ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಬ್ಲ್ಯುಬಿಐ ಸಲಹೆಯಂತೆ ‘ಕ್ವಾಂಟಿ’ ಲ್ಯಾಬ್ ನೆರವು

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ವೀನ್ ಲತೀಫಾ ಕುದುರೆಗೆ ಸ್ಟಿರಾಯ್ಟ್ ಹಾಗೂ ಕೊಕೈನ್ ಡ್ರಗ್ಸ್ ನೀಡಲಾಗಿದೆ ಎಂದು ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿದ್ದವು. ಅದನ್ನೇ ಆಧರಿಸಿ ‘ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ’ (ಎಡಬ್ಲ್ಯುಬಿಐ) ಬಿಟಿಸಿ ವಿರುದ್ಧ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಹೀಗಾಗಿ, ಸತ್ಯಾಸತ್ಯತೆ ತಿಳಿಯಲು ಕುದುರೆ ಮೂತ್ರದ ‘ಬಿ’ ಮಾದರಿಯನ್ನು ಮಾರಿಷಸ್‌ನ ‘ಕ್ವಾಂಟಿ’ ಪ್ರಯೋಗಾಲಯಕ್ಕೆ ಕಳುಹಿಸಿದ್ದೆವು...'

‘ಡೋಪಿಂಗ್‌’ಗೆ ನೆರವು ನೀಡಿದ್ದಾರೆಂಬ ಆರೋಪ ಎದುರಿಸುತ್ತಿರುವ ಬೆಂಗಳೂರು ಟರ್ಫ್‌ ಕ್ಲಬ್‌ನ (ಬಿಟಿಸಿ) ಸ್ಟೀವರ್ಡ್ ವಿವೇಕ್ ಉಭಯ್‌ಕರ್ ಸೇರಿದಂತೆ ಆರು ಜನರು, ಸಿಐಡಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆ ಇದು.

‘ಮೂತ್ರದ ಮಾದರಿಯನ್ನು ಸಂಪೂರ್ಣ ವಿಶ್ಲೇಷಣೆಗಾಗಿ ಯಾವುದಾದರೂ ಅಂತರರಾಷ್ಟ್ರೀಯ ಲ್ಯಾಬ್‌ಗೆ ಕಳುಹಿಸುವಂತೆ ಎಡಬ್ಲ್ಯುಬಿಐ ಪತ್ರ ಬರೆದಿತ್ತು. ಅದರ ಸೂಚನೆಯಂತೆಯೇ ನಾವು ಕ್ವಾಂಟಿ ಲ್ಯಾಬ್‌ಗೆ ಕಳುಹಿಸಿದ್ದೆವು. ನಿಯಮಬಾಹಿರವಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ’ ಎಂದು ಅವರು ಸಿಐಡಿ ಎದುರು ಪ್ರತಿಪಾದಿಸಿದ್ದಾರೆ.

‘ಕ್ವಾಂಟಿಯು ಪ್ರತಿಷ್ಠಿತ ‘ಮುಂಬೈ ರೇಸ್‌ ಕ್ಲಬ್‌’ಗೆ ಅನುಮೋದನೆಗೊಂಡ ಲ್ಯಾಬ್ ಆಗಿದೆ. ಕೆಲ ಗಂಭೀರ ಪ್ರಕರಣಗಳಲ್ಲಿ ಹಿಂದೆ ಬಿಟಿಸಿಯೂ ಆ ಲ್ಯಾಬ್‌ನ ನೆರವು ಪಡೆಯುತ್ತಿತ್ತು. ದುಬಾರಿ ಶುಲ್ಕ ವಿಧಿಸುತ್ತದೆ ಎಂಬ ಕಾರಣಕ್ಕೆ 2016ರ ಜನವರಿಯಿಂದ ಆ ಲ್ಯಾಬ್‌ ಬಿಟ್ಟು, ದೆಹಲಿಯ ನ್ಯಾಷನಲ್ ಡೋಪಿಂಗ್ ಟೆಸ್ಟ್ ಲ್ಯಾಬೊರೇಟರಿ (ಎನ್‌ಡಿಟಿಎಲ್‌) ಮೊರೆ ಹೋದವು’ ಎಂದೂ ವಿವರಿಸಿದ್ದಾರೆ.

ನಿರ್ಮಲ್ ಪ್ರಸಾದ್: ‘ಟರ್ಫ್‌ ಅಥಾರಿಟಿ ಆಫ್ ಇಂಡಿಯಾದ ನಿಯಮಾವಳಿ ಪ್ರಕಾರ ಕ್ಲಾಸಿಕ್‌ (ಗ್ರೇಡೆಡ್) ರೇಸ್‌ಗಳಲ್ಲಿ ಗೆದ್ದ ಕುದುರೆಗಳ ಮೂತ್ರದ ಮಾದರಿಯನ್ನು ಅಂತರರಾಷ್ಟ್ರೀಯ ಲ್ಯಾಬ್‌ಗಳಿಗೆ ಹಾಗೂ ಸಾಮಾನ್ಯ (ಆರ್ಡಿನರಿ) ರೇಸ್‌ಗಳಲ್ಲಿ ಗೆದ್ದ ಕುದುರೆಗಳ ಮೂತ್ರದ ಮಾದರಿಯನ್ನು ದೆಹಲಿಯ ಎನ್‌ಡಿಟಿಎಲ್‌ಗೆ ಕಳುಹಿಸಲಾಗುತ್ತದೆ. ಅಂತೆಯೇ, ಮಾರ್ಚ್ 5ರಂದು ಆರ್ಡಿನರಿ ರೇಸ್‌ನಲ್ಲಿ ಜಯಿಸಿದ್ದ ‘ಕ್ವೀನ್‌ ಲತೀಫಾ’ದ ಮೂತ್ರವನ್ನು ಎನ್‌ಡಿಟಿಎಲ್‌ಗೆ ಕಳುಹಿಸಿದ್ದೆವು. ಪ್ರೊಕೈನ್ ಅಂಶ ಪತ್ತೆಯಾಗಿರುವುದಾಗಿ ಅಲ್ಲಿನ ತಜ್ಞರು ಮಾರ್ಚ್ 23ರಂದು ವರದಿ ಕೊಟ್ಟಿದ್ದರು’ ಎಂದು ಕ್ಲಬ್ ಸಿಇಒ ಆಗಿದ್ದ ನಿರ್ಮಲ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

‘ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನಾವು, ವರದಿಯನ್ನು ಇನ್ನೊಮ್ಮೆ ಪರಿಶೀಲಿಸಿ ಪ್ರೊಕೈನ್ ಪ್ರಮಾಣ ಎಷ್ಟಿದೆ ಎಂಬುದನ್ನು ನಿಖರವಾಗಿ ಹೇಳುವಂತೆ ಮಾರ್ಚ್ 25ರಂದು ಪುನಃ ಎನ್‌ಡಿಟಿಎಲ್‌ಗೆ ಪತ್ರ ಬರೆದೆವು. 1.22 ನ್ಯಾನೊ ಗ್ರಾಂ ಪ್ರೊಕೈನ್ ಇರುವುದಾಗಿ ತಜ್ಞರು ಏ.3ರಂದು ಮೇಲ್ ಕಳುಹಿಸಿದ್ದರು.’

‘ಏ.8ರಂದು ಸ್ಟೀವರ್ಡ್‌ಗಳ ಸಭೆಯಲ್ಲಿ ಎನ್‌ಡಿಟಿಎಲ್‌ನ ವರದಿಯ ವಿಚಾರವಾಗಿ ಚರ್ಚೆ ನಡೆಯಿತು. ಎಡಬ್ಲ್ಯುಬಿಐ ದೂರು ದಾಖಲಿಸಿದ್ದರಿಂದ ಮೂತ್ರದ ‘ಬಿ’ ಮಾದರಿಯನ್ನು ಹಾಂಗ್‌ಕಾಂಗ್‌ ಲ್ಯಾಬ್‌ಗೆ ಕಳುಹಿಸಿ ಪರಿಶೀಲಿಸಲು ನಿರ್ಧರಿಸಿದ್ದೆವು. ಆದರೆ, ಅಲ್ಲಿನ ತಜ್ಞರು ಪೂರ್ಣ ವಿಶ್ಲೇಷಣೆ ಮಾಡಲು ನಿರಾಕರಿಸಿದ್ದರಿಂದ ಕ್ವಾಂಟಿ ಲ್ಯಾಬ್‌ಗೆ ಕಳುಹಿಸಿದ್ದೆವು. ‘ಡೋಪಿಂಗ್ ಆಗಿಲ್ಲ’ ಎಂದು ಕ್ವಾಂಟಿ ತಜ್ಞರು ವರದಿ ಕೊಟ್ಟರು.’

‘ಕುದುರೆ ಮೂತ್ರದಲ್ಲಿ 10 ನ್ಯಾನೊ ಗ್ರಾಂವರೆಗೆ ಪ್ರೋಕೈನ್‌ ಅಂಶ ಇರಬಹುದು ಎಂದು ‘ಯುರೋಪಿಯನ್‌ ಹಾರ್ಸ್‌ ರೇಸಿಂಗ್‌ ಸೈಂಟಿಫಿಕ್‌ ಲಿಯಸನ್’ (ಇಎಸ್‌ಎಚ್‌ಎಲ್‌ಸಿ) ಸಮಿತಿ ಶಿಫಾರಸು ಮಾಡಿದೆ. ಕ್ವೀನ್‌ ಲತೀಫಾದಲ್ಲಿ ಪತ್ತೆಯಾಗಿದ್ದು 1.22 ನ್ಯಾನೊ ಗ್ರಾಂ ಮಾತ್ರ. ಎನ್‌ಡಿಟಿಎಲ್ ಸಹ ತನ್ನ ಎರಡನೇ ವರದಿಯಲ್ಲಿ ಇದನ್ನು ಒಪ್ಪಿಕೊಂಡಿದೆ. ಆದರೂ, ಕೆಲ ಸಹೋದ್ಯೋಗಿಗಳು ಸುಳ್ಳು ಆರೋಪ ಮಾಡುವ ಮೂಲಕ ಕ್ಲಬ್‌ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ’ ಎಂದು ನಿರ್ಮಲ್ ದೂರಿದ್ದಾರೆ.

ವಿವೇಕ್ ಉಭಯ್‌ಕರ್: ‘ಕುದುರೆ ಮೂತ್ರವನ್ನು ಕ್ವಾಂಟಿ ಲ್ಯಾಬ್‌ಗೆ ಕಳುಹಿಸುವ ನಿರ್ಧಾರ ನನ್ನೊಬ್ಬನದ್ದಾಗಿರಲಿಲ್ಲ. ಸ್ವೀವರ್ಡ್‌ಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹರೀಂದ್ರ ಶೆಟ್ಟಿಗೆ ಮೊದಲಿನಿಂದಲೂ ನನ್ನ ಮೇಲೆ ಸಿಟ್ಟಿತ್ತು. ಅದೇ ಮನಸ್ಥಿತಿ ಹೊಂದಿರುವ ಕೆಲ ಅಧಿಕಾರಿಗಳ ಜತೆಗೂಡಿ ನನ್ನ ವಿರುದ್ಧವೇ ಪಿತೂರಿ ಮಾಡಿದ್ದಾರೆ’ ಎಂದು ವಿವೇಕ್ ಉಭಯ್‌ಕರ್ ಹೇಳಿಕೆ ನೀಡಿದ್ದಾರೆ.

ಎಚ್‌.ಎಸ್.ಮಹೇಶ್: ‘ಕುದುರೆಗೆ ಔಷಧೋಪಚಾರಕ್ಕಾಗಿ ಪ್ರೊಕೈನ್ ಚುಚ್ಚುಮದ್ದು ನೀಡಿದರೆ, ಅದರ ಅಂಶವು 77 ದಿನಗಳವರೆಗೂ ಮೂತ್ರದಲ್ಲಿ ಉಳಿದಿರುತ್ತದೆ ಎಂದು ಇಎಸ್‌ಎಚ್‌ಎಲ್‌ಸಿ ಸ್ಪಷ್ಟಪಡಿಸಿದೆ. ಇಂಥ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಳ್ಳುವ ಹಾಗೂ ನ್ಯಾಯ ಸಮ್ಮತ ತನಿಖೆಯ ಉದ್ದೇಶದಿಂದ ಕ್ವಾಂಟಿ ಲ್ಯಾಬ್‌ನ ನೆರವು ಕೇಳಿದ್ದೆವೋ ಹೊರತು, ಯಾರಿಗೂ ಸಹಕಾರ ನೀಡುವುದಕ್ಕಲ್ಲ’ ಎಂದು ಕ್ಲಬ್‌ನ ಪಶು ವೈದ್ಯಾಧಿಕಾರಿ ಮಹೇಶ್ ಹೇಳಿದ್ದಾರೆ.

ನೀಲ್ ದರಶಾ: ‘ಗಂಟಲು ಊತ ಹಾಗೂ ದಣಿವಿನಿಂದ ಬಳಲುತ್ತಿದ್ದ ಕ್ವೀನ್‌ ಲತೀಫಾಗೆ ಫೆ.27 ರಿಂದ ನಿತ್ಯವೂ ಪ್ರೊಕೈನ್ ಚುಚ್ಚುಮದ್ದು ನೀಡಲಾಗುತ್ತಿತ್ತು. ಐದು ದಿನಗಳ ನಂತರ ವೈದ್ಯರು ನಿತ್ಯ ಎರಡು ಚುಚ್ಚುಮದ್ದು ನೀಡುತ್ತಿದ್ದರು. ಬಹುಶಃ ಆ ಕಾರಣದಿಂದಲೇ ಪ್ರೊಕೈನ್ ಪ್ರಮಾಣ ಕಡಿಮೆ ಆದಂತಿಲ್ಲ. ಬೇಗ ಗುಣಮುಖವಾಗಲಿ ಎಂಬ ಉದ್ದೇಶವಿತ್ತೇ ವಿನಃ, ಕಾರ್ಯಕ್ಷಮತೆ ಹೆಚ್ಚಿಸಿ ಪ್ರಶಸ್ತಿ ಗೆಲ್ಲುವ ಗುರಿ ನಮ್ಮದಾಗಿರಲಿಲ್ಲ’ ಎಂದು ಕು‌ದುರೆ ತರಬೇತುದಾರ ನೀಲ್ ದರಶಾ ಹೇಳಿದ್ದಾರೆ.

ಅರ್ಜುನ್ ಸಜನಾನಿ: ‘ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಕಾರಣಕ್ಕೆ ಹರೀಂದ್ರ ಶೆಟ್ಟಿ ಸುಳ್ಳಿನ ಕತೆ ಹೆಣೆದಿದ್ದಾರೆ. ಇಲ್ಲ–ಸಲ್ಲದ ಆರೋಪಗಳನ್ನು ಹೊರಿಸಿ ಕ್ಲಬ್ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಎಲ್ಲ ಪ್ರಕ್ರಿಯೆಗಳೂ ವೈದ್ಯಕೀಯ ನಿಮಯಗಳ ಪ್ರಕಾರವೇ ನಡೆದಿವೆ’ ಎಂದು ಕ್ವೀನ್ ಲತೀಫಾ ಕುದುರೆಯ ಸಹ ಮಾಲೀಕ ಅರ್ಜುನ್ ಸಜನಾನಿ ಹೇಳಿಕೆ ಕೊಟ್ಟಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅರ್ಜುನ್, ‘ಹರೀಂದ್ರ ಶೆಟ್ಟಿ ಆರೋಪಿಸಿರುವಂತೆ ಏ.27ರಂದು ಸುತ್ತೋಲೆ ತಿದ್ದಲು ಸಭೆ ಕರೆದಿರಲಿಲ್ಲ. ಮೂತ್ರದ ಮಾದರಿಯನ್ನು ಕ್ವಾಂಟಿ ಪ್ರಯೋಗಾಲಯಕ್ಕೆ ಕಳುಹಿಸುವ ಬಗ್ಗೆ ಅಭಿಪ್ರಾಯ ಕೋರಲು ಎಲ್ಲರನ್ನೂ ಕರೆಯಲಾಗಿತ್ತು. ಸಭೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಸಿಐಡಿ ಅಧಿಕಾರಿಗಳಿಗೆ ಒದಗಿಸಿದ್ದೇವೆ’ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಿರ್ಮಲ್ ಅವರನ್ನು ಸಂಪರ್ಕಿಸಿದಾಗ, ‘ನಾನು ಚಾರ್ಜ್‌ಶೀಟ್ ನೋಡಿಲ್ಲ. ಆರೋಪಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು. ವೈದ್ಯ ಮಹೇಶ್, ‘ಪ್ರಕರಣ ಕೋರ್ಟ್ ಅಂಗಳದಲ್ಲಿದೆ. ಈ ಹಂತದಲ್ಲಿ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರು ತ‍ಪ್ಪಿತಸ್ಥರು, ಯಾರು ನಿರ್ದೋಷಿಗಳು ಎಂಬುದು ಅಲ್ಲೇ ನಿರ್ಧಾರವಾಗಲಿ’ ಎಂದರು. ಪ್ರದ್ಯುಮ್ನ ಸಿಂಗ್ ಹಾಗೂ ವಿವೇಕ್ ಉಭಯ್‌ಕರ್ ಸಹ ಪ್ರತಿಕ್ರಿಯಿಸಲು ನಿರಾಕರಿಸಿದರು.

ವಾರ್ಷಿಕ ವ್ಯವಹಾರ ₹ 1,927 ಕೋಟಿ!
‘ಬೆಂಗಳೂರು ರೇಸ್‌ಕೋರ್ಸ್‌ನಲ್ಲಿ 2016–17ರಲ್ಲಿ 1,927 ಕೋಟಿ ವ್ಯವಹಾರ ನಡೆದಿದ್ದು, ಕ್ಲಬ್ ವತಿಯಿಂದ ಸರ್ಕಾರಕ್ಕೆ ₹ 150 ಕೋಟಿ ಹಣ ಸಂದಾಯ ಮಾಡಲಾಗಿದೆ. ಆ ವರ್ಷ 1,000ಕ್ಕೂ ಹೆಚ್ಚು ಕುದುರೆಗಳ ಮೂತ್ರದ ಮಾದರಿಯನ್ನು ಲ್ಯಾಬ್‌ಗಳಿಗೆ ಕಳುಹಿಸಲಾಗಿದ್ದು, ಅದಕ್ಕಾಗಿಯೇ ₹ 70 ಲಕ್ಷ ಪಾವತಿಸಿದ್ದೇವೆ’ ಎಂದು ನಿರ್ಮಲ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

‘ಡೋಪಿಂಗ್ ಎಂದೇ ಪರಿಗಣನೆ’
‘ರೇಸ್‌ನಲ್ಲಿ ಪಾಲ್ಗೊಳ್ಳುವ ಕುದುರೆಯ ಕಾರ್ಯಕ್ಷಮತೆ ಹೆಚ್ಚಿಸುವಂತಹ ಯಾವುದೇ ಔಷಧ ಅದರ ದೇಹದಲ್ಲಿ ಇರುವಂತಿಲ್ಲ. ಪ್ರೊಕೈನ್ ಚುಚ್ಚುಮದ್ದು ನೀಡಿದರೆ, ಅಂಥ ಕುದುರೆಗಳನ್ನು ಕನಿಷ್ಠ 21 ದಿನ ರೇಸ್‌ನಿಂದ ಹೊರಗಿಡಲಾಗುತ್ತದೆ. ಆದರೆ, ಕ್ವೀನ್‌ ಲತೀಫಾಗೆ‌ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಚುಚ್ಚುಮದ್ದು ನೀಡಿದ್ದರಿಂದ 33 ದಿನಗಳಾದರೂ, ಅದರ ದೇಹದಲ್ಲಿ ಪ್ರೊಕೈನ್ ಪ್ರಮಾಣ ಕಡಿಮೆ ಆಗಿರಲಿಲ್ಲ. ಕಾರ್ಯಕ್ಷಮತೆ ಹೆಚ್ಚಿಸುವಂಥ ಔಷಧ ಪತ್ತೆಯಾಗಿದ್ದರಿಂದ, ಅದನ್ನು ‘ಡೋಪಿಂಗ್’ ಎಂದೇ ಪರಿಗಣಿಸಲಾಗುತ್ತದೆ’ ಎಂದು ಸಿಐಡಿ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT