ಮಂಗಳವಾರ, ಆಗಸ್ಟ್ 4, 2020
25 °C

ಮತ್ತೆ ಬಂತು ಬೆಲ್‌ ಬಾಟಂ ಪ್ಯಾಂಟ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಬಂತು ಬೆಲ್‌ ಬಾಟಂ ಪ್ಯಾಂಟ್‌!

80–90 ದಶಕದಲ್ಲಿ ಜನಪ್ರಿಯವಾಗಿದ್ದ ಬೆಲ್ ಬಾಟಂ ಪ್ಯಾಂಟ್ ಈಗ ಹೂವಿನ ವಿನ್ಯಾಸ, ಹತ್ತಿ, ಜೀನ್ಸ್‌ ಬಟ್ಟೆಗಳಲ್ಲಿ ಹೊಸ ರೂಪ ಪಡೆದುಕೊಂಡು ವಾಪಸ್ಸಾಗಿದೆ. ಆಗಿನ ಕಾಲದಲ್ಲಿ ಟ್ರೆಂಡ್‌ಸೆಟ್‌ ಮಾಡಿದ್ದ ಕೆಲ ಹಳೇ ಫ್ಯಾಷನ್‌ಗಳನ್ನು ಯುವಜನರು ಇಷ್ಟಪಡುತ್ತಿದ್ದು, ಅದನ್ನು ಮತ್ತೆ ಧರಿಸಲು ಇಷ್ಟಪಡುತ್ತಿದ್ದಾರೆ. ಅದರಲ್ಲಿ ಬೆಲ್‌ ಬಾಟಂ ಪ್ಯಾಂಟ್‌ ಸಹ ಸೇರಿದೆ. 2018ರ ಬೇಸಿಗೆ ಉಡುಪುಗಳ ಪಟ್ಟಿಯಲ್ಲಿ ಬೆಲ್‌ ಬಾಟಂ ಪ್ಯಾಂಟ್‌ಗೂ ಸ್ಥಾನವಿದೆ. ತೊಡೆ ಹತ್ತಿರ ಕೊಂಚ ಬಿಗಿದುಕೊಂಡಂತಿರುವ, ಕಾಲಿನ ಬಳಿ ಸಡಿಲ ಸಡಿಲವಾಗಿರುವ ಈ ಪ್ಯಾಂಟ್‌ಗಳು ಬೇಸಿಗೆಗೆ ಸೂಕ್ತ ಮತ್ತು ಸ್ಟೈಲಿಷ್‌ ಆಗಿವೆ ಎಂದು ಫ್ಯಾಷನ್‌ ತಜ್ಞರು ಅಭಿಪ್ರಾಯ ಪಡುತ್ತಾರೆ.

ಈ ಪ್ಯಾಂಟ್‌ಗಳು ಕ್ರಾಪ್‌ಟಾಪ್‌, ಸ್ಲೀವ್‌ಲೆಸ್‌ ಟಾಪ್‌, ಟೀಶರ್ಟ್‌ ಹೀಗೆ ಎಲ್ಲಾ ಬಗೆಯ ಟಾಪ್‌ಗಳಿಗೆ ಹೊಂದಿಕೊಳ್ಳುವುದರಿಂದ ಎಲ್ಲರಿಗೂ ಇಷ್ಟವಾಗುತ್ತವೆ.  90ರ ದಶಕದಲ್ಲಿ ಬರೀ ಖಾಲಿ ಅಥವಾ ಚೆಕ್ಸ್‌, ಉದ್ದಗೆರೆ ವಿನ್ಯಾಸದಲ್ಲಿ ದೊರೆಯುತ್ತಿದ್ದ ಈ ಪ್ಯಾಂಟ್‌ಗಳು ಈಗ ಹೂವಿನ ವಿನ್ಯಾಸ ಸೇರಿ ಬಗೆ ಬಗೆ ವಿನ್ಯಾಸದಲ್ಲಿ ಲಭ್ಯ. ಈ ಪ್ಯಾಂಟ್‌ಗಳನ್ನು ತಮಗೆ ಇಷ್ಟ ಬಂದ ಟಾಪ್ ಜೊತೆ ಸರಿ ಹೊಂದಿಸಿಕೊಂಡು ಧರಿಸಬಹುದು. ಎಲ್ಲದಕ್ಕೂ ಹೊಂದಿಕೊಳ್ಳುವುದು ಇದರ ಗುಣ. ಹೆಚ್ಚು ಅಗಲವಿಲ್ಲದ ಬೆಲ್‌ ಬಾಟಂ ಹೆಂಗಳೆಯರ ಮನ ಸೆಳೆದಿವೆ. ಪ್ಯಾಂಟ್‌ನ ತುದಿಗೆ ಲೇಸ್‌ ಇರುವ, ಹೆಚ್ಚು ಅಗಲ ಇರುವ ಬೆಲ್‌ ಪ್ಯಾಂಟ್‌ಗಳು ಕಾಲೇಜು ಯುವತಿಯರಿಗೆ ಹೇಳಿಮಾಡಿಸಿದಂತಿವೆ. ಫ್ಯಾಷನ್‌ ಪ್ರಿಯ ಯುವಕರೂ ಬೆಲ್‌ ಬಾಟಂ ಪ್ಯಾಂಟ್‌ ತೊಡಲು ಆರಂಭಿಸಿದ್ದಾರೆ.

ಕಾರ್ಪೊರೇಟ್‌ ಕಂಪೆನಿಯಲ್ಲಿ ಕೆಲಸ ಮಾಡುವ ಯುವತಿಯರು, ವಸ್ತ್ರದಲ್ಲಿ ವೈವಿಧ್ಯತೆ ಬಯಸುವವರು ಬೆಲ್‌ ಬಾಟಂ ಪ್ಯಾಂಟ್‌ಗಳನ್ನು ತೊಟ್ಟುಕೊಳ್ಳಬಹುದು. ಈ ಪ್ಯಾಂಟ್ ತೊಟ್ಟಾಗ ಹೈ ಹೀಲ್ಡ್‌ ಮತ್ತು ಸನ್‌ಗ್ಲಾಸ್‌ ತೊಟ್ಟರೆ ಮತ್ತಷ್ಟು ಸ್ಟೈಲಿಷ್‌ ಆಗಿ ಕಾಣಬಹುದು. ಟೀಶರ್ಟ್‌ ಅಥವಾ ಸರಳ ವಿನ್ಯಾಸದ ಕಾಲರ್‌ ಇಲ್ಲದ ಶರ್ಟ್‌ ಹಾಕಿದ್ದಾಗ ಉದ್ದನೆಯ ಫಂಕಿ ಮಣಿಸರಗಳು, ಹ್ಯಾಂಗಿಂಗ್ಸ್ ಧರಿಸಬಹುದು. ಉದ್ದಗಿರುವವರಿಗೆ, ದಪ್ಪಗಿರುವವರಿಗೆ ಎಲ್ಲರಿಗೂ ಇದು ಚಂದ ಕಾಣುತ್ತದೆ. ಚೂಡಿದಾರ್‌ಗಳಿಗೂ ಬೆಲ್‌ ಬಾಟಂ ಪ್ಯಾಂಟ್‌ ಹಾಕಿಕೊಳ್ಳಬಹುದು. ಆಗ ಚೂಡಿ ಟಾಪ್‌ ಮಂಡಿತನಕ ಅಷ್ಟೇ ಇರಲಿ.

ಬೆಲ್‌ಬಾಟಂ ಪ್ಯಾಂಟ್‌ಗಳನ್ನು ತೊಟ್ಟಾಗ ಸ್ಕಾರ್ಫ್‌ನಿಂದ ಕುತ್ತಿಗೆ ಭಾಗದಲ್ಲಿ ವಿಭಿನ್ನವಾಗಿ ವಿನ್ಯಾಸ ಮಾಡಿಕೊಳ್ಳಬೇಕು. ಯೂಟ್ಯೂಬ್‌ನಲ್ಲಿ ಸ್ಕಾರ್ಪ್ಸ್‌ ಹೇಗೆ ತೊಡಬೇಕು ಎಂದು ಹುಡುಕಾಡಿದರೆ ನೂರಾರು ಆಯ್ಕೆಗಳು ಸಿಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.