3
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ರೋಡ್‌ ಶೋ

ಎರಡನೇ ದಿನವೂ ಬಿರುಸಿನ ಪ್ರಚಾರ

Published:
Updated:

ಮೈಸೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸತತ ಎರಡನೇ ದಿನ ಅಬ್ಬರದ ಪ್ರಚಾರ ಕೈಗೊಂಡರು. ರೋಡ್‌ ಶೋ ನಡೆಸಿ ಜಿ.ಟಿ.ದೇವೇಗೌಡ ಪರ ಮತಯಾಚಿಸಿದರು.

ಭಾನುವಾರ ಬೆಳಿಗ್ಗೆ 11 ರಿಂದ ಆರಂಭವಾದ ಪ್ರಚಾರ ಅಭಿಯಾನ ರಾತ್ರಿಯವರೆಗೂ ಮುಂದುವರಿಯಿತು. ಸುಮಾರು 30 ಗ್ರಾಮಗಳಿಗೆ ಭೇಟಿ ನೀಡಿದರು. ಅಲ್ಲಲ್ಲಿ ಭಾಷಣ ಮಾಡಿ ಮತದಾರರ ಮನಗೆಲ್ಲಲು ಪ್ರಯತ್ನಿಸಿದರು.

ರಿಂಗ್‌ ರಸ್ತೆಗೆ ಹೊಂದಿಕೊಂಡಿರುವ ಲಿಂಗಾಂಬುದಿಪಾಳ್ಯದಿಂದ ಪ್ರಚಾರಕ್ಕೆ ಚಾಲನೆ ದೊರೆಯಿತು. ಅಲ್ಲಿಂದ ನೇರವಾಗಿ ಶ್ರೀರಾಂಪುರ ವೃತ್ತದ ಬಳಿ ಬಂದು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಪ್ರಚಾರ ವಾಹನವನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದರಿಂದ ರಿಂಗ್‌ ರಸ್ತೆಯಲ್ಲಿ ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಶ್ರೀರಾಂಪುರದಿಂದ ಉದ್ಬೂರಿಗೆ ಬಂದಾಗ ಅದ್ದೂರಿ ಸ್ವಾಗತ ಲಭಿಸಿತು. ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರಚಾರ ವ್ಯಾನ್‌ಗೆ ಹೂವಿನ ಮಳೆಗರೆದರು. ವ್ಯಾನ್‌ ಸಮೀಪ ಬಂದು ಕುಮಾರಸ್ವಾಮಿ ಅವರಿಗೆ ಹಸ್ತಲಾಘವ ನೀಡಲು ಪರಸ್ಪರ ಪೈಪೋಟಿ ನಡೆಯಿತು. ತಳ್ಳಾಟ, ನೂಕಾಟದಲ್ಲಿ ಕೆಲವರು ಚಪ್ಪಲಿ ಕಳೆದುಕೊಂಡರು.

ಉದ್ಬೂರಿನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, ‘ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಪಕ್ಷ ಈ ಬಾರಿ ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತದೆ. ಪ್ರತಿ ಮನೆಯ ಒಬ್ಬರಿಗೆ ಉದ್ಯೋಗ ಕಲ್ಪಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ’ ಎಂದರು.

‘ಉದ್ಬೂರು ಗ್ರಾಮದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನೀವು ನನ್ನನ್ನು ಕುಟುಂಬದ ಒಬ್ಬ ಮಗನಂತೆ ನೋಡಿದ್ದೀರಿ. 11 ವರ್ಷಗಳ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತೋರಿಸಿದ್ದ ಅದೇ ಪ್ರೀತಿಯನ್ನು ಈಗಲೂ ತೋರಿಸುತ್ತಿದ್ದೀರಿ’ ಎಂದು ಹೇಳಿದರು.

‘ನಿಮ್ಮಂತಹ ಶ್ರಮಜೀವಿಗಳಿಗೆ ಆರ್ಥಿಕ ನೆರವು ಕೊಡಿಸುವ ಮನಸ್ಸು ಸಿದ್ದರಾಮಯ್ಯನವರಿಗೆ ಬರಲಿಲ್ಲ. ಮುಖ್ಯಮಂತ್ರಿ ಅವರು ಇಲ್ಲಿನ ಬಡತನ ಹೋಗಲಾಡಿಸಲು ಪ್ರಯತ್ನ ಪಟ್ಟಿಲ್ಲ. ನಿಮಗೆ ಮನೆಗಳನ್ನು ಕಟ್ಟಿಸಿಕೊಟ್ಟಿಲ್ಲ. ಹಕ್ಕುಪತ್ರ ಕೊಟ್ಟಿಲ್ಲ’ ಎಂದು ಕಾಂಗ್ರೆಸ್‌ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.

ಉದ್ಬೂರಿನಲ್ಲಿ ಪ್ರಚಾರ ಮುಗಿಸಿ ಕೆಲ್ಲಹಳ್ಳಿಗೆ ಬಂದರು. ಅದುವರೆಗೆ ಪ್ರಚಾರ ವ್ಯಾನ್‌ನಲ್ಲಿದ್ದ ಕುಮಾರಸ್ವಾಮಿ ಬಳಿಕ ಪ್ರಚಾರ ಬಸ್‌ ಏರಿದರು. ಟಿ.ಕಾಟೂರು,

ಮಾರ್ಬಳ್ಳಿ ಮತ್ತು ಮಾರ್ಬಳ್ಳಿ ಹುಂಡಿಯಲ್ಲಿ ಪ್ರಚಾರ ನಡೆಸಿದರು. ಮಾರ್ಬಳ್ಳಿ ಹುಂಡಿಯಲ್ಲಿ ಕೆಲವರು ಕಾಂಗ್ರೆಸ್‌ ಬಾವುಟ ತೋರಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಅರಸನಕೆರೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಕೆರೆಕಟ್ಟೆಗಳನ್ನು ತುಂಬಿಸುವ ಅವಕಾಶ ಇತ್ತು. ಆದರೆ ಅವರು ಆ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.

‘ಕಾಂಗ್ರೆಸ್‌ನವರು ಹಣದ ಆಮಿಷ ತೋರಿಸಿ ಮತಯಾಚನೆ ಮಾಡಬಹುದು. ಹಣಕ್ಕೆ ಮಾರುಹೋಗಿ ನಿಮ್ಮ ಮತವನ್ನು ಮಾರಬೇಡಿ’ ಎಂದು ಕಿವಿಮಾತು ಹೇಳಿದರು. ಅರಸನಕೆರೆಯಿಂದ ದೂರ ಗ್ರಾಮಕ್ಕೆ ತೆರಳಿದರು. ಆ ಬಳಿಕ ತಳೂರು, ಸಿಂಧುವಳ್ಳಿ, ಚಿಕ್ಕಕಾನ್ಯ, ಹೊಸಹುಂಡಿ, ಆಲನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

‘ಈ ಪ್ರೀತಿಯನ್ನು ಮರೆಯಲಾರೆ’

ಉದ್ಬೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ರೋಡ್‌ ಶೋನಲ್ಲಿ ಬರುತ್ತಿದ್ದಾಗ ಒಬ್ಬರು ತಮ್ಮ ಟವೆಲ್‌ ನನಗೆ ಕೊಡಲು ಮುಂದಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿರಬಹುದು. ಬಿಸಿಲು ಇದೆ, ಈ ಟವೆಲ್‌ ತಲೆಗೆ ಹಾಕಿಕೊಳ್ಳಿ ಎಂದು ನನ್ನಲ್ಲಿ ಕೇಳಿಕೊಂಡರು. ಇದು ನಾನು ನಿಮ್ಮಿಂದ ಪಡೆದಿರುವ ಪ್ರೀತಿ. ಈ ಪ್ರೀತಿಯನ್ನು ಕೊನೆಯುಸಿರಿನವರೆಗೂ ಉಳಿಸಿಕೊಳ್ಳುತ್ತೇನೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry