ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರ ಶ್ರಮ; ನೆರೆಯ ದಲ್ಲಾಳಿಗೆ ಲಾಭ

ಹನಿ ನೀರಾವರಿ, ಹಾಸಿಗೆ ಪದ್ಧತಿ ಅಳವಡಿಸಿಕೊಂಡರೆ ದುಪ್ಪಟ್ಟು ಅರಿಶಿಣ ಇಳುವರಿ
Last Updated 9 ಏಪ್ರಿಲ್ 2018, 9:46 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ ತೋಟಗಾರಿಕೆಯ ಪ್ರಮುಖ ಸಾಂಬಾರು ಬೆಳೆ ಎನಿಸಿದ ಅರಿಶಿಣ ಮಾರಾಟಕ್ಕೆ ತಾಲ್ಲೂಕಿನಲ್ಲಿ ಮಾರುಕಟ್ಟೆ ವ್ಯವಸ್ಥೆಯೇ ಇಲ್ಲದಂತಾಗಿದೆ. ಇದರಿಂದ ‘ಮಿನಿ ಮಲೆನಾಡು’ ಖ್ಯಾತಿಯ ಕರ್ನಾಟಕದ ಗಡಿನಾಡಿನ ರೈತರು ನೆರೆರಾಜ್ಯಗಳಾದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ತೆಲಂಗಾಣದ ಸದಾಶಿವ ಪೇಟೆಯ ಮಾರುಕಟ್ಟೆ ಅವಲಂಬಿಸಿದ್ದಾರೆ.

ಸೇಲಂ ತಳಿಯ ಅರಿಶಿಣ ತಾಲ್ಲೂಕಿನ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ನೀರಾವರಿ ಸೌಲಭ್ಯವುಳ್ಳವರು ಹಾಗೂ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶ ಮತ್ತು ಸಾಲೇಬೀರನಹಳ್ಳಿ ಸಣ್ಣ ನೀರಾವರಿ ಕೆರೆಯ ಅಚ್ಚುಕಟ್ಟು ಪ್ರದೇಶ ಸೇರಿದಂತೆ ವಿವಿಧೆಡೆ ರೈತರು ಸುವರ್ಣ ಗಡ್ಡೆ ಬೇಸಾಯ ನಡೆಸುತ್ತಿದ್ದಾರೆ.

‘ಇವರಿಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ಯಾವುದೇ ಮಾರುಕಟ್ಟೆ ವ್ಯವಸ್ಥೆಯಿಲ್ಲ. ರಾಜ್ಯದಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕಲಬುರ್ಗಿಯಲ್ಲಿ ಅರಿಶಿಣ ಮಾರುಕಟ್ಟೆ ತೆರೆಯಬೇಕು. ಇಲ್ಲವಾದರೆ ನೆರೆ ರಾಜ್ಯದ ಮಾರುಕಟ್ಟೆಗೆ ಉತ್ಪನ್ನ ಸಾಗಿಸಲು ರಾಜ್ಯ ಸರ್ಕಾರ ರೈತರಿಗೆ ಸಹಾಯಧನ ನೀಡಬೇಕು’ ಎನ್ನುತ್ತಾರೆ ಹಾಪಕಾಮ್ಸ್‌ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ.

‘ಪ್ರಸ್ತುತ ಮಾರುಕಟ್ಟೆಯಲ್ಲಿ ಅರಿಶಿಣದ ಬೆಲೆ ಕ್ವಿಂಟಲ್‌ಗೆ ₹6ಸಾವಿರವಿದೆ. 2011–12ರಲ್ಲಿ ₹22 ಸಾವಿರಕ್ಕೆ ಕ್ವಿಂಟಲ್‌ ಅರಿಶಿಣ ಮಾರಾಟ ಮಾಡಿದ್ದೇವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಉತ್ಪನ್ನಗಳ ಬೆಲೆ ಹೆಚ್ಚಬೇಕು. ಬದಲಾಗಿ ಮೂರು ಪಟ್ಟು ಕುಸಿದಿದೆ’ ಎಂದು ಬೆಳೆಗಾರ ಉದಯಕುಮಾರ ಗುತ್ತೇದಾರ ದೂರುತ್ತಾರೆ.

‘ಒಂದು ಎಕರೆ 4 ಗುಂಟೆ ಜಮೀನಿನಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಬೇಸಾಯ ನಡೆಸಿದ್ದೇನೆ. ಕನಿಷ್ಠ 18 ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದೇನೆ’ ಎಂದರು.

ಸಾಂಪ್ರದಾಯಿಕ ಪದ್ಧತಿಯಲ್ಲಿ ಬೇಸಾಯ ನಡೆಸಿದರೆ ಎಕರೆ ಬೆಳೆ ಬೇಸಾಯಕ್ಕೆ ₹15 ಸಾವಿರ ಖರ್ಚು ಬರುತ್ತದೆ. ತಾಂತ್ರಿಕತೆ ಅಳವಡಿಸಿಕೊಂಡೆ. ಎಕರೆಗೆ ₹40 ಸಾವಿರವರೆಗೆ ನಿರ್ವಹಣೆ ವೆಚ್ಚ ತಗುಲುತ್ತದೆ.ಸಾಂಪ್ರದಾಯಿಕ ಪದ್ಧತಿಯಿಂದ ಇಳುವರಿ ಕಡಿಮೆ ಬರುತ್ತದೆ. ಆಧುನಿಕ ಪದ್ಧತಿಯಿಂದ ದುಪ್ಪಟ್ಟು ಇಳುವರಿ ಪಡೆಯಬಹುದಾಗಿದೆ ಎಂಬುದು ರೈತರ ಅನಿಸಿಕೆ.

‘ಒಂದು ಎಕರೆಗೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೇಸಾಯ ನಡೆಸಿದರೆ 15ರಿಂದ 16 ಕ್ವಿಂಟಲ್‌ ಹಾಗೂ ತಾಂತ್ರಿಕತೆ ಅಳವಡಿಸಿಕೊಂಡು ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ಎಕರೆಗೆ 25 ಕ್ವಿಂಟಲ್‌ಗಿಂತಲೂ ಅಧಿಕ ಇಳುವರಿ ಪಡೆಯಬಹುದು ಎನ್ನುತ್ತಾರೆ’ ರೈತ ಮಾರ್ಗದರ್ಶಿ ರಮೇಶ ಹಡಪದ್‌.

ಕೊಯ್ಲು ಭರಾಟೆಯಲ್ಲಿ ರೈತರು: ಸದ್ಯ ತಾಲ್ಲೂಕಿನಲ್ಲಿ ಅರಿಶಿಣ ಕೊಯ್ಲು ಮಾಡುವ ಕಾರ್ಯದಲ್ಲಿ ಬೆಳೆಗಾರರು ನಿರತರಾಗಿದ್ದಾರೆ. ನೇಗಿಲು ಹೊಡೆದು ಗುಡ್ಡೆ ಹಾಕಿ ಗಡ್ಡೆ ಮತ್ತು ಬೋಟು ಬೇರ್ಪಡಿಸುವ ಕೆಲಸ ನಡೆಯುತ್ತಿದೆ. ಜತೆಗೆ, ರೈತರು ಅರಿಶಿಣ ಸಂಸ್ಕರಣೆ (ಕುದಿಸುವ) ಕಾರ್ಯದಲ್ಲಿ ಬೆಳೆಗಾರರು ತೊಡಗಿದ್ದಾರೆ.‘ನಾಲ್ಕೈದು ವರ್ಷಗಳ ಕೆಳಗೆ ಬೆಲ್ಲದ ಕಡಾಯಿಯಲ್ಲಿ ಕೆಳಗೆ ಬೆಂಕಿ ಹಚ್ಚಿ ಕುದಿಸುತ್ತಿದ್ದರು. ಇದಕ್ಕೆ ಕಾರ್ಮಿಕರ ಶ್ರಮ ಅಧಿಕ ಬೇಜಾಗುತ್ತದೆ.ಜತೆಗೆ, ಅದು ಒಣಗಲು ಹೆಚ್ಚು ದಿನ ಪಡೆದುಕೊಳ್ಳುತ್ತಿತ್ತು. ಆದರೆ, ನೆರೆಯ ಮಹಾರಾಷ್ಟ್ರದ ಮಾದರಿಯಲ್ಲಿ ಅರಿಶಿಣ ಸಂಸ್ಕರಣೆಗೆ ಯಾಂತ್ರೀಕರಣದ ಮೊರೆ ಹೋಗಿರುವ ಬೆಳೆಗಾರರು ನೀರು ಬಿಸಿ ಮಾಡಿ ಆವಿಯಾದ ಬಿಸಿಗಾಳಿಯ ಮೂಲಕ ಅರಿಶಿಣ ಕುದಿಸುವ ತಾಂತ್ರಿಕತೆ ಅಳವಡಿಸಿಕೊಂಡಿದ್ದಾರೆ.ಇದರಿಂದ ರೈತರಿಗೆ ಅನುಕೂಲವಾಗಿದೆ’ ಎನ್ನುತ್ತಾರೆ ಸಂಸ್ಕರಣೆ ಘಟಕದ ಮಾಲೀಕ ನಾಗಾಈದಲಾಯಿ ಗ್ರಾಮದ ಶಿವರಾಜ ಹೂಗಾರ.

ಒಂದು ದೊಡ್ಡ ಟ್ಯಾಂಕ್‌, ಅದರ ಕೆಳಗಡೆ ಬೆಂಕಿ ಹೊತ್ತಿಸುವ ವ್ಯವಸ್ಥೆ. ಮೇಲ್ಭಾಗದಲ್ಲಿ ನೀರಿನ ಸಂಗ್ರಹ. ಅದರಿಂದ ಕೊಳವೆ ಮೂಲಕ ಹಿಂದಿನ ಡ್ರಮ್‌ಗಳಿಗೆ ನೀರಾವಿ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಡ್ರಮ್‌ ಒಂದು ಬಾರಿ 62 ಕೆ.ಜಿ ಅರಿಶಿಣ ಕುದಿಸುತ್ತದೆ.ಅರಿಶಿಣ ಕುದಿಸಲು 4 ಕಾರ್ಮಿಕರು, ದಿನಕ್ಕೆ 5 ಕ್ವಿಂಟಲ್‌ ಕಟ್ಟಿಗೆ ಅಗತ್ಯವಿದೆ. ಪ್ರತಿ ಡ್ರಮ್‌ ಅರಿಶಿಣ ಕುದಿಸಲು ₹120 ದರ ನಿಗದಿಪಡಿಸಲಾಗಿದೆ. ದಿನಕ್ಕೆ 20 ಡ್ರಮ್‌ ಕುದಿಸುತ್ತದೆ.ಇದಕ್ಕಾಗಿ ಯಂತ್ರದ ಮಾಲೀಕರಿಗೆ ₹2,400 ಹಾಗೂ ₹2,000 ಕಾರ್ಮಿಕರಿಗೆ ನೀಡಲಾಗುತ್ತದೆ.

ತಾಲ್ಲೂಕಿನಲ್ಲಿ ಈಗ 5/6 ಅರಿಶಿಣ ಸಂಸ್ಕರಣೆ ಘಟಕ(ಯಂತ್ರಗಳು) ಇವೆ. ಇವುಗಳಿಗೆ ತೋಟಗಾರಿಕೆ ಇಲಾಖೆ ಸಹಾಯಧನ ನೀಡಿದರೆ ಪ್ರತಿ ರೈತರು ಇದನ್ನು ತಯಾರಿಸಿಕೊಂಡು ಬಳಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಬೆಳೆಗಾರರು.

**

ಬಹುಪಯೋಗಿಯಾದ ಅರಿಶಿಣ ಬೇಸಾಯಕ್ಕೆ ತಾಲ್ಲೂಕಿನಲ್ಲಿ ಪೂರಕ ಹವಾಮಾನವಿದೆ. ಆದರೆ, ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ –  ಉದಯಕುಮಾರ ಗುತ್ತೇದಾರ, ಅರಿಶಿಣ ಬೆಳೆಗಾರ, ದೇಗಲಮಡಿ.

**

ಅರಿಶಿಣ 10 ತಿಂಗಳ ನೀರಾವರಿ ಬೆಳೆ. ಒಂದು ಎಕರೆಯಲ್ಲಿ ಬೇಸಾಯ ಮಾಡಲು ಎಕರೆಗೆ ಕನಿಷ್ಠ ₹18ರಿಂದ 20 ಸಾವಿರ ವೆಚ್ಚ ತಗಲುತ್ತದೆ. ಎಕರೆಗೆ 15ರಿಂದ 16 ಕ್ವಿಂಟಲ್‌ ಇಳುವರಿ ದೊರೆಯುತ್ತದೆ – ರಮೇಶ ಪೋಲಕಪಳ್ಳಿ,ರೈತ ಮಾರ್ಗದರ್ಶಿ

**
ಜಗನ್ನಾಥ ಡಿ.ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT