ಗುರುವಾರ , ಸೆಪ್ಟೆಂಬರ್ 24, 2020
20 °C

ಚುನಾವಣೆಯ ಆಚೆಗೆ ಕರ್ನಾಟಕ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಹಿಂದೆಯೂ ಇದನ್ನು ನಾನು ಹೇಳಿದ್ದೇನೆ, ಈಗ ಮತ್ತೆ ಹೇಳಲೇಬೇಕಿದೆ; ಭಾರತವು ‘ಚುನಾವಣೆಗಷ್ಟೇ ಸೀಮಿತ’ವಾದ ಪ್ರಜಾಪ್ರಭುತ್ವವಾಗುವ ಅಪಾಯದಲ್ಲಿದೆ. ದೇಶವನ್ನು ಈ ಸ್ಥಿತಿಗೆ ತರುವಲ್ಲಿ ಮಾಧ್ಯಮ ಮಹತ್ವದ ಪಾತ್ರ ವಹಿಸಿದೆ. ಪತ್ರಿಕೆಗಳು, ಸುದ್ದಿವಾಹಿನಿಗಳು ಮತ್ತು ಈಗ ಇನ್ನೂ ಹೆಚ್ಚಾಗಿ ವೆಬ್‍ಸೈಟ್‍ಗಳು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಿಗೆ ಅತಿಯಾದ ಪ್ರಾಮುಖ್ಯ ನೀಡುತ್ತಿವೆ. ಅಭ್ಯರ್ಥಿಗಳ ಆಯ್ಕೆ, ಜಾತಿ ಸಮೀಕರಣಗಳು, ಪ್ರಚಾರ ಕಾರ್ಯತಂತ್ರಗಳು, ನಾಯಕತ್ವ ಶೈಲಿಗಳು ಇತ್ಯಾದಿಯ ಸೂಕ್ಷ್ಮ ವಿವರಗಳಿಗೂ ಗಮನ ನೀಡುತ್ತಿವೆ. ಆದರೆ, ಚುನಾವಣೆ ಮುಗಿದು ಪಕ್ಷವೊಂದು ಗೆದ್ದ ಬಳಿಕ ಆಡಳಿತ ಪ್ರಕ್ರಿಯೆಯತ್ತ ಈ ಮಾಧ್ಯಮಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಸರ್ಕಾರವೊಂದು ಅಧಿಕಾರದಲ್ಲಿರುವ ಐದು ವರ್ಷಗಳಲ್ಲಿ ಅದು ಜನರ ಸ್ಥಿತಿಗತಿ ಸುಧಾರಣೆಗಾಗಿ ಏನು ಮಾಡುತ್ತಿದೆ ಅಥವಾ ಏನನ್ನೂ ಮಾಡುತ್ತಿಲ್ಲವೇ ಎಂಬ ಬಗ್ಗೆ ಸಾಕಷ್ಟು ಗಮನವನ್ನು ಮಾಧ್ಯಮಗಳು ನೀಡುವುದಿಲ್ಲ.

ಚುನಾವಣೆಯತ್ತಲೇ ಏಕಾಗ್ರಚಿತ್ತದ ವಿದ್ಯಮಾನ ಈಗ, ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ನನ್ನ ತವರು ರಾಜ್ಯ ಕರ್ನಾಟಕದಲ್ಲಿ ಕಾಣಿಸುತ್ತಿದೆ. ಕಾಂಗ್ರೆಸ್‍ ಪಕ್ಷವು ಅಧಿಕಾರದಲ್ಲಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕ. ಇದು ದಕ್ಷಿಣ ಭಾರತದಲ್ಲಿ ಬಿಜೆಪಿ ಗಣನೀಯ ಪ್ರಾಬಲ್ಯ ಹೊಂದಿರುವ ಏಕೈಕ ರಾಜ್ಯವೂ ಹೌದು. ಹಾಗಾಗಿಯೇ, ಈ ಮೇ ತಿಂಗಳಲ್ಲಿ ಕರ್ನಾಟಕವು ಹೇಗೆ ಮತ ಚಲಾಯಿಸಲಿದೆ ಎಂಬುದು ಮುಂದಿನ ವರ್ಷ ಮೇಯಲ್ಲಿ (ಅಥವಾ ಮುಂದಿನ ಸಾರ್ವತ್ರಿಕ ಚುನಾವಣೆ ನಡೆದಾಗ) ದೇಶ ಹೇಗೆ ಮತ ಚಲಾಯಿಸಲಿದೆ ಎಂಬುದರ ಸುಳಿವು ನೀಡಬಹುದು. ಈ ಕಾರಣಗಳಿಂದಾಗಿಯೇ, ‘ರಾಷ್ಟ್ರೀಯ’ ಮಾಧ್ಯಮ ಎಂದು ಕರೆದುಕೊಳ್ಳುವ ಮಾಧ್ಯಮಗಳನ್ನು ಪ್ರತಿನಿಧಿಸುವ ಪತ್ರಕರ್ತರ ದೊಡ್ಡ ಮಂದೆಯೇ ಬೆಂಗಳೂರಿನಲ್ಲಿ ಸೇರಿದ್ದು ಗಾಳಿ ಯಾವ ಕಡೆ ಬೀಸುತ್ತಿದೆ ಎಂಬುದರ ಸುಳಿವು ಪಡೆಯಲು ಯತ್ನಿಸುತ್ತಿದೆ. ಕೆಲವರು ರಾಜಧಾನಿಯಲ್ಲಿಯೇ ತಂಗಿ, ಸ್ಥಳೀಯ ಪತ್ರಕರ್ತರು ಮತ್ತು ಕೆಲವು ಸ್ಥಳೀಯ ರಾಜಕಾರಣಿಗಳ ಜತೆ ಮಾತನಾಡಿ ವರದಿಗಳನ್ನು ಬರೆಯುತ್ತಿದ್ದಾರೆ. ಸ್ವಲ್ಪ ಹೆಚ್ಚು ಉತ್ಸಾಹ ಹೊಂದಿರುವ ಕೆಲವರು ಒಳನಾಡುಗಳತ್ತ ಅಥವಾ ಕರಾವಳಿಯತ್ತ ಹೋಗಿ ರಾಜ್ಯವು ಹೇಗೆ ಮತ ಚಲಾಯಿಸಬಲ್ಲುದು ಎಂಬ ಬೆಂಗಳೂರು ಕೇಂದ್ರಿತವಲ್ಲದ ಚಿತ್ರಣ ಕೊಡಲು ಯತ್ನಿಸುತ್ತಿದ್ದಾರೆ.

ಕರ್ನಾಟಕದ ಬಗ್ಗೆ ‘ರಾಷ್ಟ್ರೀಯ’ ಮಾಧ್ಯಮದ ಆಸಕ್ತಿ ಸಂಪೂರ್ಣವಾಗಿ ಪ್ರಾಸಂಗಿಕ. ದೇಶದ ಇತರ ರಾಜ್ಯಗಳ ಹಾಗೆಯೇ ಕರ್ನಾಟಕ ಚುನಾವಣೆಗೆ ಸಿದ್ಧವಾಗುವಾಗ ಮಾತ್ರ ಈ ಮಾಧ್ಯಮಗಳು ಎಚ್ಚರಗೊಳ್ಳುತ್ತವೆ. ಚುನಾವಣೆ ಮುಗಿದು, ಚುನಾವಣೆಯ ಅಬ್ಬರ ಸೃಷ್ಟಿಸಿದ ದೂಳಿನ ಪರದೆ ನೆಲಕ್ಕಿಳಿದ ಬಳಿಕ ರಾಜ್ಯವು ‘ರಾಷ್ಟ್ರೀಯ’ ಮನೋಭೂಮಿಕೆಯ ಅಂಚಿಗೆ ಸರಿಯುತ್ತದೆ. ದೊಡ್ಡ ಕೋಮುಗಲಭೆ ಅಥವಾ ನೈಸರ್ಗಿಕ ವಿಕೋಪ ನಡೆಯದೇ ಇದ್ದರೆ ಮುಂದಿನ ಐದು ವರ್ಷ ‘ರಾಷ್ಟ್ರೀಯ’ ಮಾಧ್ಯಮವು ಕರ್ನಾಟಕವನ್ನು ಮರೆತುಬಿಡುತ್ತದೆ.

ಆದರೆ, ಕರ್ನಾಟಕದ ಜನರು ಇಷ್ಟೊಂದು ಅಸಡ್ಡೆಯಿಂದ ಇರುವುದಕ್ಕೆ ಸಾಧ್ಯ ಇಲ್ಲ. ಅವರು ಇಲ್ಲಿಯೇ ಕೆಲಸ ಮಾಡಿ, ಇಲ್ಲಿಯೇ ಬೆಳೆದು, ಇಲ್ಲಿಯೇ ಜೀವಿಸಿ, ಇಲ್ಲಿಯೇ ಸಾಯಬೇಕು. ಆದ್ದರಿಂದಲೇ ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತ ಗೆದ್ದ ಪಕ್ಷವು ಯಾವ ರೀತಿಯ ಸರ್ಕಾರ ನೀಡುತ್ತದೆ ಎಂಬುದು ಅವರಿಗೆ ಹೆಚ್ಚು ಮುಖ್ಯವಾಗುತ್ತದೆ. ಕರ್ನಾಟಕ ರಾಜ್ಯವನ್ನು ಕಾಡುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಯಾವುವು? ಇಲ್ಲಿನ ಸಂಪನ್ಮೂಲಗಳನ್ನು ಹೆಚ್ಚು ವಿವೇಕಯುತವಾಗಿ ಹೇಗೆ ಬಳಸಿಕೊಳ್ಳಬಹುದು? ಹೊಸ ಸರ್ಕಾರವು ಯಾವ ರೀತಿಯ ನೀತಿಗಳತ್ತ ಗಮನ ಕೇಂದ್ರೀಕರಿಸಬೇಕು? ಇಂತಹ ವಿಚಾರಗಳು ರಾಜ್ಯದ ಮತದಾರರಿಗೆ ಅತ್ಯಂತ ಮುಖ್ಯವಾದುದಾದರೂ ‘ರಾಷ್ಟ್ರೀಯ’ ಮಾಧ್ಯಮಗಳ ಕಥನದಲ್ಲಿ ಇವು ಸಂಪೂರ್ಣವಾಗಿ ಕಾಣೆಯಾಗಿವೆ.

ಅದೃಷ್ಟವಶಾತ್‍ ರಾಜ್ಯದ ವಿದ್ವಾಂಸರು ಈ ಪ್ರಶ್ನೆಗಳತ್ತ ಕಣ್ಣು ನೆಟ್ಟಿದ್ದಾರೆ. ಚಿಂತಕರಾದ ವಲೇರಿಯನ್‍ ರಾಡ್ರಿಗಸ್‍, ನಟರಾಜ್‍ ಹುಳಿಯಾರ್, ರಾಜೇಂದ್ರ ಚೆನ್ನಿ ಮತ್ತು ಎಸ್‍. ಜಾಫೆಟ್‍ ಅವರು ‘ಕರ್ನಾಟಕ ಕಥನ’ ಎಂಬ ಹೆಸರಿನ ಕಿರು ಹೊತ್ತಗೆಯನ್ನು ಪ್ರಕಟಿಸಿದ್ದಾರೆ. ಇಂಗ್ಲಿಷ್‍ ಮತ್ತು ಕನ್ನಡದಲ್ಲಿ ಪ್ರಕಟವಾಗಿರುವ ಈ ಕಿರುಹೊತ್ತಗೆ ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸುಂದರ ಚಿತ್ರಣವನ್ನು ನೀಡುತ್ತದೆ. ರಾಜ್ಯದ ಬಹುಮುಖಿ ಪರಂಪರೆ, ಧರ್ಮ, ಸಾಹಿತ್ಯ, ಕಲೋಪಾಸನೆ ಮತ್ತು ರಾಜಕೀಯದ ವೈವಿಧ್ಯ ಪರಂಪರೆಯ ಬಗ್ಗೆ ವಿವರ ಒದಗಿಸುತ್ತದೆ. ದಲಿತರು, ಮಹಿಳೆಯರು ಮತ್ತು ರೈತರು ನಡೆಸಿದ ಸಾಮಾಜಿಕ ಚಳವಳಿಗಳ ಯಶಸ್ಸು ಅಭೂತಪೂರ್ವ ಅಲ್ಲದಿದ್ದರೂ ಜಾತಿ, ಲಿಂಗ ಮತ್ತು ವರ್ಗದ ನಡುವಣ ಅಸಮಾನತೆಗಳನ್ನು ತಗ್ಗಿಸುವಲ್ಲಿ ಇವು ವಹಿಸಿದ ಪಾತ್ರವನ್ನು ಇಲ್ಲಿ ಶ್ಲಾಘಿಸಲಾಗಿದೆ. ಲೇಖಕರು ಪಟ್ಟಿ ಮಾಡಿರುವ 15 ಕಳವಳಗಳ ಜತೆಗೆ ಕಿರುಹೊತ್ತಗೆ ಕೊನೆಯಾಗುತ್ತದೆ. ಇದು ಆಡಳಿತಕ್ಕಾಗಿ ಇರುವ ಮುನ್ನೋಟದ ಪ್ರಣಾಳಿಕೆ. ಚುನಾವಣೆಯ ಬಳಿಕ ಯಾರೇ ಮುಖ್ಯಮಂತ್ರಿ ಆದರೂ ಅವರ ಗಮನಕ್ಕೆ ಇದನ್ನು ತರಬೇಕು. ಕಿರುಹೊತ್ತಗೆಯು ವ್ಯಕ್ತಪಡಿಸಿದ ಕಳವಳಗಳಲ್ಲಿ ಮುಖ್ಯವಾಗಿರುವ ಕೆಲವನ್ನು ಇಲ್ಲಿ ಚರ್ಚಿಸುತ್ತೇನೆ.

‘ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮಾನತೆ ಅಪಾಯದ ಸನಿಹದಲ್ಲಿದೆ… ಈ ಅಸಮಾನತೆಯನ್ನು ಎದುರಿಸಲು ಬಲವಾದ ಮತ್ತು ಸಮಗ್ರವಾದ ಪ್ರತಿಕ್ರಿಯೆ ಅಗತ್ಯ ಇದೆ’  ಎಂದು ರಾಡ್ರಿಗಸ್‍ ಮತ್ತು ಇತರರು ಬರೆದಿರುವ ಕಿರುಹೊತ್ತಗೆಯು ಹೇಳುತ್ತದೆ. ಬಳಿಕ, ಈ ಪ್ರಣಾಳಿಕೆ ಹೀಗೆ ಹೇಳುತ್ತದೆ: ‘ಬೆಂಗಳೂರನ್ನು ದಟ್ಟಣೆ ಮುಕ್ತಗೊಳಿಸುವುದು ಬಹಳ ಮುಖ್ಯ’. ಈ ಎರಡು ಅಂಶಗಳು ಒಂದರೊಳಗೊಂದು ಹೆಣೆದುಕೊಂಡಿವೆ. ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಹಲವು ಮಹತ್ವದ ಕೈಗಾರಿಕಾ ಕೇಂದ್ರಗಳಿವೆ. ಆದರೆ ಕರ್ನಾಟಕದ ಅತಿ ಹೆಚ್ಚಿನ ಔದ್ಯಮಿಕ ಚಟುವಟಿಕೆಗಳು ರಾಜಧಾನಿ ಮತ್ತು ರಾಜಧಾನಿಯ ಸುತ್ತ ಕೇಂದ್ರೀಕೃತವಾಗಿವೆ. ರಾಜ್ಯದ ಇತರ ಭಾಗಗಳಲ್ಲಿ ಸೇವೆಗಳು ಮತ್ತು ತಯಾರಿಕೆಯ ಪರ್ಯಾಯ ಕೇಂದ್ರಗಳನ್ನು ಸರ್ಕಾರವು ಅಭಿವೃದ‍್ಧಿಪಡಿಸಿದರೆ ಅಥವಾ ಅದಕ್ಕೆ ಉತ್ತೇಜನ ನೀಡಿದರೆ ಕರ್ನಾಟಕವು ಹೆಚ್ಚು ಸಮತೋಲಿತ ಅಭಿವೃದ‍್ಧಿ ಕಾಣಬಹುದು.

ದುರದೃಷ್ಟವೆಂದರೆ, ಈ ಪ್ರಾದೇಶಿಕ ಅಸಮಾನತೆಯು ಕೃಷಿ ಕ್ಷೇತ್ರದಲ್ಲಿಯೂ ಎದ್ದು ಕಾಣುವಂತಿದೆ. ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ, ಕಾವೇರಿ ನದಿಯಿಂದ ನೀರು ಪಡೆಯುವ ದಕ್ಷಿಣದ ಭಾಗದಲ್ಲಿ ಉತ್ತಮ ನೀರಾವರಿ ವ್ಯವಸ್ಥೆ ಇದೆ. ಒಣಭೂಮಿ ಬೇಸಾಯವನ್ನು ಕುರಿತು ಹೆಚ್ಚಿನ ಸಂಶೋಧನೆ ತುರ್ತಾಗಿ ಆಗಬೇಕಿದೆ. ಪ್ರಮುಖ ನದಿಗಳಿಂದ ದೂರ ಇರುವ ಕೃಷಿ ಪ್ರದೇಶಗಳಲ್ಲಿನ ಕೆರೆಗಳನ್ನು ಪುನಶ್ಚೇತನಗೊಳಿಸಿ, ಕೆರೆ ನೀರಾವರಿ ವ್ಯವಸ್ಥೆ ಕಲ್ಪಿಸಬೇಕಿದೆ.

‘ಇಂದು ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಇರುವ ಮಹಿಳೆಯರ ಪ್ರಮಾಣ ಅತ್ಯಲ್ಪ’ ಎಂಬುದನ್ನು ‘ಕರ್ನಾಟಕ ಕಥನ’ ಗುರುತಿಸಿದೆ. ಅವರ ಪ್ರಾತಿನಿಧ್ಯವನ್ನು ಹೆಚ್ಚಿಸುವುದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳೂ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕೃತಿಯ ಲೇಖಕರು ಒತ್ತಾಯಿಸಿದ್ದಾರೆ. ದುರಂತವೆಂದರೆ ಇದನ್ನು ಯಾವ ರಾಜಕೀಯ ಪಕ್ಷವೂ ಆಲಿಸುತ್ತಿಲ್ಲ. ಈ ಕೃತಿ ಪ್ರಕಟವಾದ ತಿಂಗಳ ಬಳಿಕ ಪ್ರಕಟವಾದ ಕಾಂಗ್ರೆಸ್‍ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವ ಮಹಿಳೆಯರ ಸಂಖ್ಯೆ 20ಕ್ಕೂ ಕಡಿಮೆ (ಒಟ್ಟು ಸ್ಥಾನಗಳು 224). ಬಿಜೆಪಿ ಮತ್ತು ಜೆಡಿಎಸ್‍ ಪಟ್ಟಿಯಲ್ಲಿ ಇರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಇಪ್ಪತ್ತರೊಳಗೇ ಇದೆ.

ಚಾರಿತ್ರಿಕವಾಗಿ ನೋಡುವುದಾದರೆ, ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದ ಮಹಿಳೆಯರು ಅನುಭವಿಸಿದ ಶೋಷಣೆ ಕಡಿಮೆ ಅಥವಾ ಇಲ್ಲಿನವರು ಹೆಚ್ಚು ಮುಂದುವರಿದಿದ್ದಾರೆ. ಇಲ್ಲಿ ಪರ್ದಾ ಪದ್ಧತಿ ಬಹಳ ವಿರಳ. ಮಧ್ಯಯುಗದ ಕರ್ನಾಟಕವೇ ಮಹತ್ವದ ಮಹಿಳಾ ಸಂತರು ಮತ್ತು ಚಿಂತಕರನ್ನು ಸೃಷ್ಟಿಸಿದೆ. 20ನೇ ಶತಮಾನದ ಭಾರತದ ಅತ್ಯದ್ಭುತ ಮಹಿಳೆ ಕಮಲಾದೇವಿ ಚಟ್ಟೋಪಾಧ್ಯಾಯ ಆಧುನಿಕ ಕರ್ನಾಟಕದವರು. ಇಂದು ಕೂಡ, ಕರ್ನಾಟಕದ ಹಲವು ಪಟ್ಟಣಗಳಲ್ಲಿ ಯಶಸ್ವಿ ವಕೀಲರು, ವೈದ್ಯರು, ಬ್ಯಾಂಕ್‍ ವ್ಯವಸ್ಥಾಪಕರು ಮತ್ತು ಉದ್ಯಮಿಗಳಾಗಿರುವ ಮಹಿಳೆಯರನ್ನು ಕಾಣಬಹುದು. ಉತ್ತರ ಭಾರತದ ತಮ್ಮ ಸಹೋದರಿಯರಷ್ಟು ಮೂಲೆಗುಂಪಾಗಿಲ್ಲದಿದ್ದರೂ ಕರ್ನಾಟಕದ ಮಹಿಳೆಯರು ಸಮಾನ ಪೌರತ್ವದಿಂದ ಬಹಳ ದೂರವೇ ಉಳಿದಿದ್ದಾರೆ.

‘ಕರ್ನಾಟಕವು ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣವಾಗಬಹುದಾದ ಎಲ್ಲ ಸಾಧ್ಯತೆಯೂ ಇದೆ. ಆದರೆ ಈ ಸಂಪನ್ಮೂಲವನ್ನು ಬಳಸಿಕೊಳ್ಳುವ ಬಗ್ಗೆ ಹರಿಸಿದ ಗಮನ ಬಹಳ ಅಲ್ಪ’ ಎಂದು ‘ಕರ್ನಾಟಕ ಕಥನ’ದಲ್ಲಿ ಹೇಳಲಾಗಿದೆ. ಈ ಎರಡೂ ವಿಚಾರಗಳು ಸರಿಯಾಗಿವೇ ಇವೆ. ಬಹುಶಃ, ದೇಶದ ಯಾವುದೇ ರಾಜ್ಯಕ್ಕಿಂತಲೂ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸಬಲ್ಲ ಅಂಶಗಳು ಕರ್ನಾಟಕದಲ್ಲಿ ಹೆಚ್ಚು ಇವೆ. ಇಲ್ಲಿನ ಅತ್ಯಂತ ವೈವಿಧ್ಯಮಯವಾದ ಭೂಪ್ರದೇಶ ಅತ್ಯದ್ಭುತವಾದ ಸೌಂದರ್ಯವನ್ನೂ ಹೊಂದಿದೆ. ಪಶ್ಚಿಮ ಘಟ್ಟಗಳ ಮಳೆಕಾಡುಗಳಿಂದ ಹಿಡಿದು ಕೊಂಕಣ ಕರಾವಳಿಯ ವೈಭವ, ಕಾವೇರಿ ಕಣಿವೆಯ ಅಚ್ಚ ಹರಿಸಿನ ಭತ್ತದ ಗದ್ದೆಗಳಿಂದ ಹಿಡಿದು ಹೈದರಾಬಾದ್‍ ಕರ್ನಾಟಕದ ಶಿಲಾ ಬೆಟ್ಟಗಳು ಇವುಗಳಲ್ಲಿ ಸೇರಿವೆ. ವಾಸ್ತುಶಿಲ್ಪದ ವೈಭವವೂ ಕಡಿಮೆಯೇನಲ್ಲ. ಶ್ರೇಷ್ಠವಾದ ಹಂಪಿ, ಅದಕ್ಕೂ ಹಳೆಯದಾದ ಬಾದಾಮಿಯ ದೇಗುಲಗಳು (ನನ್ನ ದೃಷ್ಟಿಯಲ್ಲಿ ಇದುವೇ ಹೆಚ್ಚು ಸುಂದರ), ಹೊಯ್ಸಳರ ಕಾಲದ ದೇವಾಲಯಗಳು, ವಿಜಯಪುರ ಮತ್ತು ಕಲಬುರ್ಗಿಯ ಮಸೀದಿಗಳು ಇಲ್ಲಿವೆ. ಅತ್ಯುತ್ತಮವಾದ ವನ್ಯಜೀವಿಧಾಮಗಳನ್ನೂ ಇಲ್ಲಿ ಕಾಣಬಹುದು. ಸರಿಯಾದ ಯೋಜನೆ ರೂಪಿಸಿದರೆ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಕೇರಳ ಮತ್ತು ರಾಜಸ್ಥಾನಗಳಿಗಿಂತ ಹೆಚ್ಚು ಪ್ರವಾಸಿಗರನ್ನು ಇಲ್ಲಿಗೆ ಆಕರ್ಷಿಸಬಹುದು.

ನಾನು ಇಲ್ಲಿ ಪ್ರಸ್ತಾಪಿಸಲು ಬಯಸುವ ಕೊನೆಯ ಅಂಶ ಪರಿಸರ ಸುಸ್ಥಿರತೆ. ‘ರಾಜ್ಯವು ಎದುರಿಸುತ್ತಿರುವ ಪರಿಸರ ಸವಾಲುಗಳಿಗೆ ತುರ್ತು ಗಮನ ನೀಡಬೇಕಾದ ಅಗತ್ಯ ಇದೆ. ಈ ಸವಾಲನ್ನು ಎದುರಿಸುವ ಒಂದು ವಿಧಾನ ಅರಣ್ಯೀಕರಣ. ವಿಶೇಷವಾಗಿ ಒಣ ಪ್ರದೇಶಗಳಲ್ಲಿ

ಇದು ನಡೆಯಬೇಕು’ ಎಂದು ‘ಕರ್ನಾಟಕ ಕಥನ’ದಲ್ಲಿ ಪ್ರತಿಪಾದಿಸಲಾಗಿದೆ. ಹೆಚ್ಚು ವಿವೇಕದಿಂದ ಕೂಡಿದ ಜಲಸಂಪನ್ಮೂಲ ನಿರ್ವಹಣೆಯು ನಿರ್ಣಾಯಕವಾದ ವಿಚಾರ. ಹಾಗಿದ್ದರೂ ಅರಣ್ಯೀಕರಣದ ಬಗ್ಗೆ ‘ಕರ್ನಾಟಕ ಕಥನ’ದಲ್ಲಿ ಹೇಳಿರುವುದು ಆಗಬೇಕಾದ ಕೆಲಸ. ಹಲವು ಕಿಲೋಮೀಟರ್ ದೂರದಿಂದ ಸಾಗಿಸಿ ತರುವ ನೀರಿನ ಮೇಲೆ ಬೆಂಗಳೂರು ಅವಲಂಬಿತವಾಗಿರುವುದು ಸುಸ್ಥಿರ ಅಲ್ಲವೇ ಅಲ್ಲ. ರಾಜ್ಯದ ನದಿಗಳು ಅತಿಯಾಗಿ ಮಲಿನಗೊಂಡಿವೆ. ಅಂತರ್ಜಲದ ಮಟ್ಟ ಅಪಾಯಕಾರಿಯಾಗಿ ಕೆಳಗಿಳಿದಿದೆ. ಭಾರತದ ಅತ್ಯುತ್ತಮವಾದ ಎರಡು ಪರಿಸರ ಸಂಶೋಧನಾ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಆದರೆ, ರಾಜ್ಯದ ಅರಣ್ಯ ಮತ್ತು ಜಲನೀತಿ ರೂಪಿಸುವ ಸಚಿವರು ಮತ್ತು ಅಧಿಕಾರಿಗಳು ಈ ಸಂಸ್ಥೆಯ ತಜ್ಞರ ಜತೆ ಸಮಾಲೋಚನೆ ನಡೆಸುವುದು ಬಹಳ ವಿರಳ.

‘ಕರ್ನಾಟಕ ಕಥನ’ವು ರಾಜ್ಯವನ್ನು ಕಾಡುತ್ತಿರುವ ಇತರ ಕೆಲವು ಅಂಶಗಳ ಬಗ್ಗೆಯೂ ಗಮನಹರಿಸಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಶೋಚನೀಯ ಸ್ಥಿತಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಕಾಡುತ್ತಿರುವ ವ್ಯಾಪಕ ಭ್ರಷ್ಟಾಚಾರ ಅಂತಹ ಕೆಲವು ಅಂಶಗಳು. ಇತರ ಹಲವು ವಿಚಾರಗಳು ‘ಕರ್ನಾಟಕ ಕಥನ’ ಲೇಖಕರ ಗಮನದಿಂದ ತಪ್ಪಿಸಿಕೊಂಡಿರಬಹುದಾದರೂ ಅವು ರಾಜ್ಯದ ಜನರಿಗೆ ಮಹತ್ವದ್ದೇ ಆಗಿವೆ. ಈ ಕಥನದ ಬಗ್ಗೆ ವಿಸ್ತೃತವಾದ ಚರ್ಚೆ ಮತ್ತು ಸಂವಾದ ನಡೆಯುವುದು ಮುಖ್ಯ. ‘ರಾಷ್ಟ್ರೀಯ’ ಮಾಧ್ಯಮಗಳಿಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದಷ್ಟೇ ಮುಖ್ಯ. ಆದರೆ ಇಲ್ಲಿಯೇ ಜೀವಿಸುವ ನಮ್ಮಂಥವರಿಗೆ ಚುನಾವಣೆಗಳ ನಡುವೆ ಏನು ನಡೆಯುತ್ತದೆ ಎಂಬುದೇ ಹೆಚ್ಚು ಮುಖ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.