಈ ಅಪ್ಪಟ ವಿಚಾರವಾದಿ ಸಂತನನ್ನು ‘ಹಿಂದುತ್ವದ ರಾಯಭಾರಿ’ಯನ್ನಾಗಿ ಸಂಕುಚಿತಗೊಳಿಸುವಲ್ಲಿ ಅವರು ಯಶಸ್ವಿಯೂ ಆದರು.

ಹೀಗೆ ಬಲಪಂಥೀಯರಿಗೆ ‘ಐಕಾನ್’ಗಳನ್ನು ‘ಕದಿಯುವ’ ತುಡಿತ ಎಷ್ಟೆಂದರೆ, ಸ್ವಾತಂತ್ರ್ಯಹೋರಾಟ ಕಾಲಘಟ್ಟದ ‘ವಿದ್ರೋಹಿ ಕವಿ’, ಇಂಡಿಯಾಕ್ಕೆ ಕಮ್ಯುನಿಸಮ್ ಪರಿಚಯಿಸಿದ ನಾಯಕರ ಒಡನಾಡಿ, ಸ್ವತಃ ಕಮ್ಯುನಿಸ್ಟ್ ನಜ್ರುಲ್ ಇಸ್ಲಾಮ್ ಅವರನ್ನೂ ಬಿಡಲಿಲ್ಲ. ಕಳೆದ ವರ್ಷ ಕಾಮ್ರೇಡ್ ನಜ್ರುಲ್ ಇಸ್ಲಾಮರನ್ನು ‘ಭಾರತದ ಐಡಿಯಲ್ ಮುಸ್ಲಿಂ’ ಎಂದು ಕರೆದು ಕೊಂಡಾಡಿ, ತಮ್ಮ ಪಟ್ಟಿಗೆ ಸೇರಿಸಿಕೊಂಡರು. 17ನೇ ಶತಮಾನದ ಅಸ್ಸಾಮಿನ ವೀರ ಯೋಧ ‘ಲಚಿತ್ ಬುರ್ ಪುಖಾನ್’ಗೆ ಮಾನ್ಯತೆ ನೀಡಿ, ‘ಲಚಿತ್ ದಿವಸ್’ ಆಚರಣೆಗೆ ಮುಂದಾದರು. ಇದು ಆ ರಾಜ್ಯದ ವೀರಯೋಧನಿಗೆ ಸಲ್ಲಿಸಲೇಬೇಕಿದ್ದ ಗೌರವವೇ ಆದರೂ, ಬುಡಕಟ್ಟು ಜನಾಂಗದ ನಾಯಕನನ್ನು ತಮ್ಮ ವಿಚಾರಧಾರೆಯ ಚೌಕಟ್ಟಿನಲ್ಲಿ ಕಟ್ಟಿಹಾಕಿ ಪ್ರದರ್ಶನಕ್ಕೆ ಇಟ್ಟಿರುವುದು ಚರ್ಚಾರ್ಹ. ಪ್ರತಿ ರಾಜ್ಯದಲ್ಲಿಯೂ ಸ್ಥಳೀಯ ಐಕಾನ್‌ಗಳನ್ನು ತಮ್ಮ ಪರಿಧಿಗೆ ಎಳೆದುಕೊಳ್ಳುವ ಮೂಲಕ ಜನರನ್ನು ಸೆಳೆಯುವ ತಂತ್ರವನ್ನು ಬಲಪಂಥೀಯರು ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆ.

ಈ ಎಲ್ಲದರ ಜೊತೆಗೆ ಬಲಪಂಥೀಯರು ಶತಾಯಗತಾಯ ಕಟ್ಟಿಹಾಕಲು ಯತ್ನಿಸುತ್ತಿರುವುದು ಭಗತ್ ಸಿಂಗ್‌ನನ್ನು. ಅಪ್ಪಟ ನಾಸ್ತಿಕನಾಗಿದ್ದ, ಕಮ್ಯುನಿಸ್ಟ್ ಸಿದ್ಧಾಂತದ, ಎಡಚಿಂತನೆಗಳ ಪ್ರತಿಪಾದಕನಾಗಿದ್ದ ಭಗತ್ ಸಿಂಗ್‌ನನ್ನು ತಮ್ಮವನಾಗಿ ಬಿಂಬಿಸಲು ಅವರು ಪಡುತ್ತಿರುವ ಪ್ರಯತ್ನ ಒಂದೆರಡಲ್ಲ. ತನ್ನ ಮಾತು– ಕೃತಿಗಳಿಂದ ಸಾರ್ವಕಾಲಿಕ ಆದರ್ಶವಾಗಿರುವ ಭಗತ್ ಸಿಂಗ್‌ನನ್ನು ತಮ್ಮ ಐಕಾನ್‌ನಂತೆ ಬಿಂಬಿಸುತ್ತಾ, ಯುವಜನರನ್ನು ಸೆಳೆಯುವ ತಂತ್ರ ಅವರದ್ದು. ಅದಕ್ಕಾಗಿ ಭಗತ್ ಸಿಂಗ್‌ನ ಕೊನೆಗಾಲದ ಘೋಷಣೆಯಾದ ‘ಇಂಕ್ವಿಲಾಬ್ ಜಿಂದಾಬಾದ್’ ಅನ್ನು ಕಸಿದು, ‘ವಂದೇ ಮಾತರಂ’ ಅನ್ನು ಅವನ ಬಾಯಲ್ಲಿ ತುರುಕಲಾಯ್ತು. ಅಷ್ಟು ಬಿಟ್ಟರೆ ಭಗತ್ ಸಿಂಗ್‌ನ ವಿಚಾರಗಳ ಕುರಿತಾಗಿ, ಆತನ ಸಿದ್ಧಾಂತಗಳ ಕುರಿತಾಗಿ ಅವರು ಚರ್ಚೆಯನ್ನೇ ನಡೆಸುವುದಿಲ್ಲ. ಏನಿದ್ದರೂ ಚಿತ್ರಪಟಗಳನ್ನು ಮುಂದಿಟ್ಟು, ಹುಸಿ ಭಾವುಕತೆಯನ್ನು ಉದ್ದೀಪಿಸಿ, ವಶೀಕರಣ ಮಾಡಿಕೊಳ್ಳುವುದಷ್ಟೆ ಅವರ ಉದ್ದೇಶ. ಹಾಗೆಂದೇ ಒಂದು ವರ್ಗ ‘ಚೆ ಗುವೆರ’ ಚಿತ್ರವುಳ್ಳ ಟಿ–ಶರ್ಟ್‌ಗಳನ್ನು ತೊಟ್ಟು ಓಡಾಡುತ್ತಿರುವಾಗ; ಈ ಜನರು ಭಗತ್ ಸಿಂಗ್‌ ಚಿತ್ರವುಳ್ಳ ಟಿ–ಶರ್ಟ್‌ ಧರಿಸಿ, ‘ದೇಸಿ ಐಕಾನ್’ ಅನ್ನು ತೊಡುವ ನಾವೇ ದೇಶಪ್ರೇಮಿಗಳು ಎಂದು ಹೇಳಿಕೊಳ್ಳತೊಡಗಿದರು.

ಇಂಥ ಉದಾಹರಣೆಗಳು ಸಾಕಷ್ಟಿವೆ. ಮೇಲೆ ಉಲ್ಲೇಖಿಸಿದ ವ್ಯಕ್ತಿಗಳನ್ನಷ್ಟೆ ಪರಿಗಣಿಸಿದರೂ ಅವರೆಲ್ಲರೂ ಜೀವಪರ– ಜನಪರ ವಿಚಾರಧಾರೆಯ ಆದರ್ಶವಾಗಬೇಕಿದ್ದವರು. ಯಾವ ಸೈದ್ಧಾಂತಿಕ ಅಭಿಪ್ರಾಯಗಳನ್ನೂ ಹೊಂದಿರದ, ಅತ್ಯಂತ ಸಾಮಾನ್ಯ ಜನರ ಸಹಜ ಐಕಾನ್ ಆಗಬೇಕಿದ್ದವರು. ಹಾಗೆಯೇ ಎಡಪಂಥೀಯರಿಗೂ ಆದರ್ಶವಾಗಬಹುದಾಗಿದ್ದವರು. ಆದರೆ ಚಿಕ್ಕಪುಟ್ಟ ಅಪವಾದಗಳನ್ನೇ ಮುಂದಿಟ್ಟುಕೊಂಡು ಎಡಪಂಥೀಯರು ಕೆಲವರನ್ನು ಅಂತರದಲ್ಲಿಟ್ಟರು. ನಮ್ಮ ದೇಸಿ ಆದರ್ಶಗಳಲ್ಲಿ ಇರಬಹುದಾದ ಲೋಪದೋಷಗಳಿಗಿಂತ (ಯಾವುದೇ ವ್ಯಕ್ತಿ ಪರಿಪೂರ್ಣರಾಗಿರಲು ಸಾಧ್ಯವಿಲ್ಲವಾಗಿ), ಹೆಚ್ಚಿನ ಲೋಪದೋಷಗಳಿರುವ ವಿದೇಶಿ ಆದರ್ಶಗಳನ್ನು ಮುಂಚೂಣಿಯಲ್ಲಿ ಇರಿಸಿಕೊಂಡಿದ್ದೇ ಬಹುಶಃ ಮುಳುವಾಯ್ತು. ಎಡಚಿಂತನೆಗಳಿಗೆ ಪರಕೀಯತೆಯ ಲೇಪ ಮೆತ್ತಿಕೊಂಡಿದ್ದೇ ಈ ಕಾರಣಕ್ಕೆ. ಬಲಪಂಥೀಯರು ಹಿಟ್ಲರ್ ಮತ್ತು ಮುಸೊಲಿನಿಯ ಚಿಂತನೆಗಳನ್ನು ಕಡ ತಂದರೂ ಅವರನ್ನು ಹೊತ್ತು ಮೆರೆಸಲಿಲ್ಲ, ಅವರ ಪಟಗಳನ್ನು ತಮ್ಮ ಕಚೇರಿಗಳಲ್ಲಿ ಹಾಕಿಕೊಳ್ಳಲಿಲ್ಲ. ಬದಲಿಗೆ ತಮ್ಮ ವಿಚಾರಧಾರೆಗೆ ಸಂಬಂಧವೇ ಇಲ್ಲದ ದೇಸಿ ನಾಯಕರನ್ನು ಮುಂದಿಟ್ಟುಕೊಂಡು, ಇವರ ಕಥೆಗಳಲ್ಲಿ ಅವರ ಮಾತುಗಳನ್ನು ತುಂಬುತ್ತಾ ಜನರನ್ನು ಆಕರ್ಷಿಸಿದರು.

ಒಂದರ್ಥದಲ್ಲಿ ಹೀಗೆ ಸಾಧಕರ ಜೀವನ ಸಂದೇಶಗಳನ್ನು ತಿರುಚುವ ಪ್ರಕ್ರಿಯೆ ಕೂಡಾ ಮೂರ್ತಿಭಂಜನೆಯೇ. ತಮ್ಮ ವಿಚಾರಧಾರೆಯಲ್ಲಿ ಸಾರ್ವಕಾಲಿಕ, ಸರ್ವಜನರ ಆದರ್ಶವಾಗಬಲ್ಲವರ ಕೊರತೆ ಇರುವುದರಿಂದಲೇ ಅವರು ನೈಜ ನಾಯಕರ ಪ್ರತಿಮೆಗಳ ಅಂತಃಸತ್ವವನ್ನು ಭಂಜಿಸಿ, ಅವರ ರೂಪದಲ್ಲಿ ತಮ್ಮ ಚಿಂತನೆಯನ್ನು ತುಂಬಿ ಜನರೆದುರು ಇಡುತ್ತಿರುವುದು. ಇದು ಪ್ರತಿಮೆಯನ್ನು ನಾಶಗೊಳಿಸುವುದಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ಗಂಭೀರ. ಹೆಚ್ಚಿನ ಆದ್ಯತೆಯಿಂದ ಚರ್ಚಿಸಿ, ಪ್ರಾಯೋಗಿಕ ಯೋಜನೆಗಳನ್ನು ರೂಪಿಸಿ, ಸರಿಪಡಿಸಬೇಕಿರುವುದು ಇದನ್ನು. ಇಲ್ಲವಾದರೆ ಈ ವರ್ಷ ಭಗತ್ ಸಿಂಗ್‌ಗೆ ಕೇಸರಿ ಟೊಪ್ಪಿ ತೊಡಿಸಿದ್ದಾರೆ; ಮುಂದಿನ ವರ್ಷ ‘ನಾನೇಕೆ ನಾಸ್ತಿಕ’ ಕೃತಿಯನ್ನು ನೇತಿ ಮಾರ್ಗದ ಶಾಸ್ತ್ರಗ್ರಂಥ ಎಂದು ಬೀದಿಬೀದಿಯಲ್ಲಿ ಹಂಚುತ್ತಾರೆ. ಆ ನಂತರ ಇಂಡಿಯಾದ ಚಿಂತಕ ವರ್ಗ, ‘ಫ್ಯಾಸಿಸ್ಟರು ಮುಟ್ಟಿದ ಪ್ರತಿಮೆ’ ಎಂದು ಮಡಿವಂತಿಕೆ ತೋರಿ, ಇತರರಂತೆ ಭಗತ್‌ನನ್ನೂ ಬಿಟ್ಟುಕೊಟ್ಟರೆ ಅಚ್ಚರಿಪಡಬೇಕಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)