3
ನಾಲ್ಕೂ ವಿಧಾನಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ

ಇಕ್ಬಾಲ್‌ಗೆ ಟಿಕೆಟ್: ರೇವಣ್ಣ ಅಚ್ಚರಿ ಆಯ್ಕೆ

Published:
Updated:

ರಾಮನಗರ: ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಚನ್ನಪಟ್ಟಣದಿಂದ ಕಣಕ್ಕೆ ಇಳಿಯಲಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ನಡುವಿನ ಸ್ಪರ್ಧೆಯಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಇದೀಗ ರೇವಣ್ಣರ ಪ್ರವೇಶದಿಂದಾಗಿ ತ್ರಿಕೋನ ಸ್ಪರ್ಧೆಯ ಲಕ್ಷಣಗಳು ಕಾಣುತ್ತಿವೆ. ಗೊಂಬೆಗಳ ನಾಡನ್ನೂ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಹಿರಿಯ ನಾಯಕನನ್ನೇ ಕಣಕ್ಕೆ ಇಳಿಸುವ ಛಲ ತೋರಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್‌ರನ್ನು ಮಣಿಸುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ ಎಂದು ಆರಂಭದಲ್ಲಿ ಸುದ್ದಿ ಹಬ್ಬಿತ್ತು. ನಂತರದಲ್ಲಿ ಕೈ ಪಾಳಯದ ಅಭ್ಯರ್ಥಿಯಾಗಿ ಹಲವರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ರೇವಣ್ಣ ಸ್ಪರ್ಧೆಗೆ ಇಳಿಯಲಿದ್ದಾರೆ. ಇದರ ಹಿಂದೆಯೂ ಡಿ.ಕೆ. ಶಿವಕುಮಾರ್‌ರ ತಂತ್ರಗಾರಿಕೆ ಅಡಗಿದೆ.

ರಾಮನಗರ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್ ಸ್ಪರ್ಧಿಸುವುದು ಖಾತ್ರಿಯಾಗಿದೆ. ಶಿವಕುಮಾರ್ ಅವರ ಆಯ್ಕೆಗೆ ಹೈಕಮಾಂಡ್‌ ಸಮ್ಮತಿ ಸೂಚಿಸಿದೆ. ಇಕ್ಬಾಲ್ ಕಳೆದ ಕೆಲವು ತಿಂಗಳಿಂದ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜೆಡಿಎಸ್‌ ನಿಂದ ಕಾಂಗ್ರೆಸ್‌ಗೆ ಜಿಗಿದ ಎಚ್.ಸಿ. ಬಾಲಕೃಷ್ಣ ಅವರಿಗೆ ಮಾಗಡಿಯಲ್ಲಿ ಪಕ್ಷದ ಟಿಕೆಟ್‌ ಖಾತ್ರಿಯಾಗಿದೆ. ಕೆಲವು ದಿನಗಳ ಹಿಂದೆ ಮಾಗಡಿ ಕೋಟೆಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರೇ ಬಾಲಕೃಷ್ಣರ ಬೆನ್ನು ತಟ್ಟುವ ಮೂಲಕ ಗ್ರೀನ್‌ ಸಿಗ್ನಲ್ ನೀಡಿದ್ದರು. ಇದೀಗ ಅದಕ್ಕೆ ಅಧಿಕೃತ ಮುದ್ರೆ ಬಿದ್ದಂತೆ ಆಗಿದೆ.

ಕನಕಪುರ ಕ್ಷೇತ್ರದಿಂದ ನಿರೀಕ್ಷೆಯಂತೆಯೇ ಡಿ,ಕೆ. ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ನಾಮಪತ್ರ ಸಲ್ಲಿಕೆ ನಾಳೆಯಿಂದ

ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಇದೇ 17ರಂದು ಆರಂಭಗೊಳ್ಳಲಿದೆ. ಬಾಲಕೃಷ್ಣ, ಇಕ್ಬಾಲ್‌ ಹುಸೇನ್‌ ಹಾಗೂ ಡಿ,ಕೆ. ಶಿವಕುಮಾರ್ ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ ಚನ್ನಪಟ್ಟಣ ಕ್ಷೇತ್ರಕ್ಕೆ ರೇವಣ್ಣ ಇನ್ನಷ್ಟೇ ಕಾಲಿಡಬೇಕಿದೆ. ಸೀಮಿತ ಅವಧಿಯಲ್ಲಿ ಅವರು ಹೇಗೆ ಮತದಾರರನ್ನು ಓಲೈಸಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry