ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥುವಾ ಅತ್ಯಾಚಾರ ಪ್ರಕರಣ: ಜಮ್ಮು ವಕೀಲರ ಸಂಘದ ಅಧ್ಯಕ್ಷರಿಂದಲೇ ಸಂತ್ರಸ್ಥೆಯ ವಕೀಲೆಗೆ ಬೆದರಿಕೆ

Last Updated 12 ಏಪ್ರಿಲ್ 2018, 11:25 IST
ಅಕ್ಷರ ಗಾತ್ರ

ಕಥುವಾ(ಜಮ್ಮು ಮತ್ತು ಕಾಶ್ಮೀರ): ‘ಜಮ್ಮುವಿನ ವಕೀಲರ ಸಂಘದ ಅಧ್ಯಕ್ಷರು ತಮಗೆ ಬೆದರಿಕೆ ಹಾಕಿದ್ದಾರೆ’ ಎಂದು ಕಥುವಾ ಅತ್ಯಾಚಾರ ಸಂತ್ರಸ್ಥೆಯ ಕುಟುಂಬದ ವಕೀಲೆ ದೀಪಿಕಾ ಎಸ್‌ ರಾಜಾವತ್‌ ಆರೋಪಿಸಿದ್ದಾರೆ.

‘ಸಂಘದ ಅಧ್ಯಕ್ಷ ಬಿ.ಎಸ್‌.ಸಲಾತಿಯಾ ಅವರು ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ ಆವರಣದಲ್ಲಿಯೇ ನನಗೆ ಬೆದರಿಕೆ ಹಾಕಿದಲ್ಲದೇ, ನ್ಯಾಯಾಲಯಕ್ಕೆ ಹಾಜರಾಗದಂತೆ ತಾಕೀತು ಮಾಡಿದ್ದಾರೆ’ ಎಂದು ವಕೀಲೆ ದೀಪಿಕಾ ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ‘ಅತ್ಯಾಚಾರದ ಆರೋಪಿಗಳನ್ನು ವಕೀಲರೇಕೆ ರಕ್ಷಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯಪೊಲೀಸ್‌ ಅಪರಾಧ ವಿಭಾಗದವರು ಸರಿಯಾಗಿ ತನಿಖೆ ಮಾಡುವುದಿಲ್ಲ ಎಂದು ಪ್ರಕರಣದ ಚಾರ್ಜ್‌ಶೀಟ್‌ ದಾಖಲಿಸುವುದನ್ನು ವಕೀಲರು ತಡೆದಿದ್ದಾರೆ. ಹೀಗೆ ಅಡ್ಡಗಾಲು ಹಾಕಿ ಅವರು ಯಾರನ್ನು ತೃಪ್ತಿಪಡಿಸಲು ಹೊರಟಿದ್ದಾರೆ’ ಎಂದು ರಾಜಾವತ್‌ ಪ್ರಶ್ನಿಸಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಎಂಟು ವರ್ಷದ ಬಾಲೆಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಎಸಗಿ, ದೈಹಿಕವಾಗಿ ಹಿಂಸಿಸಿ, ಕೊಂದುಹಾಕಿದ ಘಟನೆ ಕಥುವಾ ಜಿಲ್ಲೆಯಲ್ಲಿ ನಡೆದಿತ್ತು. ಸಂತ್ರಸ್ಥೆಯು ಮುಸ್ಲಿಂ ಬುಡಕಟ್ಟು ಸಮುದಾಯಕ್ಕೆ ಸೇರಿದವಳು. ಬಾಲಕಿ ಕಾಣೆಯಾದ ಒಂದು ವಾರದ ಬಳಿಕ ಜನವರಿ 17ರಂದು ಆಕೆಯ ಶವ ಪತ್ತೆಯಾಗಿತ್ತು.

ಈ ಪ್ರಕರಣದ ಕುರಿತು ಚಾರ್ಜ್‌ಶೀಟ್‌ ದಾಖಲಿಸದಂತೆ ತಡೆದ ವಕೀಲರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೋಮವಾರ(ಏ.9) ಎಫ್‌ಐಆರ್‌ ದಾಖಲಿಕೊಂಡಿದ್ದಾರೆ.

ಅಪರಾಧ ವಿಭಾಗದ ವಿಶೇಷ ತಂಡವು ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪಿತೂರಿ, ಅಪಹರಣ, ಅಕ್ರಮ ಬಂಧನ, ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯಾಧಾರಗಳ ನಾಶದ ಆರೋಪದ ಮೇಲೆ 8 ಜನರ ಮೇಲೆ ದೂರು ದಾಖಲಿಸಿಕೊಂಡಿದೆ. ಆರೋಪಿಗಳಲ್ಲಿ ನಿವೃತ್ತ ಕಂದಾಯಾಧಿಕಾರಿ ಹಾಗೂ ಸ್ಥಳೀಯ ಪ್ರಭಾವಿ ಸಂಝಿ ರಾಮ್‌, ಕಾಲೇಜು ವಿದ್ಯಾರ್ಥಿಯಾಗಿರುವ ಆತನ ಮಗ ವಿಶಾಲ್‌ ಕುಮಾರ್, ರಾಮ್‌ನ 16 ವರ್ಷದ ಸೋದರ ಸಂಬಂಧಿ,  ಸೋದರ ಸಂಬಂಧಿಯ ಸ್ನೇಹಿತ ಪರ್ವೇಶ್‌ ಕುಮಾರ್‌ ಸೇರಿದ್ದಾರೆ.  

ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜಮ್ಮುವಿನ ವಕೀಲರ ಸಂಘವು ಬುಧವಾರ ಬಂದ್‌ ಕೂಡ ಆಚರಿಸಿತ್ತು. ಅಲ್ಲದೇ, ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಪೊಲೀಸರ ವಿಶೇಷ ತಂಡದ ವಿಶ್ವಾಸಾರ್ಹತೆ ಮೇಲೂ ಅನುಮಾನ ವ್ಯಕ್ತಪಡಿಸಿದೆ.

ಈ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್‌ ಪಕ್ಷದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದ್ದರು. ಜಮ್ಮುವಿನಿಂದ ರೊಹಿಂಗ್ಯಾ ಮುಸ್ಲಿಮರನ್ನು ಹೊರಹಾಕುವಂತೆ  ಪ್ರತಿಭಟನಾಕಾರರು ಇದೇವೇಳೆ ಒತ್ತಾಯಿಸಿದ್ದರು.

ಕಥುವಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ರಾಜೀವ್‌ ಜಸ್‌ರೊಟಿಯಾ ಅವರನ್ನು  ಈ ಪ್ರಕರಣದ ಕುರಿತು ದೂರವಾಣಿಯಲ್ಲಿ  ಪ್ರಶ್ನಿಸಿದಾಗ, ‘ಸಂಬಂಧಿಕರೊಬ್ಬರಿಗೆ ಹುಷಾರಿಲ್ಲ. ನಾನೀಗ ಆಸ್ಪತ್ರೆಗೆ ತೆರಳುತ್ತಿದ್ದೇನೆ’ ಎಂದು ಪ್ರತಿಕ್ರಿಯಸಿದರು.

ಬಳಿಕ ಕರೆ ಮಾಡಿದಾಗ, ಅವರು ತಮ್ಮ ಮೊಬೈಲ್‌ ಅನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT