ಶುಕ್ರವಾರ, ಜೂನ್ 25, 2021
21 °C

ಅಮೆರಿಕ– ಚೀನಾ ವಾಣಿಜ್ಯ ಸಮರ?

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಅಮೆರಿಕ– ಚೀನಾ ವಾಣಿಜ್ಯ ಸಮರ?

ಸೇಡಿಗೆ ಸೇಡು ಎಂಬಂತೆ ಆಮದು ಸರಕುಗಳ ಪರಸ್ಪರ ನಿರ್ಬಂಧ ಕುರಿತು ಅಮೆರಿಕ ಮತ್ತು ಚೀನಾದ ಮಧ್ಯೆ ವಾಣಿಜ್ಯ ಸಮರ ಕುರಿತ ಚರ್ಚೆ ಜೋರಾಗಿಯೇ ಕೇಳಿ ಬರುತ್ತಿದೆ. ಅಮೆರಿಕದ ನಿಲುವಿಗೆ ಸಡ್ಡು ಹೊಡೆದಿರುವ ಚೀನಾದ ಧೋರಣೆ ಪೂರ್ಣ ಪ್ರಮಾಣದ ಜಾಗತಿಕ ವಾಣಿಜ್ಯ ಸಮರಕ್ಕೆ ಹಾದಿ ಮಾಡಿಕೊಡಲಿದೆಯೇ ಎಂಬ ಆತಂಕ ಎದುರಾಗಿದೆ.

ವಿವಾದದ ಮೂಲ ಯಾವುದು?

ಉಕ್ಕು ಮತ್ತು ಅಲ್ಯುಮಿನಿಯಂ ಆಮದು ನಿರ್ಬಂಧಿಸಲು ಕ್ರಮವಾಗಿ ಶೇ 25 ಮತ್ತು ಶೇ 10ರಷ್ಟು ಸುಂಕ ವಿಧಿಸುವ ಅಮೆರಿಕದ ಧೋರಣೆಯು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಉಭಯ ದೇಶಗಳ 40 ವರ್ಷಗಳ ವಾಣಿಜ್ಯ ಸಂಬಂಧದಲ್ಲಿ ಬಿರುಕು ಮೂಡಿಸಿತ್ತು. ತನ್ನ ಉತ್ಪನ್ನಗಳಿಗೆ ದಂಡನಾತ್ಮಕ ಸುಂಕ ವಿಧಿಸುವ ಅಮೆರಿಕದ ನಿಲುವಿನಿಂದ ತಾನು ಧೃತಿಗೆಡುವುದಿಲ್ಲ ಎಂದು ಚೀನಾ ದೃಢ ನಿಲುವು ತಾಳಿತ್ತು.

ಎರಡು ಬಲಾಢ್ಯ ದೇಶಗಳ ನಡುವಣ ಈ ಕಲಹ ಇಡೀ ವಿಶ್ವದ ಗಮನ ಸೆಳೆದಿತ್ತು. ಜಾಗತಿಕ ಹಣಕಾಸು ಪೇಟೆಯಲ್ಲಿಯೂ ಸಂಚಲನ ಮೂಡಿಸಿತ್ತು. ಮುಂಬೈ ಸೇರಿದಂತೆ ದೇಶ– ವಿದೇಶಗಳ ಷೇರುಪೇಟೆಗಳಲ್ಲಿ ಖರೀದಿ ಉತ್ಸಾಹವನ್ನೇ ಉಡುಗಿಸಿತ್ತು.

ಬದಲಾದ ಧೋರಣೆಗೆ ಅಮೆರಿಕ ಸ್ವಾಗತ

ಈಗ ಚೀನಾದ ಪ್ರತೀಕಾರದ ನಿಲುವು ಸಡಿಲುಗೊಂಡಿದೆ. ತನ್ನ ಆರ್ಥಿಕತೆಯನ್ನುಇನ್ನಷ್ಟು ಮುಕ್ತಗೊಳಿಸುವುದಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನೀಡಿರುವ ವಾಗ್ದಾನವು ಹೊಸದೊಂದು ಭರವಸೆ ಮೂಡಿಸಿದೆ. ಚೀನಾದ ಧ್ವನಿ ತುಸು ಮೃದುವಾಗಿದ್ದರೂ ಅಮೆರಿಕ ತನ್ನ ಬಿಗಿಪಟ್ಟನ್ನು ಬಿಟ್ಟುಕೊಟ್ಟಿಲ್ಲ. ಚೀನಾದ ಸರಕುಗಳ ಆಮದು ನಿರ್ಬಂಧಿಸಲು ಭಾರಿ ಮೊತ್ತದ ಸುಂಕ ರದ್ದುಪಡಿಸುವ ಸಾಧ್ಯತೆಯನ್ನು ತಳ್ಳಿಹಾಕಿದೆ. ವಾಣಿಜ್ಯ ಸಮರದ ತೀವ್ರತೆ ತಗ್ಗಿಸುವ ನಿಟ್ಟಿನಲ್ಲಿ ಚೀನಾ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದೂ ಪ್ರತಿಪಾದಿಸಿದೆ.

ಚೀನಾದ ಬದಲಾದ ನಿಲುವೇನು?

ವಾಹನ ಆಮದು ಸುಂಕ ತಗ್ಗಿಸಲು, ವಿದೇಶಿ ಸಂಸ್ಥೆಗಳ ಬೌದ್ಧಿಕ ಆಸ್ತಿ ರಕ್ಷಿಸಲು ಮತ್ತು ಆರ್ಥಿಕತೆಯನ್ನು ಇನ್ನಷ್ಟು ಮುಕ್ತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಚೀನಾ ಹೇಳಿದೆ. ‘ಅಮೆರಿಕ ಜತೆಗಿನ ವಿದೇಶ ವ್ಯಾಪಾರದಲ್ಲಿ ಮೇಲುಗೈ ಸಾಧಿಸುವುದು ಚೀನಾದ ಉದ್ದೇಶವಾಗಿಲ್ಲ. ಆಮದು ಪ್ರಮಾಣ ಹೆಚ್ಚಿಸಲು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತವಾಗಲಿದೆ. ಚಾಲ್ತಿ ಖಾತೆಯಲ್ಲಿ ಪಾವತಿ ಸಮತೋಲನ ಕಾಯ್ದುಕೊಳ್ಳಲಿದೆ’ ಎಂದು ಜಿನ್‌ಪಿಂಗ್‌ ಹೇಳಿದ್ದರು. ‘ಈ ಹೇಳಿಕೆ ಉತ್ತೇಜನಕಾರಿಯಾಗಿದೆ. ಚೀನಾದಿಂದ ನಾವು ರಚನಾತ್ಮಕ ಕ್ರಮ ನಿರೀಕ್ಷಿಸುತ್ತೇವೆ’ ಎಂದು ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದ ಚಿಂತೆಗೆ ಕಾರಣ ಏನು?

ಚೀನಾ ಜತೆಗಿನ ವ್ಯಾಪಾರ ಕೊರತೆ ಗಮನಾರ್ಹ ಪ್ರಮಾಣದಲ್ಲಿ ಇರುವುದೇ ಅಮೆರಿಕದ ಚಿಂತೆಗೆ ಕಾರಣವಾಗಿದೆ. ಚೀನಾ ಅನುಸರಿಸುತ್ತಿರುವ ವಾಣಿಜ್ಯ ಧೋರಣೆಯಿಂದಾಗಿ ಸರಕುಗಳ ವ್ಯಾಪಾರ ಕೊರತೆಯು ₹ 24 ಲಕ್ಷ ಕೋಟಿಗಳಿಗೆ ತಲುಪಲಿದೆ. ಇದರಿಂದ ಎರಡು ಲಕ್ಷದಷ್ಟು ಉದ್ಯೋಗ ಅವಕಾಶಗಳು ನಷ್ಟವಾಗಲಿವೆ. ಚೀನಾ, ಇತರ ದೇಶಗಳ ಜತೆಗೂ ಇದೇ ಬಗೆಯ ತಾರತಮ್ಯದಿಂದ ಕೂಡಿದ ವಾಣಿಜ್ಯ ನೀತಿ ಅನುಸರಿಸುತ್ತಿದೆ ಎಂದೂ ಟ್ರಂಪ್‌ ಆಡಳಿತ ಆರೋಪಿಸಿದೆ.

ಚೀನಾ ಸರಕಿಗೆ ಹೆಚ್ಚುವರಿ ಸುಂಕ

ಅಮೆರಿಕವು ಮಾರ್ಚ್‌ನಲ್ಲಿ ಕೈಗೊಂಡ ವಾಣಿಜ್ಯ ನಿರ್ಬಂಧ ಕ್ರಮಗಳಿಗೆ ಚೀನಾ ಪ್ರತೀಕಾರ ಕ್ರಮ ಕೈಗೊಂಡಿತ್ತು. ಈ ಕಾರಣಕ್ಕೆ, ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಗಳನ್ನು ಗುರುತಿಸಲು ಟ್ರಂಪ್‌ ಆದೇಶಿಸಿದ್ದರು.

