ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೋಸ್‌ ಪಡೆಗೆ ಜಯ

ಲಾ ಲಿಗಾ ಫುಟ್‌ಬಾಲ್‌: ಮಿಂಚಿದ ಐಸಾಕೊ,ಕ್ಯಾಸೆಮಿರೊ
Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಐಸಾಕೊ ಮತ್ತು ಕ್ಯಾಸೆಮಿರೊ ಅವರ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ನೆರವಿನಿಂದ ರಿಯಲ್‌ ಮ್ಯಾಡ್ರಿಡ್‌ ತಂಡ ಲಾ ಲಿಗಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಭಾನುವಾರ ನಡೆದ ಹೋರಾಟದಲ್ಲಿ ರಿಯಲ್‌ ಮ್ಯಾಡ್ರಿಡ್‌ 2–1 ಗೋಲುಗಳಿಂದ ಮಲಾಗ ಸಿ.ಎಫ್‌. ತಂಡವನ್ನು ಸೋಲಿಸಿತು.

ಈ ಜಯದೊಂದಿಗೆ ರಿಯಲ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೆ ಸ್ಥಾನಕ್ಕೇರಿತು. 32 ಪಂದ್ಯಗಳನ್ನು ಆಡಿರುವ ಸರ್ಜಿಯೊ ರಾಮೋಸ್‌ ಪಡೆ ಒಟ್ಟು 67 ಪಾಯಿಂಟ್ಸ್‌ ಕಲೆಹಾಕಿದೆ.

32 ಪಂದ್ಯಗಳಿಂದ 82 ಪಾಯಿಂಟ್ಸ್‌ ಗಳಿಸಿರುವ ಎಫ್‌.ಸಿ. ಬಾರ್ಸಿಲೋನಾ ತಂಡ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ. ಅಟ್ಲೆಟಿಕೊ ಮ್ಯಾಡ್ರಿಡ್‌ (71 ಪಾ.) ಎರಡನೆ ಸ್ಥಾನದಲ್ಲಿದೆ.

4–2–3–1ರ ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ರಾಮೋಸ್‌ ಪಡೆ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿತು. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಗರೆತ್‌ ಬ್ಯಾಲ್‌ ಅವರ ಅನುಪಸ್ಥಿತಿಯಲ್ಲಿ ಇತರ ಆಟಗಾರರು ಮೋಡಿ ಮಾಡಿದರು.

29ನೆ ನಿಮಿಷದಲ್ಲಿ ಐಸಾಕೊ, ರಿಯಲ್‌ ತಂಡದ ಖಾತೆ ತೆರೆದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಅವರು ಚುರುಕಾಗಿ ಗುರಿ ಮುಟ್ಟಿಸಿದರು. ನಂತರದ ಅವಧಿಯಲ್ಲಿ ಮಲಾಗ ತಂಡ ಸಮಬಲದ ಗೋಲು ದಾಖಲಿಲು ಸಾಕಷ್ಟು ಪ್ರಯತ್ನಿಸಿತು. ಆದರೆ ರಿಯಲ್‌ ತಂಡದ ರಕ್ಷಣಾ ಕೋಟೆ ಭೇದಿಸಲು ಈ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

1–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ರಾಮೋಸ್‌ ಬಳಗ, ದ್ವಿತೀಯಾರ್ಧದಲ್ಲೂ ಪರಿಣಾಮಕಾರಿ ಆಟ ಆಡಿತು. 63ನೆ ನಿಮಿಷದಲ್ಲಿ ಕ್ಯಾಸೆಮಿರೊ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು.

ನಿಗದಿತ ಅವಧಿಯ ಆಟ ಮುಗಿದಾಗ ರಿಯಲ್‌ ಮ್ಯಾಡ್ರಿಡ್‌ 2–0 ಗೋಲುಗಳಿಂದ ಮುನ್ನಡೆ ಹೊಂದಿತ್ತು. 90+3ನೆ ನಿಮಿಷದಲ್ಲಿ ಡಿಯಾಗೊ ರೋಲನ್‌ ಗೋಲು ದಾಖಲಿಸಿದರು. ಹೀಗಾಗಿ ಮಲಾಗ ತಂಡ ಸೋಲಿನ ಅಂತರವನ್ನು 1–2ಕ್ಕೆ ತಗ್ಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT