ಸೋಮವಾರ, ಜೂಲೈ 13, 2020
23 °C

ಪಾತಾಳಗರಡಿ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಪಾತಾಳಗರಡಿ

ಎಂಟಗಡಗಡಿ ಬಾವಿ ಸುತ್ತಲೂ ದಿನಾ ಮುಂಜಾನೆ ಗಡಿಬಿಡಿ ಇದ್ದಂಗ ಅವತ್ತೂ ಗಡಗಡಿಯ ಗಡಗಡ ಸದ್ದು. ರೊಯ್ಯನೆ ಕೊಡಗಳನ್ನು ಬಾವಿಗೆ ಇಳಿಸುವ ಭರಾಟೆ. ಕೊಡಗಳಿಗೆ ನೀರು ತುಂಬುವ ಬುಳು ಬುಳು ಸದ್ದು. ಹೆಂಗಸರ ಮಾತಿನ ಗದ್ದಲ. ನೀರು ಸೇದುವಾಗಿನ ಬಳೆಗಳ ಸದ್ದಿನ ನಡುವೆ ದುಡುಂ ಎನ್ನುವ ದೊಡ್ಡ ಸದ್ದು ಕೇಳಿಸಿತು. ‘ಯಾರಾದರೂ ಬಾವಿಗೆ ಬಿದ್ದರೇ’ ಎಂದೇ ಕೆಲವರು ಹೌಹಾರಿದರು. ಅಷ್ಟರಾಗ್‌, ‘ಯಪ್ಪೋ, ಹಗ್ಗ ತುಂಡಾಗಿ ನನ್ನ ಕೊಡಾ ಭಾವ್ಯಾಗ್‌ ಬಿತ್ತಲ್ಲೋ. ಯಾರರ ತಗ್ದುಕೊಡ್ರೊ’ ಎಂದು ಗಂಗವ್ವ ಗೋಳಿಡತೊಡಗಿದ್ದಳು.

‘ಏಯ್‌, ಆ ಪ್ರಭ್ಯಾನ ಮನ್ಯಾಗ್‌ ಪಾತಾಳಗರಡಿ ಅದ ನೋಡ್ರೋ, ತಗೊಂಡ್‌ ಬರಾಕ್‌ ಹೇಳ್‌ ಅಂವ್ಗ’ ಎಂದು ಯಾರೊ ಪುಕ್ಕಟೆ ಸಲಹಾ ಕೊಟ್ರು. ಗದ್ದಲ ಕೇಳಿ ಸಮೀಪದ ಮನೆಯಿಂದ ಹೆಗಳಿಗೆ ಪಾತಾಳಗರಡಿ ಹಾಕ್ಕೊಂಡ್‌s ಹೊರಬಂದ ಪ್ರಭ್ಯಾ, ನನ್ನ ಬಳಿ ಬಂದು ‘ಏಯ್‌, ಸ್ವಲ್ಪ ಗಡಗಡಿ ಬಿಟ್ಟಕೊಡು’ ಅಂದ. ‘ಅಷ್ಟ ಗಡಗಡಿ ಅದಾವ್‌, ನನ್ನಹತ್ರ ಬಂದ್‌ ಗಡಿಬಿಡಿ ಮಾಡಾಕತ್ತಿ. ನೀರ್ ಸೇದಾಕತ್ತಿದ್ದು ನಿನ್ನ ಕಣ್ಣಿಗೆ ಕಾಣ್ಸುದಿಲ್ಲೇನ್‌. ಬಿಂದಿಗಿ ತಗದ್‌ ಕೊಟ್‌ಮ್ಯಾಲೆ, ಆ ಬಂಡಲ್‌ ರಾಜಾಗೂ ಸ್ವಲ್ಪ ಪಾತಾಳಗರಡಿ ಕೊಟ್ಟು ಬಾ. ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರ ಕೊಲೆಗಡುಕರು ಪಾತಾಳದಾಗ್‌ ಇದ್ರೂ ಬಿಡುವುದಿಲ್ಲ’ ಅಂತ ಬಡಾಯಿ ಕೊಚ್ಚಿಕೊಂಡಾರಲ್ಲ. ಅವರಿಗೂ ಇದು ಉಪಯೋಗಕ್ಕ ಬರ್ತಿರಬೇಕ್‌ ನೋಡ್‌’ ಎಂದು ಛೇಡಿಸಿದೆ.

‘ಏಯ್‌, ಪಾತಾಳಗರಡಿ ಅಲ್ಲಲೇ, ಮೋದಿ– ಶಾ ಜೋಡಿಗೆ ಆಕಾಶ್‌ಗರಡಿನೂ ಕೊಡಬೇಕು. ಬ್ಯಾಂಕ್‌ಗಳಿಗೆ ನಾಮಾ ಹಾಕಿ ಆಕಾಶ್‌ ಮಾರ್ಗದಾಗ್‌ ಭುರ‍್ರಂತ್‌ ಓಡಿ ಹೋದವರ್ನಹಿಡಕೊಂಡು ಬರ್ತೀವಿ ಅಂತ ಹೇಳು ಧೈರ್ಯ ಇಲ್ಲದ ಮುಖೇಡಿಗಳs ಇಂತಹ ಬಂಡಲ್‌ ಹೇಳ್ಕಿ ಕೊಡ್ತಾವ್‌’.

‘ಹಳೆ– ಹೊಸ ಆಯಾರಾಂ ಗಯಾರಾಂ ಮಿಕಗಳನ್ನ ಹಿಡ್ದ್‌ ತರಾಕ್ಕು ಪಾತಾಳಗರಡಿ ಉಪಯೋಗಕ್ಕ ಬರ್ತದಲೆ. ಚುನಾವಣೆ ಟೈಮ್ನಾಗ್‌ ಅದ್ಕೂ ಭಾಳ್‌ ಡಿಮ್ಯಾಂಡ್‌ ಅದಲೇ’– ಬಾವಿ ಕಟ್ಟಿ ಮ್ಯಾಲ್‌ ಖಾಲಿ ಕೊಡ ಹಿಡಕೊಂಡ್‌ ಕುಂತಿದ್ದ ಸಿದ್ಯಾ ಗೊಣಗಿದ.

‘ಪಕ್ಷದಿಂದ ಪಕ್ಷಕ್ಕೆ ಹಾರುವ ಕಪ್ಪೆಗಳಿಗೆ ಗಾಳ ಹಾಕಾಕ್‌ ಎಲ್ಲಾ ಪಾರ್ಟಿಗೋಳು ಆಕಾಶ್‌– ನೆಲ ಒಂದ್‌ ಮಾಡಾಕತ್ತಾವ್‌. ಗಣಿ ಜೈಲು ಹಕ್ಕಿ ಹಿಡ್ಯಾಕ್‌ ಕೂಡ ಪಾತಾಳ ಗರಡಿನ ಬಳಸಿರಬೇಕ್‌ ನೋಡ್‌. ಗಾಳಿ ಬಂದಾಗ ತೂರಿಕೊಳ್ಳುವ ಜೊಳ್ಳ ಕಾಳಿನ, ಹಣದ ಥೈಲಿಯ ಆಸೆ ತೋರಿಸಿ ‘ನೈಸ್‌’ ಆಗಿ ಪಕ್ಷದ ಒಳಗ್‌ ಬರಾಕ್‌ ಕೆಲವರು ಪಾತಾಳಗರಡಿನs ಬಳಸಿರಬೇಕ್‌ ನೋಡ್‌’.

‘ಅಷ್ಟೇ ಅಲ್ಲಲೇ. ಲೋಕಸಭಾ, ರಾಜ್ಯಸಭಾ ಬಾವಿಗೆ ನುಗ್ಗಿ ದಾಂದಲೆ ಮಾಡುತ್ತ ಕಲಾಪ ನುಂಗಿ ಹಾಕಿದ ಸಂಸದರನ್ನೂ ಎಳೆದು ತಂದ್‌ ಅವರವರ ಖುರ್ಚಿಗೆ ಕುಂದ್ರಸಾಕ್ಕು ಇದನ್ನ ಬಳಸಬಹುದು ನೋಡ್‌’ ಎಂದೆ.

‘ಆಕಾಶ್‌ಗರಡಿ ಕೊಟ್ರ, ವಿದೇಶಕ್ಕೆ ಓಡಿಹೋದ ವಂಚಕರನ್ನ ಹಿಡಿದು ತರಾಕ್ ಆಗ್ತದೇನ್‌’ ಎಂದು ಪಕ್ಯಾ ಪ್ರಶ್ನಿಸಿದ.

‘ಹಿಂದೊಮ್ಮೆ ಸೋನಿಯಾ ಅವರಿಂದ ‘ಸಾವಿನ ವ್ಯಾಪಾರಿ’ ಎಂದು ಕರೆಯಿಸಿಕೊಂಡಿದ್ದ ಮೋದಿ ಭಾಯ್‌ರಿಂದ ಅದೆಲ್ಲ ಸಾಧ್ಯವಿಲ್ಲ ಬಿಡಲೆ. ‘ನಾನೂ ಸೇರಿದಂತೆ ಗುಜರಾತಿಗಳ ರಕ್ತದಲ್ಲಿ ಹಣ, ವ್ಯಾಪಾರಿ ಗುಣ ಹರೀತದ’ ಎಂದು ಮೋದಿ ಭಾಯಿ ಜಪಾನ್‌ನ್ಯಾಗ್‌ ಬಡಾಯಿಕೊಚ್ಚಿಕೊಂಡಿದ್ದು ನೆನಪೈತಿ ಏನ್‌ ನಿಂಗ್’ ಎಂದು ಪ್ರಭ್ಯಾನ ಗಮನ ಸೆಳೆದೆ.

‘ಅಷ್ಟೇ ಅಲ್ಲಲೆ, ನೀರವ್‌ ಮೋದಿ, ಲಲಿತ್‌ ಮೋದಿ ರಕ್ತದಾಗ ವ್ಯಾಪಾರಿ ಗುಣದಾಗ ಬ್ಯಾಂಕ್‌ಗಳಿಗೆ ಟೊಪಿಗಿ ಹಾಕುವ ವಂಚನೆ ಗುಣವೂ ಇರೋದನ್ನ ಮರಿಬ್ಯಾಡಲೇ. ಚೌಕಿದಾರ ಮನಸ್ಸು ಮಾಡಿದ್ರ ಪಾತಾಳದಾಗ್‌ ಇದ್ರೂ ಅವರನ್ನ ಹಿಡಿದು ತರತಿದ್ದ. ಇವಂದೂ ಬರೀ ಉತ್ತರಕುಮಾರನ ಪೌರುಷನ ಆಗೇದ್‌ ಬಿಡು’ ಎಂದು ಮೋನ್ಯಾ ಹಂಗಿಸಿದ.

‘ಮುಂಜಾನೆ ಎದ್ದ ಕೂಡ್ಲೆ ನಮ್ಮ ಪಾರ್ಟಿ ಹೆಸರ್‌ ತಗೊತಿರಲ್ಲ. ಅವ್ರ– ಇವ್ರ ಹೆಸ್ರ ಹೇಳದಿದ್ರ, ಅವ್ರನ್ನ ಬೈಕೊಳ್‌ದಿದ್ರ ನಿಮ್ಗ ತಿಂದ್ ಅನ್ನ ಕರಗುದಿಲ್ಲೇನ್’ ಎಂದು ಪ್ರಭ್ಯಾ ಸಿಟ್‌ ಮಾಡ್ಕೊಂಡ.

‘ನಾವ್‌ ತಿಂದ್‌ ಅನ್ನ ಕರಗೂದು ಒಂದ್‌ ಕಡಿ ಇರ್ಲಿ. ಊಟ ಮಾಡಿ ಯಡವಟ್ಟು ಮಾಡ್ಕೊಳ್ಳೊದು ಐತಲ್ಲ. ಆ ಫಜೀತಿ ನಮ್ಮ ವೈರಿಗೂ ಬರಬಾರ‍್ದು ಬಿಡು’ ಎಂದೆ.

‘ನೀತಿ ಸಂಹಿತೆ ಹೆಸರ್‌ನ್ಯಾಗ್ ಬಾಡೂಟಕ್ಕೂ ಕಲ್‌ ಹಾಕ್ತಾರ್‌, ಪಂಕ್ತಿಗೆ ಕುಂತವರನ್ನ ಎಬ್ಬಿಸ್ತಾರಲ್ಲ, ಛೇ ಎಂಥಾ ಅನ್ಯಾಯ’ ಎಂದು

ಬಸ್ಯಾ ಬಾಡೂಟ ಬಾಯಿತಪ್ಪಿದ ಬ್ಯಾಸರದಾಗ್ ಬಾಯಲ್ಲಿ ನೀರೂರಿಸಿಕೊಂಡೇ ಬಾಯಿಗೆ ಬಂದ್ಹಂಗ್‌ ಬೈದ.

‘ಏಯ್, ಹಂಗೆಲ್ಲ ಬೈಯ್ಕೊಬೇಡ. ಲಕ್ಷ್ಮಿ ಕುಕ್ಕರ್‌ನ್ಯಾಗ್ ಬಿಸಿ ಬಿಸಿ ಪಲಾವ್‌– ಗಿಲಾವ್‌ ಮಾಡ್ಕೊಂಡು ತಿನ್ನಾಕ್‌ ನಾವ್‌ ಬಿಲ್‌ಕುಲ್‌ ಬ್ಯಾಡ್‌ ಅನ್ನುದಿಲ್ಲ’ ಎಂದು ಪ್ರಭ್ಯಾ ತಿರುಗೇಟ್‌ ಕೊಟ್ಟ.

‘ಎಲ್ಲೆಲ್ಲೋ, ಯಾರ‍್ದರ ಮನ್ಯಾಗ್‌ ತಿಂದು ಯಡವಟ್‌ ಮಾಡ್ಕೊ ಬ್ಯಾಡಲೊ ಭಾಡ್ಕೊ. ಹೊಟ್ಟಿ ಕೆಟ್ರ ಡಾಕ್ಟ್ರು ಔಷ್ದಿ ಕೊಡ್ತಾರ್‌. ನಾಲ್ಗಿ ಕೈಕೊಟ್ರ ನಾಡಿನವರೆಲ್ಲ ಘೊಳ್‌ ಅಂತ್‌ ನಕ್ತಾರ್‌. ಈಶ್ವರಪ್ನೋರು ಒಂದೇ ಒಂದ್‌ ಊಟ ಹಾಕಿ ಯಡಿಯೂರಪ್ನೋರ್‌ ವಿರುದ್ಧ ದೊಡ್ಡ ಸೇಡು ತೀರಿಸಿಕೊಂಡಿದ್ದು ನೆನಪ್‌ ಮಾಡ್ಕೊ’ ಎಂದೆ.

‘ಭ್ರಷ್ಟಾಚಾರದ ಸ್ಪರ್ಧೆಯಲ್ಲಿ ಯಡಿಯೂರಪ್ಪ ಸರ್ಕಾರ ಒಂದನೇ ನಂಬರ್‌ದಾಗ್‌ ಇರ್ತದ ಅಂತ ಅಮಿ(ಥ್‌)ತ್‌ ಶಾ ನಾಲಿಗಿ ಖರೆ ಹೇಳಾಕ್‌, ಈಶ್ವರಪ್ನೋರು ಹಿಂದಿನ ರಾತ್ರಿ ತಮ್ಮ ಮನ್ಯಾಗಿನ ಊಟ ಹಾಕಿದ್ದ ಕಾರಣಾನ ಇರಬೇಕಪ್ಪ’ ಎಂದು ಅನುಮಾನ ವ್ಯಕ್ತಪಡಿಸಿದೆ.

‘ಇರಬೇಕು ಬಿಡಪ್ಪ. ನೀ ಹೇಳೂದು ಖರೆ ಐತಿ’ ಅಂತ ಬಾವಿ ಕಟ್ಟಿ ಮ್ಯಾಲ್‌ ಕುಂತವರಲ್ಲಿ ಕೆಲವ್ರು ನನ್ನ ಮಾತಿಗೆ ದನಿಗೂಡಿಸಿದ್ರು.

ಇಷ್ಟೊತ್ತು ಆತಾಳ್‌ ಪಾತಾಳ್‌ ಗರಡಿ, ಬಾಡೂಟದ ಬಿಸಿ ಬಿಸಿ ಚರ್ಚೆ ನಡೆಯುವ ಹೊತ್ತಿಗೆ ಪ್ರಭ್ಯಾ, ಪಾತಾಳಗರಡಿ ಸಹಾಯದಿಂದ ಗಂಗವ್ವಳ ಬಿಂದಿಗಿ ಹೊರ ತೆಗೆದಿದ್ದ.

‘ಕೊಡಕ್ಕ ತೂತು ಬಿದ್ದದs. ಇದ್ರಾಗ್‌ ಹೆಂಗ್‌ ನೀರ ವೈಯ್ತಿ’ ಎಂದು ಪ್ರಭ್ಯಾ ಪ್ರಶ್ನಿಸಿದ.

‘ಏಯ್‌ ಬಿಕನಾಸಿ, ಚುನಾವಣಾ ಆಯೋಗದ ಎಲೆಕ್ಷನ್‌ ಮಾಹಿತಿ, ಹುಡುಗ್ರ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ತುಡುಗ್ರ ಮುಂದ್‌, ನನ್ನ ಮಣ್ಣಿನ ಕೊಡಾ ಸೋರೂದು ದೊಡ್ಡದಲ್ಲ ಬಿಡು. ನಾನೊಬ್ಬ ಚೌಕಿದಾರ ಎಂದು ರೇಡಿಯೊದಾಗ ದೊಡ್ಡದಾಗಿ ಮಾತಾಡ್ತಾನಲ್ಲ, ಈಗ ಬಾಯಿಗೆ ಬೀಗಾ ಹಾಕ್ಕೊಂಡಾನ ಯಾಕಂತ್‌ ಅವ್ನಿಗೆ ಕೇಳ್‌ ಹೋಗ್‌’ ಎಂದು ಸಿಟ್ಟಿನಿಂದ ಬೈಯ್ಯುತ್ತಲೆ, ‘ನಿನ್ನ ಹೆಂಡ್ತಿಗೆ ಪುಣ್ಯ ಬರಲಿ’ ಎಂದು ಗಂಗವ್ವ ಲಟಿಕೆ ಮುರಿದು ಹರಸಲು ಮರೆಯಲಿಲ್ಲ.

‘ಅಲ್ಲಬೇ, ಬಿಂದಿಗಿ ತಗ್ದು ಕೊಟ್ಟಾಂವ ನಾ, ಆಕಿಗ್ಯಾಕ್‌ ಪುಣ್ಯ ಬರ್ಬೇಕು. ನಂಗs ಬರ್ಬೇಕಲ್ಲ’ ಅಂದ ಪ್ರಭ್ಯಾ.

‘ಆಕಿ ನಿನ್ನ ಅರ್ಧಾಂಗಿ ಅಲ್ಲೇನ್‌. ಆಕಿಗ್‌ ಬರುವ ಪುಣ್ಯದಾಗ್‌ ನಿಂಗೂ ಪಾಲ್‌ ಅದ ಏಳ್‌. ಬ್ಯಾಸ್ರಾ ಮಾಡ್ಕೊಬ್ಯಾಡ್‌’ ಎಂದು ಹೇಳಿದ ಗಂಗವ್ವ, ಶಿಶುನಾಳ ಶರೀಫ್‌ ಅಜ್ಜನ ‘ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ... ’ ಎಂದು ಹಾಡು ಹೇಳುತ್ತ ಮನಿ ಕಡೆ ಹೊಂಟ್ಳು.

ಅದೇ ಹೊತ್ತಿಗೆ ಓಡಿಬಂದ ಪ್ರಭ್ಯಾನ ಮಗ, ‘ಯಪ್ಪ, ಅವ್ವ ಕರ‍್ಯಾಕತ್ಯಾಳ್‌. ಚಾ ತಣ್ಣಗಾಗ್ತೈತಿ ಜಲ್ದಿ ಬರಬೇಕಂತ’ ಎಂದು ಉಸುರಿದ.

‘ನಡೀಪ, ಮನ್ಯಾಗ್‌ ಚಾ ಕುಡ್ದು ಹೋಗಂತ ಬಾ’ ಎಂದು ಪ್ರಭ್ಯಾ ಕರ‍್ದ.

‘ಆಯ್ತ್‌ ನಡಿ. ಚಹಾ ಪೆ ಚರ್ಚಾ ಅಲ್ಲಲ್ಲ ಚಹಾ ‍ಪೆ ಖರ್ಚಾ’ ಎಂದು ನನ್ನಷ್ಟಕ್ಕೆ ನಾನು ಗೊಣಗಿದೆ.

‘ಆ್ಞ, ಏನಂದಿ, ಚಹಾ ಪೆ ಖರ್ಚಾನಾ’ ಏನ್‌ ತಿಳಿಲಿಲ್ಲ. ಒಗಟ್‌ ಬಿಡಿಸಿ ಹೇಳಲೇ’ ಎಂದು ಪ್ರಭ್ಯಾ ದಬಾಯಿಸಿದ.

‘ಹ್ಞೂನಪ. ಚಹಾ ಪೆ ಖರ್ಚಾನ ಖರೆ. ಇಲಿ ಹಿಡ್ಯಾಕ, ಚಾ ಕುಡ್ಯಾಕ್‌ ಮಹಾರಾಷ್ಟ್ರದ ಫಡಣವೀಸ್‌ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚ್‌ ಮಾಡಿದ್ದು ದೊಡ್ಡ ಸುದ್ದಿ ಅದ ಬಿಡು. ಇನ್ನೊಂದು ದಿನ ಅದರ ಬಗ್ಗೆ ಚರ್ಚೆ ಮಾಡೋಣ ಏಳ್‌’ ಎಂದು ನಾನು ಮಾತಿಗೆ ತೆರೆ ಎಳೆದು ಅವನೊಂದಿಗೆ ಹೆಜ್ಜೆ ಹಾಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.