ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳು ಜನರ ಅಗತ್ಯ ಕಡೆಗಣಿಸಿ, ಆರೋಪಗಳಲ್ಲಿ ತೊಡಗಿವೆ : ಯೋಗೇಂದ್ರ ಯಾದವ್‌

Last Updated 6 ಮೇ 2018, 7:55 IST
ಅಕ್ಷರ ಗಾತ್ರ

ಶಿವಮೊಗ್ಗ: ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳತ್ತ ಗಮನ ಹರಿಸದ ಪ್ರಮುಖ ಪಕ್ಷಗಳು ಅನಗತ್ಯ ವಿಚಾರಗಳನ್ನೇ ಮುಂದಿಟ್ಟುಕೊಂಡು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿವೆ ಎಂದು ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ದೂರಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಈಗ ಚುನಾವಣೆಯ ಅಬ್ಬರ ಜೋರಾಗಿದೆ. ಸಾಮಾನ್ಯ ವ್ಯಕ್ತಿ ಸಂಕಷ್ಟದ ಬದುಕು ನಡೆಸುತ್ತಿದ್ದರೂ, ರೈತರು ಆತ್ಮಹತ್ಯೆಯ ದಾರಿ ಹಿಡಿದರೂ ಆ ಕುರಿತು ಯಾವ ಪಕ್ಷಗಳು ಚಕಾರ ಎತ್ತುತ್ತಿಲ್ಲ. ಅಗತ್ಯ ವಿಷಯ ಬದಿಗಿಟ್ಟು, ಅನಗತ್ಯ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. 15 ನಿಮಿಷ ಚೀಟಿ ಇಲ್ಲದೇ  ರಾಹುಲ್‌ ಗಾಂಧಿಗೆ ಬಾಷಣ ಮಾಡಲು ಬರುವುದಿಲ್ಲ. ಮರಕರಿ ನಾಯಕನ ಮೇಲೆ ಹೈದರಾಲಿ ದಂಡೆತ್ತಿ ಬಂದದ್ದು ತಪ್ಪು ಎಂಬ ವಿಷಯಗಳೇ ಅವರಿಗೆ ಚುನಾವಣಾ ಸರಕುಗಳಾಗಿವೆ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಬಹುಮುಖ್ಯವಾದ ನೀರಿನ ಸಮಸ್ಯೆ, ಗಡಿ ಸಮಸ್ಯೆ, ಸ್ಥಳೀಯ ಸಮಸ್ಯೆ ಕುರಿತು ಮಾತನಾಡಲು ರಾಜ್ಯದ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರ ಸಿದ್ಧವಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಾಧನೆ, ಅಭಿವೃದ್ಧಿ ಕೆಲಸಗಳನ್ನು ಅಳತೆ ಮಾಡಿ ಮತದಾರರು ಮತಹಾಕುವ ಅಭಿಯಾನ ನಡೆಸುವ ಅಗತ್ಯವಿದೆ ಎಂದರು.

ರಾಜ್ಯದಲ್ಲಿ ರೈತರ ಸಮಸ್ಯೆಗಳು ಬೆಟ್ಟದಷ್ಟಿವೆ. ಸತತ ಬರ ಪರಿಸಯ ಪರಿಣಾಮ ರೈತರು  ಸಂಕಷ್ಟದಲ್ಲಿದ್ದಾರೆ. ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತನ ಬೆಳೆಗೆ ಯೋಗ್ಯ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಾಗಿಲ್ಲ. ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಈ ವಿಚಾರದಲ್ಲಿ ಕೇಂದ್ರದ ಮೇಲೆ ರಾಜ್ಯ, ರಾಜ್ಯದ ವಿರುದ್ಧ ಕೇಂದ್ರ ದೂರುತ್ತಿವೆ. ನಿಗದಿತ ಬೆಲೆಗಿಂತಲೂ ಕಡಿಮೆ ದರಕ್ಕೆ ಬೆಳೆ ಮಾರಾಟ ಮಾಡುವ ಅನಿವಾರ್ಯತೆ ರೈತರಿಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ  ಪ್ರಧಾನಿ ನರೇಂದ್ರ ಮೋದಿ, 50 ಲಕ್ಷ ಉದ್ಯೋಗ ನೀಡುವ ಭರಸವೆ ನೀಡಿದ್ದ ರಾಜ್ಯ ಸರ್ಕಾರ ಈಗ  ಈ ವಿಷಯದ ಬಗ್ಗೆ ಚಕಾರ ಎತ್ತುತ್ತಿಲ್ಲ. ಶಿಕ್ಷಣ ವ್ಯವಸ್ಥೆಯೂ ಹಾಳಾಗಿದೆ. ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ವಿಫಲವಾಗಿವೆ. ಪರಿಸರದ ನಾಶ ತಡೆಯುವಲ್ಲಿ ಹಿಂದೇಟು ಹಾಕುತ್ತಿವೆ. ಇಂತಹ ಎಲ್ಲ ಕೆಲಸಗಳ ಮೇಲೆ ನಿಗಾವಹಿಸಲು ಸ್ವರಾಜ್ ಇಂಡಿಯಾ ಪ್ರಾಮಾಣಿಕ ಬದ್ಧತೆ ಹಿಂದಿದೆ ಎಂದರು.

ರಾಷ್ಟ್ರೀಯ ಪಕ್ಷಗಳ ರಾಜನೀತಿ ಚುನಾವಣೆ ಸೀಮಿತವಾಗಿದೆ. ಹಣ, ಜಾತಿ, ಧರ್ಮ ಆಧಾರದ ಮೇಲೆ ಚುನಾವಣೆ ಎದರಿಸುತ್ತಿವೆ. ಸ್ವರಾಜ್ ಇಂಡಿಯಾ ಮಹಾಮೈತ್ರಿಯ ಜತೆ ಸಾಗುತ್ತಿದೆ. ಸ್ವರಾಜ್ ಇಂಡಿಯಾದಿಂದ ಕರ್ನಾಟಕದಲ್ಲಿ ಈ ಬಾರಿ 11 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಮಹಾಮೈತ್ರಿ ಮೂಲಕ 8 ಜನ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಸಾಗರದಲ್ಲಿ ನಮ್ಮ ಪಕ್ಷದ ಒಂದು ಸಣ್ಣ ಪ್ರಯೋಗ. ಅದಕ್ಕೆ ಪೂರಕವಾಗಿ ಪ್ರಾಮಾಣಿಕ, ಬದ್ಧತೆಯ, ನೈಜ ವಸ್ತು ಸ್ಥಿತಿಯ ಪ್ರಣಾಳಿಕೆ ರೂಪಿಸಿದ್ದೇವೆ ಎಂದು ವಿವರ ನೀಡಿದರು.

ಕಾನೂನಿನ ಮೂಲಕ ರೈತರ ಬೆಳೆಗೆ ಬೆಲೆ ನಿಗದಿ ಪಡಿಸಬೇಕು. ಉತ್ಪದನಾ ವೆಚ್ಚದ ಶೇ 50ರಷ್ಟು ಹೆಚ್ಚುವರಿ ಬೆಲೆ ನೀಡುವುದು. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು. ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ, ಬರ ಮುಕ್ತ ರಾಜ್ಯ ನಿರ್ಮಾಣ ಮಾಡುವುದು. ಕೇವಲ ಸರ್ಕಾರಿ ಉದ್ಯೋಗಕ್ಕೆ ಒತ್ತು ನೀಡದೇ ಸ್ವಯಂ ಉದ್ಯೋಗ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವುದು. ಕುರಿ ಸಾಗಣಿಕೆ, ಹೈನುಗಾರಿಕೆ ಒತ್ತು ನೀಡುವುದು. ಸಹಕಾರಿ ಸಂಘಗಳಿಗೆ ಉತ್ತೇಜನ ನೀಡುವುದು,  ಪ್ರಣಾಳಿಕೆಯ ಮುಖ್ಯ ಅಂಶಗಳು ಎಂದು ವಿವರ ನೀಡಿದರು.

ಮೇಲುಕೋಟೆಯಲ್ಲಿ ರೈತ ಮುಖಂಡ ದಿವಂಗತ ಪುಟ್ಟಣ್ಣಯ್ಯ ಅವರ ಪುತ್ರ  ದರ್ಶನ್ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಪುಟ್ಟಣಯ್ಯ ಅವರ ಮೇಲಿನ ಗೌರದಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿದೆ. ಉಳದಿಂತೆ ಎಲ್ಲೂ ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದರು.

ಸ್ವರಾಜ್ ಇಂಡಿಯಾ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಮ್ಜದ್ ಪಾಶ,  ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT