ಸೋಮವಾರ, ಆಗಸ್ಟ್ 10, 2020
26 °C

ಹೆಂಡತಿಯು ಗಂಡನ ಚರಾಸ್ತಿ ಅಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಹೆಂಡತಿಯು ಗಂಡನ ಚರಾಸ್ತಿ ಅಲ್ಲ

ನವದೆಹಲಿ: ಹೆಂಡತಿಯು ಗಂಡನ ಚರಾಸ್ತಿ ಅಲ್ಲ ಅಥವಾ ಆಕೆ ಒಂದು ವಸ್ತುವೂ ಅಲ್ಲ. ಹೆಂಡತಿಯ ಜತೆ ಬದುಕಲು ಗಂಡನಿಗೆ ಇಷ್ಟ ಇರಬಹುದು. ಆದರೆ  ಹೆಂಡತಿಗೆ ಇಷ್ಟ ಇಲ್ಲದೆ ಇದ್ದರೆ ಜತೆಗೆ ವಾಸಿಸುವಂತೆ ಗಂಡ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮಹಿಳೆಯೊಬ್ಬರು ಗಂಡನ ವಿರುದ್ಧ ಸಲ್ಲಿಸಿದ ದೌರ್ಜನ್ಯ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠ ಹೀಗೆ ಹೇಳಿದೆ.

ಆದರೆ, ಹೆಂಡತಿಯ ಜತೆಗೇ ವಾಸಿಸಲು ಬಯಸುವುದಾಗಿ ಗಂಡ ನೀಡಿದ ಹೇಳಿಕೆಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು. ‘ಆಕೆಗೆ ನಿಮ್ಮ ಜತೆಗೆ ವಾಸಿಸಲು ಇಷ್ಟ ಇಲ್ಲ ಎಂದ ಮೇಲೆ ಅವರ ಜತೆಗೆ ನೀವು ನೆಲೆಸುವುದು ಹೇಗೆ ಸಾಧ್ಯ’ ಎಂದು ಪೀಠ ಪ್ರಶ್ನಿಸಿತು.

ತಮ್ಮ ಕಕ್ಷಿದಾರರು ಯಾವುದೇ ಕಾರಣಕ್ಕೂ ಗಂಡನ ಜತೆಗೆ ಇರುವುದಿಲ್ಲ ಎಂದು ಹೆಂಡತಿಯ ಪರ ವಕೀಲರು ಸ್ಪಷ್ಟವಾಗಿ ಹೇಳಿದರು. ಹಾಗಾಗಿ ‘ಗಂಡ ತನ್ನ ನಿಲುವನ್ನು ಬದಲಾಯಿಸಿಕೊಳ್ಳಲೇಬೇಕು. ಯಾವುದೇ ವ್ಯಕ್ತಿ ಇಷ್ಟೊಂದು ಅವಿವೇಕದಿಂದ ವರ್ತಿಸುವುದು ಸಾಧ್ಯವಿಲ್ಲ’ ಎಂದು ಪೀಠ ಸೂಚಿಸಿತು.

ತಮ್ಮ ಕಕ್ಷಿದಾರನ ನಿಲುವು ಬದಲಾಯಿಸಲು ಪ್ರಯತ್ನಿಸುವುದಾಗಿ ಗಂಡನ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ‌

ಗಂಡನ ದೌರ್ಜನ್ಯ ಸಹಿಸಲಾಗದು. ಅವರಿಂದ ವಿಚ್ಛೇದನ ಪಡೆಯಲು ಬಯಸುವುದಾಗಿ ಮಹಿಳೆ ತಿಳಿಸಿದರು. ‘ಗಂಡನ ವಿರುದ್ಧ ದಾಖಲಿಸಲಾಗಿರುವ ದೌರ್ಜನ್ಯ ಪ್ರಕರಣವನ್ನು ಕೈಬಿಡುತ್ತೇನೆ. ನನಗೆ ಅವರಿಂದ ಜೀವನಾಂಶವೂ ಬೇಡ. ಅವರ ಜತೆಗೆ ಜೀವಿಸುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಮಹಿಳೆ ಹೇಳಿದರು.

ಇದಕ್ಕೂ ಮೊದಲು, ಈ ಗಂಡ–ಹೆಂಡತಿ ನಡುವೆ ಸಾಮರಸ್ಯ ಮೂಡಿಸಲು ಸುಪ್ರೀಂ ಕೋರ್ಟ್‌ ಪ್ರಯತ್ನಿಸಿತ್ತು.

ಗಂಡ ಮತ್ತು ಹೆಂಡತಿ ಇಬ್ಬರೂ ವಿದ್ಯಾವಂತರು. ಹಾಗಾಗಿ ಅವರಿಬ್ಬರ ನಡುವೆ ಸಂಧಾನ ಸಾಧ್ಯವಾಗಬಹುದು ಎಂದು ಪೀಠ ಹಿಂದೆ ಹೇಳಿತ್ತು. ಇಬ್ಬರ ನಡುವಣ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಬಹುದು. ದಾವೆ ಹೂಡಿದರೆ ಅದು ಇತ್ಯರ್ಥವಾಗಲು ದೀರ್ಘ ಕಾಲ ಬೇಕಾಗುತ್ತದೆ ಎಂದು ತಿಳಿ ಹೇಳಿತ್ತು.

ತಮ್ಮ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಸಂಧಾನ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಇಬ್ಬರಿಗೂ ಸೂಚಿಸಿತ್ತು. ಆದರೆ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ.

ಮಹಿಳೆಯೊಬ್ಬರು ಗಂಡನ ವಿರುದ್ಧ ಸಲ್ಲಿಸಿದ್ದ ದೌರ್ಜನ್ಯ ಪ್ರಕರಣದ ವಿಚಾರಣೆ

ಕಕ್ಷಿದಾರನ ನಿಲುವು ಬದಲಾಯಿಸಲು ಯತ್ನಿಸುವುದಾಗಿ ಹೇಳಿಕೆ

ಗಂಡ–ಹೆಂಡತಿ ನಡುವೆ ಸಾಮರಸ್ಯ ಮೂಡಿಸಲು ಸುಪ್ರೀಂ ಕೋರ್ಟ್‌ ಪ್ರಯತ್ನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.