ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ, ಬಿಡದಿಗೆ ‘ನಮ್ಮ ಮೆಟ್ರೊ’

Last Updated 4 ಮೇ 2018, 20:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅಗತ್ಯಗಳನ್ನು ಪೂರೈಸಲು ‘ನವ ಬೆಂಗಳೂರು ಕಾಯ್ದೆ’ ಜಾರಿ. ಮಹಾನಗರದ ಎಲ್ಲ ನಗರ ಪ್ರದೇಶಗಳಿಗೆ ‘ನಮ್ಮ ಮೆಟ್ರೊ’ ವಿಸ್ತರಣೆ. ನಗರದ ಕೆರೆಗಳನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸಲು ₹2,500 ಕೋಟಿಯ ‘ನಾಡಪ್ರಭು ಕೆಂಪೇಗೌಡ ನಿಧಿ’ ಸ್ಥಾಪನೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯನ್ನು ನಗರದಲ್ಲಿ ಜಾರಿ. ರಾಜಧಾನಿಯನ್ನು ಕಸಮುಕ್ತ ನಗರವನ್ನಾಗಿ ಪರಿವರ್ತನೆ.

ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು.

ಸಾಧ್ಯಾಸಾಧ್ಯತೆ ವರದಿ ನಂತರ ನೇರಳೆ ಮಾರ್ಗವನ್ನು ಕಾಡುಗೋಡಿ ಮೂಲಕ ಹೊಸಕೋಟೆ ಬಸ್‌ ನಿಲ್ದಾಣದ ವರೆಗೆ ಹಾಗೂ ಇನ್ನೊಂದು ಭಾಗದಲ್ಲಿ ಕೆಂಗೇರಿ ಮೂಲಕ ಬಿಡದಿ ಬಸ್‌ ನಿಲ್ದಾಣದ ವರೆಗೆ ವಿಸ್ತರಿಸಲಾಗುತ್ತದೆ. ಹಸಿರು ಮಾರ್ಗವನ್ನು ಬಿಐಇಸಿ ಮೂಲಕ ನೆಲಮಂಗಲ ಬಸ್‌ ನಿಲ್ದಾಣದ ವರೆಗೆ ಹಾಗೂ ಅಂಜನಾಪುರ ಮೂಲಕ ಕನಕಪುರ ಬಸ್‌ ನಿಲ್ದಾಣದ ವರೆಗೆ ವಿಸ್ತರಣೆ ಮಾಡಲಾಗುತ್ತದೆ. ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಮಾರ್ಗವನ್ನು ಅತ್ತಿಬೆಲೆ ವರೆಗೆ ವಿಸ್ತರಿಸಲಾಗುತ್ತದೆ.

ಕೋರಮಂಗಲದ ಮೂಲಕ ಬಿಟಿಎಂ ಬಡಾವಣೆಯಿಂದ ಇಂದಿರಾನಗರಕ್ಕೆ, ವರ್ತೂರು ಮೂಲಕ ಬೊಮ್ಮಸಂದ್ರದಿಂದ ಕಾಡುಗೋಡಿಗೆ, ಬೈರಮಂಗಲ ಹಾಗೂ ಇನೊವೇಟಿವ್‌ ಫಿಲ್ಮ್‌ ಸಿಟಿ ಮೂಲಕ ಹಾರೋಹಳ್ಳಿಯಿಂದ ಬಿಡದಿ ಟರ್ಮಿನಲ್‌ ವರೆಗೆ ಸಂಪರ್ಕ ಮಾರ್ಗಗಳ ನಿರ್ಮಾಣ. ಮೈಸೂರು ರಸ್ತೆ, ಸುಮನಹಳ್ಳಿ, ಯಶವಂತಪುರ, ನಾಗವಾರ, ಕೆ.ಆರ್‌.ಪುರ ಹಾಗೂ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಮಾರ್ಗವಾಗಿ ಪುಟ್ಟೇನಹಳ್ಳಿ ಕ್ರಾಸ್‌ನಿಂದ ಆರಂಭಿಸಿ ಆರ್‌.ವಿ ರಸ್ತೆಗೆ ಹೊರವರ್ತುಲ ರಸ್ತೆ ನಿರ್ಮಾಣ.

ಪ್ರತಿಯೊಂದು ಮೆಟ್ರೊ ನಿಲ್ದಾಣದಲ್ಲಿ ಸೈಕಲ್‌ ನಿಲುಗಡೆ, ಬಸ್‌ ನಿಲ್ದಾಣ, ಆಟೊ ನಿಲ್ದಾಣ ಮತ್ತು ಟ್ಯಾಕ್ಸಿ ನಿಲ್ದಾಣಗಳನ್ನು ಒದಗಿಸಿ ಬಹು ಮಾದರಿ ಸಾರಿಗೆ ನಿಲ್ದಾಣಗಳನ್ನಾಗಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಘೋಷಿಸಿದ ₹17 ಸಾವಿರ ಕೋಟಿ ಬಳಸಿ ಉಪನಗರ ರೈಲು ಜಾಲವನ್ನು ಪೂರ್ಣಗೊಳಿಸಲು ಬಿ–ರೈಡ್‌ (ಬೆಂಗಳೂರು ರೈಲ್ವೆ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌) ಸ್ಥಾಪಿಸಲಾಗುತ್ತದೆ.

**

ದೇವನಹಳ್ಳಿಗೆ ಐಟಿ ಸಿಟಿ–ಒಂದೇ ಸೂರಿನಡಿ ಎಲ್ಲ ಸಾರಿಗೆ ಸಂಸ್ಥೆಗಳು

* ಮನೆಗಳ ಬೆಲೆ ಕಡಿಮೆ ಮಾಡಲು ಉತ್ತಮ ನಗರ ಯೋಜನೆ ಹಾಗೂ ವಸತಿ ಪ್ರದೇಶಗಳು ವಾಣಿಜ್ಯ ಚಟುವಟಿಕೆ ಪ್ರದೇಶಗಳಾಗಿ ಬದಲಾಗುವುದನ್ನು ತಡೆಗಟ್ಟಲು ಜ‍ಪಾನಿನ ಝೋನಿಂಗ್‌ ಮಾದರಿಯಲ್ಲಿ ಅಂತರ್ಗತ ವಲಯ ಪ್ರಕ್ರಿಯೆ ಕಾರ್ಯಗತ

* ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದ ಸದುಪಯೋಗಕ್ಕೆ ದೇವನಹಳ್ಳಿ ಐಟಿ ಸಿಟಿ ನಿರ್ಮಾಣ

* ಐಐಎಸ್‌ಸಿ ಹಾಗೂ ಐಐಎಂಬಿ ಸಹಯೋಗದಲ್ಲಿ ₹200 ಕೋಟಿ ವೆಚ್ಚದಲ್ಲಿ ‘ಕೆ–ಹಬ್‌ (ನವೋದ್ಯಮದ ಉತ್ತೇಜನ ಕೇಂದ್ರ)’ ಸ್ಥಾಪನೆ

* ನಗರದ ಸುಗಮ ಸಂಚಾರಕ್ಕೆ ನೆರವಾಗುವ ನಾಗರಿಕ ಪಾಲ್ಗೊಳ್ಳುವಿಕೆ ಆ್ಯಪ್‌ನಂತಹ ವಿನೂತನ ಪ್ರಯತ್ನಗಳಿಗೆ ₹200 ಕೋಟಿಯ ‘ಬೆಂಗಳೂರು ಟ್ರಾನ್ಸಿಟ್‌ ಚಾಲೆಂಜ್‌ ನಿಧಿ’ ಸ್ಥಾಪನೆ

* ಅತ್ತಿಬೆಲೆ, ನೆಲಮಂಗಲ, ಕನಕ‍ಪುರ, ರಾಮನಗರ, ಬಿಐಎಎಲ್‌ ಮತ್ತು ಹೊಸಕೋಟೆಯಲ್ಲಿ ಬಹು ಮಾದರಿ ಸಾರಿಗೆ ಕೇಂದ್ರ ನಿರ್ಮಾಣ. ನಗರದೊಳಗೆ ಸರ್ಕಾರಿ ಹಾಗೂ ಖಾಸಗಿ ಬಸ್‌ ಪ್ರವೇಶದಿಂದ ಉಂಟಾಗುವ ಒತ್ತಡವನ್ನು ಈ ಮೂಲಕ ತಗ್ಗಿಸಲಾಗುತ್ತದೆ

* ಬಿಡದಿ, ದಾಬಸ್‌ಪೇಟೆ, ದೇವನಹಳ್ಳಿ ಮತ್ತು ಅತ್ತಿಬೆಲೆಯಲ್ಲಿ ಬಹು ಮಾದರಿಯ ಲಾಜಿಸ್ಟಿಕ್ ಪಾರ್ಕ್‌ ನಿರ್ಮಾಣ

* ಬಿಎಂಟಿಸಿ ಬಸ್‌ ಸಂಖ್ಯೆ ದ್ವಿಗುಣ. ಮಿನಿ ಬಸ್‌ ಸೇವೆ ಆರಂಭ

* ಸಮೂಹ ಸಾರಿಗೆಯನ್ನು ಜನಪ್ರಿಯಗೊಳಿಸಲು ವಾಣಿಜ್ಯ ವಲಯದಲ್ಲಿರುವ ಕಾರ್ಖಾನೆಗಳು ಹಾಗೂ ಕಚೇರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಉದ್ಯೋಗಿಗಳಿಗೆ ವಿಶೇಷ ರಿಯಾಯಿತಿ ಪ್ಯಾಕೇಜ್‌ ನೀಡಲಾಗುತ್ತದೆ

* ಡಿಜಿಸಿಎ ಜತೆ ಮಾತುಕತೆ ನಡೆಸಿ, ನಗರದೊಳಗೆ, ನಗರಕ್ಕೆ ಹಾಗೂ ನಗರದಿಂದ ಪರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯ ಹೆಲಿಕಾಪ್ಟರ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ

* ಅಂತರರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಬಿಎಂಟಿಸಿ, ಬಿಎಂಆರ್‌ಸಿಎಲ್‌ ಹಾಗೂ ಉಪನಗರ ರೈಲು ಸಂಪರ್ಕಕ್ಕಾಗಿ ಬೆಂಗಳೂರು ಮೆಟ್ರೊಪಾಲಿಟನ್‌ ಟ್ರಾನ್ಸಿಟ್‌ ಅಥಾರಿಟಿ (ಬಿಎಂಟಿಎ) ಸ್ಥಾಪನೆ

* ಬಿಎಂಟಿಎ ಮೂಲಕ ಮೂಲಕ ಬಿಎಂಟಿಸಿ, ನಮ್ಮ ಮೆಟ್ರೊ, ಉಪನಗರ ರೈಲು ಹಾಗೂ ಸೈಕಲ್‌ ಶೇರಿಂಗ್‌ಗಳಲ್ಲಿ ಬಳಸಬಹುದಾದ ಏಕೀಕೃತ ಸಾರಿಗೆ ಕಾರ್ಡ್‌ ಪರಿಚಯ

* ನಗರದಲ್ಲಿ ಪೊಲೀಸ್‌ ಠಾಣೆಗಳ ಸಂಖ್ಯೆ ದ್ವಿಗುಣ

* ಪೊಲೀಸ್‌ ಇಲಾಖೆಯ ಎಲ್ಲ ಖಾಲಿ ಹುದ್ದೆಗಳ ಭರ್ತಿ

* ಪೊಲೀಸ್‌ ಇಲಾಖೆಯಲ್ಲಿ ಮೂರು ಪಾಳಿಗಳ ವ್ಯವಸ್ಥೆ ಮತ್ತೆ ಜಾರಿ

* ತೊಂದರೆಯಲ್ಲಿರುವ ಮಹಿಳೆಯರ ಕರೆಗೆ ‘ಕಿತ್ತೂರು ರಾಣಿ ಚೆನ್ನಮ್ಮ ಫ್ಲೈಯಿಂಗ್‌ ಸ್ಕ್ವಾಡ್‌’ನಿಂದ ತಕ್ಷಣವೇ ಸ್ಪಂದಿಸುವ ವ್ಯವಸ್ಥೆ

* ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಜಿಪಿಎಸ್‌ ಸೌಲಭ್ಯ ಇರುವ ಬಸ್‌ಗಳ ಸೇವೆ

* ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಸೇವೆ ಒದಗಿಸುವ ಮಹಿಳಾ ಆಟೊ ರಿಕ್ಷಾ ಹಾಗೂ ಟ್ಯಾಕ್ಸಿಗಳಿಗೆ ಪ್ರೋತ್ಸಾಹಧನ

* ಬೆಂಗಳೂರು ದರ್ಶಿನಿ ‘ಹಾಪ್‌ ಆನ್‌–ಹಾಪ್‌ ಆಪ್‌ ಬಸ್‌ಗಳ ಸಂಖ್ಯೆ ಹೆಚ್ಚಳ

* ನಗರದಾದ್ಯಂತ ಹೆರಿಟೇಜ್‌ ವಾಕ್ ಪ್ರಚುರ

* ಸೋಮೇಶ್ವರ ದೇವಸ್ಥಾನ, ಕಾಡುಮಲ್ಲೇಶ್ವರ ದೇವಸ್ಥಾನ ಹಾಗೂ ಬಸವನಗುಡಿಯ ದೇವಸ್ಥಾನಗಳನ್ನು ಆಕರ್ಷಕ ಪ್ರವಾಸೋದ್ಯಮ ಸ್ಥಳಗಳಾಗಿ ಪರಿವರ್ತನೆ

* ಪ್ರತಿಯೊಂದು ವಾರ್ಡ್‌ನಲ್ಲಿ ಉದ್ಯಾನ ಸ್ಥಾಪಿಸಿ, ಅಲ್ಲಿ ಬಯಲು ರಂಗಮಂದಿರಗಳನ್ನು ತೆರೆದು ಸಂಗೀತ, ನೃತ್ಯ ಮತ್ತು ನಾಟಕ ಪ್ರದರ್ಶನಗಳಿಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT