ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್‌ನಲ್ಲಿ ಕನ್ನಡಿಗ ರಾಹುಲ್‌ ಅಬ್ಬರ

ಕಿಂಗ್ಸ್‌ ಇಲೆವನ್‌ ಪಂಜಾಬ್‌ಗೆ ಸುಲಭ ಜಯ
Last Updated 6 ಮೇ 2018, 19:45 IST
ಅಕ್ಷರ ಗಾತ್ರ

ಇಂದೋರ್‌: ಕನ್ನಡಿಗ ಕೆ.ಎಲ್‌.ರಾಹುಲ್‌ (84; 54 ಎ, 3 ಸಿ, 7 ಬೌಂ) ಮತ್ತೊಮ್ಮೆ ಸ್ಫೋಟಿಸಿದರು. ಅವರಿಗೆ ಕರುಣ್ ನಾಯರ್‌ ಉತ್ತಮ ಸಹಕಾರ ನೀಡಿದರು. ಇವರಿಬ್ಬರ ಮೋಹಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಸುಲಭ ಜಯ ಸಾಧಿಸಿತು.

ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ 153 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್‌ ಆರಂಭದಲ್ಲಿ ಕ್ರಿಸ್ ಗೇಲ್ ಮತ್ತು ಮಯಂಕ್ ಅಗರವಾಲ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ತಂಡದ ಮೊತ್ತ 29 ರನ್‌ಗಳಾಗಿದ್ದವು. ಈ ಸಂದರ್ಭದಲ್ಲಿ ಜೊತೆಗೂಡಿದ ರಾಹುಲ್ ಮತ್ತು ಕರುಣ್‌ ನಾಯರ್‌ ಮೂರನೇ ವಿಕೆಟ್‌ಗೆ 50 ರನ್‌ಗಳನ್ನು ಸೇರಿಸಿದರು.

23 ಎಸೆತಗಳಲ್ಲಿ 31 ರನ್‌ ಗಳಿಸಿದ ಕರುಣ್ ಔಟಾದ ನಂತರವೂ ರಾಹುಲ್ ಬ್ಯಾಟಿಂಗ್ ವೈಭವ ಮುಂದುವರಿಯಿತು. ಮಾರ್ಕಸ್ ಸ್ಟೋಯಿನಿಸ್‌ ಅವರ ಜೊತೆಗೆ ಐದನೇ ವಿಕೆಟ್‌ಗೆ 68 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮುಜೀಬ್‌ ದಾಳಿಗೆ ನಲುಗಿದ ರಾಯಲ್ಸ್‌: ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್‌ ರಾಯಲ್ಸ್ ತಂಡ ಅಫ್ಗಾನಿಸ್ತಾನದ ಯುವ ಆಫ್ ಸ್ಪಿನ್ನರ್ ಮುಜೀಬ್‌ ಉರ್‌ ರಹಿಮಾನ್ ಅವರ ದಾಳಿಗೆ ನಲುಗಿತು. ಜೋಸ್ ಬಟ್ಲರ್‌ (51; 39 ಎ, 7 ಬೌಂ), ಸಂಜು ಸ್ಯಾಮ್ಸನ್ ಮತ್ತು ಕನ್ನಡಿಗ ಶ್ರೇಯಸ್ ಗೋಪಾಲ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಿತು.

ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಕಿಂಗ್ಸ್ ಇಲೆವನ್‌ ಎದುರಾಳಿಗಳಿಗೆ ಆರಂಭದಲ್ಲೇ ಆಘಾತ ನೀಡಿತು. ಮೂರು ರನ್‌ ಗಳಿಸಿದ್ದಾಗ ರಾಯಲ್ಸ್ ಮೊದಲ ವಿಕೆಟ್ ಕಳೆದುಕೊಂಡಿತು. ಸ್ಫೋಟಕ ಬ್ಯಾಟ್ಸ್‌ಮನ್ ಡಿ ಆರ್ಚಿ ಅವರನ್ನು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಔಟ್ ಮಾಡಿದರು.

ಎರಡು ರನ್ ಗಳಿಸಿದ ಶಾರ್ಟ್‌ ಅವರು ಆ್ಯಂಡ್ರ್ಯೂ ಟೈಗೆ ಕ್ಯಾಚ್ ನೀಡಿ ಮರಳಿದರು. ನಂತರ ಜೋಸ್ ಬಟ್ಲರ್‌ ಅವರ ಜೊತೆಗೂಡಿದ ಅಜಿಂಕ್ಯ ರಹಾನೆಗೆ ಪ್ರಭಾವಿ ಬ್ಯಾಟಿಂಗ್ ಮಾಡಲು ಆಗಲಿಲ್ಲ. ಕೇವಲ ಐದು ರನ್‌ ಗಳಿಸಿ ಅವರು ಔಟಾದರು.

ನಂತರ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್‌ ಮೂರನೇ ವಿಕೆಟ್‌ಗೆ 49 ಸೇರಿಸಿದರು. 11ನೇ ಓವರ್‌ನಲ್ಲಿ ಸಂಜು ಔಟಾದ ನಂತರ ತಂಡ ಮತ್ತೊಮ್ಮೆ ಪತನದ ಹಾದಿ ಹಿಡಿಯಿತು. ಬೆನ್‌ ಸ್ಟೋಕ್ಸ್‌ ಮತ್ತು ಕೆ. ಗೌತಮ್‌ ಒಳಗೊಂಡಂತೆ ಪ್ರಮುಖರು ಬೇಗನೇ ಔಟಾದರು. ಆದರೆ ಒಂಬತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್ ಗೋಪಾಲ್‌ 16 ಎಸೆತಗಳಲ್ಲಿ 24 ರನ್‌ ಗಳಿಸಿ ತಂಡ 150 ರನ್‌ಗಳ ಮೊತ್ತ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ್ ರಾಯಲ್ಸ್‌: 20 ಓವರ್‌ಗಳಲ್ಲಿ 9ಕ್ಕೆ 152 (ಜೋಸ್ ಬಟ್ಲರ್‌ 51, ಡಿ ಆರ್ಚಿ ಶಾರ್ಟ್‌ 2, ಸಂಜು ಸ್ಯಾಮ್ಸನ್‌ 28, ಬೆನ್‌ ಸ್ಟೋಕ್ಸ್‌ 12, ರಾಹುಲ್ ತ್ರಿಪಾಠಿ 11, ಕೆ ಗೌತಮ್‌ 5, ಶ್ರೇಯಸ್ ಗೋಪಾಲ್‌ 24, ಉನದ್ಕತ್‌ 6; ರವಿಚಂದ್ರನ್ ಅಶ್ವಿನ್‌ 30ಕ್ಕೆ1, ರಜಪೂತ್‌ 37ಕ್ಕೆ1, ಮುಜೀಬ್ ಉರ್‌ ರಹಿಮಾನ್‌ 27ಕ್ಕೆ3, ಅಕ್ಷರ್‌ ಪಟೇಲ್‌ 21ಕ್ಕೆ1, ಆ್ಯಂಡ್ರ್ಯೂ ಟೈ 24ಕ್ಕೆ2).

ಕಿಂಗ್ಸ್ ಇಲೆವನ್‌ ಪಂಜಾಬ್‌: (ಕೆ.ಎಲ್‌.ರಾಹುಲ್‌ , ಕ್ರಿಸ್‌ ಗೇಲ್‌ 8, ಮಯಂಕ್ ಅಗರವಾಲ್‌ 2, ಕರುಣ್‌ ನಾಯರ್‌ 31, ಅಕ್ಷರ್ ಪಟೇಲ್‌ 4, ಮಾರ್ಕಸ್‌ ಸ್ಟೋಯಿನಿಸ್‌ ). ಫಲಿತಾಂಶ: ಕಿಂಗ್ಸ್ ಇಲೆವನ್‌ ಪಂಜಾಬ್‌ ತಂಡಕ್ಕೆ 6 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT