ಮಂಗಳವಾರ, ಮಾರ್ಚ್ 2, 2021
26 °C

ಸವಾಲು– ಜವಾಬಿನ ಚಾಟಿಯ ನಡುವೆ ಬಂಡಾಯದ ಬಿಸಿ

ಬಿ.ಎನ್‌.ಶ್ರೀಧರ Updated:

ಅಕ್ಷರ ಗಾತ್ರ : | |

ಸವಾಲು– ಜವಾಬಿನ ಚಾಟಿಯ ನಡುವೆ ಬಂಡಾಯದ ಬಿಸಿ

ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗರು ವಾದ ಮಂಡಿಸಿದರೆ, ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂದು ಬಿಜೆಪಿಯವರು ಪ್ರತಿವಾದ ಮುಂದಿಡುವ ಮೂಲಕ, ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ. ರಾಜಕೀಯ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ತಲ್ಲೀನರಾಗಿದ್ದು, ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು ನೇಪಥ್ಯಕ್ಕೆ ಸರಿದಿವೆ.

‘ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗಲೂ ಏನೂ ಮಾಡಲಿಲ್ಲ. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗಲೂ ಏನೂ ಕೊಡುಗೆ ಕೊಡಲಿಲ್ಲ’ ಎಂದು ಟೀಕಾಪ್ರಹಾರ ನಡೆಸುತ್ತಿರುವ ಕಾಂಗ್ರೆಸ್‌, ಜನರನ್ನು ಬಡಿದೆಬ್ಬಿಸುತ್ತಿದೆ. ತಾನೇನೂ ಕಡಿಮೆ ಇಲ್ಲ ಎಂಬಂತೆ ಬಿಜೆಪಿ ಕೂಡ ಪ್ರತಿ ಟೀಕಾಸ್ತ್ರ ಬಿಡುತ್ತಿದೆ. ‘ರಾಜ್ಯದಲ್ಲಿ ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್‌, ಜಿಲ್ಲೆಗೆ ಏನೂ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಐಐಟಿ, ಐಐಐಟಿ, ಬಿಆರ್‌ಟಿಎಸ್ ತಂದಿದ್ದೇವೆ. ಅವಳಿ ನಗರವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಹೇಳಿ, ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದೆ. ಈ ಎರಡೂ ಪಕ್ಷಗಳ ವಿರುದ್ಧ ಜೆಡಿಎಸ್‌ ಚಾಟಿ ಬೀಸುತ್ತಿದೆ.

ಇದು ಒಂದು ರೀತಿಯಲ್ಲಿ ಮನರಂಜನೆಯಂತೆ ಸ್ಥಳೀಯರಿಗೆ ಕಂಡರೂ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಯಾವ ಸರ್ಕಾರದಿಂದಲೂ ಗಂಭೀರ ಪ್ರಯತ್ನ ನಡೆದಿಲ್ಲ ಎನ್ನುವುದಕ್ಕೆ ಜಿಲ್ಲೆಯ ಈಗಿನ ಚಿತ್ರಣವೇ ಸಾಕ್ಷಿ.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಕಾಲಕಳೆದಂತೆ ಪಕ್ಷದ ಹಿಡಿತ ಸಡಿಲಗೊಂಡಿತು. ಎಂಬತ್ತರ ದಶಕದಲ್ಲಿ ಜನತಾ ಪರಿವಾರ, ರೈತ ಸಂಘ ಪ್ರಬಲವಾಗಿದ್ದವು. 90ರ ದಶಕದಲ್ಲಿ ಈದ್ಗಾ ಮೈದಾನ ವಿವಾದ ಗರಿಬಿಚ್ಚಿದ ನಂತರ ಬಿಜೆಪಿ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿತು. ನಂತರ ಜಿಲ್ಲೆಯನ್ನು ಪ್ರವೇಶಿಸಿದ ಹೊಂದಾಣಿಕೆ ರಾಜಕಾರಣ ಕಾಂಗ್ರೆಸ್‌, ಜನತಾದಳಕ್ಕೆ ಮುಳುವಾಯಿತು.

2008ರಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕಡೆ ಬಿಜೆಪಿಯೇ ಗೆದ್ದಿತ್ತು. ಕಲಘಟಗಿ ಒಂದರಲ್ಲಿ ಮಾತ್ರ ಕಾಂಗ್ರೆಸ್‌ ಕಣ್ತೆರೆದಿತ್ತು. ಆದರೆ, 2013ರ ಚುನಾವಣೆ ವೇಳೆಗೆ ಅದು ಏರುಪೇರಾಯಿತು. ಆ ಸಂದರ್ಭದಲ್ಲಿ ಯಡಿಯೂರಪ್ಪ ಬಿಜೆಪಿ ಬಿಟ್ಟು, ಕೆಜೆಪಿ ಕಟ್ಟಿದ್ದರು. ಮತ ವಿಭಜನೆಯ ಲಾಭ ಪಡೆದು ಕಾಂಗ್ರೆಸ್‌ನ ನಾಲ್ವರು ಗೆದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯಲ್ಲಿ ಕೆಜೆಪಿ ವಿಲೀನ ಆಗಿದೆ. ಹೀಗಾಗಿ ಸ್ಥಳೀಯ ರಾಜ

ಕೀಯ ಲೆಕ್ಕಾಚಾರಗಳು, 2008ರ ಚುನಾವಣೆ ಫಲಿತಾಂಶವನ್ನೇ ನಿರೀಕ್ಷಿಸುತ್ತಿವೆ.

ಕಳೆದ ಐದು ವರ್ಷಗಳ ಜಿಲ್ಲಾ ರಾಜಕಾರಣ ಮತ್ತು ಅಭಿವೃದ್ಧಿಯ ವೇಗವನ್ನು ಅವಲೋಕಿಸಿದರೆ ಆಡಳಿತಾರೂಢ ಕಾಂಗ್ರೆಸ್‌ಗೆ ತುಸು ಕಷ್ಟ ಎನ್ನುವಂತಿದೆ. ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾಣಲಿಲ್ಲ ಎನ್ನುವ ಆರೋಪವೂ ಇದೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸಚಿವರಾಗಿ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ಅನ್ಯ ವಿಷಯಗಳಿಗಾಗಿಯೇ (ಲಿಂಗಾಯತ ಪ್ರತ್ಯೇಕ ಧರ್ಮ, ಯೋಗೀಶಗೌಡ ಕೊಲೆ ಪ್ರಕರಣ) ಗಮನಸೆಳೆದರು. ಹೀಗಾಗಿ ಸಚಿವರು ಸೇರಿದಂತೆ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವಿನ ದಡ ಮುಟ್ಟಲು ಏದುಸಿರು ಬಿಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೃತ ದೇಸಾಯಿ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕುಲಕರ್ಣಿ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿರುವ ಬಿಜೆಪಿಯ ಜಗದೀಶ ಶೆಟ್ಟರ್‌, ಆರನೇ ಬಾರಿ ಗೆಲ್ಲುವುದಕ್ಕೆ ಶತಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ, ಸಚಿವರಾಗಿ ಅವರು ನಿರೀಕ್ಷಿತ ಕೆಲಸ ಮಾಡಲಿಲ್ಲ ಎನ್ನುವ ಆರೋಪ ಇದೆ. ಹೀಗಾಗಿ ಹಿಂದೆಂದಿಗಿಂತಲೂ ಹೆಚ್ಚು ಬೆವರು ಹರಿಸುತ್ತಿದ್ದಾರೆ. ಕಾಂಗ್ರೆಸ್‌ನ ಡಾ. ಮಹೇಶ ನಾಲವಾಡ ಕಣದಲ್ಲಿದ್ದು, ಕುತೂಹಲ ಮೂಡಿಸಿದ್ದಾರೆ.

ಸಚಿವ ಸಂತೋಷ್‌ ಲಾಡ್‌ ಕಲಘಟಗಿಯಲ್ಲಿ ಹ್ಯಾಟ್ರಿಕ್‌ ಸಾಧನೆಯ ತವಕದಲ್ಲಿದ್ದಾರೆ. ಅಪರೂಪಕ್ಕೊಮ್ಮೆ ಕ್ಷೇತ್ರಕ್ಕೆ ಬರುತ್ತಾರೆ ಎಂಬ ಆರೋಪ ಅವರ ಬೆನ್ನು ಹತ್ತಿದೆ. ಅದನ್ನೇ ಬಿಜೆಪಿಯ ಸಿ.ಎಂ.ನಿಂಬಣ್ಣವರ ಬಂಡವಾಳ ಮಾಡಿಕೊಂಡಿದ್ದಾರೆ. ‘ನಾನು ಕ್ಷೇತ್ರಕ್ಕೆ ಬಾರದಿದ್ದರೇನು? ನಿಮ್ಮ ಕೆಲಸ ಆಗುತ್ತದಲ್ಲ’ ಎಂದು ಲಾಡ್‌ ಪ್ರಶ್ನಿಸುತ್ತಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

ಹುಬ್ಬಳ್ಳಿ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಯ ಅರವಿಂದ ಬೆಲ್ಲದ ಅವರಿಗೆ ‘ಕಹಿ’ ಉಣಿಸಲು ಕಾಂಗ್ರೆಸ್‌ನ ಇಸ್ಮಾಯಿಲ್ ತಮಟಗಾರ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್‌ನ ಅಲ್ತಾಫ್‌ ಕಿತ್ತೂರು ಅವರನ್ನು ಕೊನೇ ಕ್ಷಣದಲ್ಲಿ ಕಣದಿಂದ ನಿವೃತ್ತಿಯಾಗುವಂತೆ ಮಾಡಿದ ತಮಟಗಾರ, ಮುಸ್ಲಿಂ ಮತಗಳು ಚದುರದಂತೆ ಎಚ್ಚರ ವಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಲ್ಲದ ಅವರು ಲಿಂಗಾಯತ ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು, ಜಿದ್ದಾಜಿದ್ದಿಗೆ ಕಾರಣವಾಗಿದೆ.

ಮಹದಾಯಿ ಹೋರಾಟವನ್ನು ಜೀವಂತವಾಗಿ ಇಟ್ಟವರಲ್ಲಿ ಜೆಡಿಎಸ್‌ನ ಎನ್.ಎಚ್.ಕೋನರಡ್ಡಿ ಕೂಡ ಒಬ್ಬರು. ಆದರೆ, ನವಲಗುಂದ ಕ್ಷೇತ್ರದಲ್ಲಿ ಈ ವಿಷಯ ಹೆಚ್ಚಾಗಿ ಪ್ರಸ್ತಾಪವೇ ಆಗುತ್ತಿಲ್ಲ. ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾಗಿ ರಡ್ಡಿ ಹೇಳುತ್ತಿದ್ದರೂ, ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಅವರ ಪ್ರಬಲ ಪೈಪೋಟಿಗೆ ಸುಸ್ತು ಹೊಡೆದಿದ್ದಾರೆ.

ಬಂಡಾಯದ ಬಿಸಿ: ಹುಬ್ಬಳ್ಳಿ ಸೆಂಟ್ರಲ್‌, ನವಲಗುಂದ, ಧಾರವಾಡ ಪಶ್ಚಿಮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಹುಬ್ಬಳ್ಳಿ ಪೂರ್ವ,  ಕಲಘಟಗಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ವಪಕ್ಷೀಯರಿಂದ ಬಂಡಾಯ ಎದುರಿಸುತ್ತಿದ್ದಾರೆ. ಮೇಲ್ನೋಟಕ್ಕೆ ಶಮನವಾದಂತೆ ಕಂಡರೂ, ಅತೃಪ್ತರ ಸಿಟ್ಟು ಕುದಿಯುತ್ತಲೇ ಇದೆ. ಬಂಡಾಯದ ಲಾಭ ಪಡೆಯಲು ಎದುರಾಳಿಗಳು ತಂತ್ರ ರೂಪಿಸುತ್ತಿದ್ದಾರೆ.

‘ಚಮತ್ಕಾರ’ದ ಲೆಕ್ಕಾಚಾರ

ಚುನಾವಣೆ ಸಮೀಪಿಸಿದಂತೆ, ಪ್ರತ್ಯೇಕ ಲಿಂಗಾಯತ ಧರ್ಮ, ಮಹದಾಯಿ ವಿಷಯಗಳು ತಣ್ಣಗಾದಂತೆ ಭಾಸವಾಗುತ್ತಿದೆ.

ಆರಂಭದಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಈ ವಿಚಾರವನ್ನು ಮುಂದಿಟ್ಟುಕೊಂಡೇ ಪರಸ್ಪರ ಆರೋಪ– ಪ್ರತ್ಯಾರೋಪ ಮಾಡಿದರು. ಆದರೆ, ಚುನಾವಣಾ ಕಣ ರಂಗೇರುತ್ತಿದ್ದಂತೆ ಇವು ನೇಪಥ್ಯಕ್ಕೆ ಸರಿದಿದ್ದು, ಜಾತಿ– ಉಪ ಜಾತಿಗಳ ಸಮೀಕರಣ, ಕಾಂಚಾಣದ ಸದ್ದು ಮುನ್ನೆಲೆಗೆ ಬಂದು ನಿಂತಿವೆ. ಪ್ರಮುಖವಾಗಿ ಕೊನೆಯ ದಿನಗಳ ‘ಚಮತ್ಕಾರ’ದತ್ತ ಎಲ್ಲರ ಲೆಕ್ಕಾಚಾರ ನಡೆದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.