7

‍‘ಪ್ರತ್ಯೇಕ ಧರ್ಮ: ಕಳಚಿದ ರಾಜಕೀಯ ಮುಖವಾಡ’

Published:
Updated:
‍‘ಪ್ರತ್ಯೇಕ ಧರ್ಮ: ಕಳಚಿದ ರಾಜಕೀಯ ಮುಖವಾಡ’

ಹುಬ್ಬಳ್ಳಿ: ‘ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ವಿಷಯದ ಹಿಂದಿರುವ ರಾಜಕೀಯದ ಮುಖವಾಡ ಇಂದು ಕಳಚಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಭಾನುವಾರ ಇಲ್ಲಿ ಟೀಕಿಸಿದರು.

‘ಎಲ್ಲಾ ಲಿಂಗಾಯತರೂ ಕಾಂಗ್ರೆಸ್‌ಗೇ ಮತ ಚಲಾಯಿಸಬೇಕು’ ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಶನಿವಾರ ಬಹಿರಂಗವಾಗಿ ಕರೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜಕಾರಣವೊಂದೇ ಪ್ರತ್ಯೇಕ ಧರ್ಮ ವಿಷಯದ ಹಿಂದಿರುವ ಉದ್ದೇಶ ಎಂಬ ನಮ್ಮ ಆರೋಪ ಇದೀಗ ಸಾಬೀತಾಗಿದೆ’ ಎಂದರು.

‘ರಾಜಕಾರಣದ ಸಲುವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮದ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಂಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಈ ವಿಷಯವನ್ನು ಭಾವನಾತ್ಮಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆ ಮೂಲಕ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.

’ಚುನಾವಣೆ ಸಂದರ್ಭದಲ್ಲಿ ಧರ್ಮದಂತಹ ಭಾವನಾತ್ಮಕ ವಿಷಯದ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸುವುದಿಲ್ಲ. ಚುನಾವಣೆ ಮುಗಿದ ಬಳಿಕ ಈ ವಿಷಯದ ಬಗ್ಗೆ ಮಾತನಾಡುತ್ತೇವೆ’ ಎಂದು ಹೇಳಿದರು.

ಪರಿಶಿಷ್ಟರು, ಒಬಿಸಿಗಳೂ ಇದ್ದಾರೆ: ‘ಲಿಂಗಾಯತ ಸಮುದಾಯದಲ್ಲಿ 92 ಉಪಜಾತಿಗಳಿವೆ. ಈ ಪೈಕಿ ಶೇ 20ರಷ್ಟು ಪರಿಶಿಷ್ಟ ಜಾತಿ, ಶೇ 15ರಷ್ಟು ಹಿಂದುಳಿದ ವರ್ಗ ಸೇರಿದಂತೆ 2ಬಿ ಹಾಗೂ 3ಬಿ ಪ್ರವರ್ಗದವರೂ ಇದ್ದು, ಮೀಸಲಾತಿ ಕೂಡ ಪಡೆಯುತ್ತಿದ್ದಾರೆ. ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕರೆ, ಇವರ ಗತಿ ಏನು?’ ಎಂದು ಶೆಟ್ಟರ್‌ ಪ್ರಶ್ನಿಸಿದರು.

ಮಾತೆ ಮಹಾದೇವಿ ಬೆಂಬಲ: ವಿನಯ ಕುಲಕರ್ಣಿ ಸ್ವಾಗತ

ಧಾರವಾಡ: ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಹೇಳಿರುವುದನ್ನು ಸ್ವಾಗತಿಸುವುದಾಗಿ ಸಚಿವ ವಿನಯ ಕುಲಕರ್ಣಿ ಭಾನುವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತಾಜಿ ಅವರು ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದು, ಉಳಿದವರು ಸೂಕ್ಷ್ಮವಾಗಿ ಹೇಳಿ ಸಹಕಾರ ನೀಡಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry