ಶುಕ್ರವಾರ, ಮಾರ್ಚ್ 5, 2021
16 °C
ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿಯಿಂದ ಸ್ವಾಭಿಮಾನಿ ಸಮಾವೇಶ

ಬಿಜೆಪಿ ಕೋಮುವಾದಿ, ಸಂವಿಧಾನ ವಿರೋಧಿ: ಜಿಗ್ನೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಕೋಮುವಾದಿ, ಸಂವಿಧಾನ ವಿರೋಧಿ: ಜಿಗ್ನೇಶ್‌

ಚಿಕ್ಕಮಗಳೂರು: ‘ಬಿಜೆಪಿಯು ಕೋಮುವಾದಿ, ಸಂವಿಧಾನ ವಿರೋಧಿ ಪಕ್ಷವಾಗಿದೆ. ಇತರ ಪಕ್ಷಗಳಿಗೂ ಬಿಜೆಪಿಗೂ ಇರುವ ದೊಡ್ಡ ವ್ಯತ್ಯಾಸ ಇದು’ ಎಂದು ಗುಜರಾತಿನ ಶಾಸಕ ಜಿಗ್ನೇಶ್‌ ಮೇವಾನಿ ಅಭಿಪ್ರಾಯಪಟ್ಟರು.

ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿ ವತಿಯಿಂದ ನಗರದ ಹಂಡೆ ಛತ್ರದ ಬಳಿ ಏರ್ಪಡಿಸಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಅವರು ಮಾತನಾಡಿದರು. ‘ನಾನು ಯಾವುದೇ ಪಕ್ಷದ ವಕ್ತಾರನಲ್ಲ. ಸಂವಿಧಾನ ಉಳಿಸುವುದನ್ನು ಮನಗಂಡು ಈ ಚುನಾವಣೆಯಲ್ಲಿ ಮತದಾನ ಮಾಡಬೇಕಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ಮಹಾನ್‌ ಸುಳ್ಳುಗಾರ. ಅವರೊಬ್ಬ ‘420’. ಬರೀ ಬೊಗಳೆ ಬಿಡುತ್ತಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಶೇ 1 ರಷ್ಟು ಉದ್ಯೋಗ ಸೃಷ್ಟಿಸಿಲ್ಲ. ಮೋದಿ ಬಂದಿದ್ದಾರೆ, ಅಚ್ಛೇ ದಿನ್‌ ಬರಲಿವೆ ಎಂದು ದೇಶದ ಯುವಪೀಳಿಗೆ ಕಂಡಿದ್ದ ಕನಸು ನುಚ್ಚುನೂರಾಗಿದೆ’ ಎಂದು ಹೇಳಿದರು.

‘ಮೋದಿ ಗುಜರಾತಿನವರು, ನಾನೂ ಅಲ್ಲಿನವನೇ. ಗುಜರಾತಿನಲ್ಲಿ ಅಭಿವೃದ್ಧಿ ಮಾಡಿರುವುದಾಗಿ ಅವರು ಬೊಗಳೆ ಬಿಡುತ್ತಾರೆ. ಅಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಗೊತ್ತಿದೆ. ದೇಶದಲ್ಲಿ ನಾಲ್ಕು ವರ್ಷಗಳಲ್ಲಿ ಬ್ಯಾಂಕುಗಳಿಗೆ ₹ 80 ಸಾವಿರ ಕೋಟಿ ವಂಚನೆಯಾಗಿದೆ. ಇದಕ್ಕೆ ಪ್ರಧಾನಿ ಉತ್ತರ ನೀಡಬೇಕು’ ಎಂದು ಹೇಳಿದರು.

‘ಬೇಳೆಯಲ್ಲಿ ಪೌಷ್ಟಿಕಾಂಶ ಇದೆ. ಬೇಳೆ ಬೆಲೆ ಹೆಚ್ಚಾಗಿದೆ. ಬಡವರು, ದೀನದಲಿತರು ಬೇಳೆ ಖರೀದಿಸುವುದೇ ಕಷ್ಟವಾಗಿದೆ. ಕೇಂದ್ರ ಸರ್ಕಾರವು ‘ಸ್ಕಿಲ್‌ ಇಂಡಿಯಾ’, ‘ಮೇಕ್‌ ಇನ್‌ ಇಂಡಿಯಾ’ ಮೊದಲಾದ ಯೋಜನೆ ಅನುಷ್ಠಾನಗೊಳಿಸಿರುವುದಾಗಿ ಹೇಳುತ್ತಾರೆ. ಅವುಗಳ ಪ್ರಯೋಜನ ಯಾರಿಗೆ ಲಭಿಸಿದೆ ಎಂಬುದು ತಿಳಿದಿಲ್ಲ. ಉದ್ಯೋಗಕ್ಕಾಗಿ ಯುವಪೀಳಿಗೆ ಪರಿತಪಿಸುವಂತಾಗಿದೆ. ದೇಶದಲ್ಲಿ ಲಕ್ಷಾಂತರ ಮಂದಿಗೆ ಸೂರು ಇಲ್ಲ. ದಲಿತರು, ಬಡವರು, ಕೂಲಿಕಾರರು, ರೈತರು, ಅಲ್ಪಸಂಖ್ಯಾತರ ಹಿತ ಕಾಪಾಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ’ ಎಂದು ಛೇಡಿಸಿದರು.

‘ದೇಶದಲ್ಲಿ ಸಾಲಬಾಧೆ, ಬೆಳೆ ನಷ್ಟದಿಂದ ಬಹಳಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಒಬ್ಬ ರೈತರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಮೋದಿ ಅವರೊಬ್ಬ ಮಹಾನ್‌ ನಾಟಕಾರರ, ಖಳನಟ. ನಟನೆಯಲ್ಲಿ ಪ್ರಕಾಶ್‌ ರೈ, ನಾನಾ ಪಟೇಕರ್‌, ಅಮಿತಾಬ್‌ ಬಚ್ಚನ್‌ ಅವರನ್ನೂ ಮೀರಿಸುತ್ತಾರೆ’ ಎಂದು ಕುಟುಕಿದರು.

‘ಬಿಜೆಪಿಯವರು ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಎಂದು ಹೇಳುತ್ತಾರೆ. ಆದರೆ, ಯಾರ ವಿಕಾಸ ಆಗಿದೆ ಎಂಬುದು ಗೋಚರಿಸುತ್ತಿಲ್ಲ. ಕರ್ನಾಟಕದ ಈ ಚುನಾವಣೆಯಿಂದ ಬಿಜೆಪಿಯ ಪತನ ಆರಂಭವಾಗಲಿದೆ. ಮುಂದೆ ನಡೆಯಲಿರುವ ರಾಜಸ್ತಾನ, ಮಧ್ಯಪ್ರದೇಶ ಚುನಾವಣೆಗಳಲ್ಲೂ ಅದು ಮುಂದುವರಿಯಲಿದೆ. ಮೋದಿ ಅವರು ರಾಮಮಂದಿರ ಹೊತ್ತು, ಹಿಮಾಲಯಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಭವಿಷ್ಯ ನುಡಿದರು.

‘ಇಲ್ಲಿ ಮಾತನಾಡುವುದಕ್ಕೂ ನಮಗೆ ನಿರ್ಬಂಧ ಹೇರಲು ಬಿಜೆಪಿಯವರು ಯತ್ನಿಸಿದರು. ಮಾತನಾಡುವುದಕ್ಕೆ ನಿರ್ಬಂಧ ವಿಧಿಸಲು ಮುಂದಾಗುತ್ತಾರೆ ಎಂದರೆ, ಅಂಥವರಿಂದ ಅಚ್ಛೆ ದಿನ್‌ ನಿರೀಕ್ಷಿಸುವುದು ಹೇಗೆ? ನಮ್ಮ ಭಾಷಣಕ್ಕೆ ಭಯಪಟ್ಟರೆ ಹೇಗೆ? ಮತದಾರರು ಯೋಚಿಸಿ ಹಕ್ಕನ್ನು ಚಲಾಯಿಸಬೇಕು. ಸಂವಿಧಾನ ವಿರೋಧಿಗಳನ್ನು ಬೆಂಬಲಿಸಬಾರದು’ ಎಂದು ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.