ಗುರುವಾರ , ಜುಲೈ 16, 2020
22 °C

ಚುನಾವಣಾ ಜಾಗೃತಿಗೆ ಸಾಂಸ್ಕೃತಿಕ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ಜಾಗೃತಿಗೆ ಸಾಂಸ್ಕೃತಿಕ ಸ್ಪರ್ಶ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜನ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲು ಚುನಾವಣಾ ಆಯೋಗವು ರಾಜ್ಯದ ಸಂಸ್ಕೃತಿ ಬಿಂಬಿಸುವ ಕಲಾ ಪ್ರಕಾರಗಳ ಮೊರೆ ಹೋಗಿದೆ.

ಇದರ ಮೊದಲ ಹೆಜ್ಜೆಯಾಗಿ ಆಯೋಗವು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಕಲಾ ಪ್ರದರ್ಶನವನ್ನು ನಗರದ ಚಿತ್ರಕಲಾ ಪರಿಷತ್‌ ಪ್ರಾಂಗಣದಲ್ಲಿ ಗುರುವಾರ ಏರ್ಪಡಿಸಿತ್ತು. ಚಿತ್ರಕಲಾ ಪರಿಷತ್‌ನ ಫೈನ್‌ಆರ್ಟ್ಸ್‌ ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ರಚಿಸಿದ್ದ 100ಕ್ಕೂ ಅಧಿಕ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಚುನಾವಣೆ ಪ್ರಕ್ರಿಯೆಯ ಕ್ಲಿಷ್ಟತೆ, ಆಮಿಷಕ್ಕೊಳಗಾಗದೇ ಮತ ಚಲಾಯಿಸುವ ಅಗತ್ಯ, ನೀತಿಸಂಹಿತೆಯ ಪಾವಿತ್ರ್ಯ ಕುರಿತು ಅವರು ವ್ಯಂಗ್ಯಚಿತ್ರಗಳ ಮೂಲಕ ಸಂದೇಶ ಸಾರಿದ್ದಾರೆ.

‘ಮತದಾನದ ಯಶಸ್ಸಿನಲ್ಲಿ ಕೈಜೋಡಿಸುವ ಅವಕಾಶ ಸಿಕ್ಕಿದ್ದು ಖುಷಿಕೊಟ್ಟಿದೆ’ ಎಂದು ಕಲಾ ವಿದ್ಯಾರ್ಥಿ ಲಕ್ಷ್ಮಣ್‌ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು. ಅರ್ಹ ನಾಯಕರ ಆಯ್ಕೆ ಮುಂದಿನ ಪೀಳಿಗೆಯ ಭವಿಷ್ಯವನ್ನೇ ರೂಪಿಸುತ್ತದೆ ಎಂಬ ಸಂದೇಶ ಸಾರುವ ಕಲಾಕೃತಿಯನ್ನು ಅವರು ರಚಿಸಿದ್ದರು.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್, ಚುನಾವಣಾ ಆಯುಕ್ತರಾದ ಸುನೀಲ್ ಅರೋರ, ಅಶೋಕ್ ಲಾವಾಶ ಹಾಗೂ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಅವರ ವ್ಯಂಗ್ಯಚಿತ್ರಗಳನ್ನೂ ವಿದ್ಯಾರ್ಥಿಗಳು ರಚಿಸಿದ್ದು, ಅವುಗಳನ್ನೂ ಪ್ರದರ್ಶನದಲ್ಲಿ ಇಡಲಾಗಿದೆ.

ಛಾಯಾಚಿತ್ರಗಳ ಪ್ರದರ್ಶನ: ದೇಶದ ಮೊದಲ ಚುನಾವಣೆಯಿಂದ ಇತ್ತೀಚಿನ ಚುನಾವಣೆಗಳವರೆಗಿನ ಬೆಳವಣಿಗೆಗಳನ್ನು ಕಟ್ಟಿಕೊಡುವ ಛಾಯಾ

ಚಿತ್ರಗಳ ಪ್ರದರ್ಶನವನ್ನೂ ಇಲ್ಲಿ ಏರ್ಪಡಿಸಲಾಗಿದೆ. 1962ರ ಚುನಾವಣೆಯಲ್ಲಿ ಅಧಿಕಾರಿಗಳು ಮತ ಎಣಿಕೆಗೆ ಸಿದ್ಧತೆ ನಡೆಸಿದ್ದ ದೃಶ್ಯ, ಮತದಾನಕ್ಕೆ ಮುನ್ನಾ ದಿನ ಮತಪೆಟ್ಟಿಗೆಗಳನ್ನು ಮತಗಟ್ಟೆಗೆ ಕೊಂಡೊಯ್ಯಲು ನೂರಾರು ಬಸ್‌ಗಳು ಮೈದಾನದಲ್ಲಿ ಸಾಲಾಗಿ ನಿಂತ ದೃಶ್ಯ, ವಿದ್ಯುನ್ಮಾನ ಮತಯಂತ್ರವನ್ನು ರಾಜ್ಯದಲ್ಲಿ ಮೊದಲ ಬಾರಿ ಬಳಸಿದ್ದು, ದಿವಂಗತ ರಾಮಕೃಷ್ಣ ಹೆಗಡೆ, ದಿವಂಗತ ವೀರೇಂದ್ರ ಪಾಟೀಲ ಅವರು ಮತದಾನದಲ್ಲಿ ಭಾಗವಹಿಸಿದಂತಹ ಅಪರೂಪದ ಛಾಯಚಿತ್ರಗಳನ್ನು ಇಲ್ಲಿವೆ.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ಈ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ ಹಾಗೂ ಯಕ್ಷಗಾನ ವೇಷಗಳು ಈ ಕಾರ್ಯಕ್ರಮ ರಂಗೇರುವಂತೆ ಮಾಡಿದವು.  ಇವಿಎಂ ಹಾಗೂ ವಿವಿಪ್ಯಾಟ್‌ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಮೂರು ಮಳಿಗೆ

ತೆರೆಯಲಾಗಿದೆ. ಮತ ಚಲಾಯಿಸುವ ಬಗ್ಗೆ ಹಾಗೂ ಅದು ತಾವು ಬಯಸಿದ ಅಭ್ಯರ್ಥಿಗೇ ಚಲಾವಣೆ ಆಗಿದೆ ಎಂಬುದನ್ನು ಖಾತರಿ ಪಡಿಸಿ

ಕೊಳ್ಳುವ ಬಗ್ಗೆ ಇಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ.

ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವುದು ಹೇಗೆ, ಚುನಾವಣಾ ಪ್ರಕ್ರಿಯೆ ಹೇಗೆ ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂಬುದನ್ನು ತೋರಿಸುವ ಪೋಸ್ಟರ್‌ಗಳೂ ಪ್ರದರ್ಶನದಲ್ಲಿವೆ. ನಗರದ ಎಂಟು ವಲಯಗಳಲ್ಲಿ ಮತದಾನದ ಜಾಗೃತಿ ಮೂಡಿಸಲು 8 ವಾಹನಗಳು ಸಜ್ಜಾಗಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅಗತ್ಯವಿರುವ ಅರ್ಜಿ ನಮೂನೆಗಳೂ ಈ ವಾಹನಗಳಲ್ಲಿ ಲಭ್ಯ. ಇವುಗಳಿಗೂ ಚಾಲನೆ ನೀಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.