ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿನ್ನೋದಷ್ಟೇ ಅಲ್ಲ ಅಡುಗೆ ಮಾಡಲೂ ಗೊತ್ತಿರ್ಬೇಕು!’

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಮ್ಮದು ಚಿಕ್ಕ ಕುಟುಂಬ. ಅಪ್ಪ–ಅಮ್ಮ, ಅಣ್ಣ ಮತ್ತು ನಾನು. ಹುಟ್ಟಿ, ಬೆಳೆದಿದ್ದು ಉಡುಪಿಯಲ್ಲಿ. ಓದಿದ್ದು ಮೈಸೂರಿನಲ್ಲಿ. ಮಂಗಳೂರು ಶೈಲಿಯ ಅಡುಗೆ ನಮ್ಮನೆಯ ವಿಶೇಷ. ಅಮ್ಮ ಅಂತೂ ಮಂಗಳೂರು ಕಡೆ ಮಾಡುವ ಎಲ್ಲಾ ರೀತಿಯ ಅಡುಗೆಯಲ್ಲಿ ಎಕ್ಸ್‌ಪರ್ಟ್. ಆದರೆ, ನನಗೂ ಅಡುಗೆ ಮನೆಗೂ ಅಷ್ಟಕಷ್ಟೇ.  ಹಾಗಂತ ಅಡುಗೆ ಮಾಡೋಕೆ ಬರಲ್ಲ ಅಂತ ಅಲ್ಲ. ಆಗಾಗ ಮಾಡ್ತೀನಿ. ದೊಡ್ಡ ದೊಡ್ಡ ಅಡುಗೆ ಮಾಡಲು ನನಗೆ ಬರಲ್ಲ. ಅನ್ನ–ಸಾರು, ಚಪಾತಿ–ಪಲ್ಯ, ಚಿತ್ರಾನ್ನ, ಅವಲಕ್ಕಿ, ಉಪ್ಪಿಟ್ಟು, ಟೊಮೆಟೊ ಬಾತ್, ತರಕಾರಿ ಪಲಾವ್ ಹೀಗೆ ಹೊಟ್ಟೆಪಾಡಿಗೆ ಎಷ್ಟು ಬೇಕೋ ಅಷ್ಟು ಮಾಡಬಲ್ಲೆ.

ನನ್ನ ಪ್ರಕಾರ ಅಡುಗೆ ಮನೆ ಅನ್ನೋದು ಹೆಣ್ಣುಮಕ್ಕಳಿಗೆ ಮಾತ್ರವಲ್ಲ. ತಿನ್ನಬೇಕು ಅಂದರೆ ಅಡುಗೆ ಮಾಡೋದು ಎಲ್ಲರಿಗೂ ಗೊತ್ತಿರಬೇಕು ಅನ್ನೋದು ನನ್ನ ನಂಬಿಕೆ. ಸರಳವಾಗಿ ಮಾಡುವಂಥ ಒಂದೆರಡು ಅಡುಗೆಯನ್ನಾದರೂ ಮಾಡಲು ಹುಡುಗ–ಹುಡುಗಿ ಇಬ್ಬರಿಗೂ ಗೊತ್ತಿರಬೇಕಷ್ಟೇ.

ನಾನಾಗ ಐದು ಅಥವಾ ಆರನೇ ತರಗತಿ ಓದುತ್ತಿದ್ದೆ ಅನಿಸುತ್ತೆ. ಆಗ ಮೊದಲ ಅಡುಗೆ ಮಾಡಿದ ನೆನಪು. ಅವತ್ತು ಮನೆಯಲ್ಲಿ ಹಬ್ಬವಿತ್ತು. ಅಮ್ಮನಿಗೆ ತುಂಬಾ ಕೆಲಸ. ಅಮ್ಮನ ಸಹಾಯದಿಂದ ಮೊದಲ ಬಾರಿಗೆ ಫ್ರೈಡ್ ರೈಸ್ ಮಾಡಿದ್ದೆ. ಅಡುಗೆ ಮನೆಯ ಕಟ್ಟೆ ನನಗೆ ನಿಲುಕುತ್ತಿರಲಿಲ್ಲ. ಹಾಗಾಗಿ ಕಟ್ಟೆ ಹತ್ತಿಯೇ ಫ್ರೈಡ್ ರೈಸ್ ಮಾಡಿದ್ದೆ. ಎಲ್ಲರೂ ಚೆನ್ನಾಗಿದೆ ಅಂತ ತಿಂದಿದ್ರು.

ಅಮ್ಮ ಮಾಡಿದ ಅಡುಗೆ ಅಂದರೆ ನಮ್ಮನೆಯಲ್ಲಿ ಎಲ್ಲರಿಗೂ ಇಷ್ಟ. ಅಪ್ಪನಿಗಂತೂ ಮನೆಯ ಊಟವೇ ಇಷ್ಟ. ಅಮ್ಮ ಮಾಡುವ ಮಸಾಲೆ ದೋಸೆ ಅಂದ್ರೆ ನನಗೆ ಪಂಚಪ್ರಾಣ. ಜತೆಗೆ ಕಾಯಿಚಟ್ನಿ, ಆಲೂಗಡ್ಡೆ ಪಲ್ಯ ಇದ್ರೆ ಅಂತೂ ಎಷ್ಟೊಂದು ಚೆನ್ನಾಗಿರುತ್ತೆ ಅಂದ್ರೆ... ಈಗ ಹೇಳುತ್ತಿರುವಾಗಲೇ ನನಗೆ ಬಾಯಲ್ಲಿ ನೀರು ಬರ್ತಾ ಇದೆ. ಇನ್ನು ಅಮ್ಮ ಮಾಡುವ ಪೂರಿ ಅಂತೂ ಸೂಪರ್. ಅವರು ಮಾಡುವ ಪೂರಿಗೆ ಗುಂಡಗೆ ಎಷ್ಟು ಚೆನ್ನಾಗಿ ಉಬ್ಬಿಕೊಳ್ಳುತ್ತೆ ಗೊತ್ತಾ? ಅದೇ ನಾನು ಮಾಡಿದ್ರೆ ಅಷ್ಟೊಂದು ಉಬ್ಬುವುದೇ ಇಲ್ಲ! ಪೂರಿ ಜತೆಗೆ ಮಾಡುವ ಸಾಗು ಕೂಡಾ ರುಚಿಕರವಾಗಿರುತ್ತೆ. ಅಮ್ಮ ಪತ್ರೊಡೆ ಕೂಡಾ ಚೆನ್ನಾಗಿ ಮಾಡ್ತಾರೆ.

ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ನೆನೆಸಿದ ಅವಲಕ್ಕಿ–ಒಗ್ಗರಣೆ ಮಾಡಿಕೊಳ್ತೀನಿ. ಅಮ್ಮ ಹೊರಗೆ ಹೋಗುವಾಗ ದೋಸೆ ಹಿಟ್ಟು ತೆಗೆದಿಟ್ಟು ಹೋಗಿರುತ್ತಾರೆ. ಆಗ ದೋಸೆ ಅಥವಾ ಇಡ್ಲಿ ಮಾಡಿಕೊಳ್ತೀನಿ. ಮತ್ತೆ ತುಂಬಾ ಇಷ್ಟವಾದ ತರಕಾರಿ ಅಥವಾ ಕ್ಯಾರೆಟ್ ಪಲಾವ್ ಮಾಡಿಕೊಳ್ತೀನಿ.

ಕ್ಯಾರೆಟ್ ಪಲಾವ್
ಬೇಕಾದ ಸಾಮಗ್ರಿಗಳು: ಬಾಸುಮತಿ ಅಕ್ಕಿ–1ಕಪ್, ತುರಿದ ಕ್ಯಾರೆಟ್–2 ಕಪ್, ಕ್ಯಾಪಿಕಂ–1, ಟೊಮೊಟೊ–2, ಈರುಳ್ಳಿ–2, ನಿಂಬೆಹಣ್ಣು ಅರ್ಧ ಹೋಳು, ಏಲಕ್ಕಿ–3, ಕರಿಬೇವು ಸ್ವಲ್ಪ, ಒಂದು ಚಮಚ ತು‍ಪ್ಪ, ಸ್ವಲ್ಪ ಗೋಡಂಬಿ, ಉಪ್ಪು.

ರುಬ್ಬಿಕೊಳ್ಳಲು ಬೇಕಾದ ಮಸಾಲೆ: ತೆಂಗಿನಕಾಯಿ ಅರ್ಧ ಕಪ್,  ಜೀರಿಗೆ, ಮೆಂತ್ಯೆ, ಧನಿಯಾ ತಲಾ ಅರ್ಧ ಚಮಚ, ಒಣಮೆಣಸಿನಕಾಯಿ–4, ಬೆಳ್ಳುಳ್ಳಿ–4 ಎಸಳು, ಚಕ್ಕೆ, ಲವಂಗ, ಮರಾಠಿಮೊಗ್ಗು ಸ್ವಲ್ಪ. ಎರಡು ಕಪ್ ನೀರನ್ನು ಬಿಸಿ ಮಾಡಿಟ್ಟುಕೊಳ್ಳಿ. ಅಕ್ಕಿಯನ್ನು ತೊಳೆದಿಟ್ಟುಕೊಳ್ಳಿ.

ಮಾಡುವ ವಿಧಾನ: ಕುಕ್ಕರಿನಲ್ಲಿ ಒಂದು ಚಮಚ ತುಪ್ಪ ಬಿಸಿಮಾಡಿ. ಅದಕ್ಕೆ ಜೀರಿಗೆ, ಕರಿಬೇವಿನ ಸೊಪ್ಪು, ಏಲಕ್ಕಿ ಹಾಕಿಕೊಳ್ಳಿ. ನಂತರ ಕತ್ತರಿಸಿ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ತುರಿದ ಕ್ಯಾರೆಟ್‌ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಅರ್ಧ ಬೆಂದ ಮೇಲೆ ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ತೊಳೆದಿಟ್ಟುಕೊಂಡ ಅಕ್ಕಿಯನ್ನು ಮಸಾಲೆಯ ಜತೆ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕ್ಯಾಪಿಕಂ, ಟೊಮೆಟೊ, ಗೋಡಂಬಿ ಹಾಕಿ ಕೊನೆಗೆ ಎರಡು ಕಪ್ ಬಿಸಿನೀರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅರ್ಧ ಹೋಳು ನಿಂಬೆಹಣ್ಣಿನ ರಸ ಹಾಕಿ. ಕುಕ್ಕರ್‌ನ ಮುಚ್ಚಳ ಮುಚ್ಚಿ. ಎರಡು ವಿಷಲ್ ಹಾಕಿಸಿ. ಈಗ ಕ್ಯಾರೆಟ್ ಪಲಾವ್ ರೆಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT