ಸುವಿಧಾ, ಸಮಾಧಾನ ಪೋರ್ಟಲ್

7
ಚುನಾವಣಾ ಮಾಹಿತಿಗೆ ಏಕಗವಾಕ್ಷಿ ಪದ್ಧತಿ

ಸುವಿಧಾ, ಸಮಾಧಾನ ಪೋರ್ಟಲ್

Published:
Updated:

ಬೀದರ್‌: ‘ಚುನಾವಣೆಗೆ ಸಂಬಂಧಿಸಿದ ಮಾಹಿತಿಗೆ ಜಿಲ್ಲೆಯಲ್ಲಿ ಸುವಿಧಾ ಹಾಗೂ ಸಾರ್ವಜನಿಕರು ದೂರು ನೀಡಲು ಸಮಾಧಾನ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೊಳಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದರು.

‘ಸಭೆ, ಮೆರವಣಿಗೆ, ಚುನಾವಣಾ ಪ್ರಚಾರಕ್ಕೆ ವಾಹನ ಬಳಸಲು, ತಾತ್ಕಾಲಿಕವಾಗಿ ಚುನಾವಣಾ ಕಚೇರಿ ತೆರೆಯಲು, ಧ್ವನಿವರ್ಧಕಗಳ ಅನುಮತಿ ಪಡೆಯಲು ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಸುವಿಧಾ ಮೂಲಕ 24 ಗಂಟೆಯೊಳಗೆ ಅನುಮತಿ ಪಡೆಯಬಹುದು. ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ ಬಳಕೆಗೆ 36 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕು’ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಚುನಾವಣೆಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕಾಗಿ ಸಮಾಧಾನ ಎನ್ನುವ ಪೋರ್ಟಲ್ ಸ್ಥಾಪಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಕುಂದು ಕೊರತೆ, ಸಲಹೆ-ಸೂಚನೆಗಳಿದ್ದರೆ ಈ ಪೋರ್ಟಲ್ ಮೂಲಕ ಸಲ್ಲಿಸಲು ನಾಗರಿಕರು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೀದರ್‌ ಜಿಲ್ಲಾಡಳಿತದ ವೆಬ್‌ಸೈಟ್‌ www.bidar.nic.in ನಲ್ಲಿ ಈ ಎರಡೂ ಪೋರ್ಟ್‌ಲ್‌ಗಳಿಗೆ ಲಿಂಕ್ ಕೊಡಲಾಗಿದೆ’ ಎಂದರು.

‘ಈವರೆಗೆ ಸುವಿಧಾದಲ್ಲಿ 9 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ 8 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಒಂದು ಅರ್ಜಿ ಬಾಕಿ ಇದೆ. ಸಮಾಧಾನದಲ್ಲಿ ಇದುವರೆಗೆ ಮೂರು ಅರ್ಜಿಗಳು ಸ್ವೀಕೃತಗೊಂಡಿದ್ದು, ಆ ಮೂರೂ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಮಟ್ಟದಲ್ಲಿ ರಚನೆಗೊಂಡ ಪ್ರಚಾರ ನಿಯಂತ್ರಣ ಸಮಿತಿಯ ಅನುಮತಿ ಪಡೆದು ರಾಜಕೀಯ ಪಕ್ಷಗಳ ಮುಖಂಡರು ಪತ್ರಿಕಾಗೋಷ್ಠಿ, ಸಭೆ ಸಮಾರಂಭಗಳನ್ನು ನಡೆಸಬೇಕು’ ಎಂದು ಹೇಳಿದರು.

15ರಂದು ಅಧಿಕಾರಿಗಳಿಗೆ ತರಬೇತಿ

ಬೀದರ್‌: 2018ರ ವಿಧಾನ ಸಭಾ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಏ.15 ಮತ್ತು 16ರಂದು ನಗರದ ಜಿಲ್ಲಾ ರಂಗ ಮಂದಿರದಲ್ಲಿ ಚುನಾವಣೆ ಕುರಿತ ತರಬೇತಿ ಏರ್ಪಡಿಸಲಾಗಿದೆ. ಪಿಆರ್‍ಒಗಳಿಗೆ ಏ.15ರಂದು ಬೆಳಿಗ್ಗೆ 8.30ರಿಂದ ಸಂಜೆ 6.30ರ ವರೆಗೆ ಮತ್ತು ಎಪಿಆರ್‍ಒಗಳಿಗೆ ಏ.16ರಂದು ಬೆಳಿಗ್ಗೆ 8.30 ರಿಂದ ಸಂಜೆ 6.30 ರ ವರೆಗೆ ತರಬೇತಿ ನೀಡಲಾಗುವುದು.

ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಪಿಆರ್‍ಒ ಮತ್ತು ಎಪಿಆರ್‍ಒ ಅವರ ಆದೇಶದಲ್ಲಿ ನಮೂದಿಸಿದ ದಿನಾಂಕ ಮತ್ತು ಸಮಯಕ್ಕೆ ಮಾತ್ರ ಹಾಜರಾಗಬೇಕು. ಚುನಾವಣೆ ಮುಗಿಯುವರೆಗೂ ಶಿಕ್ಷಕ ಸಿಬ್ಬಂದಿ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಇನಾಯತ್‌ಅಲಿ ಸಿಂದೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry