ದಶಕದ ಸಂಭ್ರಮ ಕಂಡ ಜ್ಯೋತಿ

ಗುರುವಾರ , ಮಾರ್ಚ್ 21, 2019
32 °C

ದಶಕದ ಸಂಭ್ರಮ ಕಂಡ ಜ್ಯೋತಿ

Published:
Updated:
ದಶಕದ ಸಂಭ್ರಮ ಕಂಡ ಜ್ಯೋತಿ

ಮುಗ್ಧ ನೋಟದಲ್ಲೇ ಎಲ್ಲರ ಮನಗೆದ್ದವರು ನಟಿ ಜ್ಯೋತಿ ರೈ. ಹಲವು ವಾಹಿನಿಗಳಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಉದಯ ಟಿ.ವಿ.ಯ ‘ಜೋ ಜೋ ಲಾಲಿ’ ಧಾರಾವಾಹಿಯ ರುಕ್ಮಿಣಿ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿದೆ.

ಕಳೆದ ಹತ್ತು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅವರು, ಸಮ ಪ‍್ರಮಾಣದಲ್ಲಿ ಯಶಸ್ಸು ಕಂಡಿದ್ದಾರೆ. ಕಿರುತೆರೆ ನಿರ್ದೇಶಕ ವಿನು ಬಳಂಜ ಅವರ ಸಂಬಂಧಿಯೂ ಹೌದು. ಅವರ ಸಲಹೆ ಮೇರೆಗೆ ದಶಕದ ಹಿಂದೆ ಈಟಿವಿ ಕನ್ನಡದಲ್ಲಿ ಪ್ರಸಾರವಾದ ‘ಬಂದೇ ಬರುತಾವ ಕಾಲ’ ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶಿಸಿದರು.

ಅಲ್ಲಿಂದ ಆರಂಭವಾದ ಅವರ ಪಯಣ ಜೀ ಟಿವಿಯ ‘ಜೋಗುಳ’, ‘ಗೆಜ್ಜೆಪೂಜೆ’, ‘ಲವಲವಿಕೆ’, ಉದಯ ಟಿವಿಯ ‘ಪ್ರೇರಣ’, ‘ರಥಸಪ್ತಮಿ’, ‘ಅನುರಾಗ ಸಂಗಮ’, ಕನ್ನಡ ಕಲರ್ಸ್‌ನ ‘ಕಿನ್ನರಿ’, ತೆಲುಗು ಜೀ ಟಿ.ವಿ.ಯ ‘ಕನ್ಯಾದಾನಂ’ ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಅವರಿಗಿದೆ. ಬೆಳ್ಳಿತೆರೆಯಲ್ಲಿ ‘ಸುಂದರಾಂಗ ಜಾಣ’, ‘ಫೇಸ್‌ಬುಕ್‌’, ‘ಗಂಧರ್ವ’, ‘ದಶರಥ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ಮಡಿಕೇರಿಯಲ್ಲಿ ಓದುವಾಗ ಮುಗ್ಧೆಯಾಗಿದ್ದೆ. ಪುತ್ತೂರಿನಲ್ಲಿ ಪದವಿ ಕಾಲೇಜಿಗೆ ಸೇರಿದ ಮೇಲೆ ಕೊಂಚ ಬೋಲ್ಡ್‌ ಆದೆ. ಧಾರಾವಾಹಿಗೆ ಬಂದ ಮೇಲೆ ಬಿಂಕ, ಬಿಗುಮಾನ ದೂರ ಮಾಡಿ ಬದಲಾವಣೆಗೆ ಒಗ್ಗಿಕೊಂಡೆ’ ಎನ್ನುತ್ತಾರೆ ಜ್ಯೋತಿ. ಬೆಂಗಳೂರಿಗೆ ಬಂದ ಮೇಲೆ ಮಡಿಕೇರಿ, ಪುತ್ತೂರಿನ ದಟ್ಟಹಸಿರಿನ ಪ್ರಫುಲ್ಲ ವಾತಾವರಣದ ನೆನಪು ಪದೇ ಪದೇ ಕಾಡುತ್ತಿದೆ ಎನ್ನುವ ಬೇಸರ ಅವರದ್ದು.

ಅಲ್ಲಿನ ಪರಿಸರದಲ್ಲಿ ಸಿಗುತ್ತಿದ್ದ ವಸ್ತುಗಳನ್ನೇ ಆಟಿಕೆ ಮಾಡಿಕೊಂಡು ಆಟವಾಡಿದ ಬಾಲ್ಯದ ಸವಿನೆನಪು, ಹೈಸ್ಕೂಲ್ ಹಾಗೂ ಕಾಲೇಜಿನಲ್ಲಿ ಇದ್ದಾಗ ಗೆಳೆಯ, ಗೆಳತಿಯರಿಗೆ ಬರೆಯುತ್ತಿದ್ದ ಕ್ಷೇಮಕುಶಲ ಸಮಾಚಾರದ ಕಾಗದ ಪತ್ರಗಳು, ಈ ಹಿಂದೆ ದೂರದರ್ಶನದಲ್ಲಿ ‍ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಭಾನುವಾರದ ಸಿನಿಮಾ ನೋಡಲು ಟಿ.ವಿ. ಇದ್ದ ಮನೆಗೆ ಸ್ನೇಹಿತೆಯರ ಪಟಾಲಂನೊಂದಿಗೆ ದಾಂಗುಡಿ ಇಡುತ್ತಿದ್ದ ಸನ್ನಿವೇಶ, ಕುಂಟೆಬಿಲ್ಲೆ ಆಟ ಹೀಗೆ ತನ್ನೂರಿನ ನೆನಪುಗಳ ಮೆರವಣಿಗೆಯಲ್ಲಿ ಕೆಲ ಸಮಯ ತೇಲಿ ಹೋದರು.‌

ಕಾಲೇಜಿನಲ್ಲಿ ಇದ್ದಾಗ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂಗೀತ, ನೃತ್ಯದಲ್ಲಿ ಛಾಪು ಮೂಡಿಸಿದ ಪ್ರತಿಭಾವಂತೆಯಾದ ಅವರು, ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿ ಗಳಿಸಿದ ಪ್ರೀತಿಯ ಪರಿಯನ್ನು ಅಭಿಮಾನದಿಂದ ಹಂಚಿಕೊಳ್ಳುತ್ತಾರೆ.

ಕಿರುತೆರೆಯಲ್ಲಿ ನೆಲೆ ಕಂಡ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಪತಿ, ಮಗನ ಸಖ್ಯದ ಚಿಕ್ಕಸಂಸಾರ ಅವರದ್ದು. ಪತಿ ವ್ಯಾಪಾರಸ್ಥರಾಗಿದ್ದು, ಅವರ ಬೆಂಬಲದಿಂದಾಗಿಯೇ ಈ ಕ್ಷೇತ್ರದಲ್ಲಿ ಇನ್ನೂ ಮುಂದುವರಿಯುತ್ತಿದ್ದೇನೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry