ಶುಕ್ರವಾರ, ಆಗಸ್ಟ್ 14, 2020
21 °C
ಜಿಲ್ಲಾ ಪಂಚಾಯ್ತಿಯ ತಂತ್ರಾಂಶದಲ್ಲಿ ಮತ್ತಷ್ಟು ಮಂದಿಯ ಹೆಸರು ಸೇರ್ಪಡೆಯಾಗುವ ನಿರೀಕ್ಷೆ

ಜಿಲ್ಲೆಯಲ್ಲಿ 14,844 ಅಂಗವಿಕಲ ಮತದಾರರು

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ 14,844 ಅಂಗವಿಕಲ ಮತದಾರರು

ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 14,844 ಮಂದಿ ಅಂಗವಿಕಲ ಮತದಾರರಿದ್ದು, ಅಂಗವಿಕಲರ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಭರದ ಸಿದ್ಧತೆ ನಡೆಸಿದೆ.ಅಂಗವಿಕಲರು ಮತ ಚಲಾವಣೆ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಮತ ಚಲಾಯಿಸಲು ಅವರಿಗೆ ತೊಂದರೆಯಾಗದಂತೆ ಈ ಬಾರಿ ಎಚ್ಚರವಹಿಸಿದೆ. ಅಂಗವಿಕಲ ಸ್ನೇಹಿಯಾಗಿ ಮತಗಟ್ಟೆಗಳನ್ನು ಮಾರ್ಪಡಿಸಲಾಗುತ್ತಿದೆ. ಓಡಾಡಲು ಸಾಧ್ಯವಾಗದ ಅಂಗವಿಕಲರನ್ನು ಮತಗಟ್ಟೆಗಳಿಗೆ ಕರೆತರಲು ಚುನಾವಣಾ ಆಯೋಗ ಮುಂದಾಗಿದೆ.ಫೆಬ್ರುವರಿ ತಿಂಗಳಿನಿಂದಲೂ ಜಿಲ್ಲೆಯಲ್ಲಿರುವ ಅಂಗವಿಕಲ ಮತದಾರರನ್ನು ಗುರುತಿಸುವ ಕಾರ್ಯವನ್ನು ಜಿಲ್ಲೆಯಾದ್ಯಂತ ನಡೆದಿದೆ. ಈ ಪ್ರಕ್ರಿಯೆ ಇದೀಗ ಅಂತಿಮ ಹಂತದಲ್ಲಿದೆ.

‘ಪ್ರತಿ ಮತಗಟ್ಟೆಗಳಲ್ಲೂ ಅಂಗವಿಕಲ ಮತದಾರರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಗ್ರಾಮೀಣ ಪುನರ್ವಸತಿ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಮಾಹಿತಿ ಪಡೆಯಲಾಗಿದೆ. ಅದನ್ನು ಜಿಲ್ಲಾಡಳಿತದ ಚುನಾವಣಾ ಶಾಖೆಯ ಗಣಕಯಂತ್ರ ತತ್ರಾಂಶಕ್ಕೆ ಅಳವಡಿಸಿದ್ದೇವೆ. ಜತೆಗೆ ಜಿಲ್ಲಾ ಪಂಚಾಯ್ತಿಯ ಗಣಕಯಂತ್ರ ತತ್ರಾಂಶಕ್ಕೆ ‘ಎಪಿಕ್ ಕಾರ್ಡ್’ ಹೊಂದಿರುವವರ ಮಾಹಿತಿಯನ್ನೂ ಅಳವಡಿಸುವ ಕಾರ್ಯ ನಡೆಯುತ್ತಿದೆ’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ತಿಳಿಸಿದ್ದಾರೆ.

ಅಂಧರು, ಮೂಗರು, ಕಿವುಡರು, ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರು... ಹೀಗೆ ವಿವಿಧ ರೀತಿಯ ವೈಕಲ್ಯ ಹೊಂದಿರುವವರನ್ನು ವಿಂಗಡಿಸಿ, ಗುರುತಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದರು. ‘ಜಿಲ್ಲೆಯಲ್ಲಿ 30 ಸಾವಿರ ಅಂಗವಿಕಲರಿದ್ದು, ಅವರಲ್ಲಿ ಮತ ಚಲಾಯಿಸಲು ಅಂದಾಜು 15 ಸಾವಿರ ಮಂದಿ ಅಂಗವಿಕಲರಿಗೆ ಮತ ಚಲಾಯಿಸುವ ಅವಕಾಶ ಸಿಕ್ಕಿದೆ. ಮತದಾನ ಮಾಡುವಂತೆ ಅವರನ್ನು ಪ್ರೇರೇಪಿಸಲಾಗುತ್ತಿದೆ. ಮದತಾನದ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ.

ಇನ್ನಷ್ಟು ಮಂದಿ ಅಂಗವಿಕಲ ಮತದಾರರು ಇರಬಹುದು ಎಂಬ ಮಾಹಿತಿಯ ಮೇರೆಗೆ ಉಳಿದವರನ್ನು ಕೂಡ ಗುರುತಿಸುವ ಕಾರ್ಯ ಮುಂದುವರಿಸಲಾಗಿದೆ. ಇದಕ್ಕಾಗಿ ನಿಗದಿಪಡಿಸಿರುವ ಕಾರ್ಯಕರ್ತರು ಪ್ರತಿಯೊಬ್ಬ ಅರ್ಹ ಅಂಗವಿಕಲರಿಗೆ ಮತದಾನದ ಗುರುತಿನ ಚೀಟಿ ದೊರಕಿಸಲು ಶ್ರಮಿಸುತ್ತಿದ್ದಾರೆ ಎಂದರು.

ಕಿವಿ ಕೇಳದವರಿಗೆ ದೃಶ್ಯ ತುಣುಕು: ‘ಕಿವಿ ಕೇಳದವರಿಗೆ ಸ್ವೀಪ್ ಸಮಿತಿಯಿಂದ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಗೋಡೆಗಳ ಮೇಲೆ ದೃಶ್ಯ ತುಣುಕುಗಳನ್ನು (sign language) ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನಿತರ ನ್ಯೂನತೆ ಇರುವವರಲ್ಲೂ ಮತದಾನದ ಜಾಗೃತಿ ಮೂಡಿಸಲು ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ಸಮಿತಿ ಅಧ್ಯಕ್ಷರೂ ಆಗಿರುವ ಸಿಇಒ ರವೀಂದ್ರ ತಿಳಿಸಿದರು.

‘ಮತಗಟ್ಟೆಗಳಲ್ಲಿ ಸ್ವಯಂ ಸೇವಕರ ನಿಯೋಜನೆ, ರ್‍ಯಾಂಪ್‌ಗಳ ನಿರ್ಮಾಣ ಸೇರಿದಂತೆ ಅಂಗವಿಕಲರಿಗೆ ಅಗತ್ಯ ಅನುಕೂಲಗಳನ್ನು ಕಲ್ಪಿಸಲು ಹಾಗೂ ಅರಿವು ಮೂಡಿಸಲು ಏ. 6ರಂದು ಗ್ರಾಮೀಣ ಪುನರ್ವಸತಿ, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಅಂಗವಿಕಲರ ಕಲ್ಯಾಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಅವರ ಕಚೇರಿ ಸಿಬ್ಬಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಅವರು.

ಮಿಂಚಿನ ಮತದಾರರ ನೋಂದಣಿ: ಏ. 8ರಂದು ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಯ ಲಿದ್ದು, ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಅವರ ಮುಂದೆಯೇ ಓದಲಾಗುವುದು. ಬಿಎಲ್ಒ, ಪಿಡಿಒ ಹಾಗೂ ಈಗಾಗಲೇ ರಚಿಸಲಾಗಿರುವ ಸಮಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಏ. 14ರವರೆಗೂ ಮತದಾರರ ನೋಂದಣಿಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಹೊಸ ಸೇರ್ಪಡೆಗೆ ನಮೂನೆ 6ರ ಅರ್ಜಿಯನ್ನು ನೀಡಲಾಗುವುದು. ಒಂದು ಭಾವಚಿತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಯಾವುದಾದರೂ ನಿವಾಸಿ ದೃಢೀಕರಣ ಪತ್ರ ನೀಡಬೇಕು. ಸ್ಥಳೀಯ ನಿವಾಸಿ ಎಂಬ ಅಧಿಕೃತ ಮಾಹಿತಿ ನೀಡಿ, ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪಿಂಕ್‌ ಮತಗಟ್ಟೆ’

‘ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವ ಮತಗಟ್ಟೆಗಳಲ್ಲಿ ಮಹಿಳಾ ಪೊಲೀಸ್ ಪೇದೆಯನ್ನು ನೇಮಿಸಿ ‘ಪಿಂಕ್ ಮತಗಟ್ಟೆ’ಯನ್ನಾಗಿ ಬದಲಾಯಿಸಲಾಗುವುದು’ ಎಂದು ರವೀಂದ್ರ ತಿಳಿಸಿದ್ದಾರೆ.ಜಿಲ್ಲಾ ಚುನಾವಣಾಧಿಕಾರಿ ಗುರುತಿಸುವಂಥ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಗೆ ‘ಪಿಂಕ್’ ಬಣ್ಣ ಬಳಿಸಲಾಗುವುದು. ಇದನ್ನೇ ಪಿಂಕ್ ಮತಗಟ್ಟೆ ಎಂಬುದು ಕರೆಯಲಾಗುವುದು. ಅಂಗವಿಕಲರು ಹೆಚ್ಚು ಇರುವ ಮತಗಟ್ಟೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಮಹಿಳಾ ಅಧಿಕಾರಿಗಳಿಗೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗವಿಕಲರು ಮತದಾನ ಮಾಡಲು ಸ್ಫೂರ್ತಿಯಾಗುವಂತೆ ಮಾಡುವ ಉದ್ದೇಶ ಪಿಂಕ್ ಮತಗಟ್ಟೆಯದ್ದಾಗಿದೆ ಎನ್ನುತ್ತಾರೆ ಅವರು.

**

ಅಂಗವಿಕಲರು ಸುಗಮವಾಗಿ ಮತ ಚಲಾಯಿಸಲು ಅನುಕೂಲಕರ ರೀತಿಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು –ಪಿ.ಎನ್. ರವೀಂದ್ರ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ.

**

ನಡೆಯಲು ಸಾಧ್ಯವಾಗದ ಅಂಗವಿಕಲರನ್ನು ಅವರ ಮನೆಯಿಂದ ಕರೆತರಲು ಉಚಿತ ವಾಹನ ವ್ಯವಸ್ಥೆಯನ್ನು ಚುನಾವಣಾ ಆಯೋಗವೇ ಮಾಡಲಿದೆ – ವೈಶಾಲಿ, ಅಂಗವಿಕಲರ ಕಲ್ಯಾಣಾಧಿಕಾರಿ.

**

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.