ಬುಧವಾರ, ಮಾರ್ಚ್ 3, 2021
31 °C
ಯಲಬುರ್ಗಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವೀರನಗೌಡ ಪೊಲೀಸ್‌ ಪಾಟೀಲ

ಜನ ಬದಲಾವಣೆ ಬಯಸಿದ್ದಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನ ಬದಲಾವಣೆ ಬಯಸಿದ್ದಾರೆ

ಕಾಂಗ್ರೆಸ್‌ ಕಟ್ಟಾಳುವಾಗಿದ್ದು, ಕೊನೆಯ ಹಂತದಲ್ಲಿ ಅದೇಕೋ ಪಕ್ಷದ ಮೇಲೆ ಮುನಿದುಕೊಂಡವರು ವೀರನಗೌಡ ಪೊಲೀಸ್‌ ಪಾಟೀಲ. ಸುಮಾರು ಒಂದು ವರ್ಷದಿಂದಲೂ ಜನಸಂಘಟನೆ, ಮತದಾರರ ಓಲೈಕೆಯಲ್ಲಿ ತೊಡಗಿದ್ದ ಅವರು ಇದೀಗ ಜೆಡಿಎಸ್‌ ಕೈ ಹಿಡಿದಿದ್ದಾರೆ. ಯಲಬುರ್ಗಾದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕರೆಸಿ ಭರ್ಜರಿ ಸಮಾವೇಶವನ್ನೂ ಮಾಡಿದ್ದಾರೆ. ಪ್ರಚಾರದಲ್ಲಿ ಕಾಂಗ್ರೆಸ್‌, ಬಿಜೆಪಿಗೆ ಸರಿಸಮನಾದ ಪೈಪೋಟಿ ನೀಡುತ್ತಿದ್ದಾರೆ. ಎರಡು ಪ್ರಬಲ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ವೀರನಗೌಡರದ್ದು. ಈ ಸಂದರ್ಭ ತಮ್ಮ ಮಾತುಗಳನ್ನು ಹಂಚಿಕೊಂಡದ್ದು ಹೀಗೆ...

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದ ಜನ ಪ್ರಾದೇಶಿಕ ಪಕ್ಷವನ್ನು ಸ್ವೀಕರಿಸುತ್ತಾರೆಯೇ ?

ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಅಸಮಾನತೆ ನಿವಾರಿಸುವಲ್ಲಿ ವಿಫಲವಾಗಿವೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿವೆ. ಇದರಿಂದ ರಾಜ್ಯದ ಜನರಿಗೆ  ಅನ್ಯಾಯವಾಗಿದೆ. ಈ ಎಲ್ಲವನ್ನೂ ಗಮನಿಸಿದ ನಾಡಿನ ಜನ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಬೆಂಬಲಿಸಲು ತೀರ್ಮಾನಿಸಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ.

ಯಲಬುರ್ಗಾ ಕ್ಷೇತ್ರದಲ್ಲಿ ಕೆಳ ಹಂತದಲ್ಲಿದ್ದ ಜೆಡಿಎಸ್ ಪಕ್ಷದಿಂದ ಚುನಾವಣೆ ಎದುರಿಸಲು ಯಾವ ಸಿದ್ಧತೆ ಮಾಡಿದ್ದೀರಿ?

ಒಂದು ವರ್ಷದಿಂದಲೇ ಅಹಿಂದ ಸಂಘಟನೆಯ ಮೂಲಕ ತಾಲ್ಲೂಕಿನಾದ್ಯಂತ ಸಂಚರಿಸಿ ಹಿಂದುಳಿದ, ಅಲ್ಪಸಂಖ್ಯಾತರ, ದಲಿತ ಸಮುದಾಯಗಳ ಮುಖಂಡರೊಂದಿಗೆ ಚರ್ಚಿಸಿ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಗೆ ನೀಲನಕ್ಷೆ ರೂಪಿಸಲಾಯಿತು. ಎಲ್ಲ ಸಮುದಾಯದವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ನಡೆ ಕಾಂಗ್ರೆಸ್‌ ಮುಖಂಡರ ಕೆಂಗಣ್ಣಿಗೆ ಗುರಿಯಾಯಿತು. ಆದರೆ ಕ್ಷೇತ್ರದ ಜನರಿಂದ  ಬೆಂಬಲ ಸಿಕ್ಕಿದ್ದರಿಂದ ಜೆಡಿಎಸ್ ಮೂಲಕ ಸ್ಪರ್ಧಿಸಬೇಕಾಯಿತು. ಜೆಡಿಎಸ್ ಪಕ್ಷ ಸೇರುವ ಮನ್ನವೇ ಚುನಾವಣೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈಗ ಎಚ್‌.ಡಿ.ಕುಮಾರಸ್ವಾಮಿ ಅವರ ವರ್ಚಸ್ಸು ಜತೆಗೆ 30 ವರ್ಷ  ಕ್ಷೇತ್ರದ ಜನರೊಂದಿಗೆ ಬೆಳೆಸಿಕೊಂಡ ಒಡನಾಟವು ಜೆಡಿಎಸ್ ದಿಗ್ವಿಜಯಕ್ಕೆ ಕಾರಣವಾಗಲಿದೆ.

ಜೆಡಿಎಸ್ ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಕ್ಕೆ ಅಡ್ಡಗಾಲೋ ಅಥವಾ ಗೆಲುವಿನ ದಾಪುಗಾಲೋ?

ಜೆಡಿಎಸ್ ಪಕ್ಷವನ್ನು ಕ್ಷೇತ್ರದ ಜನ ಅತ್ಯಂತ ಖುಷಿಯಿಂದಲೇ ಸ್ವೀಕರಿಸುತ್ತಿದ್ದಾರೆ. ಜೆಡಿಎಸ್‌ಗೆ ಬಿಜೆಪಿ ಪ್ರತಿಸ್ಪರ್ಧಿ ಹೊರತು ಕಾಂಗ್ರೆಸ್‌ ಅಲ್ಲ. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದು ನಿಶ್ಚಿತ.

ಜಾತಿ ರಾಜಕಾರಣದ ಆರೋಪದ ಬಗ್ಗೆ ವೀರನಗೌಡರ ನಿಲುವು ಏನು?

ಕಾಂಗ್ರೆಸ್‌ ಪಕ್ಷದವರು ಮಾಡುತ್ತಿರುವ ಅಪಪ್ರಚಾರವಿದು. ಸೋಲಿನ ಭೀತಿಯಲ್ಲಿರುವ ಅಭ್ಯರ್ಥಿ ರಾಯರಡ್ಡಿಯವರು ಈ ರೀತಿಯ ಸುಳ್ಳು ಹೇಳಿಕೆ ನೀಡಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಾಸ್ತವವಾಗಿ ಹೇಳುವುದಾದರೆ ಯಾವುದೇ ಪ್ರತ್ಯೇಕವಾಗಿ ವಿವಿಧ ಸಮುದಾಯದವರ ಸಭೆಯನ್ನು ಕರೆಯದೇ ಇರುವ ರಾಯರಡ್ಡಿಯವರು ಈ ಚುನಾವಣೆಯಲ್ಲಿ ಎಲ್ಲ ಜಾತಿಯವರನ್ನು ಪ್ರತ್ಯೇಕವಾಗಿ ಸಭೆ ನಡೆಸಿ ಮತ ಯಾಚಿಸುತ್ತಿದ್ದಾರೆ. ವಿವಿಧ ಆಮಿಷಗಳನ್ನು ಒಡ್ಡಿ ಮತ ಪಡೆಯಲು ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ.

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ನಡೆದುಕೊಳ್ಳುತ್ತಿರುವ ಇವರ ವಿರುದ್ಧ ಈಗಾಗಲೇ ಮುಖ್ಯ ಚುನಾವಣಾ ಆಯೋಗಕ್ಕೆ ದೂರ ನೀಡಲಾಗಿದೆ. ಈ ಬೆಳವಣಿಗೆಯಿಂದಲೇ ಜನರಿಗೂ ಗೊತ್ತಾಗುತ್ತಿದೆ ಜಾತಿ ರಾಜಕಾರಣ ಯಾರು ಮಾಡುತ್ತಿದ್ದಾರೆಂಬುದು.

ಕೊನೆಗಳಿಗೆಯಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್ ಸೇರಿದ ತಮಗೆ ಗೆಲುವಿನ ಸಾಧ್ಯತೆಗಳೆಷ್ಟು?

ಕಾಂಗ್ರೆಸ್‌ ಮತ್ತು ಬಿಜೆಪಿ ವಿಶ್ವಾಸ ಕಳೆದುಕೊಂಡಿದ್ದರಿಂದ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಜನಸಾಮಾನ್ಯರ ಹಾಗೂ ರೈತರ ಪರವಾಗಿ ಕೆಲಸ ಮಾಡುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿರುವುದರಿಂಧ ಶೇ 100 ರಷ್ಟು ಗೆಲುವು ಖಚಿತ.

- ಉಮಾಶಂಕರ  ಹಿರೇಮಠ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.