ಮಂಗಳವಾರ, ಜೂಲೈ 7, 2020
27 °C
ನಿಯಂತ್ರಣಕ್ಕೆ ಬಾರದ ಅಕ್ರಮ ಗಣಿಗಾರಿಕೆ, ಮರಳುಗಾರಿಕೆ

ಡಿಕೆಶಿಗೆ ಲಗಾಮು ಹಾಕುವ ‘ಸಾರಥಿ’ಗಾಗಿ ಹುಡುಕಾಟ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ಡಿಕೆಶಿಗೆ ಲಗಾಮು ಹಾಕುವ ‘ಸಾರಥಿ’ಗಾಗಿ ಹುಡುಕಾಟ

ಬಹುವರ್ಣದ ಗ್ರಾನೈಟ್‌ ಶಿಲೆಗೆ ದೇಶದಲ್ಲಿಯೇ ಹೆಸರುವಾಸಿಯಾಗಿರುವ ಕನಕಪುರದಲ್ಲಿ ರಾಜಕಾರಣವೂ ಅಷ್ಟೇ ಗಡಸು. ಸತತ ಗೆಲುವಿನ ಸವಾರಿ ಮಾಡುತ್ತಿರುವ ಡಿ.ಕೆ. ಶಿವಕುಮಾರ್‌ ಓಟಕ್ಕೆ ಈ ಬಾರಿ ಲಗಾಮು ಹಾಕುವ ಸಮರ್ಥ ಸಾರಥಿಗಾಗಿ ಹುಡುಕಾಟ ನಡೆದಿದೆ.

ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ಡಿಕೆಶಿ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಡಿಕೆಶಿ ಎನ್ನುವಷ್ಟರ ಮಟ್ಟಿಗೆ ಶಿವಕುಮಾರ್ ಪಕ್ಷದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯೂ ಕ್ಷೇತ್ರದಲ್ಲಿ ಅವರೇ ಅಭ್ಯರ್ಥಿ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಜೆಡಿಎಸ್‌ ಹಾಗೂ ಬಿಜೆಪಿ ಇನ್ನೂ ಅಭ್ಯರ್ಥಿ ಆಯ್ಕೆ ಗೊಂದಲದಲ್ಲೇ ಇವೆ.

ಕನಕಪುರ ರಾಜಕಾರಣದ ಪುಟಗಳಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರೆಂದರೆ ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯ. ಇಬ್ಬರೂ ತಲಾ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರ ಕ್ಷೇತ್ರ ಪುನರ್ ವಿಂಗಡಣೆಗೆ ಮುನ್ನ ಕನಕಪುರ ತಾಲ್ಲೂಕು ಕನಕಪುರ ಹಾಗೂ ಸಾತನೂರು ವಿಧಾನಸಭಾ ಕ್ಷೇತ್ರಗಳಾಗಿ ಹಂಚಿಹೋಗಿತ್ತು. ಕನಕಪುರ ಕ್ಷೇತ್ರದಲ್ಲಿ ಸಿಂಧ್ಯ ಸತತ ಜಯಭೇರಿ ಬಾರಿಸುತ್ತಿದ್ದರೆ, ಅತ್ತ ಸಾತನೂರು ಕ್ಷೇತ್ರದಲ್ಲಿ ಶಿವಕುಮಾರ್ ಗೆಲ್ಲುತ್ತಲೇ ಹೋದರು. ಆದರೆ 2008ರಲ್ಲಿ ಈ ಎರಡೂ ಕ್ಷೇತ್ರಗಳು ಒಗ್ಗೂಡಿ ಕನಕಪುರ ಮಾತ್ರ ಉಳಿದುಕೊಂಡಿತು. ಅಲ್ಲಿಂದ ಮುಂದೆ ಡಿಕೆಶಿ ಗೆಲುವಿನ ಯಾತ್ರೆ ಮುಂದುವರಿಸಿದರೆ, ಸಿಂಧ್ಯ ಹಿಡಿತ ಕಳೆದುಕೊಂಡರು.

ಒಕ್ಕಲಿಗರ ಪ್ರಾಬಲ್ಯ ಇರುವ ಕನಕಪುರ ಕ್ಷೇತ್ರದಲ್ಲಿ ಮರಾಠ ಸಮುದಾಯದ ಸಿಂಧ್ಯ ಸತತ ಆರು ಬಾರಿ ಗೆಲುವು ದಾಖಲಿಸಿರುವುದು ರಾಜ್ಯ ರಾಜಕಾರಣದ ವೈಶಿಷ್ಟ್ಯಗಳಲ್ಲಿ ಒಂದು. 1983ರಲ್ಲಿ ಕನಕಪುರ ಕ್ಷೇತ್ರದಿಂದ ಜನತಾ ಪರಿವಾರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಸಾಧಿಸಿದ ಅವರು ಮುಂದಿನ ಐದು ಚುನಾವಣೆಗಳಲ್ಲಿಯೂ ಹಿಂದೆ ತಿರುಗಿ ನೋಡಲಿಲ್ಲ.

1985ರಲ್ಲಿ ಡಿ.ಕೆ. ಶಿವಕುಮಾರ್‌ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದರು. ಅಂದು ಸಾತನೂರು ಕ್ಷೇತ್ರದಲ್ಲಿ ಎಚ್.ಡಿ. ದೇವೇಗೌಡರ ವಿರುದ್ಧ ನಿಂತು ಪರಾಭವಗೊಂಡ ಅವರು, 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೂ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. ನಂತರದ ನಾಲ್ಕು ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ನಿಂದ ಗೆಲ್ಲುತ್ತಲೇ ಬಂದಿದ್ದಾರೆ.

ಕನಕಪುರ ಕ್ಷೇತ್ರದಲ್ಲಿ ಶಿವಕುಮಾರ್‌ ಮತ್ತು ಸಿಂಧ್ಯ 2013ರ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದರು. ಶಿವಕುಮಾರ್ 31,424 ಮತಗಳ ಭಾರಿ ಅಂತರದಿಂದ ಗೆಲುವು ಪಡೆದಿದ್ದರು. 2008ರ ಚುನಾವಣೆಯ ಬಳಿಕ ಕಾಂಗ್ರೆಸ್‌ ಕೈಗೆ ಇಲ್ಲಿನ ರಾಜಕೀಯ ಹಿಡಿತ ಸಿಕ್ಕಿದೆ.

ಇಲ್ಲಿನ ತಾಲ್ಲೂಕು ಪಂಚಾಯಿತಿ, ನಗರಸಭೆಯು ಕಾಂಗ್ರೆಸ್‌ ಆಡಳಿತದಲ್ಲಿದೆ. ಜಿಲ್ಲಾ ಪಂಚಾಯಿತಿಯ ಆರು ಕ್ಷೇತ್ರಗಳಲ್ಲಿಯೂ ಕೈ ಪಾಳಯದ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ.

(ಡಿ.ಕೆ. ಶಿವಕುಮಾರ್‌)

ಹಲವು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಶಿವಕುಮಾರ್, ಕ್ಷೇತ್ರದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನರೇಗಾ ಅನುದಾನ ಬಳಕೆಯಲ್ಲಿ ಕನಕಪುರ ತಾಲ್ಲೂಕು ರಾಜ್ಯದಲ್ಲಿಯೇ ನಂಬರ್‌ 1 ಸ್ಥಾನದಲ್ಲಿದೆ.

ಇಂಧನ ಸಚಿವರಾಗಿ ತಮ್ಮದೇ ಇಲಾಖೆಯ ಹೈವೋಲ್ಟೇಜ್‌ ಡಿಸ್ಟ್ರಿಬ್ಯುಷನ್ ಸಿಸ್ಟಂ (ಎಚ್‌ವಿಡಿಎಸ್‌), ಸೂರ್ಯ ರೈತ, ಸೋಲಾರ್ ಪಾರ್ಕ್‌ ಸೇರಿದಂತೆ ಹಲವು ಪ್ರಥಮ ಪ್ರಯತ್ನಗಳನ್ನು ಇಲ್ಲಿ ಅನುಷ್ಠಾನಗೊಳಿಸಿದ್ದಾರೆ. ನಂಜುಂಡಪ್ಪ ಆಯೋಗದ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದ್ದ ಕನಕಪುರದಲ್ಲಿ ಇಂದು ಹತ್ತಾರು ಸೌಧಗಳು ತಲೆ ಎತ್ತಿವೆ. ಚುನಾವಣೆಯ ಹೊಸ್ತಿಲಲ್ಲಿ, ಕೆರೆ ತುಂಬಿಸುವ ಯೋಜನೆ, 229 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ದೊರೆತಿದೆ.

ಆದರೆ ಅಕ್ರಮ ಗಣಿಗಾರಿಕೆ, ಮರಳುಗಾರಿಕೆಯ ಕಾರಣಕ್ಕೆ ಕನಕಪುರ ಸಾಕಷ್ಟು ಸುದ್ದಿ ಮಾಡಿದ್ದು, ಇದನ್ನು ನಿಯಂತ್ರಿಸುವ ಕೆಲಸ ಆಗಿಲ್ಲ. ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳು ನಡೆದಿದ್ದರೂ ಅದರ ಗುಣಮಟ್ಟದ ಬಗ್ಗೆ ಅನುಮಾನವಿದೆ. ಸಚಿವರ ಆಪ್ತರಿಗೇ ಗುತ್ತಿಗೆ ಕಾಮಗಾರಿಗಳು ದೊರೆಯುತ್ತಿವೆ ಎಂಬ ಆರೋಪಗಳೂ ಇವೆ.

ಕಳೆದ ವರ್ಷ ಶಿವಕುಮಾರ್‌ ಹಾಗೂ ಕುಟುಂಬದವರ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಅಕ್ರಮ ಆಸ್ತಿ ಗಳಿಕೆ ವಿಚಾರವೂ ಚುನಾವಣೆಯ ಸಂದರ್ಭ ಎದುರಾಳಿಗಳ ದಾಳವಾಗುವ ಸಾಧ್ಯತೆ ಇದೆ.

ಕ್ಷೇತ್ರದಲ್ಲಿ ದಲಿತರು, ಮುಸ್ಲಿಮರ ಜೊತೆಗೆ ಲಿಂಗಾಯತ, ಕುರುಬ, ತಿಗಳ ಹಾಗೂ ಬೆಸ್ತ ಸಮುದಾಯಗಳ ಜನರೂ ಹೆಚ್ಚಾಗಿದ್ದಾರೆ.

ಸದ್ದಿಲ್ಲದೆ ಪ್ರಚಾರ

ರಾಜ್ಯದಾದ್ಯಂತ ಮೂರೂ ಪಕ್ಷಗಳು ಭರ್ಜರಿ ಸಭೆ, ಸಮಾವೇಶ ಮಾಡುತ್ತಿದ್ದರೂ ಕನಕಪುರದಲ್ಲಿ ಮಾತ್ರ ಅದ್ಯಾವುದರ ಸದ್ದೂ ಕೇಳಿಸುತ್ತಿಲ್ಲ.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಸದ್ಯ ರಾಜ್ಯದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಬಿಡುವು ಸಿಕ್ಕಾಗಲೆಲ್ಲ ಬಂದು ಸದ್ದಿಲ್ಲದೇ ಮತಯಾಚನೆ ಮಾಡುತ್ತಿದ್ದಾರೆ. ಉಳಿದಂತೆ ಅವರ ಸಹೋದರ ಡಿ.ಕೆ. ಸುರೇಶ್‌ ಪ್ರಚಾರದ ನೇತೃತ್ವ ವಹಿಸಿದ್ದಾರೆ.

ಅಭ್ಯರ್ಥಿ ಆಯ್ಕೆ ಗೊಂದಲ

2008ರ ಚುನಾವಣೆಯಲ್ಲಿ ಡಿಕೆಶಿಗೆ ತೀವ್ರ ಪೈಪೋಟಿ ಒಡ್ಡಿದ್ದ ಡಿ.ಎಂ. ವಿಶ್ವನಾಥ್‌ ಹೆಸರು ಜೆಡಿಎಸ್‌ನಿಂದ ಮತ್ತೊಮ್ಮೆ ಕೇಳಿಬರುತ್ತಿದೆ. ಅಂದಿನ ಚುನಾವಣೆಯಲ್ಲಿ ವಿಶ್ವನಾಥ್‌ 7,179 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

(ಡಿ.ಎಂ. ವಿಶ್ವನಾಥ್‌)

ಆದರೆ ಹಣಕಾಸಿನ ಕೊರತೆಯಿಂದಾಗಿ ಈ ಬಾರಿ ಚುನಾವಣೆ ಎದುರಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರಿಗೆ ಅವರ ಬಗ್ಗೆ ಅಸಮಾಧಾನ ಇದ್ದು, ಬೇರೆಯವರಿಗೆ ಟಿಕೆಟ್ ನೀಡಬೇಕು ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ.

ಬಿಜೆಪಿಯಿಂದ ನಂದಿನಿ ಗೌಡ ಎಂಬುವವರು ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ಮೊದಲು ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಆಗಿದ್ದ ನಂದಿನಿ, ಅಲ್ಲಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗುತ್ತಲೇ ಬಿಜೆಪಿ ಸೇರಿದ್ದರು. ಆಗಿನಿಂದ ಪಕ್ಷದ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.

* ಕಟ್ಟಡಗಳನ್ನು ಕಟ್ಟಿರುವುದೇ ಇಲ್ಲಿನ ಶಾಸಕರ ಸಾಧನೆ. ಯಾವುದೇ ಜನಪರ ಕೆಲಸ ಆಗಿಲ್ಲ. ಕಾಮಗಾರಿಗಳ ಹೆಸರಿನಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ

–ರವಿಕುಮಾರ್ ಕಂಚನಹಳ್ಳಿ, ಸಾಮಾಜಿಕ ಹೋರಾಟಗಾರ

* ಕಳೆದೊಂದು ದಶಕದಲ್ಲಿ ಕನಕಪುರ ನಗರದ ಚಿತ್ರಣವೇ ಬದಲಾಗಿದೆ. ರಸ್ತೆ, ನೀರಿನ ಸೌಲಭ್ಯ ಎಲ್ಲವೂ ಉತ್ತಮವಾಗಿವೆ. ಯಾವುದೇ ಕಾಮಗಾರಿಗಳು ಕಾಲಮಿತಿಯೊಳಗೆ ಮುಗಿಯುತ್ತಿವೆ.

– ಕೆ.ಆರ್. ಉದಯ್ ಕಿರಣ್‌, ಉದ್ಯೋಗಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.