ಚೀನಾದ ಪ್ರತೀಕಾರ

ತನ್ನ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದಲ್ಲಿ ಆಮದು ಸುಂಕವನ್ನು ಅಮೆರಿಕ ವಿಧಿಸಿರುವುದಕ್ಕೆ ಪ್ರತೀಕಾರಾರ್ಥ ಚೀನಾ ಕೂಡ ಅಮೆರಿಕದ ಉತ್ಪನ್ನಗಳಿಗೆ ಗರಿಷ್ಠ ದರದ ಆಮದು ಸುಂಕ ವಿಧಿಸಲು ಮುಂದಾಗಿತ್ತು. ಅಮೆರಿಕದ 128 ಉತ್ಪನ್ನಗಳಿಗೆ ನೀಡಲಾಗುತ್ತಿದ್ದ ₹ 19 ಸಾವಿರ ಕೋಟಿ ಮೊತ್ತದ ಸುಂಕ ವಿನಾಯ್ತಿಯನ್ನೂ ರದ್ದುಪಡಿಸಿತ್ತು. ಅಮೆರಿಕವು ತನ್ನ ನಿರ್ಧಾರವನ್ನು ಜಾರಿಗೆ ತರುತ್ತಿದ್ದಂತೆ ತನ್ನ ಪ್ರತೀಕಾರದ ಕ್ರಮಗಳೂ ಜಾರಿಗೆ ಬರಲಿವೆ ಎಂದು ಹೇಳಿತ್ತು.

ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ₹ 3.90 ಲಕ್ಷ ಕೋಟಿಗಳಷ್ಟು ತೆರಿಗೆ ವಿಧಿಸಲು ಟ್ರಂಪ್‌ ಅವರು ಮಾರ್ಚ್‌ ತಿಂಗಳಿನಲ್ಲಿ ಆದೇಶಿಸಿದ್ದರು. ಇದಕ್ಕೆ ಚೀನಾ ಪ್ರತೀಕಾರದ ಕ್ರಮ ಕೈಗೊಂಡಿತ್ತು. ಅಮೆರಿಕದ ಉತ್ಪನ್ನಗಳ ಮೇಲೆ ₹ 3.25 ಲಕ್ಷ ಕೋಟಿ ಮೊತ್ತದ ಸುಂಕ ವಿಧಿಸುವುದಾಗಿ ಪ್ರಕಟಿಸಿತ್ತು. ಇದಕ್ಕೆ ಕನಲಿದ ಟ್ರಂಪ್‌, ಚೀನಾದ ಸರಕುಗಳ ಆಮದು ನಿರ್ಬಂಧಿಸಲು ಹೆಚ್ಚುವರಿಯಾಗಿ ₹ 6.50 ಲಕ್ಷ ಕೋಟಿ ಮೊತ್ತದ ಸುಂಕ ವಿಧಿಸುವುದಾಗಿ ಹೊಸ ಬೆದರಿಕೆ ಒಡ್ಡಿದ್ದರು.

ಚೀನಾದ ಧೋರಣೆ ಏನು?

ಅಮೆರಿಕವು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದೆ. ವಾಣಿಜ್ಯ ಸಮರಕ್ಕೆ ತಾನು ಬೆದರುವುದಿಲ್ಲ ಎಂದು ಚೀನಾ ತಿರುಗೇಟು ನೀಡಿತ್ತು. ತನ್ನ ಉತ್ಪನ್ನಗಳು ಅಮೆರಿಕದಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದ್ದು, ಹಣದುಬ್ಬರ ತಡೆಗಟ್ಟುತ್ತಿವೆ. ವಾಣಿಜ್ಯ ಸಮರದಿಂದ ಗ್ರಾಹಕರಿಗೆ ಅನ್ಯಾಯವಾಗಲಿದೆ ಎಂದು ಪ್ರತಿಪಾದಿಸುತ್ತಿದೆ. ಅಮೆರಿಕದ ವ್ಯಾಪಾರ ಸಂರಕ್ಷಣೆಯ ಏಕಪಕ್ಷೀಯ ನಿರ್ಧಾರವನ್ನು ಯಾವುದೇ ಬೆಲೆ ತೆತ್ತಾದರೂ ದೃಢ ಸಂಕಲ್ಪದಿಂದ ಎದುರಿಸುವುದಾಗಿ ಹೇಳಿತ್ತು. ಅಂತರರಾಷ್ಟ್ರೀಯ ಸಮುದಾಯದ ಆಕ್ಷೇಪಗಳಿಗೂ ‘ವಿಶ್ವದ ದೊಡ್ಡಣ್ಣ’ ಬೆಲೆ ಕೊಡುತ್ತಿಲ್ಲ ಎಂದೂ ದೂರಿತ್ತು.

ಭಾರತದ ಮೇಲೆ ಪರಿಣಾಮವೇನು?

ಒಂದು ವೇಳೆ ಜಾಗತಿಕ ವಾಣಿಜ್ಯ ಸಮರವು ತಾರಕಕ್ಕೆ ಏರಿದ್ದರೆ, ಭಾರತದ ಆರ್ಥಿಕತೆ ಅದರಲ್ಲೂ ವಿಶೇಷವಾಗಿ ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿತ್ತು. ರಫ್ತು ಕಡಿಮೆಯಾಗಿ, ಚಾಲ್ತಿ ಖಾತೆ ಕೊರತೆ ಹೆಚ್ಚಲಿತ್ತು. ಆರ್ಥಿಕ ವೃದ್ಧಿ ದರ (ಜಿಡಿಪಿ) ಹಿನ್ನಡೆ ಕಾಣುತ್ತಿತ್ತು. ಅಮೆರಿಕದ ನಿರ್ಧಾರವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿರಲಿಲ್ಲ. ಆದರೆ, ಪರೋಕ್ಷ ಸ್ವರೂಪದ ಪ್ರತಿಕೂಲ ಪರಿಣಾಮಗಳು ಕಂಡು ಬರಲಿದ್ದವು. ಷೇರುಪೇಟೆಯೂ ಪ್ರಭಾವಿತಗೊಂಡರೆ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಳಗೊಳ್ಳಲಿತ್ತು.

ಅಮೆರಿಕದ ಆಕ್ಷೇಪವೇನು?

ಚೀನಾವು ಅಮೆರಿಕದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕದ್ದಿದೆ. ನ್ಯಾಯಯುತವಲ್ಲದ ವ್ಯಾಪಾರ ನೀತಿ ಅನುಸರಿಸುತ್ತಿದೆ ಎಂದು ಅಮೆರಿಕವು ವಿಶ್ವ ವ್ಯಾಪಾರ ಸಂಘಟನೆಗೂ (ಡಬ್ಲ್ಯುಟಿಒ) ದೂರು ನೀಡಿದೆ.

ಅಮೆರಿಕ ಬಯಸುವುದೇನು?

ನ್ಯಾಯಸಮ್ಮತ ವ್ಯಾಪಾರ. ಚೀನಾ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ಮುಕ್ತಗೊಳಿಸಬೇಕು. ಆಮದು ಸುಂಕ ತಗ್ಗಿಸಬೇಕು. ಒತ್ತಾಯದ ತಂತ್ರಜ್ಞಾನ ವರ್ಗಾವಣೆ ನಿಲ್ಲಿಸಬೇಕು– ಇವು ಅಮೆರಿಕದ ಬೇಡಿಕೆಗಳಾಗಿವೆ.

ಬೇರೆ ಉದ್ದೇಶವೂ ಇದೆಯೇ?

ಹೌದು. ಚೀನಾ ಆರ್ಥಿಕ ಶಕ್ತಿಯಾಗಿ ಬೆಳೆಯುವುದನ್ನು ಮೊಟಕುಗೊಳಿಸಿ, ಜಾಗತಿಕ ವಿದ್ಯಮಾನಗಳಲ್ಲಿ ಅದರ ಪ್ರಭಾವ ತಗ್ಗಿಸುವುದೂ ಅಮೆರಿಕದ ಆಲೋಚನೆಯಾಗಿದೆ.

ವ್ಯಾಪಕ ವಿರೋಧ

ಟ್ರಂಪ್‌, ಬರೀ ಚೀನಾದ ವಿರುದ್ಧವಷ್ಟೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ವಿಶ್ವದ ಇತರ ದೇಶಗಳೂ ಅವರ ಕೆಂಗಣ್ಣಿಗೆ ಗುರಿಯಾಗಿದ್ದವು. ತೀವ್ರ ವಿರೋಧದ ನಂತರ ಕೆನಡಾ, ಮೆಕ್ಸಿಕೊ ಮತ್ತಿತರ ದೇಶಗಳ ವಿರುದ್ಧದ ನಿಬಂಧನೆ ಕೈಬಿಡಲಾಗಿತ್ತು. ಅಮೆರಿಕದ ನಿಲುವನ್ನು ಐರೋಪ್ಯ ಒಕ್ಕೂಟವೂ ಪ್ರಶ್ನಿಸಿತ್ತು. ಎರಡು ದೇಶಗಳ ಮಧ್ಯೆ ವಾಣಿಜ್ಯ ಹಿತಾಸಕ್ತಿ ರಕ್ಷಣೆ ಸಂಬಂಧ ಕೆಲ ವಿವಾದಗಳು ಇದ್ದೇ ಇರುತ್ತವೆ. ನೆಗಡಿ ಬಂದರೆ ಮೂಗು ಕೊಯ್ದುಕೊಳ್ಳಲು ಮುಂದಾಗುವ ಹುಚ್ಚು ಸಾಹಸದಂತೆ, ಎರಡೂ ದೇಶಗಳು ವ್ಯಾಪಾರದ ಮೂಲ ಉದ್ದೇಶಕ್ಕೆ ಧಕ್ಕೆ ತರಲು ಹೊರಟಿದ್ದವು. ಸದ್ಯಕ್ಕೆ ಬಿಕ್ಕಟ್ಟು ತುಸು ಶಮನಗೊಂಡಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.