ಮಂಗಳವಾರ, ಜೂಲೈ 7, 2020
27 °C

ಜಯಾ ಸಾವಿನ ಪ್ರಕರಣ: ನಿವೃತ್ತ ಮುಖ್ಯಕಾರ್ಯದರ್ಶಿ ರಾವ್‌ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯಾ ಸಾವಿನ ಪ್ರಕರಣ: ನಿವೃತ್ತ ಮುಖ್ಯಕಾರ್ಯದರ್ಶಿ ರಾವ್‌ ಬಂಧನಕ್ಕೆ ಆಗ್ರಹ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ನಿವೃತ್ತ ಮುಖ್ಯಕಾರ್ಯದರ್ಶಿ ಪಿ.ರಾಮ್‌ಮೋಹನ ರಾವ್‌ ಅವರನ್ನು ಬಂಧಿಸುವಂತೆ ಇಬ್ಬರು ಸಚಿವರು ಒತ್ತಾಯಿಸಿದ್ದಾರೆ.

ತನಿಖಾ ಆಯೋಗದ ಮುಂದೆ ಹಾಜರಾಗುವ ಮುನ್ನ ಮಾತನಾಡಿದ ರಾಮ್‌ಮೋಹನ ರಾವ್‌, ಜಯಾ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸುವ ಪ್ರಸ್ತಾವಕ್ಕೆ ಹಿರಿಯ ಸಚಿವರು ಸಮ್ಮತಿ ನೀಡಲಿಲ್ಲ ಹಾಗೂ 2016ರ ಡಿಸೆಂಬರ್ 4ರಂದು ಅವರಿಗೆ ಹೃದಯಾಘಾತ ಸಂಭವಿಸಿದಾಗ ಕೆಲವು ಸಚಿವರು ಆಸ್ಪತ್ರೆಯಲ್ಲಿ ಇದ್ದರು ಎಂದು ತಿಳಿಸಿದ್ದರು.

ರಾವ್‌ ಅವರ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ರಾವ್‌ ಅವರನ್ನು ತಕ್ಷಣ ಬಂಧಿಸಿ, ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸಬೇಕು ಎಂದು ಸಚಿವ ಡಿ. ಜಯಕುಮಾರ್ ಆಗ್ರಹಿಸಿದ್ದಾರೆ. ಇನ್ನೊಬ್ಬ ಸಚಿವ ಪಿ. ತಂಗಮಣಿ ಅವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಯಮತ್ತೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಜಯಾ ಆರೋಗ್ಯದ ಕುರಿತು ರಾವ್ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದರು. ರಾವ್‌ ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಾರೆ. ಇದರ ಹಿಂದೆ ಕರ್ನಾಟಕದ ಜೈಲಿನಲ್ಲಿರುವ ವಿ.ಶಶಿಕಲಾ ಅವರ ಕೈವಾಡ ಇರಬಹುದು ಎಂದರು.

ರಾವ್ ಅವರು ಶಶಿಕಲಾಗೆ ನಿಕಟರಾಗಿದ್ದರು ಮತ್ತು ಜಯಲಲಿತಾ ಅವರು ಅಪೊಲೊ ಆಸ್ಪತ್ರೆಯಲ್ಲಿದ್ದಾಗ ಶಶಿಕಲಾ ನೀಡಿದ ಸೂಚನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

‘ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಒಬ್ಬರಿಗೆ ಸಹಾಯ ಮಾಡುವ ಸಲುವಾಗಿ ಎಲ್ಲರನ್ನೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಕಚೇರಿಯಲ್ಲೂ ರಾಜಕಾರಣಿಯಂತೆ ಇದ್ದರು. ಸರ್ಕಾರಿ ಅಧಿಕಾರಿಯಂತೆ ಎಂದೂ ಕೆಲಸ ಮಾಡಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.