ಸೋಮವಾರ, ಜುಲೈ 13, 2020
25 °C

ಮದ್ಯ ಅಕ್ರಮ ಸಂಗ್ರಹ; ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ಯ ಅಕ್ರಮ ಸಂಗ್ರಹ; ಇಬ್ಬರ ಬಂಧನ

ಕಾರವಾರ: ಹಳಿಯಾಳ ತಾಲ್ಲೂಕಿನ ಬೆಳವಟಿಗಿ ಗ್ರಾಮದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು ₹ 1 ಲಕ್ಷ ಮೌಲ್ಯದ 450 ಲೀ. ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸಾಂಬಾಜಿ ಅಪ್ಪಯ್ಯ ಮಂಗನಗೌಡ (62) ಹಾಗೂ ಅವರ ಪುತ್ರ ಮೌಳೇಶ್ವರ (33) ಅವರನ್ನು ಬಂಧಿಸಿದ್ದಾರೆ.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ, ‘ಆರೋಪಿಗಳು ತಮ್ಮ ತೋಟದ ಮನೆಯ ಅಟ್ಟದಲ್ಲಿ ಗೋಲ್ಡನ್ ಏಸ್ ಫೈಲ್ ವಿಸ್ಕಿಯ 50 ಕೇಸ್‌ಗಳನ್ನು ಚುನಾವಣಾ ಸಂದರ್ಭದಲ್ಲಿ ಹಂಚುವ ಸಲುವಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ನೀಡಿದ ಮಾಹಿತಿ ಆಧರಿಸಿ, ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಯಿತು.

ದಾಂಡೇಲಿ ಅಬಕಾರಿ ನಿರೀಕ್ಷಕಿ ಕವಿತಾ ಅವರು ತಂಡದ ನೇತೃತ್ವ ವಹಿಸಿದ್ದರು. ತಡರಾತ್ರಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳನ್ನು ಮುಂಜಾನೆ ಬಂಧಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

433 ಕಡೆಗಳಲ್ಲಿ ದಾಳಿ: ‘ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾರ್ಚ್ 27ರಿಂದ ಇಂದಿನವರೆಗೆ ಅಬಕಾರಿ ಇಲಾಖೆಯಿಂದ ಜಿಲ್ಲೆಯಾದ್ಯಂತ 433 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಅವುಗಳಿಗೆ ಸಂಬಂಧಿಸಿ 79 ಆರೋಪಿಗಳನ್ನು ಬಂಧಿಸಲಾಗಿದೆ. 68 ಆರೋಪಿಗಳು ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ. 32 ಘೋರ ಅಪರಾಧಗಳು, ನಿಯಮ ಬಾಹಿರವಾಗಿ ಮದ್ಯ ಮಾರಾಟಕ್ಕೆ ಸಂಬಂಧಿಸಿ 36 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 16 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳಲ್ಲಿ ಎರಡು ಟ್ಯಾಂಕರ್‌ಗಳು, ನಾಲ್ಕು ಕಾರುಗಳು, ಒಂದು ಟಾಟಾ ಏಸ್, ಎಂಟು ದ್ವಿಚಕ್ರ ವಾಹನಗಳೂ ಸೇರಿವೆ. ಒಟ್ಟು ₹ 71.62 ಲಕ್ಷ ಮೌಲ್ಯದ ವಸ್ತುಗಳನ್ನು ಈ ತನಕ ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.