ಶುಕ್ರವಾರ, ಮಾರ್ಚ್ 5, 2021
28 °C
ಕಲ್ಪತರು ನಾಡಲ್ಲಿ ಬಲವರ್ಧನೆಗೆ ಬಿಜೆಪಿ ಕಸರತ್ತು; ‘ಪ್ರಬಲ’ ಪಕ್ಷೇತರರು

ಕಾಂಗ್ರೆಸ್‌– ದಳ ಸಮಬಲದ ಸೆಣಸಾಟ

ಎನ್. ಸಿದ್ದೇಗೌಡ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌– ದಳ ಸಮಬಲದ ಸೆಣಸಾಟ

‘ಕಲ್ಪತರು ನಾಡು’ ಎಂದು ಹೆಸರಾದ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಸಮಬಲದ ಸೆಣಸಾಟ ನಡೆದಿದೆ. ಬಲ ವೃದ್ಧಿಗೆ ಬಿಜೆಪಿ ಕೂಡ ತೀವ್ರ ಕಸರತ್ತು ನಡೆಸಿದೆ.

ಜಿಲ್ಲೆಯ 11 ಕ್ಷೇತ್ರಗಳ ಪೈಕಿ 4ರಲ್ಲಿ ದಳ ಮತ್ತು ಕಾಂಗ್ರೆಸ್‌ ನಡುವೆ, 2ರಲ್ಲಿ ಬಿಜೆಪಿ– ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 5ರಲ್ಲಿ ತ್ರಿಕೋನ ಸ್ಪರ್ಧೆ ಇದೆ.

2013ರ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಜೆಡಿಎಸ್‌ ತನ್ನ ಪ್ರಾಬಲ್ಯ ಮೆರೆದಿತ್ತು. ಕಾಂಗ್ರೆಸ್ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 1 ಸ್ಥಾನದಲ್ಲಿ ಮಾತ್ರ ಜಯ ಗಳಿಸಿತ್ತು.

ಮರು ವರ್ಷ (2014) ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಗಳಿಸಿದ ಮತಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಆ ಪಕ್ಷ ಈಗ ಏಳು ಕ್ಷೇತ್ರಗಳಲ್ಲಿ ಗೆಲ್ಲಬೇಕು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಈ ನಾಲ್ಕೂ ಕ್ಷೇತ್ರಗಳಿಂದ ಕೇವಲ 42 ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್‌, ಲೋಕಸಭಾ ಚುನಾವಣೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾರರಿಂದ ವ್ಯಕ್ತವಾದ ಭಾರಿ ಬೆಂಬಲ ಕಾಂಗ್ರೆಸ್‌ನ ವಿಶ್ವಾಸವನ್ನು ನೂರ್ಮಡಿಗೊಳಿಸಿದೆ. ಅದರ ಆಧಾರದಲ್ಲೇ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಜನಪ್ರಿಯ ಯೋಜನೆಗಳು, ಅದರಲ್ಲೂ ವಿಶೇಷವಾಗಿ ಅನ್ನಭಾಗ್ಯ ಯೋಜನೆಯ ಜನಪ್ರಿಯತೆ ಪಕ್ಷಕ್ಕೆ ಭಾರಿ ಮುನ್ನಡೆ ಒದಗಿಸಿಕೊಡುತ್ತದೆ ಎಂಬ ಭರವಸೆ ಕಾಂಗ್ರೆಸ್ಸಿಗರದ್ದು.

ಜೆಡಿಎಸ್‌ನ ಆರು ಶಾಸಕರ ಪೈಕಿ ಇಬ್ಬರು ಮಾತ್ರ ಮೊದಲ ಬಾರಿಗೆ ಆಯ್ಕೆಯಾದವರು. ಉಳಿದ ನಾಲ್ವರಲ್ಲಿ ಮೂರು ಮತ್ತು ಅದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾದವರಿದ್ದಾರೆ. ಇದು ಆ ಪಕ್ಷಕ್ಕೆ ಅನುಕೂಲವೂ ಹೌದು, ಅನನುಕೂಲವೂ ಹೌದು.

ಮೂರು, ನಾಲ್ಕು ಬಾರಿ ಆಯ್ಕೆಯಾ ದವರ ಬಗ್ಗೆ ಅವರವರ ಕ್ಷೇತ್ರಗಳಲ್ಲಿ ‘ಆಡಳಿತ ವಿರೋಧಿ’ ಭಾವನೆ ಹೆಚ್ಚಾಗಿದೆ ಎಂಬ ಮಾತು ಕೇಳಿಬಂದಿದೆ. ಹತ್ತು ವರ್ಷಗಳಿಂದ ಆಡಳಿತ ಪಕ್ಷವಾಗದೇ ಇರುವುದರಿಂದ ಅವರ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸ ಕಾರ್ಯಗಳಾಗಿಲ್ಲ ಎಂಬ ದೂರುಗಳೂ ಇವೆ.

ಈ ವಾದವನ್ನು ದಳದವರು ಒಪ್ಪುವುದಿಲ್ಲ. ಜನರೊಂದಿಗೆ ಬೆರೆತು ಕ್ಷೇತ್ರದಲ್ಲಿ ಚೆನ್ನಾಗಿ ಬೇರು ಬಿಟ್ಟಿರುವುದರಿಂದಲೇ ಮರು ಆಯ್ಕೆಯಾಗಲು ಸಾಧ್ಯವಾಗುತ್ತಿದೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಎಲ್ಲ ಬಗೆಯ ಸಾಲ ಮನ್ನಾ ಘೋಷಣೆ ಗ್ರಾಮೀಣ ಮತದಾರರಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸಿದೆ. ಇದರ ಜತೆಗೆ, ಜಿಲ್ಲೆಯ ರಾಜಕಾರಣದ ಮೇಲೆ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಹಿಡಿತ ಈಗಲೂ ಬಲವಾಗಿಯೇ ಇದೆ. ಈ ಅಂಶಗಳು ಈ ಬಾರಿಯೂ ಜಿಲ್ಲೆಯಲ್ಲಿ ಪಕ್ಷದ ಮುನ್ನಡೆಗೆ ಕಾರಣವಾಗುತ್ತವೆ ಎಂಬ ವಿಶ್ವಾಸ ದಳದವರದ್ದು.

ಮೂರು ದಶಕಗಳಿಂದಲೂ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇದೆ. 1991, 1998, 2004 ಮತ್ತು 2009ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಬಿಜೆಪಿಗೆ ಒಲಿದಿದೆ. ಈ ಹಿನ್ನೆಲೆ ಇದ್ದರೂ, ನಾಲ್ಕು ವರ್ಷಗಳ ಹಿಂದೆ ದೇಶವ್ಯಾಪಿ ನರೇಂದ್ರ ಮೋದಿ ಅವರ ಅಲೆ ಇದ್ದರೂ ಲೋಕಸಭಾ ಸ್ಥಾನ ಉಳಿಸಿಕೊಳ್ಳಲು ಆ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನಡೆಗೆ ಪಕ್ಷದೊಳಗಿನ ಭಿನ್ನ ಬಣಗಳು ಸಕ್ರಿಯವಾಗಿರುವುದೇ ಮುಖ್ಯ ಕಾರಣ.

ಬಿಜೆಪಿ ಒಳಗೆ ‘ಕರ್ನಾಟಕ ಜನತಾ ಪಕ್ಷ’ದ (ಕೆಜೆಪಿ) ಗುಂಗು ಇನ್ನೂ ಕಾಡುತ್ತಿರುವಂತಿದೆ. ಕೆಜೆಪಿಯಲ್ಲಿದ್ದ ಮುಖಂಡರಿಗೆ ಈಗಲೂ ಬಿಜೆಪಿಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿದೆ, ಗೆಲ್ಲುವ ಸಾಧ್ಯತೆ ಇರುವ ಮೂರು ಕ್ಷೇತ್ರಗಳಲ್ಲಿ ಈ ಮುಖಂಡರಿಗೇ ಟಿಕೆಟ್‌ ಕೊಡಲಾಗಿದೆ ಎಂದು ಪಕ್ಷದ ಮೂಲ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.

ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡಿರುವ ಸೊಗಡು ಶಿವಣ್ಣ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿದ್ದವರು. ಅವರು ಈ ಸಲದ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವುದಾಗಿ ಘೋಷಿಸಿಕೊಂಡಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಈ ಎಡರು ತೊಡರುಗಳ ನಡುವೆಯೂ ತುಮಕೂರು ಗ್ರಾಮಾಂತರ, ತಿಪಟೂರು ಸೇರಿದಂತೆ 5ರಿಂದ 6 ಕ್ಷೇತ್ರಗಳಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ.

ತಿಪಟೂರು, ಗುಬ್ಬಿ, ತುರುವೇಕೆರೆ, ಶಿರಾ ಕ್ಷೇತ್ರಗಳಲ್ಲಿ ಪ್ರಬಲ ಎನ್ನಬಹುದಾದ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸೋಲು ಗೆಲುವನ್ನು ನಿರ್ಧರಿಸುವಷ್ಟರ ಮಟ್ಟಿಗೆ ಅವರು ತಮ್ಮ ತಮ್ಮ ಶಕ್ತಿ ಪ್ರದರ್ಶಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಕಟ್ಟೆಚ್ಚರ

ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ ಸೋಲು ಎಂಬ ಕಾರಣಕ್ಕೆ ಕೊರಟಗೆರೆ ಕ್ಷೇತ್ರದ ಪರಾಭವವು ಡಾ. ಜಿ.ಪರಮೇಶ್ವರ ಮತ್ತು ಬೆಂಬಲಿಗರನ್ನು ಈಗಲೂ ದುಃಸ್ವಪ್ನದಂತೆ ಕಾಡುತ್ತಿದೆ. ಇಲ್ಲಿ ಮತ್ತೊಮ್ಮೆ ಕಣಕ್ಕೆ ಇಳಿದಿರುವ ಪರಮೇಶ್ವರ, ತಪ್ಪುಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಅವರ ಎದುರಾಳಿ ಸುಧಾಕರ ಲಾಲ್‌ ಈಗಲೂ ಜನ ಸಾಮಾನ್ಯರೊಂದಿಗೆ ಸಹಜವಾಗಿ ಬೆರೆಯುತ್ತಾ ಅವರ ಮನ ಗೆಲ್ಲುವ ಯತ್ನ ನಡೆಸಿದ್ದಾರೆ.

‘ಶಿರಾ’ ಸಚಿವ!

ಬೆಳಗಾವಿ ನಂತರ ರಾಜ್ಯದ ದೊಡ್ಡ ಜಿಲ್ಲೆಯಾದ ತುಮಕೂರಿಗೆ ಟಿ.ಬಿ.ಜಯಚಂದ್ರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅವರನ್ನು ಅವರ ರಾಜಕೀಯ ವಿರೋಧಿಗಳು ‘ಶಿರಾ ಸಚಿವ’ ಎಂದೇ ಗೇಲಿ ಮಾಡುತ್ತಾರೆ. ಈ ಪರಿಯ ಟೀಕೆಗಳಿಗೆ ಒಳಗಾಗುವ ಮಟ್ಟಿಗೆ ಅವರು ಶಿರಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮತ್ತು ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಆರೋಪಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಜಯಚಂದ್ರ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತಮ್ಮ ಮಗನಿಗೆ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಾಗಿಂತ ಮೊದಲು ಅವರು ಪ್ರತಿನಿಧಿಸುತ್ತಿದ್ದ ‘ಕಳ್ಳಂಬೆಳ್ಳ’ ಕ್ಷೇತ್ರದ ಕೆಲವು ಹೋಬಳಿಗಳು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿವೆ. ಹಳೆಯ ಸಂಪರ್ಕಗಳನ್ನು ಬಳಸಿಕೊಂಡು ಮಗನ ಶಾಸನ ಸಭೆ ಪ್ರವೇಶವನ್ನು ಯಶಸ್ವಿಗೊಳಿಸಲು ಅವರು ಉದ್ದೇಶಿಸಿದ್ದಾರೆ. ಆದರೆ ಜಯಚಂದ್ರ ಅವರ ಈ ವಿಸ್ತರಣಾ ಕಾರ್ಯಕ್ಕೆ, ಎರಡೂ ಕ್ಷೇತ್ರಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯದವರು ತೀವ್ರ ಅಸಮಾಧಾನಗೊಂಡಿದ್ದಾರೆ. ಮಗನಿಗೆ ಟಿಕೆಟ್‌ ಕೊಡಿಸುವ ಬದಲು ನಮ್ಮ ಸಮುದಾಯಕ್ಕೆ ಅವಕಾಶ ನೀಡಬೇಕಿತ್ತು ಎಂದು ಸಿಟ್ಟಿಗೆದ್ದಿದ್ದಾರೆ.

‘ಭಾವಿ ಮಂತ್ರಿ, ಮುಖ್ಯಮಂತ್ರಿ...’

ಪರಮೇಶ್ವರ ಗೆದ್ದರೆ ಸಿ.ಎಂ ಸಾಧ್ಯತೆ ಇದೆ. ಪ್ರತಿಸ್ಪರ್ಧಿ ಗೆದ್ದರೆ ಬರೀ ಶಾಸಕರಷ್ಟೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ.

‘ಜೆಡಿಎಸ್‌ಗೆ ಅಧಿಕಾರ ಸಿಗುವುದು, ನಮ್ಮ ಶಾಸಕರು ಮಂತ್ರಿಯಾಗುವುದುಖಚಿತ’ ಎಂದು ದಳದವರು ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ, ಕುಣಿಗಲ್‌ನಲ್ಲಿ ಹೇಳುತ್ತಿದ್ದಾರೆ. ಇಂಥ ಪ್ರಚಾರದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ.

* ಜಾತಿ, ಮತದ ಆಧಾರದಲ್ಲಿ ಹಾಗೂ ಅಭಿವೃದ್ಧಿಗೆ ಸಂಬಂಧಪಡದ ವಿಷಯಗಳ ಮೇಲೆ ಚುನಾವಣೆ ನಡೆಯುತ್ತಿರುವುದು ದುರದೃಷ್ಟಕರ

–ಎಸ್‌.ರಮೇಶ, ವಕೀಲ, ತುಮಕೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.