ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ಪ್ರೀತ್, ಸವಿತಾಗೆ ಅರ್ಜುನ ಪ್ರಶಸ್ತಿ: ಶಿಫಾರಸು

ಮೂವರು ಆಟಗಾರರ ಹೆಸರು ನೀಡಿದ ಹಾಕಿ ಇಂಡಿಯಾ
Last Updated 3 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಹಾಕಿ ತಂಡದ ಮಿಡ್‌ಫೀಲ್ಡರ್‌ಗಳಾದ ಮನ್‌ಪ್ರೀತ್‌ ಸಿಂಗ್‌, ಧರಮ್‌ವೀರ್‌ ಸಿಂಗ್‌ ಹಾಗೂ ಮಹಿಳಾ ತಂಡದ ಗೋಲ್‌ಕೀಪರ್‌ ಸವಿತಾ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಹಾಕಿ ಇಂಡಿಯಾ ಗುರುವಾರ ಶಿಫಾರಸು ಮಾಡಿದೆ.

‘ಹಿರಿಯ ಆಟಗಾರ್ತಿ ಸಂಗೈ ಇಬೆಮಾಲ್‌ ಚಾನು ಹಾಗೂ ಭಾರತ ಪುರುಷ ತಂಡದ ನಾಯಕರಾಗಿದ್ದ ಭರತ್‌ ಚೆಟ್ರಿ ಅವರ ಹೆಸರುಗಳನ್ನು ಜೀವಮಾನ ಸಾಧನೆಗಾಗಿ ನೀಡುವ ಧ್ಯಾನ್‌ ಚಂದ್‌ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಜೊತೆಗೆ, ಹಿರಿಯ ಕೋಚ್‌ ಬಿ. ಎಸ್‌. ಚೌಹಾಣ್‌ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ’ ಎಂದು ಹಾಕಿ ಇಂಡಿಯಾ ತಿಳಿಸಿದೆ.

‘ಈ ಎಲ್ಲರೂ ಭಾರತದಲ್ಲಿ ಹಾಕಿ ಬೆಳವಣಿಗೆಗೆ ತಮ್ಮದೇ ರೀತಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅನೇಕ ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಲು ತಂಡಗಳಿಗೆ ನೆರವಾಗಿದ್ದಾರೆ. ಅವರ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮುಷ್ತಾಕ್‌ ಅಹ್ಮದ್‌ ಹೇಳಿದ್ದಾರೆ.

ಕೊರಿಯಾದಲ್ಲಿ 2014ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು ಚಿನ್ನದ ಸಾಧನೆ ಮಾಡಿತ್ತು. ಧರಮ್‌ವೀರ್‌ ಅವರು ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಏಷ್ಯಾ ಕಪ್‌ ಪ್ರಶಸ್ತಿ ಗೆಲ್ಲುವಲ್ಲಿ ಮನ್‌ಪ್ರೀತ್‌ ಉತ್ತಮ ಸಾಮರ್ಥ್ಯ ತೋರಿದ್ದರು. ವಿಶ್ವ ಹಾಕಿ ಲೀಗ್‌ನಲ್ಲಿ ಭಾರತ ತಂಡವನ್ನು ಅವರು ಮುನ್ನಡೆಸಿದ್ದರು. ಈ ಲೀಗ್‌ನಲ್ಲಿ ಭಾರತವು ಕಂಚಿನ ಪದಕ ಜಯಿಸಿತ್ತು.

ಸವಿತಾ, ಮಹಿಳೆಯರ ತಂಡವು ಕಳೆದ ವರ್ಷ ಏಷ್ಯಾ ಕಪ್‌ನಲ್ಲಿ ಗೆದ್ದು ಚಾರಿತ್ರಿಕ ಸಾಧನೆ ಮಾಡಲು ಕಾರಣರಾಗಿದ್ದರು. ಚೀನಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಅವರು ಗೋಲು ತಡೆದಿದ್ದರು. ಇದರಿಂದಾಗಿ ಭಾರತ ಜಯ ಸಾಧಿಸಿತ್ತು. ವಿಶ್ವಕಪ್‌ಗೆ ‍ಭಾರತವು ಅರ್ಹತೆ ಪಡೆಯುವ ಪಂದ್ಯದಲ್ಲಿ ಸವಿತಾ ಉತ್ತಮ ಆಟವಾಡಿದ್ದರು.

2002ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಭಾರತ ತಂಡದಲ್ಲಿ ಸಂಗೈ ಇಬೆಮಾಲ್‌ ಚಾನು ಆಡಿದ್ದರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಭರತ್‌ ಚೆಟ್ರಿ ಮುನ್ನಡೆಸಿದ್ದರು. ಸದ್ಯ ಭಾರತದ ಪುರುಷ ಹಾಗೂ ಮಹಿಳಾ ತಂಡಗಳ ಗೋಲ್‌ಕೀಪರ್‌ಗಳಿಗೆ ಅವರು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT