ಮಂಗಳವಾರ, ಆಗಸ್ಟ್ 11, 2020
21 °C
ಹೊಂಗಹಳ್ಳಿಯಲ್ಲೊಂದು ಹಸಿರು ಶಾಲೆ

ಹೊಂಗಹಳ್ಳಿಯಲ್ಲೊಂದು ಹಸಿರು ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಂಗಹಳ್ಳಿಯಲ್ಲೊಂದು ಹಸಿರು ಶಾಲೆ

ಗುಂಡ್ಲುಪೇಟೆ (ಚಾಮರಾಜನಗರ): ಸರ್ಕಾರಿ ಶಾಲೆಗಳೆಂದರೆ ಮೂಲ ಸೌಕರ್ಯಗಳಿಲ್ಲದ ಶಾಲೆ, ಹಸಿರೇ ಇಲ್ಲದ ಆವರಣ, ಮರೀಚಿಕೆ ಎನಿಸಿದ ಸ್ವಚ್ಛತೆ ... ಇಂತಹ ಕಲ್ಪನೆಗಳು ಸಾಮಾನ್ಯವಾಗಿ ಮನಸ್ಸಿಗೆ ಬರುತ್ತವೆ. ಆದರೆ, ಇದಕ್ಕೆಲ್ಲ ಅಪವಾದವಾಗಿ ನಿಲ್ಲುತ್ತದೆ ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತ್ತಿದ್ದು, 2017-18ನೇ ಸಾಲಿನಲ್ಲಿ ‘ಹಸಿರು ಶಾಲೆ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಶಾಲೆಯ ಸುತ್ತ ಹಸಿರು ಗಿಡಗಳನ್ನು ಬೆಳೆಸಿ ಮಧ್ಯಾಹ್ನದ ಬಿಸಿಯೂಟಕ್ಕೆ ಇಲ್ಲೆ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಶಾಲೆಯ ಸುತ್ತ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳ ಕಲಿಕೆಗಾಗಿ ಪುಸ್ತಕವನ್ನು ಮಕ್ಕಳ ಕೈಗೆಟುಕುವಂತೆ ಜೋಡಿಸಲಾಗಿದೆ. ಯಾರಿಗೆ ಯಾವ ಪುಸ್ತಕ ಓದಬೇಕು, ಅದನ್ನು ಓದಿ ಅಲ್ಲೆ ಕ್ರಮಬದ್ದವಾಗಿ ಇಡುವಂತಹ ಶಿಸ್ತು ಇಲ್ಲಿಯ ವಿದ್ಯಾರ್ಥಿಗಳಲ್ಲಿದೆ.

ಶಾಲಾ ಆವರಣದಲ್ಲೆ ಬಾಳೆ, ನುಗ್ಗೆ, ಬದನೆ, ಟೊಮೆಟೊ, ಹೂವಿನ ಗಿಡಗಳು, ಔಷಧ ಗಿಡಗಳನ್ನು ಬೆಳೆಯ ಲಾಗಿದೆ. ನೂರು ಔಷಧೀಯ ಸಸಿಗಳನ್ನು ಬೆಳೆಯಬೇಕೆಂಬುದು ಇಲ್ಲಿನ ಶಿಕ್ಷಕರ ಆಸೆ. ಗ್ರಾಮಸ್ಥರ ಸಹಕಾರವೂ ಇವರಿಗೆ ಇದೆ. ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಮಜ್ಜಿಗೆಗಾಗಿ ಇಲ್ಲಿನ ಹಾಲಿನ ಡೇರಿಯಿಂದ ನಿತ್ಯ ಎರಡು ಲೀಟರ್ ಹಾಲನ್ನು ಉಚಿತವಾಗಿ ನೀಡುತ್ತಾರೆ. ಇಲ್ಲಿನ ಮಕ್ಕಳು ಒಂದು ಅಗುಳು ಅನ್ನವನ್ನೂ ವ್ಯರ್ಥ ಮಾಡುವುದಿಲ್ಲ. ಸ್ವಚ್ಚತೆಯ ನಿಯಮಗಳನ್ನು ಇವರು ಕರಾರುವಕ್ಕಾಗಿ ಪಾಲಿಸುತ್ತಾರೆ ಎಂದು ಶಿಕ್ಷಕರು ಹೆಮ್ಮೆಯಿಂದ ಹೇಳುತ್ತಾರೆ.‌ಈ ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಖಾಸಗಿ ಶಾಲೆಗಳಿಂದ ಇಲ್ಲಿಗೆ ಅನೇಕರು ಬಂದು ಸೇರಿಕೊಂಡಿದ್ದಾರೆ. ಈ ಬಾರಿ ಇನ್ನೂ ಹೆಚ್ಚಿನ ಮಕ್ಕಳು ಬರುತ್ತಾರೆ ಎಂಬುದು ಈ ಶಾಲೆಯ ಹೆಮ್ಮೆ.

ಸಮಾನತೆ ಕಾಪಾಡಲು ಶಾಲೆಯ ವತಿಯಿಂದ ಎಲ್ಲಾ ಮಕ್ಕಳ ಜನ್ಮ ದಿನವನ್ನು ಆಚರಣೆ ಮಾಡಲಾಗುತ್ತದೆ. ಯಾರು ಸಹ ಚಾಕೊಲೆಟ್ ಮತ್ತಿತ್ತರ ತಿಂಡಿಗಳನ್ನು ನೀಡಬಾರದು ಎಂದು ಎಲ್ಲರಿಗೂ ತಿಳಿಸಲಾಗಿದೆ. ಹಣವಿರುವ ಮಕ್ಕಳು ಅದ್ದೂರಿಯಾಗಿ ಕೇಕ್ ಕತ್ತರಿಸಿ ಆಚರಿಸಿಕೊಳ್ಳುತ್ತಾರೆ. ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಈ ರೀತಿ ಆಚರಣೆ ಮಾಡಿಕೊಳ್ಳಲಾಗುವುದಿಲ್ಲ. ಅವರಿಗೆ ಕೀಳರಿಮೆ ಉಂಟಾಗುತ್ತದೆ ಎಂಬ ಉದ್ದೇಶದಿಂದ ಶಾಲೆಯ ವತಿಯಿಂದ ಮಕ್ಕಳ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ. ಜನ್ಮದಿನದಂದು ಶಾಲೆಗೆ ಒಂದು ಗಿಡ ಮತ್ತು ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಾರೆ. ಇದು ಇಲ್ಲಿ ನಡೆದು ಬಂದಿರುವ ವಾಡಿಕೆ. ಇದರಿಂದ ಶಾಲೆಯಲ್ಲಿ ಎಲ್ಲಾ ಮಕ್ಕಳು ಸಮಾನರು ಎಂಬುದು ಮಕ್ಕಳಿಗೆ ಅರಿವಾಗುತ್ತದೆ ಎಂದು ಇಲ್ಲಿನ ಮುಖ್ಯ ಶಿಕ್ಷಕ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಜಯಂತಿಗಳನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಯಾವುದೇ ಜಯಂತಿಗಳು ಬಂದರೂ ಮಹನೀಯರ ಜೀವನ ಚರಿತ್ರೆ ಮತ್ತು ಆದರ್ಶಗಳ ಪುಸ್ತಕವನ್ನು ಶಾಲೆಯ ಪ್ರತಿ ಮಕ್ಕಳಿಗೂ ನೀಡುತ್ತಾರೆ. ಇದರಿಂದ ಜಯಂತಿಗಳ ಮಹತ್ವ ಅರಿವಾಗುತ್ತದೆ ಎಂಬುದು ಇಲ್ಲಿನ ಶಿಕ್ಷಕರ ಅಭಿಪ್ರಾಯ.

**

ಶಾಲೆಯಲ್ಲಿ ತರಕಾರಿ ಬೆಳೆಯುವುದಕ್ಕೆ, ಆವರಣದ ಸ್ವಚ್ಚತೆ ಕಾಪಾಡುವುದರಲ್ಲಿ ಇಲ್ಲಿನ ಶಿಕ್ಷಕರು ಮತ್ತು ಮಕ್ಕಳ ಹೆಚ್ಚಿನ ಶ್ರಮವಿದೆ. ಮಕ್ಕಳು ಸಹ ಹೇಳಿದಂತೆ ಪಾಲಿಸಿಕೊಂಡು ಹೋಗುತ್ತಾರೆ – ಮಹದೇವಪ್ಪ, ಮುಖ್ಯ ಶಿಕ್ಷಕ.

**

ಎಂ.ಮಲ್ಲೇಶ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.