ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ತನಿಖೆ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ

Last Updated 9 ಏಪ್ರಿಲ್ 2018, 11:12 IST
ಅಕ್ಷರ ಗಾತ್ರ

ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಸಂಬಂಧದ ಸಿಬಿಐ ತನಿಖೆ ಬಗ್ಗೆ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ಮರು ತನಿಖೆಗೆ ಕೋರಿ ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಚಂದ್ರಪ್ಪ ಗೌಡ ಪರ ವಕೀಲರು ವಾದ ಮಂಡಿಸಿ, ‘ಪ್ರಕರಣದ ಸಂಬಂಧ ಮೊದಲು ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರ ಮುಂದೆ ಹರೀಶ್ ಹಾಗೂ ಗೋಪಾಲ್ ಎಂಬುವರು ಸಾಕ್ಷ್ಯ ನುಡಿದಿದ್ದರು. ಆದರೆ, ನಂತರ ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಸಿಬಿಐ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ, ದೋಷಾರೋಪ ಪಟ್ಟಿಯಲ್ಲಿ ಆ ಇಬ್ಬರ ಹೇಳಿಕೆಯನ್ನೂ ಉಲ್ಲೇಖಿಸಲಾಗಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಿಬಿಐ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಪೊಲೀಸರ ತನಿಖೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ತನಿಖೆಯನ್ನು ಸಿಐಡಿಗೆ, ಆ ಬಳಿಕ ಸಿಬಿಐಗೆ ವಹಿಸಲಾಗಿದೆ. ಸಿಬಿಐ ತನಿಖೆಯೂ ಅನುಮಾನಾಸ್ಪದವಾಗಿರುವಂತಿದೆ. ನಿಮ್ಮಿಂದ ಸೂಕ್ತ ತನಿಖೆ ನಡೆಸಿಸಲು ಸಾಧ್ಯವಿಲ್ಲ ಎಂದಾದರೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಬೇಕಾಗುತ್ತದೆ’ ಎಂದು ಎಚ್ಚರಿಸಿತು.

‘ದೋಷಾರೋಪ ಪಟ್ಟಿಯಲ್ಲಿ ಸಾಕ್ಷ್ಯಗಳ ಹೇಳಿಕೆ ದಾಖಲಿಸದಿರುವುದಕ್ಕೆ ಕಾರಣವೇನೆಂದು ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು ಕೋರ್ಟ್‌ಗೆ ಒದಗಿಸಿ’ ಎಂದು ಸಿಬಿಐ ಪರ ವಕೀಲರಿಗೆ ಸೂಚಿಸಿ ಅರ್ಜಿ ವಿಚಾರಣೆ‌ಯನ್ನಯ ಏ.17ಕ್ಕೆ ಮುಂದೂಡಿತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT