ಶನಿವಾರ, ಆಗಸ್ಟ್ 8, 2020
22 °C
ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ವರ್ಗಾವಣೆ, ಡಾ.ಆರ್‌.ವಿಶಾಲ್‌ಗೆ ಚುನಾವಣೆ ನಡೆಸುವ ಹೊಣೆ

ಜಿಲ್ಲೆ ಅಭಿವೃದ್ಧಿಗೆ ವೇಗ ತಂದುಕೊಟ್ಟ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆ ಅಭಿವೃದ್ಧಿಗೆ ವೇಗ ತಂದುಕೊಟ್ಟ ಅಧಿಕಾರಿ

ತುಮಕೂರು: ಜಿಲ್ಲೆಯ ಅಭಿವೃದ್ಧಿಗೆ ವೇಗ ತಂದುಕೊಟ್ಟಿದ್ದ, ಎಲ್ಲರೊಂದಿಗೂ ಸ್ನೇಹಭಾವ ತೋರುತ್ತಿದ್ದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಅವರನ್ನು ಮಂಗಳವಾರ ಚುನಾವಣಾ ಆಯೋಗ ವರ್ಗಾವಣೆ ಮಾಡಿದೆ. ನೂತನ ಜಿಲ್ಲಾಧಿಕಾರಿಯಾಗಿ ಡಾ.ಆರ್‌.ವಿಶಾಲ್‌ ಅಧಿಕಾರ ಸ್ವೀಕರಿಸಿದರು.

ಜಿಲ್ಲಾಧಿಕಾರಿಯಾಗಿ ಮೂವತ್ತು ತಿಂಗಳಿಂದ ಮೋಹನ್‌ರಾಜ್‌  ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಲ್ಲೆಯ ಬರಗಾಲ, ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ಸಮಸ್ಯೆಯ ಕಗ್ಗಂಟಾಗಿದ್ದ, ಜಿಲ್ಲೆಯಿಂದಲೇ ಹೊರಹೋಗುವ ಸಂದರ್ಭದಲ್ಲಿದ್ದ ಗುಬ್ಬಿ ಸಮೀಪದ ಬಿದರೆಹಳ್ಳ ಕಾವಲ್‌ನ ಎಚ್‌ಎಎಲ್‌ (ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌) ಲಘು ಯುದ್ಧ ವಿಮಾನಗಳ ತಯಾರಿಕ ಘಟಕವನ್ನು ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಭೂಮಿ ಕೊಡದಿದ್ದ ರೈತರನ್ನು ಮನವೊಲಿಸಿದ್ದರು. ಬಗರ್‌ ಹುಕುಂನಡಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪರ್ಯಾಯ ಭೂಮಿ ನೀಡಿ ಅಲ್ಲಿ ಘಟಕ ಬರಲು ಕಾರಣರಾಗಿದ್ದರು. ಸುಮಾರು ₹ 5000 ಸಾವಿರ ಕೋಟಿ ಬಂಡವಾಳ ಹೂಡಿಕೆಯೆ ಈ ಘಟಕದಲ್ಲಿ ಮೂರು ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಂಬಲಾಗಿದೆ.

ಪಾವಗಡ ತಾಲ್ಲೂಕಿನಲ್ಲಿ ಸ್ಥಾಪನೆಯಾಗುತ್ತಿರುವ ಏಷ್ಯಾದ ಅತಿ ದೊಡ್ಡ ಸೋಲಾರ್‌ಪಾರ್ಕ್‌ ಸ್ಥಾಪನೆಯ ಹಿಂದೆಯೂ ಮೋಹನ್ ರಾಜ್‌ ಶ್ರಮ ಇತ್ತು. ರೈತರನ್ನು ಮನವೊಲಿಸಿ ಭೂಮಿ ಕೊಡಿಸಿದ್ದರು. ಅಲ್ಲದೇ ಕೆಲವೇ ತಿಂಗಳಲ್ಲಿ ಅಷ್ಟೂ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪ‍ರಿವರ್ತಿಸಲು ಹಗಲು–ರಾತ್ರಿ ಸಿಬ್ಬಂದಿ ಜತೆ ಕೆಲಸ ಮಾಡಿದ್ದರು.

ನಿಂತೇ ಹೋಗಿದ್ದ ತುಮಕೂರು–ದಾವಣಗೆರೆ, ತುಮಕೂರು–ರಾಯದುರ್ಗ, ತುಮಕೂರು–ತಿಪಟೂರು ಜೋಡಿ ರೈಲು ಮಾರ್ಗ ಯೋಜನೆಗಳ ಭೂಸ್ವಾಧೀನ ಕೆಲಸ ಇವರ ಕಾಲದಲ್ಲಿ ವೇಗ ಪಡೆದುಕೊಂಡವು. ತುಮಕೂರು–ರಾಯದುರ್ಗ ಯೋಜನೆಗೆ ಭೂಸ್ವಾಧೀನ ಬಹುತೇಕ ಮುಗಿದು ಹೋಗಿದೆ. ದಾವಣಗೆರೆ ರೈಲು ಮಾರ್ಗದ ಭೂಸ್ವಾಧೀನ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ.

ಹೇಮಾವತಿ ನಾಲೆ, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗಾಗಿ ಭೂಸ್ವಾಧೀನ ಕೆಲಸ ನಡೆದಿದೆ. ಇದು ಕೂಡ ಜಿಲ್ಲೆಯ ನೀರಾವರಿ ಯೋಜನೆಗಳು ವೇಗ ಪಡೆದುಕೊಳ್ಳಲು ಕಾರಣವಾಯಿತು.

’ಜಿಲ್ಲೆಯಲ್ಲಿ ಎಲ್ಲರಿಗೂ ಸಮಾಧಾನವಾಗುವಂತೆ ಕೆಲಸ ಮಾಡಿದ್ದ ಬೇರೊಬ್ಬ ಜಿಲ್ಲಾಧಿಕಾರಿಯನ್ನು ನಾನು ನೋಡಿಲ್ಲ. ಪ್ರಚಾರ, ಅಬ್ಬರ ಇಲ್ಲದೆ ಕೆಲಸ ಮಾಡಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಅವರು ನಿರಂತರ ಕೆಲಸ ಮಾಡಿದರು. ಯಾರೂ ಊಹಿಸಿದ ನಿರ್ಗತಿಕರು, ಬಡವರಿಗೂ ಜಿಲ್ಲಾಧಿಕಾರಿ ಬಾಗಿಲು ತೆರೆಯುವಂತೆ ಮಾಡಿದರು’ ಎಂದು ಅಭಿವೃದ್ಧಿ ರೆವುಲ್ಯೂಷನ್‌ ಫೋರಂನ ಕುಂದರಹಳ್ಳಿ ರಮೇಶ್‌ ಅಭಿಪ್ರಾಯಪಟ್ಟರು.

ನೂತನ ಜಿಲ್ಲಾಧಿಕಾರಿ: ನೂತನ ಜಿಲ್ಲಾಧಿಕಾರಿ ವಿಶಾಲ್‌ ಅವರು ಚಿಕ್ಕೋಡಿ, ಕಲಬುರಗಿ, ಉಡುಪಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಹೆಚ್ಚುವರಿ ಚುನಾವಣಾ ಅಧಿಕಾರಿಯಾಗಿ ಹಾಗೂ ಲೋಕಸಭಾ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವವಿದೆ.

ಈವರೆಗೂ ಯಾವ ಜಿಲ್ಲಾಧಿಕಾರಿಯೂ ನೋಡದ, ಮುಟ್ಟದ ಹಕ್ಕಿಪಿಕ್ಕರು, ಸುಡುಗಾಡು ಸಿದ್ಧರು, ಕೊಳೆಗೇರಿ ನಿವಾಸಿಗಳು, ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಮೋಹನ್‌ರಾಜ್ ತೋರಿದ ತುಡಿತ, ಪ್ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ರಸ್ತೆ ಬದಿ, ಕೆರೆಗಳಲ್ಲಿ, ಸ್ಮಶಾನದ ಜಾಗದಲ್ಲಿ ವಾಸಿಸುತ್ತಿದ್ದ ಹಕ್ಕಿಪಿಕ್ಕರು, ಸುಡುಗಾಡು ಸಿದ್ಧರು, ಹಂದಿಜೋಗಿ, ಶಿಳ್ಳೇಕ್ಯಾತ, ಬುಡಗಜಂಗಮ,  ದಕ್ಕಲಿಗರು, ಗೋಸಂಗಿ, ಅಸಾದರು, ದೊಂಬಿದಾಸರ ಬಗ್ಗೆ ಸಿಬ್ಬಂದಿ ಕಳುಹಿಸಿ ಸಮೀಕ್ಷೆ ನಡೆಸಿದ್ದರು.

ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಅವರು ವಾಸಿಸುತ್ತಿದ್ದ ಸಮೀಪದಲ್ಲೆ ಇದ್ದ ಸರ್ಕಾರಿ ಜಾಗಗಳನ್ನು ತೋರಿಸಿ ಅವರುಗಳು ಇಷ್ಟಪಟ್ಟ ಜಾಗದಲ್ಲಿ ಅವರಿಗೆ ನಿವೇಶನ ಕೊಟ್ಟಿದ್ದು ಜಿಲ್ಲೆಯ ಇತಿಹಾಸದಲ್ಲೆ ಮೊದಲಾಗಿದೆ. ಆ ಜನಾಂಗಕ್ಕೆಂದು ಮೀಸಲಿಟ್ಟರೆ ಬೇರೆ ಯಾರಾದರೂ ನಿವೇಶನ ಪಡೆಯಬಹುದು ಎಂಬ ಕಾರಣಕ್ಕಾಗಿ ಅವರವರ ಹೆಸರಿಗೇನೆ ಖಾತೆ ಹಂಚಿಕೆ ಮಾಡಿದ್ದರು.

ಈ ಸಮುದಾಯಗಳ ಸುಮಾರು 395 ಮಂದಿಗೆ ನಿವೇಶನ ಕೊಟ್ಟಿದ್ದಾರೆ.ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ಹೇಳದಿದ್ದರೂ ಅವರೇ ಉತ್ಸುಕತೆ ತೋರಿಸಿ ಈ ಕೆಲಸ ಮಾಡಿದ್ದರು. ಇದಕ್ಕಾಗಿ ಎಷ್ಟೊ ದಿನಗಳು ತಡರಾತ್ರಿ 1.30ವರೆಗೂ ಕೆಲಸ ಮಾಡುತ್ತಿದ್ದರು.

ಹೆಬ್ಬಾಕ, ಹಳೇಗುಬ್ಬಿ, ದಬ್ಬೇಘಟ್ಟ, ಪಾವಗಡ, ಹಳೆಪಾಳ್ಯದಲ್ಲಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು 21 ಎಕರೆ ಭೂಮಿ ನೀಡುವಲ್ಲಿ ಇವರ ಶ್ರಮ ಇತ್ತು.

’ರಾಜೀವ್ ಗಾಂಧಿ ಅವಾಜ್‌ ಯೋಜನೆಯಲ್ಲಿ ದಿಬ್ಬೂರಿನಲ್ಲಿ ನಿರ್ಮಿಸಿರುವ 1200 ಮನೆಗಳ ಬಗ್ಗೆ ಜಿಲ್ಲಾಧಿಕಾರಿ ಆಸಕ್ತಿ ವಹಿಸಿದೆ ಹೋಗಿದ್ದರೆ ಕೊಳೆಗೇರಿ ಹಾಗೂ ಬೀದಿ ವಾಸಿಗಳು, ಮಂಗಳಮುಖಿಯರು, ನಿರಾಶ್ರಿತ ಭಿಕ್ಷುಕರಿಗೆ ಮನೆಯೇ ಸಿಗುತ್ತಿರಲಿಲ್ಲ. ಅವರಿಂದಾಗಿ  ಇಂಥ 435 ಜನರಿಗೆ ಮನೆ ಸಿಗುವಂತಾಯಿತು’ ಎಂದು ಕೊಳೆಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.

‘ನಗರ ಮಧ್ಯೆ ಇರುವ ಬಾಳನಕಟ್ಟೆ ಪ್ರದೇಶದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಾರಿಯಮ್ಮ ನಗರದ ಕೊಳೆಗೇರಿಗಳಿಗೆ 87 ಮನೆಗಳನ್ನು ನಿರ್ಮಾಣಕ್ಕೆ ಭೂಮಿ ನೀಡಲು ಕಾರಣರಾದರು. ಇಲ್ಲಿ 28 ಗುಂಟೆ ಜಾಗ ನೀಡಿದ್ದು, ಅದರ ಬೆಲೆ ₹10 ಕೋಟಿ ಬಾಳಲಿದೆ. ಅದೇ ರೀತಿ 20 ಗುಂಟೆಯಲ್ಲಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣಕ್ಕೂ ಜಾಗ ನೀಡಿದರು’ ಎಂದು ನೆನಪಿಸಿಕೊಂಡರು.

ತೆಂಗು ಬೆಳೆಗಾರರ ಮೇಲೆ ಪ್ರೀತಿ

ಬರ, ಕೀಡಬಾಧೆ, ಬೆಲೆ ಇಳಿಕೆಯಿಂದ ತತ್ತರಿಸಿಹೋಗಿದ್ದ ತೆಂಗು ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಜಿಲ್ಲೆಯಲ್ಲಿ ತೆಂಗು ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಮೋಹನ್‌ರಾಜ್‌ ಬುನಾದಿ ಹಾಕಿದರು.

ಚಿಕ್ಕನಾಯಕನಹಳ್ಳಿ, ತುಮಕೂರು ವಿಜ್ಞಾನಗುಡ್ಡದ ಪ್ರದೇಶ, ಗುಬ್ಬಿಯ ಬಿದರೆಹಳ್ಳ ಕಾವಲ್‌ ಸಮೀಪ ಇದಕ್ಕಾಗಿ ಭೂಮಿ ನೀಡಲು ಹಲವು ಸಭೆಗಳನ್ನು ನಡೆಸಿದ್ದರು. ಆದರೆ ಜನಪ್ರತಿನಿಧಿಗಳು ಆಸಕ್ತಿ ತೋರದ ಕಾರಣ ಇದು ಜಾರಿಗೆ ಬರಲಿಲ್ಲ.

ತೆಂಗು ಬೆಳೆಗಾರರು, ಹೋರಾಟಗಾರರನ್ನು ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ತೆಂಗು ಉಪ ಉತ್ಪನ್ನಗಳ ಉತ್ಪಾದನೆ ಕಡೆಗೆ ಗಮನ ನೀಡುವಂತೆ ರೈತರಿಗೆ ಹೇಳುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.