ಶನಿವಾರ, ಮಾರ್ಚ್ 6, 2021
29 °C
ಚನ್ನಗಿರಿ: ಬಿಜೆಪಿ ಅಭ್ಯರ್ಥಿ ಮಾಡಾಳು ವಿರೂಪಾಕ್ಷಪ್ಪ ಭರವಸೆ

ಚನ್ನಗಿರಿಯನ್ನು ಮತ್ತೆ ಮೊದಲ ಸ್ಥಾನಕ್ಕೆ ತರುವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿಯನ್ನು ಮತ್ತೆ ಮೊದಲ ಸ್ಥಾನಕ್ಕೆ ತರುವೆ’

ಜನ ನಿಮ್ಮನ್ನೇ ಯಾಕೆ ಆಯ್ಕೆ ಮಾಡಬೇಕು?

2008ರಿಂದ 13ರವರೆಗೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿಯಲ್ಲಿ ರಾಜ್ಯದ ಮೊದಲ ಹತ್ತು ಕ್ಷೇತ್ರಗಳಲ್ಲಿ ಚನ್ನಗಿರಿಯು ಒಂದು ಎಂಬ ಹೆಗ್ಗಳಿಕೆ ಪಡೆದಿತ್ತು. ನಲ್ಲೂರು, ಚನ್ನಗಿರಿ, ಸಂತೇಬೆನ್ನೂರು ಪಟ್ಟಣದಲ್ಲಿ ಚತುಷ್ಪಥ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಉಬ್ರಾಣಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೆ. 100 ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಿದ್ದೆ. ವಾಲ್ಮೀಕಿ ಸಮುದಾಯ ಭವನ, ಬಾಬೂ ಜಗಜೀವನ ರಾಂ ಸಮುದಾಯ ಭವನ, ಮುದ್ದೇನಹಳ್ಳಿ ಆಂಜನೇಯ ಸ್ವಾಮಿ ಸಮುದಾಯ ಭವನ, ಕನಕ ಸಮುದಾಯ ಭವನ, ಮರಾಠ ಸಮುದಾಯ ಭವನ, ಎಸ್‌ಸಿ ಕಾಲೊನಿ ಮತ್ತು ತಾಂಡಾಗಳಲ್ಲಿ ಸಮುದಾಯ ಭವನ. ಹೀಗೆ ಎಲ್ಲ ಸಮುದಾಯದ ಜನರಿಗೆ ಸಮುದಾಯ ಭವನಗಳನ್ನು ನಿರ್ಮಿಸಿಕೊಟ್ಟಿದ್ದೆ. ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಕಾಂಕ್ರೀಟ್‌ ರಸ್ತೆ ನಿರ್ಮಾಣವನ್ನು ಮಾಡಿದ್ದೆ. ಇದಲ್ಲದೆ ಕಳೆದ ಮೂರು ತಿಂಗಳಲ್ಲಿ ಕ್ಷೇತ್ರದಲ್ಲಿ 3.93 ಲಕ್ಷ ಜನರಲ್ಲಿ 3.80 ಲಕ್ಷ ಜನರನ್ನು ಸ್ವತಃ ಭೇಟಿ ಮಾಡಿದ್ದೇನೆ. ಹಾಗಾಗಿ ಜನರ ಸ್ಪಂದನೆಗಾಗಿ ಮತ್ತು ಅಭಿವೃದ್ಧಿಗಾಗಿ ಜನ ನನ್ನನ್ನು ಆಯ್ಕೆ ಮಾಡುತ್ತಾರೆ.

ಯಾವ ವಿಷಯವನ್ನು ಮುಂದಿಟ್ಟುಕೊಂಡು ಜನರ ಮತ ಯಾಚಿಸುತ್ತೀರಿ?

ಸಾಸ್ವೆಹಳ್ಳಿ ಏತ ನೀರಾವರಿಯನ್ನು ನಾನು ಶಾಸಕನಾಗಿದ್ದಾಗ ಬಜೆಟ್‌ಗೆ ಸೇರಿಸಿದ್ದೆ. ನನ್ನ ಬಳಿಕ ಶಾಸಕರಾದವರು ಅದನ್ನು ಮುಂದುವರಿಸಿದ್ದರೆ ಕ್ಷೇತ್ರದ ಕೆರೆಗಳು ತುಂಬುತ್ತಿದ್ದವು. ಜನರಿಗೆ ನೀರಿನ ಸಮಸ್ಯೆ ತಪ್ಪುತ್ತಿತ್ತು. ಆದರೆ, ಶಾಸಕರು ಆ ಕೆಲಸ ಮಾಡಲಿಲ್ಲ. ಚನ್ನಗಿರಿ ಪಟ್ಟಣ ಮತ್ತು 70 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್‌ ಕಾಮಗಾರಿ ಮುಗಿದಿತ್ತು. ಆದರೆ ನೀರಿನ ಸಂಪರ್ಕವನ್ನೇ ನೀಡಿಲ್ಲ. ನಾನು ಆಯ್ಕೆಯಾದರೆ ನೀರು ಹರಿಸಿ ಕೆರೆಗಳನ್ನು ತುಂಬಿಸುತ್ತೇನೆ. ಇದನ್ನೇ ಜನರಿಗೂ ಹೇಳಿದ್ದೇನೆ.

ನೀವು ಆಯ್ಕೆಯಾದರೆ ಮಾಡುವ ಮೊದಲ ಕೆಲಸ ಯಾವುದು?

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದ ಬಹಳ ಜನರಿಗೆ ನಿವೇಶನ ಇಲ್ಲ. ಅವರಿಗೆ ನಿವೇಶನ ಕೊಡಿಸುವ ಕೆಲಸ ಮೊದಲು ಆಗಬೇಕಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡುವುದು ಮೊದಲ ಆದ್ಯತೆಯ ಕೆಲಸ. 24 ಸಾವಿರ ಮಂದಿಗೆ ಮಾಸಾಶನ ಬರುತ್ತಿತ್ತು. ಈಗಿನ ಸರ್ಕಾರ ಮೂರ್ನಾಲ್ಕು ತಿಂಗಳಿಂದ ಮಾಸಾಶನ ನೀಡಿಲ್ಲ. ಮೊದಲು ಈ ಸಮಸ್ಯೆ ಪರಿಹರಿಸಲಾಗುವುದು.

ಚನ್ನಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಡಿಪೊ ಇಲ್ಲ. ಈ ಸಮಸ್ಯೆಗಳನ್ನು ಹೇಗೆ ಪರಿಹರಿಸುವಿರಿ?

ನಾನು ಶಾಸಕನಾಗಿದ್ದಾಗ ಇದಕ್ಕಾಗಿ ₹ 4 ಕೋಟಿ ಮಂಜೂರು ಮಾಡಿಸಿದ್ದೆ. ಆದರೆ ಜಾಗದ ಕೊರತೆಯಿಂದ ನಿರ್ಮಿಸಲಾಗಿಲ್ಲ. ಖಾಸಗಿ ಜಾಗಕ್ಕೆ ಚಿನ್ನದ ಬೆಲೆ ಇದೆ. ಈ ಬಾರಿ ಆಯ್ಕೆಯಾದರೆ ಖಾಸಗಿಯವರಿಂದ ಖರೀದಿಸಿಯಾದರೂ ಬಸ್‌ ನಿಲ್ದಾಣ ಮತ್ತು ಡಿಪೊ ನಿರ್ಮಿಸುವೆ.

ಚನ್ನಗಿರಿಯಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳೇ ಇಲ್ಲವಲ್ಲ?

2012ರಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲು ಮಂಜೂರಾತಿ ಪಡೆದು ₹ 8 ಕೋಟಿ ಮೀಸಲಿಡಲಾಗಿತ್ತು. ಜಾಗ ಗುರುತಿಸಿ ಕಳುಹಿಸಲಾಗಿತ್ತು. ಈ ಕಾರ್ಯವನ್ನು ಈ ಬಾರಿ ಪೂರ್ಣಗೊಳಿಸುತ್ತೇನೆ. ಜನರು ಉದ್ಯೋಗಕ್ಕಾಗಿ ಬೆಂಗಳೂರು, ಇತರ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಗಾರ್ಮೆಂಟ್‌, ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ, ಇಲ್ಲಿನ ಯುವಜನರಿಗೆ ಉದ್ಯೋಗ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.

ಮಾಡಾಳು ವಿರೂಪಾಕ್ಷಪ್ಪ ಅವರು ಮೂಲತಃ ಕಾಂಗ್ರೆಸ್‌ನಲ್ಲಿದ್ದವರು. ಚನ್ನೇಶಪುರ ಮಾಡಾಳು ಗ್ರಾಮ ಪಂಚಾಯ್ತಿ ಸದಸ್ಯರಾಗಿ, ಆನಂತರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬಿಜೆಪಿಯಲ್ಲಿದ್ದ ವಡ್ನಾಳ್‌ ರಾಜಣ್ಣ 1999ರಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಕ್ಕಿಲ್ಲ ಎಂದು ಪಕ್ಷೇತರರಾಗಿ ನಿಂತು ಜಯಗಳಿಸಿ ಕಾಂಗ್ರೆಸ್‌ ಸೇರಿದಾಗ ವಿರೂಪಾಕ್ಷಪ್ಪ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು. 2004ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2008ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಯಡಿಯೂರಪ್ಪ ಅವರಿಗೆ ಆತ್ಮೀಯರಾಗಿದ್ದ ವಿರೂಪಾಕ್ಷ ಅವರು 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಕೇವಲ 1,773 ಮತಗಳ ಅಂತರದಿಂದ ಸೋತಿದ್ದರು. ಇದೀಗ ನಾಲ್ಕನೇ ಬಾರಿಗೆ ಕಣಕ್ಕಿಳಿದಿದ್ದಾರೆ.

ಬಾಲಕೃಷ್ಣ ಪಿ.ಎಚ್‌. ಶಿಬಾರ್ಲ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.